ಬೆಂಗಳೂರು: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಇನ್ನೆರಡು ದಿನಗಳು 7 ಜಿಲ್ಲೆಗಳಕಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
- ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ
- ಏಳು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ: ಹವಾಮಾನ ಇಲಾಖೆ
- ಕರಾವಳಿ, ಮಲೆನಾಡಿನಲ್ಲಿ ಮಾತ್ರವಲ್ಲದೆ ಉಳಿದೆಡೆಯೂ ಉತ್ತಮ ಮಳೆಯ ನಿರೀಕ್ಷೆ
- ಮೀನುಗಾಗರು ಸಮುದ್ರಕ್ಕೆ ಇಳಿಯದಂತೆ ಸೂಚನೆ
ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ವ್ಯಾಪಕ ಮಳೆಯಾಗಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ.
ಕಳೆದ ಶುಕ್ರವಾರ ನೈರುತ್ಯ ಮುಂಗಾರು ರಾಜ್ಯದಲ್ಲಿ ಸಾಮಾನ್ಯವಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲಾ ಕಡೆಗಳಲ್ಲಿ ಅಧಿಕ ಮಳೆಯಾಗಿದೆ. ಜುಲೈ 14ರವರೆಗೂ ಭಾರಿ ಮಳೆಯಾಗುವ ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆ ರಭಸ ಅಧಿಕಗೊಂಡಿದೆ.
ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದನ್ನು ಓದಿ: ಮುಂಗಾರು ಆರಂಭದ ಮೊದಲ ದಿನವೇ ರಾಜ್ಯದ ವಿವಿದೆಡೆ ಭಾರೀ ಮಳೆ
ಇಂದು ಮತ್ತು ನಾಳೆ ಜುಲೈ 12-13) ಆರೆಂಜ್ ಅಲರ್ಟ್ ಹಾಗೂ ಜುಲೈ 14 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನದಲ್ಲಿ ನೆನ್ನೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿತ್ತು.
ಸಮುದ್ರದಲ್ಲಿ 3.3 ಮೀಟರ್ ಅಬ್ಬರದ ಅಲೆಗಳು ಇರಲಿವೆ. ಮೀನುಗಾಗರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೊಡಗಿನಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಸಾರ್ವಜನಿಕರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಪ್ರಕೃತಿ ವಿಕೋಪ ಸಂಬಂಧಿತ ಸಮಸ್ಯೆಗಳು ಕಂಡುಬಂದಲ್ಲಿ 24×7 ಕಂಟ್ರೋಲ್ ರೂ. ನಂಬರ್ 08272-221077 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಮುಂಬಯಿಯಲ್ಲಿ ಭರ್ಜರಿ ಮಳೆ: ರೆಡ್ ಅಲರ್ಟ್ ಘೋಷಣೆ
ಅಧಿಕ ಮಳೆ ಬೀಳುವ ಪ್ರದೇಶಗಳು?
ಆಗುಂಬೆಯಲ್ಲಿ 13 ಸೆಂ.ಮೀ, ಮಂಕಿಯಲ್ಲಿ 12 ಸೆಂ.ಮೀ ಮಳೆಯಾಗಿದೆ. ಕೋಟ, ಕುಂದಾಪುರ, ಭಟ್ಕಳ, ಶಿರಾಲಿ, ಕೊಲ್ಲೂರು, ಉಪ್ಪಿನಂಗಡಿ, ಪಣಂಬೂರು, ಭಾಗಮಂಡಲದಲ್ಲಿ ಮಳೆಯಾಗಿದೆ. ಹೊನ್ನಾವರ, ಸುಬ್ರಹ್ಮಣ್ಯ, ಸಿದ್ದಾಪುರ, ಮೂಡುಬಿದಿರೆ, ಬೆಳ್ತಂಗಡಿ, ಮಡಿಕೇರಿ, ಗಂಗಾಪುರ, ಮಾಣಿ, ಬೆಳ್ತಂಗಡಿ, ಯಲ್ಲಾಪುರ, ತಾಳಿಕೋಟೆ, ಕದ್ರ, ಯಲ್ಲಾಪುರ, ಲಿಂಗನಮಕ್ಕಿ, ಮಂಚಿಕೆರೆ, ಶಿರಹಟ್ಟಿ, ಹುಂಚದಕಟ್ಟೆ, ಜಯಪುರ, ಸೋಮವಾರಪೇಟೆ, ಕಳಸ, ಕೊಪ್ಪ, ತಾಳಗುಪ್ಪ, ಸಾಗರ, ಬಂಡೀಪುರದಲ್ಲಿ ಅಧಿಕ ಮಳೆಯಾಗಿದೆ.
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 27.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.