ಕೊಪ್ಪಳ: ರಾಜ್ಯ ಸರ್ಕಾರ ಬಜೆಟ್ನಲ್ಲಿ ಆರ್ಥಿಕ ಸ್ವಾವಲಂಬನೆ ಹಾಗೂ ಆಹಾರ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವ ಹೆಚ್ಚಿಸುವ ಉದ್ದೇಶದಿಂದ ಘೋಷಣೆ ಮಾಡಿದ್ದ ಅಕ್ಕ ಕೆಫೆಯ ಮೊದಲ ಶಾಖೆಯನ್ನು ಜಿಲ್ಲಾಕೇಂದ್ರದಲ್ಲಿ ಆರಂಭಿಸಲಾಗಿದ್ದು, ಬುಧವಾರ ಕಾರ್ಯಾರಂಭ ಮಾಡಿದೆ. ಕೊಪ್ಪಳ
ಇಲ್ಲಿನ ಜಿಲ್ಲಾ ಪಂಚಾಯಿತಿ ಗಂಗಾವತಿಯಲ್ಲಿ ಸ್ಥಳೀಯತೆಗೆ ತಕ್ಕಂತೆ ಮಹಿಳಾ ಸಬಲೀಕರಣ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಕ್ಕ ಕೆಫೆಯನ್ನು ’ಸಂಚಾರ ಕೆಫೆ’ಯನ್ನಾಗಿ ಮಾರ್ಪಡಿಸಲು ಮುಂದಾಗಿದೆ.
ಇದನ್ನೂ ಓದಿ : ಮಹಿಳೆಯರ ಶ್ರಮಕ್ಕೆ ನೈಜ ಬೆಲೆಯಿಲ್ಲದೆಡೆ…
ಗಂಗಾವತಿ ಭಾಗದಲ್ಲಿ ಆನೆಗೊಂದಿ, ಸಾಣಾಪುರ, ಅಂಜನಾದ್ರಿ, ಪಂಪಾಸರೋವರ ಹೀಗೆ ಅನೇಕ ಪ್ರವಾಸೋದ್ಯಮದ ಉತ್ತೇಜನಕ್ಕೆ ಅನುಕೂಲವಾಗುವ ಐತಿಹಾಸಿಕ ಸ್ಥಳಗಳಿವೆ. ವಿಶ್ವವಿಖ್ಯಾತ ಹಂಪಿಗೆ ಬರುವ ದೇಶ, ವಿದೇಶಗಳ ಪ್ರವಾಸಿಗರು ಆನೆಗೊಂದಿ ಭಾಗಕ್ಕೆ ಬರುವುದು ಸಾಮಾನ್ಯ. ಅವರಿಗೆ ಮನೆಯ ಊಟದ ಸ್ವಾದ ಉಣಬಡಿಸಲು ಗಂಗಾವತಿ ತಾಲ್ಲೂಕು ಪ್ರವಾಸೋದ್ಯಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ’ಸಂಚಾರ ಅಕ್ಕ ಕೆಫೆ’ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೊಂದು ಸಂಚಾರ ಅಕ್ಕ ಕೆರೆ ಕುಕನೂರಿನಲ್ಲಿ ಆರಂಭವಾಗಲಿದೆ. ಈ ಕೆಫೆಗಳು ಬಸ್ನಲ್ಲಿ ಸಿದ್ಧತೆ ಮಾಡಲಾಗುತ್ತದೆ. ಅಕ್ಕ ಕೆಫೆ ’ಒಲವಿನ ಊಟ’ ಎನ್ನುವ ಅಡಿಬರಹ ಹೊಂದಿದೆ.
ಅ. 6ರಂದು ಜಿಲ್ಲಾಕೇಂದ್ರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಆರಂಭಿಸಿರುವ ಅಕ್ಕ ಕೆಫೆ ಉದ್ಘಾಟಿಸಿದ್ದರು. ಈ ಕೇಂದ್ರ ಬುಧವಾರ ಕಾರ್ಯಾರಂಭ ಮಾಡಿದೆ. ತಹಶೀಲ್ದಾರ್ ಕಚೇರಿ ಆವರಣದಲ್ಲಿ ಉಪನೋಂದಣಾಧಿಕಾರಿ ಕಚೇರಿ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಉಪವಿಜ್ಞಾನ ಪ್ರಾದೇಶಿಕ ಕೇಂದ್ರಗಳು ಇದ್ದು, ಅಲ್ಲಿನ ಸಿಬ್ಬಂದಿ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾರ್ವಜನಿಕರಿಗೆ ಕೆಫೆಯಿಂದ ಅನುಕೂಲವಾಗಲಿದೆ.
ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ ಜೊತೆಗೂಡಿ ರಾಜ್ಯ ಸರ್ಕಾರ ಜಿಲ್ಲೆಗೆ ಎರಡು ಅಕ್ಕ ಕೆಫೆಗಳನ್ನು ಮಂಜೂರು ಮಾಡಿದೆ. ಮೊದಲ ಹಂತದಲ್ಲಿ ಕೊಪ್ಪಳದಲ್ಲಿ ಕಾರ್ಯಾರಂಭ ಮಾಡಿದ್ದು, ಇನ್ನೊಂದು ತಿಂಗಳಲ್ಲಿ ಯಲಬುರ್ಗಾದಲ್ಲಿ ಆರಂಭವಾಗಲಿದೆ. ಎರಡನೇ ಹಂತದಲ್ಲಿ ಎಲ್ಲಾ ತಾಲ್ಲೂಕುಗಳಿಗೆ ಕೆಫೆ ಸೌಲಭ್ಯ ಸಿಗಲಿದೆ. ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಸಂಜೀವಿನಿ ಒಕ್ಕೂಟದ ಉಸ್ತುವಾರಿಯಲ್ಲಿ ಅಕ್ಕ ಕೆಫೆ ಕಾರ್ಯನಿರ್ವಹಿಸಲಿದ್ದು, ’ಅಕ್ಕಂದಿರೇ’ ನಿರ್ವಹಣೆ ಮಾಡುತ್ತಾರೆ.
ಇಲ್ಲಿನ ಕೆಫೆಯಲ್ಲಿ ಅಡುಗೆ ಸಿಬ್ಬಂದಿ, ಸಹಾಯಕರು ಹಾಗೂ ಹೋಟೆಲ್ ಉಸ್ತುವಾರಿಗಳು ಮಹಿಳೆಯರೇ ಇದ್ದಾರೆ. ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಕಾಫಿ, ಟೀ, ದೊರೆಯಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಸಮಿತಿ ಕೆಫೆಗೆ ಭೇಟಿನೀಡಿ ಶುಚಿತ್ವ, ಆಹಾರದ ಗುಣಮಟ್ಟ, ರುಚಿ ಪರಿಶೀಲಿಸಿ ‘ಅಕ್ಕ ಕೆಫೆ‘ ಕಾರ್ಯವೈಖರಿ ಮೇಲೆ ಕಣ್ಗಾವಲು ವಹಿಸಲಿದೆ. ಕೆಫೆಗೆ ಬೇಕಾಗುವ ಕಟ್ಡಡ ಹಾಗೂ ಇನ್ನಿತರ ಸೌಲಭ್ಯವನ್ನು ಎನ್ಆರ್ಎಲ್ಎಂನಿಂದ ₹15 ಲಕ್ಷ ಮತ್ತು ಜಿಲ್ಲಾ ಪಂಚಾಯಿತಿಯಿಂದ ₹5 ಲಕ್ಷ ಒದಗಿಸಲಾಗಿದೆ.
ಇದನ್ನೂ ನೋಡಿ : ನಮಗೆ 10 ಸಾವಿರ ಪಿಂಚಣಿ ನೀಡಿ – ವಿಕಲಚೇತನರ ಆಗ್ರಹ Janashakthi Media
