ಪದವಿ, ಇಂಜಿನೀಯರಿಂಗ್ ಬೋಧಕ ವರ್ಗದ ತರಬೇತಿಗೆ ಅಜೀಂ ಪ್ರೇಮ್‌ಜಿಗೆ ಹೊಣೆ – ವ್ಯಾಪಕ ವಿರೋಧ

ಬೆಂಗಳೂರು :ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆಯು 10-20 ವರ್ಷಗಳ ಅನುಭವ‌ ಇರುವ ಸರ್ಕಾರಿ ಪದವಿ,‌ ಸ್ನಾತಕೋತ್ತರ ಕಾಲೇಜುಗಳ ಸಹಾಯಕ, ಸಹ‌ ಪ್ರಾಧ್ಯಾಪಕರಿಗೆ ಅಜೀಂ ಪ್ರೇಮ್ ಜಿ ವಿವಿಯಿಂದ ‘ಬೋಧಕ ವರ್ಗಗಳಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ’ (faculty professional development program) ಕುರಿತು ನಡೆಯುತ್ತಿರುವ ಎರಡು ದಿನಗಳ ಕಾರ್ಯಾಗಾರಕ್ಕೆ ವಿರೋಧ ವ್ಯಕ್ತವಾಗಿದೆ. ಪದವಿ

ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಈ ಕುರಿತು ಪ್ರತಿಕ್ರಿಯಿಸಿದ್ದು, ಇಂದು ಖಾಸಗಿ ಶಿಕ್ಷಣ ಸಂಸ್ಥೆಯಾದ ಅಜೀಂ ಪ್ರೇಮ್ ಜಿ ವಿವಿ ಉನ್ನತ ಶಿಕ್ಷಣ ವ್ಯವಸ್ಥೆಯ ನೀತಿ ನಿರೂಪಣೆ ರೂಪಿಸುವಷ್ಟು‌ ಪ್ರಭಾವಶಾಲಿಯಾಗಿದೆ.ಎನ್‌ಇಪಿ 2020ಯ‌ ಕರಡು‌ ದಸ್ತಾವೇಜಿನ ಹಿಂದೆ ಅಜೀಂ ಪ್ರೇಮ್ ಜಿ ವಿವಿಯ‌ ಸಕ್ರಿಯ‌ ಪಾತ್ರವಿರುವುದು ಅನಧಿಕೃತ ಮಾಹಿತಿಯಾದರೂ ಸಹ‌ ಯಾರೂ ಅಧಿಕೃತವಾಗಿ ಅಲ್ಲಗೆಳದಿಲ್ಲ ಎಂದಿದ್ದಾರೆ.

ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರ್ವಜನಿಕ ಸಂಸ್ಥೆಯಾದ‌ ‘ಡಯಟ್’ ಮೂಲಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಈ ಖಾಸಗಿ ಸಂಸ್ಥೆ ಈಗ ಬೋಧನೆ ಮಾಡಿ ಅನುಭವ ಇರುವ ಉನ್ನತ ಶಿಕ್ಷಣದ ಸರ್ಕಾರಿ ಪ್ರಾಧ್ಯಾಪಕರಿಗೆ ತರಬೇತಿ ನೀಡುತ್ತಿದ್ದಾರೆ. ಹಾಗಿದ್ದರೆ ಈಗ ಅಸ್ತಿತ್ವದಲ್ಲಿರುವ
ಉನ್ನತ ಶಿಕ್ಷಣ ಪರಿಷತ್ ನ ನೀತಿ ಏನು? ಅದರ ಅಧ್ಯಕ್ಷರಾಗಿರುವ ಉನ್ನತ ಶಿಕ್ಷಣ ಸಚಿವರು ಮತ್ತು ಸದಸ್ಯರಾಗಿರುವ ಸೆಲೆಬ್ರಿಟಿ ವಿದ್ವಾಂಸರ ಅಭಿಪ್ರಾಯವೇನು? ಖಾಸಗಿ ಶಿಕ್ಷಣ ಸಂಸ್ಥೆಗೆ ಇಂತಹ ಹೊರಗುತ್ತಿಗೆ ನೀಡಲು ಒಪ್ಪಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಋತುಮತಿಯಾದವರು ಯಾರೆಂದು ಪತ್ತೆ ಹಚ್ಚಲು ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಶಿಕ್ಷಕರು

ಇಂದು ತರಬೇತಿಯನ್ನು ಹೊರ ಗುತ್ತಿಗೆ ಕೊಡುವ ಇಲಾಖೆ ನಾಳೆ ಪದವಿ ತರಗತಿಗಳನ್ನು ಸಹ‌ ಇವರಿಗೆ ಹೊರ ಗುತ್ತಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಖಾತರಿ ಏನು? ಉನ್ನತ ಶಿಕ್ಷಣ ಇಲಾಖೆಗೆ ತನ್ನ ಪ್ರಾಧ್ಯಾಪಕರಿಗೆ ತರಬೇತಿ ಕೊಡದಷ್ಟು ಕಳಪೆಯೇ? ಇಂದು ಅಜೀಂ ಪ್ರೇಮ್ ಜಿ ವಿವಿ, ನಾಳೆ ಆರೆಸ್ಸೆಸ್ ಸಂಸ್ಥೆಗಳಿಗೆ ಕೊಡುವುದಿಲ್ಲ ಎನ್ನುವುದಕ್ಕೆ ಗ್ಯಾರಂಟಿ ಏನು? ‘ರಾಜ್ಯ‌ ಶಿಕ್ಷಣ ನೀತಿ’ ಆಯೋಗದ ನಿಲುವೇನು? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಧಾರವಾಡದಲ್ಲಿ ಉನ್ನತ ಶಿಕ್ಷಣ ಅಕಾಡೆಮಿಯನ್ನು ಸ್ಥಾಪಿಸಿದೆ. ಈ ಅಕಾಡೆಮಿಯ ಮುಖ್ಯ ಉದ್ದೇಶವೆಂದರೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರಿಗೆ ತರಬೇತಿ ನೀಡುವುದು ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು. ಹೀಗಿರುವಾಗ ಅಜೀಂ ಪ್ರೇಮ್‌ಜಿ ಯಂತಹ ಖಾಸಗಿ ಶಿಕ್ಷಣ ಸಂಸ್ಥೆಗೆ ತರಬೇತಿ ಹೊಣೆವಹಿಸಿರುವುದು ಉನ್ನತ ಶಿಕ್ಷಣವನ್ನು ಮತ್ತಷ್ಟು ಖಾಸಗೀಕರಿಸುವ ಹುನ್ನಾರ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಆರೋಪಿಸಿದೆ.

ಇದನ್ನೂ ನೋಡಿ : ಎದೆಗೆ ನಾಟುವ ಸಿನಿಮಾ – ಹೆಬ್ಬುಲಿ ಕಟ್ – ಚಂದ್ರಪ್ರಭ ಕಠಾರಿ Janashakthi Media

Donate Janashakthi Media

Leave a Reply

Your email address will not be published. Required fields are marked *