ವೇದ ಗಣಿತ ಬೇಡ. ವಿಜ್ಞಾನ, ವೈಜ್ಞಾನಿಕ ಗಣಿತಶಾಸ್ತ್ರ ಬೇಕು; ಎಐಡಿಎಸ್‌ಒ ಆಗ್ರಹ

ಬೆಂಗಳೂರು :  SC/ST ವಿದ್ಯಾರ್ಥಿಗಳ ಅಭಿವೃದ್ಧಿಗೆ ಮೀಸಲಿಟ್ಟ ನಿಧಿಯನ್ನು ಸರ್ಕಾರವು ತನ್ನ ರಾಜಕೀಯ ಉದ್ದೇಶಕ್ಕಾಗಿ ಬಳಸಬಾರದು. ವಿದ್ಯಾರ್ಥಿಗಳಿಗೆ ವೇದ ಗಣಿತ ಬೇಡ. ವಿಜ್ಞಾನ, ವೈಜ್ಞಾನಿಕ ಗಣಿತಶಾಸ್ತ್ರ ಬೇಕು ಎಂದು ಎಐಡಿಎಸ್‌ಒ ರಾಜ್ಯಕಾರ್ಯದರ್ಶಿ  ಅಜಯ್ ಕಾಮತ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು,  ರಾಜ್ಯದ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿದ್ದ ಗ್ರಾಮ ಪಂಚಾಯತ್ ನಿಧಿಯನ್ನು, ಸರ್ಕಾರವು ‘ ವೇದಗಣಿತ ‘ ಹೇಳಿಕೊಡಲು ಬಳಕೆ ಮಾಡುವ ನಿರ್ಧಾರ ಮಾಡಿರುವುದು ಅತ್ಯಂತ ಆಘಾತಕಾರಿಯಾಗಿದೆ. ಈಗಾಗಲೇ ರಾಜ್ಯದ ಸಾವಿರಾರು ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸರಿಯಾದ ಸಮಯದಲ್ಲಿ ದೊರಕದೆ, ಸಮರ್ಪಕ ಹಾಸ್ಟೆಲ್ ಸೌಲಭ್ಯಗಳು ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಿರುವ ನಿಧಿಯನ್ನು, ಆಳುವ ಸರ್ಕಾರವು ತನ್ನ ರಾಜಕೀಯ ದುರುದ್ದೇಶಕ್ಕಾಗಿ ಬಳಕೆ ಮಾಡಿರುವುದು ಅತ್ಯಂತ ಖಂಡನೀಯ.

ಮತ್ತೊಂದೆಡೆ, ನವೋದಯ ಚಳುವಳಿಯ  ಚಿಂತಕರು ವೇದ ಶಿಕ್ಷಣದ ಆಚರಣೆಗಳ ವಿರುದ್ಧ ಧ್ವನಿಯೆತ್ತಿ, ಜಾತಿ, ಲಿಂಗ ಹಾಗೂ ಧರ್ಮಗಳ ತಾರತಮ್ಯ ಮಾಡದೆ ಎಲ್ಲ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ, ವಿಜ್ಞಾನವನ್ನು ಬೋಧಿಸಬೇಕು ಎಂದು ಹೋರಾಟ ಬೆಳೆಸಿದ್ದರು. ವೇದ ಶಿಕ್ಷಣವು ಸುಳ್ಳು ಮತ್ತು ತಾರತಮ್ಯಭರಿತವಾದದ್ದು ಎಂದು ಈಶ್ವರಚಂದ್ರ ವಿದ್ಯಾಸಾಗರ್ ಮತ್ತು ರಾಜಾರಾಂ ಮೋಹನ್ ರಾಯ್ ಅವರು ಅದನ್ನು ವಿರೋಧಿಸಿದ್ದರು. ಪ್ರಾಚೀನ ಭಾರತದ ಶಿಕ್ಷಣ ವಿಧಾನದ ಬೋಧನೆಯಿಂದ ಲಕ್ಷಾಂತರ ಬಡ ಜನರು, ಶೋಷಿತರು ಶಿಕ್ಷಣದಿಂದಲೇ ವಂಚಿತರಾಗಿದ್ದಾರೆ ಎಂದು ಮಹಾನ್ ವಿವೇಕಾನಂದರು ಹೇಳಿದ್ದರು. ವೇದಗಣಿತವು ಅಸಲಿಗೆ ಗಣಿತವೇ ಅಲ್ಲ ಎಂದು ಪ್ರಖ್ಯಾತ ವಿಜ್ಞಾನಿ ಮೇಘನಾದ್ ಸಾಹಾ ಹೇಳಿದ್ದರು. ಇದನ್ನು ವಿದ್ಯಾರ್ಥಿಗಳಿಗೆ ಬೋಧಿಸದರೆ ಅವರಲ್ಲಿ ಸಮಗ್ರ ಜ್ಞಾನ ಬೆಳೆಯಲು ಅದು ಅಡ್ಡಿಯುಂಟು ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದರು. ಎರಡು ವಿರುದ್ಧ ರೀತಿಯ ಬೋಧನಾ ಕ್ರಮ ವಿದ್ಯಾರ್ಥಿಗಳ ಮನಸ್ಸನ್ನು ನಾಶಗೊಳಿಸುತ್ತದೆ. ಯಾವುದೇ ಶಿಕ್ಷಣ ತಜ್ಞರು ಅಥವಾ ಗಣಿತ ಶಾಸ್ತ್ರಜ್ಞರು ವೇದಗಣಿತವನ್ನು ಪ್ರತಿಪಾದಿಸಲಿಲ್ಲ.

ವೇದಗಣಿತ ಬೋಧನೆ ಮಾಡಲು ಶಿಕ್ಷಕರ ತರಬೇತಿಯನ್ನು ಸರ್ಕಾರವು ಈಗಾಗಲೇ ಆರಂಭಿಸಿದೆ. ಆದರೆ ಏನನ್ನು ಬೋಧನೆ ಮಾಡಬೇಕು ಎಂದು ನಿರ್ಧಾರ ಮಾಡುವ ತಜ್ಞರು ಯಾರು? ಮತ್ತು ಏಕಕಾಲಕ್ಕೆ ವಿದ್ಯಾರ್ಥಿಗಳಿಗೆ ಎರಡು ವಿರುದ್ಧ ರೀತಿಯ ಗಣಿತಶಾಸ್ತ್ರ ಬೋಧನಾ ವಿಧಾನವನ್ನು ಯಾರು ಶಿಫಾರಸ್ಸು ಮಾಡಿದ್ದಾರೆ? ಇವುಗಳಿಗೆ ಸರ್ಕಾರದ ಬಳಿ ಉತ್ತರವಿಲ್ಲ. ಅಂದರೆ, ತನ್ನ ವೈಚಾರಿಕತೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಸರ್ಕಾರದ ನಿಜವಾದ ಉದ್ದೇಶ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ವಿಜ್ಞಾನಕ್ಕೆ ವಿರುದ್ಧವಾಗಿರುವ, ಶಿಕ್ಷಣ ವಿರೋಧಿಯಾಗಿರುವ ಇಂತಹ ನೀತಿಯನ್ನು ರಾಜ್ಯ ಸರ್ಕಾರ ಈ ಕೂಡಲೇ ಕೈ ಬಿಡಬೇಕು ಎಂದು AIDSO ಆಗ್ರಹಿಸುತ್ತದೆ. ವಿದ್ಯಾರ್ಥಿಗಳಿಗೆ ವೈಜಾನಿಕ, ಧರ್ಮನಿರಪೇಕ್ಷ ಶಿಕ್ಷಣವನ್ನು ನೀಡುವಲ್ಲಿ ತನ್ನ ಗಮನವನ್ನು ಹರಿಸಬೇಕು ಎಂದು ಒತ್ತಾಯಿಸುತ್ತೇವೆ. ಇದರೊಂದಿಗೆ, ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ನಿಧಿಯನ್ನು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಅಲ್ಲದೆ ಇನ್ಯಾವುದೇ ಉದ್ದೇಶಕ್ಕೂ ಒಂದೇ ಒಂದು ರೂಪಾಯಿಯನ್ನೂ ಬಳಸಬಾರದು ಎಂದು ಅಜಯ್ ಕಾಮತ್  ಮನವಿ  ಮಾಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *