ತಿರುವನಂತಪುರಂ: ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪದ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ ಅವರು ನಿರೀಕ್ಷಣ ಜಾಮೀನು ಒದಗಿಸಬೇಕೆಂದು ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಅವರು ಲಕ್ಷದ್ವೀಪದ ನೂತನ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಮತ್ತು ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ಟಿವಿ ಚ್ಯಾನೆಲ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಲಕ್ಷದ್ವೀಪದ ಜನರ ವಿರುದ್ಧ ಕೇಂದ್ರವು ಕೋವಿಡ್ ಸಾಂಕ್ರಾಮಿಕ ರೋಗವನ್ನು ‘ಜೈವಿಕ ಅಸ್ತ್ರ’ವನ್ನಾಗಿ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಇದನ್ನು ಓದಿ: ಸುಪ್ರೀಂ ಕೋರ್ಟ್: ದೇಶದ್ರೋಹ ಕಾನೂನಿನ ವ್ಯಾಖ್ಯಾನ ಪರಿಶೀಲನೆಯ ಅಗತ್ಯವಿದೆ
ಅವರ ವಿರುದ್ಧ ರಾಷ್ಟ್ರ ವಿರೋಧಿ ಕೃತ್ಯ ಎಂದು ದ್ವೀಪದ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಸಿ ಅಬ್ದುಲ್ ಖಾದರ್ ಹಾಜಿ ಅವರು ಜೂನ್ 10ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕವರಟ್ಟಿ ಪೊಲೀಸರು ನಟಿಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ (ದೇಶದ್ರೋಹ) ಮತ್ತು ಸೆಕ್ಷನ್ 153ಬಿ (ದ್ವೇಷ ಭಾಷಣ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಜೂನ್ 20 ರಂದು ಠಾಣೆಗೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಲಾಗಿದೆ.
ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಒದಗಿಸಬೇಕೆಂದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡದ್ದನ್ನು ಕೇರಳದಲ್ಲಿ ವ್ಯಾಪಕವಾಗಿ ಖಂಡಿಸಲಾಗಿತ್ತು.
ಇದನ್ನು ಓದಿ: ಲಕ್ಷದ್ವೀಪದ ಜನರಿಗೆ ಬೆಂಬಲ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳಿಂದಲೂ ಆಯಿಷಾಗೆ ಬೆಂಬಲ ವ್ಯಕ್ತವಾಗಿತ್ತು. ನೂತನ ಆಡಳಿಗಾರ ಪ್ರಫುಲ್ ಪಟೇಲ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಇತ್ತೀಚಿಗೆ ಕೇರಳದ ಎಡರಂಗ ಸರಕಾರ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ನಿರ್ಣಯವನ್ನು ಸಹ ಅಂಗೀಕರಿಸಿತ್ತು.