ʻಹೊಸ ಶಿಕ್ಷಣ ನೀತಿ ಹಿಮ್ಮೆಟ್ಟಿಸಿʼ ವಿದ್ಯಾರ್ಥಿಗಳ ಸಮಾವೇಶ

ಬೆಂಗಳೂರು : “ರಾಜ್ಯ ಸರ್ಕಾರವು ಎನ್.ಇ.ಪಿ ಯನ್ನು ಜಾರಿ ಮಾಡಿದ ಮೊಟ್ಟ‌ಮೊದಲ ರಾಜ್ಯವೆಂದು ಬಹಳ ಹೆಗ್ಗಳಿಕೆಯಿಂದ ಹೇಳಿಕೊಂಡಿದೆ. ಆದರೆ ಎನ್.ಇ.ಪಿ. -20 ಯನ್ನು ವಿರೋಧಿಸಿದ ಮೊದಲ ರಾಜ್ಯವೂ ಕರ್ನಾಟಕವೇ ಆಗಿದೆ ಎಂಬುದನ್ನು ಸರಕಾರ ನೆನಪಿಡಬೇಕು ಎಂದು ಎಐಡಿಎಸ್ಓ ನ ಅಖಿಲ ಭಾರತ ಸಮಿತಿಯ ಅಧ್ಯಕ್ಷರಾದ ವಿ.ಎನ್ ರಾಜಶೇಖರ್  ಅಭಿಪ್ರಾಯಪಟ್ಟರು

ನಗರದ ಫ್ರೀಡಂಪಾರ್ಕ್‌ ಬಳಿ ನಡೆದ ರಾಜ್ಯ ಮಟ್ಟದ ಸಮೇವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹೊಸ ಶಿಕ್ಷಣ ನೀತಿಯು ಸರ್ಕಾರಿ ಶಿಕ್ಷಣ ‌ಸಂಸ್ಥೆಗಳು ಕಮರಿ ಹೋಗುವಂತಹ ಶಿಫಾರಸ್ಸಗಳನ್ನು ಮಾಡಿದೆ. ಈ ಮೊದಲು ಕಾಂಗ್ರೆಸ್ ಸರ್ಕಾರವು 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಶಿಕ್ಷಣದ ಖಾಸಗೀಕರಣಕ್ಕೆ ರತ್ನಗಂಬಳಿ ಹಾಸಿತ್ತು. ಈಗಿನ ಕೇಂದ್ರ ಬಿಜೆಪಿ ಸರ್ಕಾರವು ಈ‌ ನೀತಿಯ ಮೂಲಕ ಶಿಕ್ಷಣವನ್ನು ಮತ್ತಷ್ಟು ರಭಸವಾಗಿ ಕಾರ್ಪೋಟೀಕರಣಗೊಳಿಸಲು ಸಜ್ಜಾಗಿ ಬಡ ವಿದ್ಯಾರ್ಥಿಗಳಿಗೆ, ಬಡಜನತೆಗೆ ದ್ರೋಹ ಬಗೆಯುತ್ತಿದೆ. ಉನ್ನತ ಶಿಕ್ಷಣ ಸಚಿವರು ನೂತನ ವಿಶ್ವ ವಿದ್ಯಾನಿಲಯ ಸ್ಥಾಪನೆಗೆ ಕೇವಲ 2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ನಾವು ರಾಜ್ಯ ಬಜೆಟ್ ನಲ್ಲಿ ಶೇ.30 ರಷ್ಟು ಶಿಕ್ಷಣಕ್ಕೆ ಮೀಸಲಿಡಿ ಎಂದು ಆಗ್ರಹಿಸುತ್ತಿದ್ದಾಗ, ಸರ್ಕಾರದ ಈ ಹೇಳಿಕೆ ಅವರ ಕಡು ಶಿಕ್ಷಣ ವಿರೋಧಿ, ಬಡ ವಿದ್ಯಾರ್ಥಿ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇಂತಹ ಹತ್ತು ಹಲವು ಶಿಕ್ಷಣ ವಿರೋಧಿ ಶಿಫಾರಸ್ಸುಗಳನ್ನು ಈ ನೀತಿ ಹೊಂದಿದೆ. ಇದರ ವಿರುದ್ಧ ಪ್ರಬಲ ಚಳುವಳಿಯನ್ನು ಕಟ್ಟುವುದು  ಈ ಘಳಿಗೆಯ ಅವಶ್ಯಕ‌ತೆ ಎಂದು ಹೇಳಿದರು. ಇದು ಸಹಿ ಸಂಗ್ರಹ ಅಭಿಯಾನದ ಅಂತ್ಯವಲ್ಲ. ಇತರ ಮುಂದಿನ ಭಾಗವಾಗಿ,  ದೇಶದಾದ್ಯಂತ 1 ಲಕ್ಷ ಎನ್.ಇ.ಪಿ ವಿರೋಧಿ ಸಮಿತಿಗಳ ರಚನೆ ಹಾಗೂ 25 ಲಕ್ಷ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರರಾಗಿ ನಮೂದಿಸಿ, ವಿದ್ಯಾರ್ಥಿ ವಿರೋಧಿ ಹೊಸ ಶಿಕ್ಷಣ ನೀತಿಯನ್ನು ಹಿಮ್ಮೆಟಿಸಲು ಒಕ್ಕೊರಲಿನಿಂದ ಮುಂದಾಗಬೇಕೆಂದು ಕರೆ ನೀಡಿದರು.

ಇದನ್ನೂ ಓದಿ : ವೇದ ಗಣಿತ ಬೇಡ. ವಿಜ್ಞಾನ, ವೈಜ್ಞಾನಿಕ ಗಣಿತಶಾಸ್ತ್ರ ಬೇಕು; ಎಐಡಿಎಸ್‌ಒ ಆಗ್ರಹ

ಸಮಾವೇಶದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು, ಪ್ರೊ.ಎ. ಮುರಿಗೆಪ್ಪ ಅವರು, “ಶಿಕ್ಷಣವನ್ನು ಇನಷ್ಟು ದುಬಾರಿಗೊಳಿಸಿ ಸರ್ಕಾರವು ಜನವಿರೋಧಿಯಾದಾಗ ಹೋರಾಟ ನಡೆಸುವುದು ವಿದ್ಯಾರ್ಥಿಗಳ ಹಕ್ಕು ಮತ್ತು ಜವಾಬ್ದಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಭಗತ್ ಸಿಂಗರ ಬದುಕು ಮಾದರಿಯಾಗಿದೆ. ಹಲವಾರು ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿ ಶಿಕ್ಷಣದ ಉಳಿವಿಗಾಗಿ ನಡೆಯುತ್ತಿರುವ ಈ ಚಳುವಳಿಯು ಮಹಾಶಕ್ತಿಯಾಗಿ ಬೆಳೆಯಲಿ ಎಂದರು.

ಎಐಡಿಎಸ್ಓ ನ ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್  ಮಾತನಾಡಿ, ” ಸರ್ಕಾರಿ ಕಾಲೇಜುಗಳು ಹಣಕ್ಕಾಗಿ ಸರ್ಕಾರದ ಮೇಲೆ ಅವಲಂಬಿತವಾಗುವುದು ಅತ್ಯಂತ ನಾಚಿಕೆಗೇಡಿನ ವಿಷಯ ಎಂದು ಮಂತ್ರಿಯೊಬ್ಬರು ಹೇಳುತ್ತಾರೆ. ಕಾಲೇಜುಗಳು ಸ್ವ – ಹಣಕಾಸು ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದು, ಕಾಲೇಜು ನಿರ್ವಹಣೆಗೆ ವಿದ್ಯಾರ್ಥಿಗಳನ್ನು ಆದಾಯ ಮಾಡಿಕೊಳ್ಳಿ ಎಂದು ಅವರ ವಾದ. ಇದು ವಿಷಾದನೀಯ ಸಂಗತಿಯಾಗಿದೆ. ಈ ದೇಶದ ಮಹಾನ್ ನವೋದಯ ಚಿಂತಕರು ಈಶ್ವರಚಂದ್ರ ವಿದ್ಯಾಸಾಗರ್, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ ಇವರುಗಳು, ಶಿಕ್ಷಣದ ಹಣಕಾಸು ಜವಾಬ್ದಾರಿ ಸರ್ಕಾರದ ಸಂಪೂರ್ಣ ಹೊಣೆ ಆಗಿರಬೇಕು ಎಂದು ಪ್ರತಿಪಾದಿಸಿದ್ದರು. ಈಗಿನ ಸರ್ಕಾರ ಆ ಉದಾತ್ತ ಆಶಯಗಳಿಗೆ ಕೊಳ್ಳಿ ಇಟ್ಟಿದೆ. ಇದರ ವಿರುದ್ಧ ಈಗಾಗಲೇ ಪ್ರಬಲ ಪ್ರವಾಹ ಎದ್ದಿದೆ. ಭಗತ್ ಸಿಂಗ್ ರ ನಿಜವಾದ ಅನುಯಾಯಿಗಳಾದ ನಾವು ಶಿಕ್ಷಣವನ್ನು ಉಳಿಸುವ ಸಂಕಲ್ಪ ತೊಡುತ್ತೇವೆ” ಎಂದರು.

ನೆರೆದಿದ್ದ ಹೋರಾಟನಿರತ ವಿದ್ಯಾರ್ಥಿಗಳನ್ನು AIDSO ರಾಜ್ಯ ಅಧ್ಯಕ್ಷೆ ಅಶ್ವಿನಿ ಕೆ.ಎಸ್. ಅಭಿನಂದಿಸಿದರು. ಮುಂದುವರೆದು ರಾಜ್ಯದಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಪರಿಸ್ಥಿತಿಯ ಕುರಿತು ಮಾತನಾಡಿದರು. ಎನ್.ಇ.ಪಿ- 2020 ನೀತಿಯು ಕೇವಲ ಸರ್ಕಾರಿ‌ ಶಾಲೆಗಳನ್ನು‌ ಮುಚ್ಚುವುದಷ್ಟೇ ಅಲ್ಲದೆ ಇಡೀ ಶೈಕ್ಷಣಿಕ ವ್ಯವಸ್ಥೆಯನ್ನೇ ನಾಶಪಡಿಸುತ್ತದೆ. ಈ ಹೊಸ ಶಿಕ್ಷಣ ನೀತಿಯಲ್ಲಿ ದೇಶದ ಮಹಾನ್ ವ್ಯಕ್ತಿಗಳ ಪಾಠವನ್ನು ತೆಗೆದು ಹಾಕಿ ವಿದ್ಯಾರ್ಥಿಗಳನ್ನು ಉನ್ನತ ಆದರ್ಶ ಮೌಲ್ಯ ಸಂಸ್ಕೃತಿಯಿಂದ ದೂರವಿರಿಸಲು ಪ್ರಯತ್ನಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಅನ್ಯಾಯವನ್ನು ಪ್ರಶ್ನೆ ‌ಮಾಡುವ ಮನಸ್ಥಿತಿಯನ್ನು ಹಿಸುಕಿಹಾಕಲು ಸರ್ಕಾರವು ಎಲ್ಲಾ ರೀತಿಯಲ್ಲೂ ಹುನ್ನಾರ ನಡೆಸುತ್ತಿದ್ದಾರೆ. ಇದರ ವಿರುದ್ಧ ವಿದ್ಯಾರ್ಥಿಗಳು ಹಳ್ಳಿ ಹಳ್ಳಿಗಳಲ್ಲೂ ಒಂದಾಗಿ ಹೋರಾಟವನ್ನು ಮುಂದುವರೆಸಬೇಕು ಎಂದು ಸ್ಪೂರ್ತಿ ತುಂಬಿದರು.

Donate Janashakthi Media

Leave a Reply

Your email address will not be published. Required fields are marked *