ಮಂಗಳೂರು: ಹೆರಿಗೆಗೆಂದು ತೆರಳಿದ ಯುವತಿ ಮೃತ; ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ

ಶಿಲ್ಪಾ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಆಸ್ಪತ್ರೆಯ ಮುಂದೆ ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳಿಂದ ಧರಣಿ ಎ.ಜೆ. ಆಸ್ಪತ್ರೆ

ಮಂಗಳೂರು: ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ ಎಡವಟ್ಟಾಗಿ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ್ದ ಬೆಳ್ತಂಗಡಿಯ ವೇಣೂರು ಬಳಿಯ ಶಿಲ್ಪಾ ಆಚಾರ್ಯ (36) ಮಂಗಳವಾರ ಮೃತಪಟ್ಟಿದ್ದಾರೆ. ಶಿಲ್ಪಾ ಅವರು ನಗರದ ಖಾಸಗಿ ಆಸ್ಪತ್ರೆಯಾದ ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಜುಲೈ 2 ರಂದು ಹೆರಿಗೆಗೆಂದು ದಾಖಲಾಗಿದ್ದರು. ಆದರೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಶಿಲ್ಪಾ ಅವರು ಕೋಮಾ ಸ್ಥಿತಿಗೆ ಹೋಗುವಂತಾಗಿತ್ತು ಎಂದು ಅವರ ಕುಟುಂಬಿಕರು ಆರೋಪಿಸಿದ್ದರು. ಎ.ಜೆ. ಆಸ್ಪತ್ರೆ

ಜುಲೈ 2ರಂದು ಆಸ್ಪತ್ರೆಯಲ್ಲಿದ್ದ ಶಿಲ್ಪಾ ಅವರಿಗೆ ಹೆರಿಗೆ ನೋವು ಬಂದ ಹಿನ್ನಲೆಯಲ್ಲಿ ಅವರನ್ನು ಈ ವರೆಗೆ ಪರೀಕ್ಷಿಸುತ್ತಿದ್ದ ವೈದ್ಯರಿಗೆ ಕರೆ ಮಾಡಲಾಗಿತ್ತು. ಆದರೆ ಅವರು ರಜೆಯ ಕಾರಣ ನೀಡಿ ಬೇರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡುತ್ತಾರೆ ಎಂದು ರೋಗಿಯನ್ನುನಿರ್ಲಕ್ಷ್ಯ ಮಾಡಿದ್ದಾರೆ ಶಿಲ್ಪಾ ಅವರ ಕುಟುಂಬಿಕರು ಆರೋಪಿಸಿದ್ದಾರೆ.

ಅದಾಗ್ಯೂ, ಶಸ್ತ್ರಚಿಕಿತ್ಸೆ ಮೂಲಕ ಶಿಲ್ಪಾ ಅವರಿಗೆ ಹೆಣ್ಣು ಮಗು ಹುಟ್ಟಿದ್ದು, ಈ ವೇಳೆ ಆಸ್ಪತ್ರೆಯ ವೈದ್ಯರು, “ಶಿಲ್ಪಾ ಅವರ ಗರ್ಭಕೋಶದಲ್ಲಿ ಕಸ ಅಂಟಿಕೊಂಡಿದೆ, ಆದ್ದರಿಂದ ಗರ್ಭಕೋಶ ತೆಗೆಯಬೇಕಾಗುತ್ತದೆ” ಎಂದು ಹೇಳಿ ಶಿಲ್ಪಾರ ತಾಯಿಯಿಂದ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿ ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆ ಮಾಡಿ ತೆಗೆಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹೆರಿಗೆಗೆಂದು ಹೋದ ಯುವತಿ ಕೋಮಾಗೆ | ಮಂಗಳೂರು ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ

ಗರ್ಭಕೋಶವನ್ನೂ ಶಸ್ತ್ರಚಿಕಿತ್ಸೆ ಸಮಯದಲ್ಲಿ ಅವರಿಗೆ ತೀವ್ರ ರಕ್ತಸ್ರಾವ ಆಗಿದ್ದು, ರಕ್ತದೊತ್ತಡದ ಏರಿಳಿತದಿಂದಾಗಿ ”ಫಿಟ್ಸ್” ಪ್ರಾರಂಭವಾಗಿತ್ತು. ಇದನ್ನು ನಿಯಂತ್ರಿಸಲು ಪ್ರಯತ್ನಿಸುವ ಸಂದರ್ಭದಲ್ಲೇ ಮೆದುಳು ನಿಷ್ಕ್ರಿಯಗೊಂಡು ಬಾಣಂತಿ ಶಿಲ್ಪಾ ಕೋಮ ಸ್ಥಿತಿಗೆ ತಲುಪಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಎಜೆ ಆಸ್ಪತ್ರೆಯ ಡಾ. ವೀಣಾ, “ಹೆರಿಗೆಯ ನಂತರ ಗರ್ಭಕೋಶದಲ್ಲಿ ಕಸ ಇದ್ದಿದ್ದು ಕಂಡುಬಂದಿದ್ದಕ್ಕೆ ಗರ್ಭಕೋಶವನ್ನು ತೆಗೆದಾಗ ತೀವ್ರರಕ್ತಸ್ರಾವವಾಗಿ ಮೆದುಳಿನ ಮೇಲೆ ಪರಿಣಾಮ ಬೀರಿದೆ. ಈ ಹಿಂದಿನ ಸ್ಕ್ಯಾನಿಂಗ್ ಅಲ್ಲಿ ಗರ್ಭಕೋಶದಲ್ಲಿ ಕಂಡುಬಂದಿರಲಿಲ್ಲ. ನಮ್ಮ ಕೈಯಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಿದ್ದೇವೆ. ನಮ್ಮಿಂದ ಯಾವುದೆ ನಿರ್ಲಕ್ಷ್ಯ ಸಂಭವಿಸಿಲ್ಲ” ಎಂದು ಹೇಳಿದ್ದರು.

ಇದಾಗಿ ಸುಮಾರು 25 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಶಿಲ್ಪಾ, ಮಂಗಳವಾರ ಮಧ್ಯಾಹ್ನ 3:30ರ ಹೊತ್ತಿಗೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಶಿಲ್ಪಾ ಅವರ ಪತಿ ಪ್ರದೀಪ್ ಡಿ. ಹೇಳಿದ್ದು, ತಮ್ಮ ಪತ್ನಿಯ ಸಾವಿಗೆ ನ್ಯಾಯ ಕೊಡಿಸುವಂತೆ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿಲ್ಪಾ ಅವರ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳು ಆಸ್ಪತ್ರೆ ಮುಂದೆ ಜಮಾವಣೆಗೊಂಡು ನ್ಯಾಯಾಕ್ಕಾಗಿ ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಂದೇ ರಾತ್ರಿ ಕದ್ರಿ ಪೊಲೀಸರಿಗೆ ದೂರು ಕೂಡಾ ನೀಡಲಾಗಿದೆ.

ಬುಧವಾರ(ಇಂದು) ಬೆಳಿಗ್ಗೆ ಕೂಡಾ ಶಿಲ್ಪಾ ಅವರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಆಸ್ಪತ್ರೆಯ ಮುಂದೆ ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳು ಧರಣಿ ಮಾಡಿದ್ದವು. ನಂತರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಸಾವಿನ ಬಗ್ಗೆ ತಜ್ಞ ವೈದ್ಯರ ಸಮಿತಿಯಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.

“ನನ್ನ ಪತ್ನಿ ಜುಲೈ 2ರಂದು ಆಸ್ಪತ್ರೆಗೆ ತೆರಳುವಾಗ ಆರೋಗ್ಯವಾಗಿಯೆ ಇದ್ದರು. ಆದರೆ ಆಸ್ಪತ್ರೆಯ ಡೀನ್ ಅಶೋಕ್ ಹೆಗ್ಡೆ, ಅನಸ್ತೇಶಿಯಾ ಡಾಕ್ಟರ್‌ ಹಾಗೂ ಹೆರಿಗೆ ವೈದ್ಯೆ ವೀಣಾ, ಆಸ್ಪತ್ರೆಯ ಮಂಡಳಿ ಹಾಗೂ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಪತ್ನಿ ಶಿಲ್ಪಾ ಸಾವಿಗೀಡಾಗಿದ್ದಾರೆ. ನನ್ನ ಪತ್ನಿ ಸಾವಿಗೆ ಈ ವ್ಯಕ್ತಿಗಳು ಮತ್ತು ಎಜೆ ಆಸ್ಪತ್ರೆಯೆ ಕಾರಣ” ಎಂದು ಪ್ರದೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರತಾಪ್‌ ಸಿಂಹ ಚೆಲುವಾಂಬ ಆಸ್ಪತ್ರೆಯಲ್ಲಿ ಬಾಣಂತಿ ಮಕ್ಕಳು ಸಾಯುತ್ತಿದ್ದಾರೆ ನೋಡಪ್ಪ: ಎಚ್‌. ವಿಶ್ವನಾಥ್‌

“ಅಷ್ಟೆ ಅಲ್ಲದೆ, ಹುಟ್ಟಿದ ಮಗುವಿಗೆ ಕೂಡಾ ಆರೋಗ್ಯ ಸಮಸ್ಯೆಯಿದೆ. ಹೆರಿಗೆ ದಿನದಿಂದ ಇಲ್ಲಿಯವರೆಗೂ ಪ್ರತಿಯೊಂದು ವಿಷಯಗಳು ಅನುಮಾನಾಸ್ಪದವಾಗಿದ್ದು, ಚಿಕಿತ್ಸಾ ವೈಫಲ್ಯ ಹಾಗೂ ನಿರ್ಲಕ್ಷದಿಂದಾಗಿ ನನ್ನ ಪತ್ನಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕಿದೆ ಹಾಗೂ ತನಿಖೆ ಮುಗಿಯುವವರೆಗೂ ಇಲ್ಲಿ ಬೇರಾವುದೆ ಹೆರಿಗೆಯನ್ನು ಮಾಡಿಸಬಾರದು” ಎಂದು ಪ್ರದೀಪ್ ಆಗ್ರಹಿಸಿದ್ದಾರೆ.

ಎ.ಜೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ನಡೆದ ದುರಂತದ ವಿರುದ್ಧ ಜಿಲ್ಲಾ ಡಿವೈಎಫ್‌ಐ ಆಕ್ರೋಶ ವ್ಯಕ್ತಪಡಿಸಿದ್ದು, “ಪ್ರಕರಣ ಬೆಳಕಿಗೆ ಬಂದು ವ್ಯಾಪಕ ಚರ್ಚೆಗೊಳಗಾದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ , ಸರಕಾರ, ಆರೋಗ್ಯ ಮಂತ್ರಿಗಳಿಗೆ ಬಡವರ ಕೂಗು ಕೇಳಲೇ ಇಲ್ಲ. ಸರಕಾರಗಳು ಬದಲಾದರೂ ಖಾಸಗಿ ಆಸ್ಪತ್ರೆಗಳ ಬಡವರ ಬಗೆಗಿನ ನಿರ್ಲಕ್ಷ್ಯ, ಬೇಜವಾಬ್ದಾರಿ, ಲೂಟಿಕೋರ ನೀತಿಗಳಿಗೆ ಕಡಿವಾಣ ತರಲು ಈ ಸರಕಾರಗಳಿಗೂ ಎದೆಗಾರಿಕೆ ಇಲ್ಲ” ಎಂದು ಹೇಳಿದೆ.

“ಬಡವರ ಕಾಳಜಿ, ಏಳಿಗೆಗಳೆಲ್ಲವೂ ಬರಿಯ ಚುನಾವಣಾ ರಾಜಕೀಯಕಷ್ಟೆ ಸೀಮಿತ. ಕರಾವಳಿಯ ಆಡಳಿತ ಕಾರುಬಾರುಗಳೆಲ್ಲವೂ ಧಣಿಕರ ಕೈಯೊಳಗಿದೆ. ಅನ್ಯಾಯ, ದಬ್ಬಾಳಿಕೆ ,ದೌರ್ಜನ್ಯ ಅದರಷ್ಟಕ್ಕೆ ಕೊನೆಯಾಗುವುದಿಲ್ಲ. ಈ ಅವ್ಯವಸ್ಥೆಯ ವಿರುದ್ಧ ಸಂಘಟಿತ ದ್ವನಿ ಮೊಳಗಬೇಕು. ಇಂದು ಶಿಲ್ಪ ನಾಳೆ ನಮ್ಮ ಮನೆಯ ಹೆಣ್ಣು ಮಗಳು ಬಲಿಯಾಗುವುದಕ್ಕಿಂತ ಮುಂಚೆ ಎಚ್ಚರಗೊಳ್ಳೋಣ” ಎಂದು ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದ್ದು, ಮೃತರ ಕುಟುಂಬಕ್ಕೆ ಆಸ್ಪತ್ರೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಡಿಯೊ ನೋಡಿ: ಖಾಸಗೀ ಆಸ್ಪತ್ರೆಗಳ ದಂಧೆಯಿಂದ ಪ್ರಾಣಹಾನಿ : ಮುನೀರ್ ಕಾಟಿಪಳ್ಳ

Donate Janashakthi Media

Leave a Reply

Your email address will not be published. Required fields are marked *