ಎಂ.ಚಂದ್ರ ಪೂಜಾರಿ
ಅಸಹನೆ ಏಕೆನ್ನುವ ಪ್ರಶ್ನೆಗೆ ಎರಡು ಮೂರು ಉತ್ತರಗಳು ಸಾಧ್ಯ. ಒಂದು, ಗ್ಯಾರಂಟಿಗಳ ದಿಶೆಯಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ. ಗ್ಯಾರಂಟಿಗಳನ್ನು ಈಡೇರಿಸಲು ಬಿಟ್ಟರೆ ತಾನೇ ಕಾಂಗ್ರೆಸ್ ತನ್ನ ಮಾತು ಉಳಿಸಿಕೊಳ್ಳಲು ಸಾಧ್ಯ. ಅಕ್ಕಿ ನಿರಾಕರಿಸಿದರೆ ಕಾಂಗ್ರೆಸ್ ಪಕ್ಷದ ಒಂದು ಗ್ಯಾರಂಟಿಯನ್ನು ಈಡೇರಿಸುವುದು ಕಷ್ಟವಾಗುತ್ತದೆ. ಆವಾಗ ಕಾಂಗ್ರೆಸ್ ಪಕ್ಷ ಮತದಾರರಿಗೆ 10 ಕೆಜಿ ಅಕ್ಕಿ ಭರವಸೆ ಕೊಟ್ಟು ಮೋಸ ಮಾಡಿದೆ ಎಂದು ಪ್ರಚಾರ ಮಾಡಬಹುದು. ಜನರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಕಳೆದುಕೊಂಡು ಬಿಜೆಪಿಯತ್ತ ಬರಬಹುದೆನ್ನುವ ಒಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಸಾಧ್ಯ. ಇದೊಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಏಕೆಂದರೆ ಒಂದು ವೇಳೆ ಕಾಂಗ್ರೆಸ್ ಪಕ್ಷ ಕೇಂದ್ರದ ಹುನ್ನಾರದಿಂದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಜನವರಿಗೆ ಮನವರಿಕೆ ಮಾಡಿದರೆ ಕೇಂದ್ರದ ಲೆಕ್ಕಚಾರವೆಲ್ಲ ಬುಡಮೇಲಾಗಬಹುದು. ಇನ್ನೊಂದು ದೃಷ್ಟಿಯಿಂದಲೂ ಇದೊಂದು ಸಮೀಪ ದೃಷ್ಟಿಯ ರಾಜಕೀಯ ಏಕೆಂದರೆ ಇದೊಂದು ಬಡವರ ತಟ್ಟೆಯಿಂದ ಅನ್ನ ಕಸಿಯುವ ಕ್ರಮ. ಇದನ್ನೂ ಮಾಸ್ಟರ್ ಸ್ಟ್ರೋಕ್ ಎನ್ನುವವರಿದ್ದರೆ ಅವರಲ್ಲಿ ಮನುಷ್ಯತ್ವ ಸಂಪೂರ್ಣ ಸತ್ತು ಹೋಗಿದೆಯೆಂದು ತೀರ್ಮಾನಿಸಬಹುದು.
ಅಕ್ಕಿ ನಿರಾಕರಣೆ ಬಿಜೆಪಿಯ ಬಡವರ ವಿರುದ್ಧ ಪಾಲಿಸಿಗೆ ಹೊಸ ಸೇರ್ಪಡೆ. ಬಡತನ ನಿವಾರಣೆ ವಿಚಾರದಲ್ಲೇ ಬಿಜೆಪಿಯ ಟ್ರಾಕ್ ರೆಕಾರ್ಡ್ ಅಷ್ಟೇನು ಉತ್ತಮವಾಗಿಲ್ಲ. ಬಿಜೆಪಿ ಸರಕಾರ ನೇಮಕ ಮಾಡಿದ ಶಾಂತ ಕುಮಾರ್ ಸಮಿತಿ ಶೇ.67ರಷ್ಟು ಜನರಿಗೆ ಅನ್ವಯವಾಗಬೇಕಾದ ಆಹಾರ ಭದ್ರತೆ ಕಾಯಿದೆಯನ್ನು ತಿದ್ದುಪಡಿ ಶೇ.40ಕ್ಕೆ ಇಳಿಸಲು ಶಿಫಾರಸ್ಸು ಮಾಡಿದ್ದು, ಉದ್ಯೋಗ ಖಾತರಿ ಯೋಜನೆಗೆ ಪ್ರತಿ ವರ್ಷ ಬಜೆಟ್‌ಲ್ಲಿ ಬೇಡಿಕೆಗಿಂತ ಕಡಿಮೆ ಮೊತ್ತ ತೆಗೆದಿರಿಸುವುದು, ಇದರಿಂದಾಗಿ ಬಡವರು ಸಂಬಳವಿಲ್ಲದೆ ಒಂದೆರಡು ತಿಂಗಳು ಪರದಾಡುವುದು, ಏನೇನೂ ಉಳಿತಾಯ ಇಲ್ಲದ ಬಡವರ ಬದುಕನ್ನು ಅರ್ಥಮಾಡಿಕೊಳ್ಳದೆ, ವಲಸೆ ಕಾರ್ಮಿಕರಿಗೆ ವಾಪಸ್ ಹೋಗಲು ಅವಕಾಶ ನೀಡದೆ ಲಾಕ್‌ಡೌನ್ ಘೋಷಿಸಿದ್ದು, ಕೋವಿಡ್ ಲಸಿಕೆಯನ್ನು ಉಚಿತ ನೀಡಲು ನಿರಾಕರಿಸಿದ್ದು, ಉಜ್ವಲ್ ಯೋಜನೆಯಲ್ಲಿ ಸಿಲಿಂಡರ್ ರಿಫಿಲ್ ಮಾಡಿಸಲು ಬಡ ಕುಟುಂಬಗಳು ಪರದಾಡಿದ್ದು, ಜಿರೋ ಬ್ಯಾಲೆನ್ಸ್ನ ಜನ್‌ಧನ್ ಯೋಜನೆಯಲ್ಲಿ ಜಿರೋ ಸವಲತ್ತು ಇರುವುದು ಇತ್ಯಾದಿಗಳೆಲ್ಲ ಕೇಂದ್ರ ಸರಕಾರದ ಬಡತನ ನಿವಾರಣೆಯ ಕೆಲವು ಸ್ಯಾಂಪಲ್‌ಗಳು.
ಬಡತನ ನಿವಾರಣೆ ವಿಚಾರದಲ್ಲಿ ರಾಜ್ಯದ ಬಿಜೆಪಿ ಸರಕಾರ ಕೇಂದ್ರಕ್ಕಿಂತ ಬಿನ್ನವಾಗಿ ವ್ಯವಹರಿಸಿಲ್ಲ. ಹಿಂದಿನ ಸರಕಾರದ ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಾಲುಸಾಲು ಸವಲತ್ತುಗಳನ್ನು ಘೋಷಿಸುವಾಗ ಬಿಜೆಪಿ ಅರ್ಧ ಲೀಟರ್ ಹಾಲು, ಒಂದು ಸಿಲಿಂಡರ್ ಉಚಿತ ಘೋಷಿಸಿದೆ. ಚುನಾವಣೆ ಗೆಲ್ಲಲು ಸವಲತ್ತುಗಳ ಬದಲು ಹಿಜಾಬ್, ಅಜಾನ್, ಹಲಾಲ್, ಟಿಪ್ಪು ಸುಲ್ತಾನ್ ಇವನ್ನೇ ನಂಬಿತ್ತು. ಸೋತ ನಂತರ ಏಕೆ ಇನ್ನೂ ಕೂಡ ಗ್ಯಾರಂಟಿಗಳನ್ನು ಜಾರಿಗೊಳಿಸಿಲ್ಲ? ಗ್ಯಾರಂಟಿಗಳನ್ನು ನೀಡುವಾಗ ಶರತ್ತುಗಳು ಏಕೆ? ಎಲ್ಲರಿಗೂ ಏಕೆ ಸವಲತ್ತುಗಳನ್ನು ನೀಡುತ್ತಿಲ್ಲ? ಇವಕ್ಕೆಲ್ಲ ಎಲ್ಲಿಂದ ಸಂಪನ್ಮೂಲ ತರುತ್ತೀರಾ? ರಾಜ್ಯ ದಿವಾಳಿ ಮಾಡಲು ಹೊರಟಿದ್ದೀರಾ? ಇವೆಲ್ಲ ರಾಜ್ಯದ ಬಿಜೆಪಿ ನಾಯಕರು ಕೇಳುವ ಪ್ರಶ್ನೆಗಳು. ಈಗ ಅವರದ್ದೇ ಪಕ್ಷದ ಕೇಂದ್ರ ಸರಕಾರ ಅಕ್ಕಿ ನೀಡಲು ನಿರಾಕರಿಸುತ್ತಿದೆ. ಮೇಲಿನ ಪ್ರಶ್ನೆಗಳನ್ನು ಕೇಳುವಾಗ ಬಿಜೆಪಿ ನಾಯಕರಿಗೆ ರಾಜ್ಯದ ಬಡಜನರ ಹಿತ ಮುಖ್ಯವಾಗಿತ್ತೆಂದು ರಾಜ್ಯದ ಜನ ನಂಬಬೇಕಾದರೆ ಅಕ್ಕಿ ನಿರಾಕರಿಸುವ ಕೇಂದ್ರದ ಕ್ರಮವನ್ನು ಬಿಜೆಪಿ ಎಂಪಿಗಳು ಮತ್ತು ರಾಜ್ಯದ ನಾಯಕರು ಪ್ರಶ್ನಿಸಬೇಕಾಗುತ್ತದೆ. ಇಲ್ಲವಾದರೆ ರಾಜ್ಯ ಮತ್ತು ರಾಜ್ಯದ ಜನರ ಹಿತಕ್ಕಿಂತ ಇವರಿಗೆ ತಮ್ಮ ಪಕ್ಷದ ಆಸಕ್ತಿ ಮುಖ್ಯ ಎಂದಾಗುತ್ತದೆ. ಮತ್ತು ತಮ್ಮ ಪಕ್ಷದ ಆಸಕ್ತಿಯನ್ನು ಸಾಧಿಸಲು ರಾಜ್ಯದ ಬಡಜನರ ಹಿತವನ್ನೂ ಬಲಿಕೊಡಲು ಸಿದ್ದಾರಿದ್ದಾರೆಂದಾಗುತ್ತದೆ.
ಏಕೆಂದರೆ ರಾಜ್ಯ ಸರಕಾರ ನೀಡಲಿಚ್ಚಿಸುವ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ಮಾಧ್ಯಮಗಳಲ್ಲಿ ಬರುತ್ತಿರುವ ವಿರೋಧವನ್ನು ನಂಬುವ ಜನರಿಗೆ ದೊಡ್ಡ ಪ್ರಮಾಣ ಅನ್ನಿಸಬಹುದು. ಆದರೆ ವಾಸ್ತವದಲ್ಲಿ ಇದು ದೊಡ್ಡ ಪ್ರಮಾಣದ ಪೂರೈಕೆಯೇ ಅಲ್ಲ. ಮೂರನೇ ಎರಡರಷ್ಟು ಜನರಿಗೆ ತಿಂಗಳಿಗೆ ತಲಾ 5 ಕೆಜಿ ಆಹಾರ ಪದಾರ್ಥವನ್ನು ಅತ್ಯಂತ ಕಡಿಮೆ ಬೆಲೆಗೆ ಪೂರೈಕೆ ಮಾಡಬೇಕೆಂದು ದೇಶದ ಆಹಾರ ಭದ್ರತೆ ಕಾಯಿದೆ ಹೇಳುತ್ತಿದೆ. ಕೇಂದ್ರದ ಎಲ್ಲ ಯೋಜನೆಗಳಂತೆ ಇಲ್ಲೂ ರಾಜ್ಯಗಳು ಈ 5 ಕೆಜಿ ಜೊತೆಗೆ ತಮ್ಮ ಸಂಪನ್ಮೂಲ ಬಳಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪೂರೈಕೆ ಮಾಡಬಹುದು. ಇದೇ ಅವಕಾಶವನ್ನು ಬಳಸಿಕೊಂಡು ಕರ್ನಾಟಕ ಸರಕಾರ ಕೇಂದ್ರದ 5 ಕೆಜಿ ಜೊತೆಗೆ ತನ್ನ 5 ಕೆಜಿ ಸೇರಿಸಿ ಒಟ್ಟು 10 ಕೆಜಿ ಕೊಡಲು ನಿರ್ಧರಿಸಿದೆ. 10 ಕೆಜಿ ಏಕೆಂದು ಅರ್ಥವಾಗಬೇಕಾದರೆ ಈ ಕೆಳಗಿನ ಲೆಕ್ಕಚಾರವನ್ನು ನೋಡಬೇಕು. ತಿಂಗಳಿಗೆ ಒಬ್ಬರಿಗೆ 10 ಕೆಜಿ ಅಕ್ಕಿ ಅಂದರೆ ತಲಾ 10000 ಗ್ರಾಂ ಅಕ್ಕಿ. 10000 ಗ್ರಾಂ ಅಕ್ಕಿಯನ್ನು 30 ದಿನಗಳಿಂದ ಭಾಗಿಸಿದರೆ ದಿನಾ ಒಬ್ಬರಿಗೆ 333 ಗ್ರಾಂ ಅಕ್ಕಿ ಲಭ್ಯವಾಗುತ್ತದೆ. ಕೆಲವು ಅಧ್ಯಯನಗಳು 100 ಗ್ರಾಂ ಅಕ್ಕಿ 130 ಕ್ಯಾಲರಿ ಶಕ್ತಿ (ಏನರ್ಜಿ) ಉತ್ಪಾದಿಸುತ್ತದೆ ಎನ್ನುತ್ತವೆ. ಅಂದರೆ 1 ಗ್ರಾಂ ಅಕ್ಕಿ 1.3 ಕ್ಯಾಲರಿಯಷ್ಟು ಶಕ್ತಿ ಉತ್ಪಾದಿಸುತ್ತದೆ ಅಥವಾ 333 ಗ್ರಾಂ ಅಕ್ಕಿ 432 ಕ್ಯಾಲರಿ ಶಕ್ತಿ ಉತ್ಪಾದಿಸುತ್ತದೆ. ಸರಕಾರಿ ಲೆಕ್ಕಚಾರ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ದುಡಿದು ಗಳಿಸುವಷ್ಟು ಶಕ್ತಿ ಪಡೆಯಬೇಕಾದರೆ ದಿನವೊಂದಕ್ಕೆ ಕನಿಷ್ಠ 2400 ಕ್ಯಾಲರಿ ಶಕ್ತಿ ಗಳಿಸುವಷ್ಟು ಆಹಾರ ಸೇವಿಸಬೇಕು. 2400 ಕ್ಯಾಲರಿ ಎಲ್ಲಿ 432 ಕ್ಯಾಲರಿ ಎಲ್ಲಿ. ಬಡ ಜನರಿಗೆ ನೀಡುವ ಇಷ್ಟೊಂದು ಸಣ್ಣ ಪ್ರಮಾಣದ ಸವಲತ್ತಿಗೂ ಇಷ್ಟೊಂದು ಅಸಹನೆ ಏಕೆ?
ಅಸಹನೆ ಏಕೆನ್ನುವ ಪ್ರಶ್ನೆಗೆ ಎರಡು ಮೂರು ಉತ್ತರಗಳು ಸಾಧ್ಯ. ಒಂದು, ಗ್ಯಾರಂಟಿಗಳ ದಿಶೆಯಿಂದ ಕಾಂಗ್ರೆಸ್ ಚುನಾವಣೆ ಗೆದ್ದಿದೆ. ಗ್ಯಾರಂಟಿಗಳನ್ನು ಈಡೇರಿಸಲು ಬಿಟ್ಟರೆ ತಾನೇ ಕಾಂಗ್ರೆಸ್ ತನ್ನ ಮಾತು ಉಳಿಸಿಕೊಳ್ಳಲು ಸಾಧ್ಯ. ಅಕ್ಕಿ ನಿರಾಕರಿಸಿದರೆ ಕಾಂಗ್ರೆಸ್ ಪಕ್ಷದ ಒಂದು ಗ್ಯಾರಂಟಿಯನ್ನು ಈಡೇರಿಸುವುದು ಕಷ್ಟವಾಗುತ್ತದೆ. ಆವಾಗ ಕಾಂಗ್ರೆಸ್ ಪಕ್ಷ ಮತದಾರರಿಗೆ 10 ಕೆಜಿ ಅಕ್ಕಿ ಭರವಸೆ ಕೊಟ್ಟು ಮೋಸ ಮಾಡಿದೆ ಎಂದು ಪ್ರಚಾರ ಮಾಡಬಹುದು. ಜನರು ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಕಳೆದುಕೊಂಡು ಬಿಜೆಪಿಯತ್ತ ಬರಬಹುದೆನ್ನುವ ಒಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಸಾಧ್ಯ. ಇದೊಂದು ಸಮೀಪ ದೃಷ್ಟಿಯ ರಾಜಕೀಯ ಲೆಕ್ಕಚಾರ ಏಕೆಂದರೆ ಒಂದು ವೇಳೆ ಕಾಂಗ್ರೆಸ್ ಪಕ್ಷ ಕೇಂದ್ರದ ಹುನ್ನಾರದಿಂದ 10 ಕೆಜಿ ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಜನವರಿಗೆ ಮನವರಿಕೆ ಮಾಡಿದರೆ ಕೇಂದ್ರದ ಲೆಕ್ಕಚಾರವೆಲ್ಲ ಬುಡಮೇಲಾಗಬಹುದು. ಇನ್ನೊಂದು ದೃಷ್ಟಿಯಿಂದಲೂ ಇದೊಂದು ಸಮೀಪ ದೃಷ್ಟಿಯ ರಾಜಕೀಯ ಏಕೆಂದರೆ ಇದೊಂದು ಬಡವರ ತಟ್ಟೆಯಿಂದ ಅನ್ನ ಕಸಿಯುವ ಕ್ರಮ. ಇದನ್ನೂ ಮಾಸ್ಟರ್ ಸ್ಟ್ರೋಕ್ ಎನ್ನುವವರಿದ್ದರೆ ಅವರಲ್ಲಿ ಮನುಷ್ಯತ್ವ ಸಂಪೂರ್ಣ ಸತ್ತು ಹೋಗಿದೆಯೆಂದು ತೀರ್ಮಾನಿಸಬಹುದು.
ಇದನ್ನೂ ಓದಿ : ಮೋದಿ ಅಕ್ಕಿ ಕೊಡದಿದ್ರೇನು? ನೀವೇ ಜೋಳ ರಾಗಿ ಕೊಡಿ – ರೈತ ಸಂಘ ಆಗ್ರಹ
ಎರಡು, ಬಲಪಂಥೀಯ ಪಕ್ಷಗಳ ಇತಿಹಾಸದಲ್ಲಿ ಅವು ಬಡವರ ಪರ ನಿಂತ ಉದಾಹರಣೆಗಳು ತುಂಬಾ ಕಡಿಮೆ. ಪ್ರಪಂಚದ ಯಾವುದೇ ದೇಶದಲ್ಲೂ ಫೆಸಿಸ್ಟ್ (ಬಲಪಂಥೀಯ) ಪಕ್ಷಗಳು ಬಡವರ, ತಳಸ್ತರದ ಜನರ, ಕಾರ್ಮಿಕರ, ಮಹಿಳೆಯರ, ಅಲ್ಪಸಂಖ್ಯಾತರ, ದುಡಿಯುವ ವರ್ಗದ ಪರ ನಿಂತ ಉದಾಹರಣೆ ಇಲ್ಲ. ಜರ್ಮನಿ, ಗ್ರೀಸ್, ಪೋರ್ಚುಗಲ್, ಬ್ರೆಜಿಲ್, ಚೈನಾ, ಹಂಗೇರಿ, ಫ್ರಾನ್ಸ್ ಇವೆಲ್ಲ ಹಿಂದೆ ಫೆಸಿಸ್ಟ್ ಪಕ್ಷಗಳ ಆಳ್ವಿಕೆ ಕಂಡ ದೇಶಗಳು. ಇಲ್ಲೆಲ್ಲ ಫೆಸಿಸ್ಟ್ ಪಕ್ಷಗಳು ಒಂದೋ ಭೂಮಾಲೀಕರ ಪರ ಅಥವಾ ಬಂಡವಾಳಿಗರ ಪರ ಕೆಲಸ ಮಾಡಿವೆ. ಎಲ್ಲ ಕಡೆ ದುಡಿಯುವ ವರ್ಗ ಮತ್ತು ಅವರ ಪಕ್ಷಗಳು ಫೆಸಿಸ್ಟ್ ಪಕ್ಷಕ್ಕೆ ಬಹುದೊಡ್ಡ ಶತ್ರುಗಳು. ದುಡಿಯುವ ವರ್ಗವನ್ನು ಮತ್ತು ಅವರ ಪಕ್ಷಗಳನ್ನು ನಿರ್ನಾಮ ಮಾಡುವುದು ಫೆಸಿಸ್ಟ್ ಪಕ್ಷದ ಪರಮ ಗುರಿ. ನಮ್ಮಲ್ಲೂ ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಸ್ಟರು ಇವರ ಬಹುದೊಡ್ಡ ಶತ್ರುಗಳು. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಮತ್ತು ನಂತರ ಬಡತನದ ಬಗ್ಗೆ, ಬಡವರ ಬಗ್ಗೆ, ಅಸಮಾನತೆ ಬಗ್ಗೆ, ನಿರುದ್ಯೋಗದ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದನ್ನು ನೋಡಲು ಸಾಧ್ಯವಾಗಿಲ್ಲ. ಆರ್ಟಿಕಲ್ 370 ರದ್ದುಗೊಳಿಸುವುದು, ರಾಮ ಜನ್ಮ ಭೂಮಿ, ಆಯೋಧ್ಯಯಲ್ಲಿ ಮಂದಿರ ನಿರ್ಮಿಸುವುದು, ಗೋಹತ್ಯ ನಿಷೇಧ, ಚರಿತ್ರೆ ಪುನರ್ ರಚಿಸುವುದು ಇತ್ಯಾದಿಗಳು ಅವರಿಗೆ ಮುಖ್ಯವಾದಷ್ಟು ಬಡತನ, ಅಸಮಾನತೆಗಳು ಮುಖ್ಯವಾಗಿಲ್ಲ.
ಒಂದು ದೇಶ- ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಮಾರುಕಟ್ಟೆ, ಒಂದು ತೆರಿಗೆ ಹೀಗೆ ಎಲ್ಲದವುಗಳಲ್ಲಿ ಒಂದನ್ನು ಕಾಣುವ ಪಕ್ಷ ಯಾವುತ್ತೂ ಒಂದು ದೇಶ – ಒಂದು ಶಿಕ್ಷಣ, ಒಂದು ಆರೋಗ್ಯ, ಒಂದು ಕನಿಷ್ಟ ವೇತನ, ಒಂದು ಉದ್ಯೋಗದ ಬಗ್ಗೆ ಮಾತಾಡುವುದಿಲ್ಲ. ಭಾಷೆ, ಧರ್ಮ, ಗಡಿ, ಧ್ವಜ ಇತ್ಯಾದಿ ನಿರ್ಜೀವ ವಸ್ತುಗಳಲ್ಲಿ ದೇಶಪ್ರೇಮವನ್ನು ನೋಡುವ ಮತ್ತು ಬೆಳೆಸಲು ಪ್ರಯತ್ನಿಸುವ ಪಕ್ಷಕ್ಕೆ ಜನರಲ್ಲಿ ದೇಶವನ್ನು ಮತ್ತು ಪರಸ್ಪರ ಪ್ರೀತಿಸುವ ಜನರಲ್ಲಿ ದೇಶಪ್ರೇಮವನ್ನು ನೋಡಲು ಸಾಧ್ಯವಾಗಿಲ್ಲ. ಜನರೇ ದೇಶ ಮತ್ತು ದೇಶ, ರಾಜ್ಯಕ್ಕೆ ಸೇರಿದ ನಾವೆಲ್ಲ ಒಂದೇ ಎನ್ನುವ ಭಾವನೆ ದೇಶಪ್ರೇಮ. ಪ್ರಪಂಚದಲ್ಲಿ ಇಂದು ಮುಂಚೂಣಿಯಲ್ಲಿರುವ ದೇಶಗಳೆಲ್ಲ ಇದೇ ಮಾದರಿಯನ್ನು ದೇಶ ಮತ್ತು ದೇಶಪ್ರೇಮವನ್ನು ಕಟ್ಟಿಕೊಂಡಿರುವುದು. ಈ ಬಗೆಯ ದೇಶಪ್ರೇಮದಲ್ಲಿ ಮಾತ್ರ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿಗಾಗುವ ಅನ್ಯಾಯ, ಅಸಮಾನತೆ ತನಗೇ ಆದ ಅನುಭವ ಆಗಲು ಸಾಧ್ಯ. ಭಾಷೆ, ಸಂಸ್ಕೃತಿ, ಧರ್ಮ, ಗಡಿ, ಧ್ವಜಗಳಲ್ಲಿ ಮಾತ್ರ ದೇಶ ಮತ್ತು ದೇಶಪ್ರೇಮ ಕಾಣುವವರಿಗೆ ಜೀವಂತ ಜನರನ್ನು ಜಾತಿ, ಧರ್ಮದ ಹೆಸರಲ್ಲಿ ವಿಭಜಿಸುವುದು ಮತ್ತು ಜನರ ನಡುವೆ ಕೋಮು ವೈಷಮ್ಯವನ್ನು ಹುಟ್ಟು ಹಾಕುವುದು ಅಸಹಜವಾಗುವುದಿಲ್ಲ. ವಾಸ್ತವ ಹೀಗಿರುವಾಗ ಬಡಜನರಿಗೆ ಅಕ್ಕಿ ನಿರಾಕರಿಸುವುದು ವಿಶೇಷ ಅನ್ನಿಸುವುದಿಲ್ಲ.
ಮೂರು, ಕಾಂಗ್ರೆಸ್ ಪಕ್ಷ ನೀಡಲಿಚ್ಚಿಸುವ ಸವಲತ್ತುಗಳು ಬಿಜೆಪಿ ಅಭಿವೃದ್ಧಿ ಕಲ್ಪನೆಯಲ್ಲಿ ಫ್ರೀಬೀಸ್ ಎಂದು ಬ್ರಾಂಡ್ ಆಗಿವೆ. ಫ್ರೀಬೀಸ್ ಎಂದರೆ ಉಚಿತ ಎನ್ನುವ ಅರ್ಥದ ಜೊತೆಗೆ ಅಭಿವೃದ್ಧಿಗೆ ಏನೇನೂ ಕೊಡುಗೆ ಇಲ್ಲದ ಸವಲತ್ತುಳೆನ್ನುವ ಅರ್ಥ ಇದೆ. ದೇಶದ ಪ್ರಧಾನಿ ಪ್ರಕಾರ ಇಂತಹ ಸವಲತ್ತುಗಳ ಬದಲು ಸಿಕ್ಸ್ ಲೇನ್ ಹೈವೇಸ್, ಬುಲೆಟ್ ಟ್ರೈನ್‌ಗಳು, ಏರ್‌ಪೋರ್ಟ್ಗಳು, ಬಂದರುಗಳು ಇವುಗಳ ಮೇಲೆ ಮಾಡುವ ವಿನಿಯೋಜನೆಗಳು ಅಭಿವೃದ್ಧಿ ಪೂರಕ. ಪ್ರಧಾನಿಗಳು ಉದ್ದಿಮೆದಾರರಲ್ಲಿ ಉತ್ಪಾದಕರನ್ನು ನೋಡುತ್ತಾರೆ ಹೊರತು ಸಣ್ಣಪುಟ್ಟ ಕಾರ್ಮಿಕರಲ್ಲಿ ಉತ್ಪಾದಕರನ್ನು ನೋಡುವುದಿಲ್ಲ. ದೊಡ್ಡ ಉದ್ದಿಮೆಗಳಿಗೆ ಕಡಿಮೆ ಬಡ್ಡಿಗೆ ಸಾಲ ಕೊಡುವುದು, ಸಾಲ ಕಟ್ಟದಿದ್ದರೆ ಸಾಲ ಮನ್ನಾ ಮಾಡುವುದು, ಕಡಿಮೆ ಬೆಲೆಗೆ ಭೂಮಿ ಕೊಡುವುದು, ಕಡಿಮೆ ಬೆಲೆಗೆ ಪ್ರಾಕೃತಿ ಸಂಪನ್ಮೂಲ ಕೊಡುವುದು, ಪರಿಸರ ಮಾಲನ್ಯ ಕಾಯಿದೆಯನ್ನು ಸಡಿಲಗೊಳಿಸುವುದು, ಭೂಸ್ವಾಧೀನ ಮಸೂದೆಯನ್ನು ಸಡಿಲಗೊಳಿಸುವುದು ಇತ್ಯಾದಿಗಳೆಲ್ಲ ಬಿಜೆಪಿ ಸರಕಾರದ ಉತ್ಪಾದಕರನ್ನು ಬೆಂಬಲಿಸುವ ಕ್ರಮಗಳು. ಈ ಉದ್ದಿಮೆಗಳು ಉತ್ಪಾದಿಸುವ ಸರಕುಸೇವೆಗಳನ್ನು ಖರೀದಿಸಿ ಅನುಭವಿಸುವ ತಳಸ್ತರದ ಜನರ ಸ್ವಾಧೀನ ಅಲ್ಪಸ್ವಲ್ಪ ಖರೀದಿಸುವ ಶಕ್ತಿ ತುಂಬುವುದನ್ನು ಕೇಂದ್ರ ಸರಕಾರ ಪ್ರೊಡಕ್ಟಿವ್ ಎಂದು ಪರಿಗಣಿಸಿಲ್ಲ.
ಕೇಂದ್ರ ಸರಕಾರ ಅಕ್ಕಿ ನಿರಾಕರಿಸಿದ ಕೂಡಲೇ ಯೋಜನೆ ನಿಲ್ಲುವುದಿಲ್ಲ. ಯೋಜನೆಯನ್ನು ಜಾರಿ ಕೊಡಲು ಹಲವು ದಾರಿಗಳಿವೆ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸುವುದು, ಅಕ್ಕಿ ಪೂರೈಕೆ ಮಾಡುತ್ತೇನೆಂದು ಒಪ್ಪಿಕೊಂಡ ಫುಡ್ ಕಾರ್ಫೋರೇಶನ್ ಆಫ್ ಇಂಡಿಯಾವನ್ನು ಪ್ರಶ್ನಿಸುವುದು, ಕೇಂದ್ರದ ಮೇಲೆ ಒತ್ತಡ ಹೇರುವುದು ಹೀಗೆ ಹಲವು ದಾರಿಗಳಿವೆ. ಇವೆಲ್ಲವುಗಳ ಜೊತೆಗೆ ರಾಜ್ಯ ಸರಕಾರ ಪೂರೈಕೆ ಮಾಡಲು ನಿರ್ಧರಿಸಿರುವ 10 ಕೆಜಿ ಅಕ್ಕಿಯ ಬೆಲೆಯನ್ನು (ರೂ.365ನ್ನು) ನೇರವಾಗಿ ಫಲಾನುಭವಿಗಳಿಗೆ ನೀಡುವುದು ಹೆಚ್ಚು ಉಪಯುಕ್ತ. ಈ ಪರಿಹಾರದಲ್ಲಿ ಎರಡು ಉತ್ತರಗಳಿವೆ. 10 ಕೆಜಿ ಅಕ್ಕಿ ಪೂರೈಕೆ ಮಾಡುತ್ತೇವೆ ಎನ್ನುವ ಭರವಸೆಯನ್ನು ಸಾಧಿಸುವುದರ ಜೊತೆಗೆ ಅಕ್ಕಿ ಬದಲು ಕ್ಯಾಶ್ ಏಕೆ ನೀಡಲಾಗಿದೆ ಎನ್ನುವುದನ್ನು ರಾಜ್ಯದ ಜನರಿಗೆ ತಿಳಿಸಿದಂತಾಗುತ್ತದೆ. ಅಕ್ಕಿ ಬದಲು ಕ್ಯಾಶ್ ಏಕೆ ನೀಡಲಾಗಿದೆ ಎನ್ನುವ ಮಾಹಿತಿ ತುಂಬಾ ಅಗತ್ಯ. ನೆಮ್ಮದಿಯ ಬದುಕಿಗಾಗಿ ಈ ದೇಶದ ಜನರೆಲ್ಲ ಸೇರಿ ಸಂವಿಧಾನ ರಚಿಸಿಕೊಂಡಿದ್ದೇವೆ. 5 ವರ್ಷಕ್ಕೊಮ್ಮೆ ಪಕ್ಷವೊಂದನ್ನು ಚುನಾಯಿಸಿ ಸಂವಿಧಾನವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ನೀಡುತ್ತೇವೆ. ಅಧಿಕಾರಕ್ಕೇರಿದ ಪಕ್ಷ ದೇಶದ ಸಂವಿಧಾನವನ್ನು ಅನುಷ್ಠಾನಗೊಳಿಸುವುದಕ್ಕಿಂತ ಹೆಚ್ಚು ಮಹತ್ವವನ್ನು ತನ್ನ ಪಕ್ಷದ ಸಂವಿಧಾನ ಅನುಷ್ಠಾನಗೊಳಿಸಲು ನೀಡಿದರೆ ಅದು ಜನದ್ರೋಹವಾಗುತ್ತದೆ; ದೇಶದ್ರೋಹವಾಗುತ್ತದೆ. ಇಂತಹ ಗಂಭೀರ ಸಮಸ್ಯೆಗೆ ಜನರು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.