ನವದೆಹಲಿ: ಮಕ್ಕಳಿಗಾಗಿ ಭಾರತ್ ಬಯೋಟೆಕ್ ಸಂಸ್ಥೆಯು ಕೋವಿಡ್ ಲಸಿಕೆ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಸೆಪ್ಟಂಬರ್ ಒಳಗೆ ಪ್ರಯೋಗದ ಫಲಿತಾಂಶ ಲಭಿಸಲಿದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಹೇಳಿದರು.
ದೇಶದಲ್ಲಿ ಕೊರೊನಾ ಎರಡನೇ ನೇ ಅಲೆ ತಗ್ಗಿದ್ದು, ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಸಡಿಲಿಕೆಗೊಳ್ಳುತ್ತಿದೆ. ಆದರೆ ಕೊರೊನಾ ಡೆಲ್ಟಾ ರೂಪಾಂತರಿ ಸೋಂಕಿನ ಭೀತಿ ಹೆಚ್ಚಾಗಿದೆ. ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ದಾಳಿ ಮಾಡಲಿದೆ ಎಂಬ ಆತಂಕವಿದೆ. ಇದರ ನಡುವೆ ಶಾಲೆಗಳ ಆರಂಭಕ್ಕೂ ಹಲವು ರಾಜ್ಯಗಳಲ್ಲಿ ಸಿದ್ದತೆಗಳು ನಡೆಯುತ್ತಿವೆ. ಇವುಗಳ ನಡುವೆ ಸೆಪ್ಟೆಂಬರ್ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ.
ಇದನ್ನು ಓದಿ: ಮೂರನೇ ಅಲೆ ಸನ್ನಿಹಿತ : ಜಾಗೃತೆ ತಪ್ಪಿದರೆ ಅಪಾಯ ತಪ್ಪಿದ್ದಲ್ಲ – ಐಎಂಎ ಎಚ್ಚರಿಕೆ
ಲಸಿಕೆ ತಯಾರಿಕ ಸಂಸ್ಥೆಯಾದ ಭಾರತ್ ಬಯೋಟೆಕ್ ಮಕ್ಕಳಿಗಾಗಿ ಲಸಿಕೆ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಪ್ರಯೋಗಗಳು ಪ್ರಕ್ರಿಯೆಯ ಹಂತದಲ್ಲಿದ್ದು ಮೂರು ಹಂತಗಳಲ್ಲಿ ಮಾಡಲಾಗುತ್ತಿದೆ. ಇದರಲ್ಲಿ ವಿವಿಧ ವಯಸ್ಸಿನ ಮಕ್ಕಳನ್ನು ವರ್ಗೀಕರಿಸಲಾಗಿದೆ.
ಮೊದಲ ಪ್ರಯೋಗ 12-18 ವರ್ಷ ವಯಸ್ಸಿನವರಿಗೆ ಮಾಡಲಾಯಿತು. ನಂತರ 6-12 ವರ್ಷದೊಳಗಿನವರಲ್ಲಿ ಮತ್ತು ಈಗ 2-6 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದೆ. 12-18 ವರ್ಷದೊಳಗಿನವರಿಗೆ ಲಸಿಕೆ ಸಂಬಂಧ ಪ್ರಯೋಗಗಳನ್ನು ಪೂರ್ಣಗೊಳಿಸಿದ್ದು, ತುರ್ತು ಬಳಕೆಗಾಗಿ ಅನುಮೋದನೆ ಕೋರಿದ್ದಾರೆ.
ಕೊರೊನಾ ಸೋಂಕಿನ ಹೊಸ ರೂಪಾಂತರಗಳಿಗೆ ಅಭಿವೃದ್ಧಿಪಡಿಸಿದ ಲಸಿಕೆಯ ಅವಶ್ಯಕತೆ ಇದೆ. ಕೋವಿಡ್‌ನ ಹೊಸ ರೂಪಾಂತರಗಳಿಗೆ ಅತಿ ಹೆಚ್ಚಿನ ಪರಿಣಾಮಕಾರಿಯಾದ ಲಸಿಕೆಗಳು ಬೇಕಾಗಬಹುದು. ಸಮಯ ಕಳೆದಂತೆ ರೋಗನಿರೋಧಕ ಶಕ್ತಿ ಕುಸಿಯುತ್ತದೆ, ಹಾಗಾಗಿ ಲಸಿಕೆಯ ಅಭಿವೃದ್ಧಿ ಅಗತ್ಯ ಎಂದು ಗುಲೇರಿಯಾ ಹೇಳಿದ್ದಾರೆ.
ಇದನ್ನು ಓದಿ: 3ನೇ ಅಲೆ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ: ಸಚಿವ ಡಾ.ಕೆ.ಸುಧಾಕರ್
ಈ ಲಸಿಕೆಗಳು ಉತ್ತಮ ರೋಗನಿರೋಧಕ ಶಕ್ತಿ ಹೊಂದಿದ್ದು, ವಿವಿಧ ರೀತಿಯ ರೂಪಾಂತರಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಈ ವರ್ಷದ ಅಂತ್ಯದ ವೇಳೆಗೆ ಬೂಸ್ಟರ್ ಡೋಸ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇಡೀ ಜನಸಂಖ್ಯೆಯ ಲಸಿಕೆ ಪೂರ್ಣಗೊಂಡ ನಂತರವೇ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಡಾ ಗುಲೇರಿಯಾ ಹೇಳಿದರು.
ದೇಶದ ಜನರಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣ ಏರಿಕೆಯಾದರೆ ಕೊರೊನಾ ಸೋಂಕು ಸೇರಿದಂತೆ ಎಲ್ಲಾ ರೀತಿಯ ಫಂಗಸ್ ಕಾಯಿಲೆಗಳ ವಿರುದ್ಧ ಹೋರಾಡಬಹುದು. ಕೊರೊನಾ ಸೋಂಕಿನ ಹೊಸ ರೂಪಾಂತರಿಗಳ ವಿರುದ್ಧವೂ ಹೋರಾಡಲು ಬೂಸ್ಟರ್ ಡೋಸ್ ಅಗತ್ಯವಿದೆ ಎಂದರು.
ರಾಜ್ಯದಲ್ಲಿಯೂ ತಜ್ಞರು ಮೂರನೇ ಅಲೆ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಕಾಣಿಸಿಕೊಳ್ಳಬಹುದು ಎನ್ನುತ್ತಿದ್ದಾರೆ. ಅಷ್ಟರೊಳಗೆ ಮಕ್ಕಳಿಗೆ ಲಸಿಕೆ ಲಭ್ಯವಾದರೆ ಅವರನ್ನು ಕೋವಿಡ್ ನಿಂದ ಪಾರು ಮಾಡಬಹುದು ಅಂತಾ ತಜ್ಞರ ಅಭಿಪ್ರಾಯವಾಗಿದೆ.