ಬೆಂಗಳೂರು: ದೋಷವಿದೆ ಎಂದು ನಂಬಿಸಿ, ಅದಕ್ಕೆ ಪರಿಹಾರವಾಗಿ ವಿಶೇಷ ಪೂಜೆ ಮಾಡಿಸುವ ನೆಪದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ದೌರ್ಜನ್ಯವೆಸಗಿ, ಬೆದರಿಕೆ ಒಡ್ಡುತ್ತಿದ್ದ ಜ್ಯೋತಿಷಿ ಹಾಗೂ ಆತನ ಪತ್ನಿ ವಿರುದ್ದ ದೂರು ದಾಖಲಾಗಿದ್ದು, ಸತ್ಯ ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಆವಲಹಳ್ಳಿಯ ಇರಂಡನಹಳ್ಳಿಯ ಆರೋಪಿಗಳಾದ ಆನಂದ ಮೂರ್ತಿ ಮತ್ತವನ ಪತ್ನಿ ಲತಾ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಹಾಗೂ ವಂಚನೆ ಆರೋಪದಡಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ದೂರು ದಾಖಲಾದ ಬೆನ್ನಲ್ಲೇ ಆನಂದಮೂರ್ತಿ ದಂಪತಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ಸ್ವಾಮೀಜಿ ಆನಂದಮೂರ್ತಿ, ಆಶ್ರಮ ಮಾಡಿಕೊಂಡಿದ್ದು ಹಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕುತ್ತಿದ್ದ ಎಂಬುದು ವರದಿಯಾಗಿದೆ. ಆರೋಪಿಗಳು ಮನೆಯಲ್ಲಿ ಮಾಟ-ಮಂತ್ರ ಹಾಗೂ ದೋಷ ಪರಿಹಾರದ ಹೆಸರಿನಲ್ಲಿ ಪೂಜೆ ಮಾಡಿಕೊಂಡು ಅಮಾಯಕರನ್ನು ವಂಚಿಸುತ್ತಿದ್ದರು.
ಸಂತ್ರಸ್ತೆಗೆ ಐದಾರು ವರ್ಷದ ಹಿಂದೆ ಸಂಬಂಧಿಕರ ಮನೆಯ ವಿಶೇಷ ಪೂಜೆಯಲ್ಲಿ ಆರೋಪಿ ಆನಂದಮೂರ್ತಿ ಪರಿಚಿತನಾಗಿದ್ದಾನೆ. ಜ್ಯೋತಿಷಿ ಎಂದು ಪರಿಚಯಿಸಿಕೊಂಡಿದ್ದ ಆನಂದಮೂರ್ತಿ, ಯುವತಿಯ ಜೀವಕ್ಕೆ ಅಪಾಯವಿದೆ. ಅದರಿಂದ ಅವರನ್ನು ಕಾಪಾಡಲು ಕೆಲವು ಪೂಜೆಗಳನ್ನು ಮಾಡಬೇಕೆಂದು ಸಂತ್ರಸ್ತೆಗೆ ಹೇಳಿದ್ದ. ಇದರಿಂದ ಭಯಗೊಂಡಿದ್ದ ಮಹಿಳೆಯು ಆರೋಪಿಯ ಮನೆಗೆ ಹಲವಾರು ಬಾರಿ ಭೇಟಿ ನೀಡಿ ಪೂಜೆ ಮಾಡಿದ್ದಾಳೆ.
ಆರೋಪಿಯು “ನಿಮ್ಮ ಜೀವನದಲ್ಲಿ ಗಂಡಾಂತರವಿದೆ. ಅದರಿಂದ ನಿಮ್ಮ ಕುಟುಂಬ ಸದಸ್ಯರಿಗೂ ತೊಂದರೆಯಾಗಲಿದೆ. ಪ್ರಾಣ ಕಳೆದುಕೊಳ್ಳುವ ಸನ್ನಿವೇಶ ಇದೆ. ನಾನು ಕಾಳಿದೇವಿಯ ಆರಾಧಕನಾಗಿದ್ದು ನಿಮ್ಮ ಕಷ್ಟಗಳನ್ನು ನಿವಾರಿಸುವೆ’ ಎಂದು ಸಂತ್ರಸ್ತೆಗೆ ನಂಬಿಸಿದ್ದಾನೆ.
ಆರೋಪಿಗಳು ಆಕೆಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರಸಿ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಾನೆ. ಪ್ರಜ್ಞೆ ಬಂದಾಗ ಅರೆಬೆತ್ತಲೆಯಾಗಿರುವುದು ಕಂಡುಬಂದಿದೆ. ಈ ವೇಳೆ ಆರೋಪಿ ಆನಂದಮೂರ್ತಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಇದನ್ನು ಆತನ ಪತ್ನಿ ಲತಾ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಳು.
ಆರೋಪಿಗಳು ಯುವತಿಗೆ ಲೈಂಗಿಕ ದೌರ್ಜನ್ಯ ವೆಸಗಿ ಬೆದರಿಸಿದ್ದು ಅಲ್ಲದೆ, ಕಳೆದ ಐದು ವರ್ಷಗಳಿಂದ ಹಂತ ಹಂತವಾಗಿ ರೂ.2.50 ಲಕ್ಷ ವಸೂಲಿ ಮಾಡಿದ್ದರು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಪಾಲಕರು ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದರಿಂದ ಯುವತಿ ಈ ವಿಚಾರವನ್ನು ಯಾರಿಗೂ ಹೇಳದೇ ಸುಮ್ಮನಿದ್ದಳು.
ವಿಡಿಯೋ ತೋರಿಸಿ ಬೆದರಿಕೆ
ಇತ್ತೀಚೆಗೆ ಯುವತಿಯ ಪೋಷಕರು ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಆರೋಪಿ ಆನಂದಮೂರ್ತಿ, ಮದುವೆಗೆ ನಿಶ್ಚಯವಾದ ಹುಡುಗನನ್ನು ಭೇಟಿಯಾಗಿ ಯುವತಿಯ ಖಾಸಗಿ ಫೋಟೋ ತೋರಿಸಿ ಮದುವೆ ಮುರಿದು ಬೀಳುವಂತೆ ಮಾಡಿದ್ದನು. ಆದರೆ, ವಿನಾಃ ಕಾರಣ ನಿಶ್ಚಿತಾರ್ಥ ರದ್ದುಗೊಂಡ ನಂತರ ಆಕೆಯ ತಾಯಿ ದೌರ್ಜನ್ಯದ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವೇಳೆ ಪೋಷಕರು, ಯುವತಿಯನ್ನು ಪ್ರಶ್ನೆ ಮಾಡಿದಾಗ, ಐದಾರು ವರ್ಷದಿಂದ ಆರೋಪಿ ಆನಂದಮೂರ್ತಿ ಎಸಗುತ್ತಿರುವ ದೌರ್ಜನ್ಯದ ಬಗ್ಗೆ ಹೇಳಿದ್ದಾಳೆ. ಹೀಗಾಗಿ ಪೋಷಕರು, ವಕೀಲರ ಸಹಾಯದಿಂದ ಆರೋಪಿಗಳಾದ ಆನಂದಮೂರ್ತಿ ಹಾಗೂ ಆಕೆಯ ಪತ್ನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿರುವ ಕೆ.ಆರ್.ಪುರ ಠಾಣೆ ಪೊಲೀಸರು ವಂಚಕ ದಂಪತಿ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೆ, ಆಕೆಯನ್ನು ಮದುವೆ ಮಾಡಲು ಪ್ರಯತ್ನಿಸಿದರೆ, ಇಡೀ ಕುಟುಂಬವನ್ನು ಕೊಲ್ಲುವುದಾಗಿ ಆರೋಪಿಗಳು ಯುವತಿಯ ಸಹೋದರನಿಗೆ ಬೆದರಿಕೆ ಹಾಕಿದ್ದಾರೆ.