ಅಯೋಧ್ಯೆ: ಖಾಸಗಿ ಸಂಸ್ಥೆಯ ಪ್ರಾಚಾರ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಅವರಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವಿಚಿತ್ರ ತಿರುವು ಪಡೆದಿದ್ದು. 6 ವಿದ್ಯಾರ್ಥಿಗಳ ಮೇಲೆ ದೇಶದ್ರೋಹದಡಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿ ಸಂಘದ ಚುನಾವಣೆಯನ್ನು ನಡೆಸದಿರುವುದರ ವಿರುದ್ಧ ಡಿಸೆಂಬರ್ 16 ರಂದು ನಡೆದ ಪ್ರದರ್ಶನದಲ್ಲಿ ಸಾಕೇತ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭ್ರಷ್ಟಾಚಾರಿ ಹಾಗೂ ಸಂವಿಧಾನ ವಿರೋಧಿ ಪ್ರಾಚಾರ್ಯರಿಂದ ನಮಗೆ ಸ್ವಾತಂತ್ರ್ಯ ಬೇಕು ಎಂದು ಘೋಷಣೆ ಕೂಗಿದ್ದರು. ಆದರೆ ಪ್ರಾಚಾರ್ಯ ಎನಂಡಿ ಪಾಂಡೆ ಹೇಳಿಕೆ ವಿಭಿನ್ನವಾಗಿದ್ದು ವಿದ್ಯಾರ್ಥಿಗಳು ರಾಷ್ಟ್ರದ್ರೋಹದಂತಹ ಘೋಷಣೆ ಕೂಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಹೆಸರನ್ನು ನೀಡಿದ್ದಾರೆ. ಆದರೆ ಈ ಆರೋಪವನ್ನು ವಿದ್ಯಾರ್ಥಿಗಳು ನಿರಾಕರಿಸಿದ್ದಾರೆ, ಭ್ರಷ್ಟ ಪ್ರಾಂಶುಪಾಲರಿಂದ ಸ್ವಾತಂತ್ರ್ಯ ಬಯಸಿದ್ದೇವೆ ಎಂದು ಹೇಳಿದ್ದಾರೆ.
ಪ್ರಾಂಶುಪಾಲರ ದೂರಿನ ಮೇರೆಗೆ ಪೊಲೀಸರು ಸುಮಿತ್ ತಿವಾರಿ, ಶೇಶ್ ನಾರಾಯಣ್ ಪಾಂಡೆ, ಇಮ್ರಾನ್ ಹಶ್ಮಿ, ಸಾತ್ವಿಕ್ ಪಾಂಡೆ, ಮೋಹಿತ್ ಯಾದವ್ ಮತ್ತು ಮನೋಜ್ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ), 147 (ಗಲಭೆ), 188 (ಆದೇಶಕ್ಕೆ ಅವಿಧೇಯತೆ), 332, 342, 353 (ಸಾರ್ವಜನಿಕ ಸೇವಕನ ಮೇಲಿನ ಹಲ್ಲೆ), 427 (ಆಸ್ತಿಗೆ ಹಾನಿ ), 435 (ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ಕಿಡಿಗೇಡಿತನ) ಮತ್ತು 506 (ಕ್ರಿಮಿನಲ್ ಬೆದರಿಕೆ ಅಪರಾಧ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿಗಳು ‘ಆಜಾದಿ’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು ಮತ್ತು ಅವರು ಗಲಭೆ ಮತ್ತು ಹಿಂಸಾಚಾರದಿಂದ ‘ಆಜಾದಿ’ ತೆಗೆದುಕೊಳ್ಳಲು ಬಯಸಿದ್ದರು. ಅವರು ದೇಶವನ್ನು ಸುಡಲು ಪ್ರಯತ್ನಿಸುತ್ತಿದ್ದರು ಮತ್ತು ಹಿಂಸಾಚಾರವನ್ನು ಸೃಷ್ಟಿಸುತ್ತಿದ್ದರು, ಮಾತೃ ಭೂಮಿಯನ್ನು ರಕ್ಷಿಸುವುದು ನನ್ನ ಕರ್ತವ್ಯವಾಗಿತ್ತು ಹಾಗಾಗಿ ನಾನು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಪ್ರಾಂಶುಪಾಲರು ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಾಲೇಜಿನ ಭ್ರಷ್ಟ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿ ವಿರೋಧಿ ವ್ಯವಸ್ಥೆಯಿಂದ ‘ಆಜಾದಿ’ ಯನ್ನು ಒತ್ತಾಯಿಸುತ್ತಿರುವುದರಿಂದ ವಿದ್ಯಾರ್ಥಿಗಳು ಆಜಾದಿ ಘೋಷಣೆಗಳನ್ನು ಕೂಗಿದರೆ ಅವರೆ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಆ ಕಾಲಿಜಿನ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಾಸ್ ಕೃಷ್ಣ ಯಾದವ್ ತಿಳಿಸಿದ್ದಾರೆ.