ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳಿಗೆ ಮಹತ್ವದ ವಿಜಯ- ಎಐಕೆಎಸ್ ಅಭಿನಂದನೆ

ಡಿಸೆಂಬರ್ 11ರಂದು ವಿಜಯೋತ್ಸವ-ಹೋರಾಟದ ಸಂದೇಶವನ್ನು, ವಿಜಯದ ಮಹತ್ವವನ್ನು
ದೇಶಾದ್ಯಂತ ಪಸರಿಸಲು ಕರೆ

ಒಂದು ವರ್ಷದ ದೀರ್ಘ ಹೋರಾಟದ ನಂತರ ದೇಶದ ರೈತರು ಚಾರಿತ್ರಿಕ ವಿಜಯವನ್ನು ಸಾಧಿಸಿದ್ದಾರೆ ಎನ್ನುತ್ತ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಇದಕ್ಕಾಗಿ ರೈತರನ್ನು ಅಭಿನಂದಿಸಿದೆ.

ಹಲವು ಲಿಖಿತ ಮಾತುಕತೆಗಳ ನಂತರ ಅಂತಿಮವಾಗಿ ಭಾರತ ಸರಕಾರ ರೈತರ ಬಾಕಿಯಿರುವ ಎಲ್ಲ ಆಗ್ರಹಗಳನ್ನು ಸ್ವೀಕರಿಸಲು ಒಪ್ಪಿದೆ, ಅದರಿಂದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಅಧಿಕೃತವಾಗಿ ಹೋರಾಟದ ವಿಜಯವನ್ನು ಪ್ರಕಟಿಸಿದೆ ಮತ್ತು 378 ದಿನಗಳ ನಂತರ ರೈತರು ದಿಲ್ಲಿಯ ಗಡಿಗಳಿಂದ ಹೋಗುತ್ತಾರೆ ಎಂದು ತಿಳಿಸಿದೆ.

ಇದು ದೇಶದ ರೈತರ ಮತ್ತು ಕಾರ್ಮಿಕರ ಐಕ್ಯ ಹೋರಾಟಕ್ಕೆ ಮತ್ತು 715 ಹುತಾತ್ಮರ ಅತ್ಯುನ್ನತ ತ್ಯಾಗಕ್ಕೆ ಸಿಕ್ಕಿರುವ ವಿಜಯ ಎಂದಿರುವ ಎಐಕೆಎಸ್ ಅಧ್ಯಕ್ಷರಾದ ಅಶೋಕ ಧವಳೆ ಮತ್ತು ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ಈ ಹೋರಾಟದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಕೈಜೋಡಿಸಿದ ಎಲ್ಲ ಪ್ರಜಾಪ್ರಭುತ್ವ ಶಕ್ತಿಗಳನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.

ಇದು ಸ್ವಾತಂತ್ರ್ಯಾನಂತರದ ಅತಿ ದೀರ್ಘವಾದ ಹೋರಾಟ. ಸ್ವಾತಂತ್ರ್ಯದ 75ನೇ ವರ್ಷಾಚರಣೆ ನಡೆಸುತ್ತಿರುವಾಗ ನಮ್ಮ ಸಂವಿಧಾನದಲ್ಲಿ ನಿರೂಪಿಸಿರುವ, ಆದರೆ ಈಗ ಆಳುವ ಸರ್ವಾಧಿಕಾರಶಾಹೀ ಸರಕಾರದಿಂದ ಹಲವಾರು ದಾಳಿಗಳಿಗೆ ಒಳಗಾಗಿರುವ ಪ್ರಜಾಪ್ರಭುತ್ವ ಮೌಲ್ಯಗಳನ್ನು ಈ ಚಳುವಳಿ ಬಲಪಡಿಸುತ್ತದೆ. ಇದು ನಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತಿತ ಮೌಲ್ಯಗಳಿಗೆ ಸಿಕ್ಕ ವಿಜಯ ಎಂದಿರುವ ಇವರು ಎಸ್‌ಕೆಎಂ ನಿರ್ಧಾರದ ಪ್ರಕಾರ ಡಿಸೆಂಬರ್ 11ರಂದು ವಿಜಯೋತ್ಸವ ನಡೆಸಬೇಕು ಮತ್ತು ಈ ಹೋರಾಟದ ಸಂದೇಶವನ್ನು ಮತ್ತು ಈ ವಿಜಯದ ಮಹತ್ವವನ್ನು ದೇಶದ ಪ್ರತಿ ಮೂಲೆಗೂ ಒಯ್ಯಬೇಕು ಎಂದು ಎಐಕೆಎಸ್‌ನ ಎಲ್ಲ ಘಟಕಗಳಿಗೆ ಕರೆ ನೀಡಿದ್ದಾರೆ.

ಕರಾಳ ಕಾಯ್ದೆಗಳ ವಿರುದ್ಧ ಹೋರಾಟ ಗೆದ್ದಿದೆ, ಆದರೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವ ಕಾಯ್ದೆಗಾಗಿ ಹೋರಾಟ ಮುಂದುವರೆಯುತ್ತದೆ ಎಂದು ಅಶೋಕ ಧವಳೆ ಮತ್ತು ಹನ್ನನ್ ಮೊಲ್ಲ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *