ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳು ದುಡಿಯುವ ವರ್ಗಗಳ ಶ್ರಮ ದೋಚಿ, ಅವರ ಹಕ್ಕುಗಳನ್ನು ಕಸಿದು, ಕಾರ್ಪೋರೇಟ್ ಬಂಡವಾಳಿಗರ ಸಂಪತ್ತನ್ನು ಹೆಚ್ಚಿಸುವ ನೀತಿಗಳಾಗಿದ್ದು, ಈ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಎಂದು ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ ರೋಜಾರಿಯೋ ಆಗ್ರಹಿಸಿದರು.
ನಗರದ ಫ್ರೀಡಂ ಪಾರ್ಕ್ನಲ್ಲಿ ಎಐಸಿಸಿಟಿಯು ವತಿಯಿಂದ ರಾಜ್ಯಮಟ್ಟದ ಪ್ರತಿಭಟನಾ ಸಮಾವೇಶದಲ್ಲಿ ಗುರುವಾರ ಅವರು ಮಾತನಾಡಿದರು. ಕೇಂದ್ರ ಸರ್ಕಾರ 21 ನವೆಂಬರ್ 2025ರಂದು ಯಾವುದೇ ಪೂರ್ವ ಸೂಚನೆ, ಸಾರ್ವಜನಿಕ ಚರ್ಚೆ ಅಥವಾ ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸದೇ, 4 ಕಾರ್ಮಿಕ ಸಂಹಿತೆಗಳಾದ “ವೇತನ ಸಂಹಿತೆ 2019, ಸಾಮಾಜಿಕ ಭದ್ರತಾ ಸಂಹಿತೆ 2020, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ 2020” ಅನ್ನು ಏಕಾಏಕಿ ಜಾರಿಗೊಳಿಸುವ ಮೂಲಕ ಕಾರ್ಮಿಕರ ಮೇಲೆ ಗದಾಪ್ರಹಾರ ನಡೆಸಿದೆ.
ಹೊಸ ಕಾರ್ಮಿಕ ಸಂಹಿತೆಗಳು ಕಾರ್ಮಿಕ ಹಕ್ಕುಗಳ ನಿರ್ಮೂಲನೆಗೆ, ವೇತನ ಇಳಿಕೆಗೆ, ಸಾಮಾಜಿಕ ಭದ್ರತೆಯ ನಷ್ಟಕ್ಕೆ, ಸಂಘಟನೆ ಸ್ವಾತಂತ್ರ‍್ಯದ ನಾಶಕ್ಕೆ ಹಾಗೂ ಉದ್ಯೋಗ ಅಸ್ಥಿರತೆಗೆ ಕಾರಣವಾಗುತ್ತವೆ. ಹಾಗಾಗಿ ಈ ಸಂಹಿತೆಗಳ ವಿರುದ್ಧ ಎಐಸಿಸಿಟಿಯು ಸಹಭಾಗಿ ಸಂಘಟನೆಗಳೊAದಿಗೆ ನಿರಂತರ ಹೋರಾಟ ಕೈಗೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ: ಅಂತರರಾಷ್ಟ್ರೀಯ ಐಡಿಇಎ ಅಧ್ಯಕ್ಷ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ಆಯ್ಕೆ
“ಮೋದಿ ಸರ್ಕಾರವು ಉದ್ಯೋಗದಾತರು ಶ್ರೇಷ್ಠರು ಎಂದು ಹೇಳುತ್ತಿದೆ”
“ನಾವು ಗುತ್ತಿಗೆ ಕಾರ್ಮಿಕ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೇವೆ. ಕನಿಷ್ಠ ವೇತನಕ್ಕಾಗಿ ಹೋರಾಡುತ್ತಿದ್ದೇವೆ. ಕಾರ್ಮಿಕ ಸಂಹಿತೆಯು ಕಾರ್ಮಿಕರ ಧ್ವನಿಯನ್ನು ಕೇಳುವ ಬದಲು, ಗುತ್ತಿಗೆ ಪದ್ಧತಿಯನ್ನು ಶಾಶ್ವತಗೊಳಿಸಿ ಕನಿಷ್ಠ ವೇತನವನ್ನು ಕಡಿಮೆ ಮಾಡಿದೆ. ಕರ್ನಾಟಕದ ನೀರಾವರಿ ಕಾರ್ಮಿಕರು ಈ ಹೋರಾಟಕ್ಕೆ ಬಂದಿದ್ದಾರೆ. ಅವರಿಲ್ಲದೇ ನೀರಾವರಿ ಮಾಡಲು ಸಾಧ್ಯವಿಲ್ಲ, ಅವರೆಲ್ಲರನ್ನೂ ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ.

ಐಟಿಐ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳಿದ್ದಕ್ಕಾಗಿ, ಗುಲಾಮರಾಗಲು ನಿರಾಕರಿಸಿದ ಕಾರಣ ಅವರನ್ನು ಕೆಲಸದಿಂದ ಹೊರಹಾಕಲಾಯಿತು. ಅವರ ಪ್ರತಿಭಟನೆ ಇಂದಿಗೂ ಮುಂದುವರೆದಿದೆ ಮತ್ತು ಸುಮಾರು 4 ವರ್ಷಗಳು ಕಳೆದಿವೆ. ನಾವು ಹೇಳುವುದೇನೆಂದರೆ ಕಾರ್ಮಿಕರು ನಗರಗಳನ್ನು ನಿರ್ಮಿಸುತ್ತಿದ್ದಾರೆ ಮತ್ತು ಅವರ ಶ್ರಮವೇ ದೇಶವನ್ನು ನಡೆಸುತ್ತಿದೆ. ಆದರೆ ಮೋದಿ ಸರ್ಕಾರವು ಉದ್ಯೋಗದಾತರು ಶ್ರೇಷ್ಠರು ಎಂದು ಹೇಳುತ್ತಿದೆ, ಆದ್ದರಿಂದ ಕಾರ್ಮಿಕರು ಅವರಿಗೆ ಕೃತಜ್ಞರಾಗಿರಬೇಕು ಮತ್ತು ನಮ್ಮ ಹಕ್ಕುಗಳನ್ನು ಕೇಳಬಾರದು. ಕಾರ್ಮಿಕರು ಗುಲಾಮರಾಗಬೇಕೆಂದು ಅವರು ಹೇಳುತ್ತಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ” ಎಂದು ರೊಜಾರಿಯೋ ಆಕ್ರೋಶ ವ್ಯಕ್ತಪಡಿಸಿದರು.
“ಗುತ್ತಿಗೆ ಪದ್ಧತಿ ರದ್ದುಗೊಳಿಸಿ, ಖಾಯಂ ನೇಮಕಾತಿ ಮಾಡಿ”
“ಗುತ್ತಿಗೆ ಪದ್ಧತಿಯಡಿಯಲ್ಲಿ ನವ ಜಾತಿವಾದಿ ಪ್ರಾರಂಭವಾಗಿದೆ. ಇದರ ವಿರುದ್ಧ ಹೋರಾಡಬೇಕು. ಕಾರ್ಮಿಕ ಸಂಹಿತೆಗಳಲ್ಲಿ ಅವರು ಕೆಲಸ ಮಾಡುತ್ತಲೇ ಇರಿ, ಸಂಘಟಿತರಾಗಬೇಡಿ, ಮುಷ್ಕರ ಮಾಡಬೇಡಿ ನಿಮ್ಮ ಹಕ್ಕುಗಳನ್ನು ಕೇಳಬೇಡಿ ಎಂದು ಹೇಳುತ್ತಾರೆ. ನಾವು ಅದನ್ನು ಒಪ್ಪುವುದಿಲ್ಲ. ನಮಗೆ ನಮ್ಮ ಹಕ್ಕು ಬೇಕೆ ಬೇಕು. ಇಂದಿನ ಬೆಲೆ ಏರಿಕೆ, ವಸತಿ ವೆಚ್ಚ, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಮತ್ತು ಸಾರಿಗೆ ಖರ್ಚುಗಳನ್ನು ಪರಿಗಣಿಸಿದರೆ, ಘನತೆಯಿಂದ ಜೀವನ ನಡೆಸಲು ಕನಿಷ್ಠ ರೂ.42,000/- ವೇತನ ಅತ್ಯವಶ್ಯವಾಗಿದೆ. ಆದರೆ, ಈ ಹೊಸ ಕಾಯ್ದೆಗಳು ಕಾರ್ಮಿಕ ಬದುಕನ್ನು ಸಂಪೂರ್ಣ ಕಡೆಗಣಿಸಿ, ಅವರ ರಕ್ತ-ಬೆವರಿನ ಶ್ರಮವನ್ನು ದೋಚುವ ಕಂಪನಿ ಮಾಲೀಕರು/ ಬಂಡವಾಳಿಗರ ಪರ ರೂಪಿಸಿದಂತಿದೆ” ಎಂದು ಕ್ಲಿಫ್ಟನ್ ರೊಜಾರಿಯೋ ಆಪಾದಿಸಿದರು.
ಕಾರ್ಮಿಕ ಸಂಹಿತೆ ಜಾರಿಯಿಂದ ಕಾರ್ಮಿಕರ ಬದುಕು ಪ್ರಪಾತಕ್ಕೆ: ಮೈತೇಯಿ ಕೃಷ್ಣನ್ ಕಳವಳ
ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತೇಯಿ ಕೃಷ್ಣನ್ ಮಾತನಾಡಿ, “ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಈ ಕಾಯ್ದೆಗಳು ಅನುಷ್ಠಾನಗೊಂಡಲ್ಲಿ ಕಾರ್ಮಿಕರ ಬದುಕು ಇನ್ನಷ್ಟು ಪ್ರಪಾತಕ್ಕೆ ಬೀಳಲಿದೆ. ಈಗಾಗಲೇ ಕನಿಷ್ಠ ಕೂಲಿ, ಉದ್ಯೋಗ ಭದ್ರತೆ, ಸಂವಿಧಾನಬದ್ಧ ಹಕ್ಕುಗಳನ್ನು ಕಳೆದುಕೊಂಡಿರುವ ಕಾರ್ಮಿಕರು ನಿರುದ್ಯೋಗ, ಹಸಿವು, ಬಡತನ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಸಿಲುಕಲಿದ್ದಾರೆ. ಕಾರ್ಮಿಕರಿಗೆ ಇನ್ನಷ್ಟು ಬಲ ಒದಗಿಸಲಾಗಿದೆ ಎಂಬ ಸರ್ಕಾರದ ಹೇಳಿಕೆ ವಾಸ್ತವಕ್ಕೆ ತದ್ವಿರುದ್ಧವಾಗಿದೆ.
ಎಲ್ಲಾ ಕ್ಷೇತ್ರಗಳಲ್ಲಿ 14 ದಿನಗಳ ಮುಂಚಿತ ಮುಷ್ಕರ ನೋಟಿಸ್ ಕಡ್ಡಾಯ ಮಾಡುವ ಮೂಲಕ ಹೋರಾಟದ ಹಕ್ಕಿನ ಮೇಲೆ ನೇರ ದಾಳಿ ಮಾಡಲಾಗಿದೆ. “ಅಕ್ರಮ (ಕಾರ್ಮಿಕರಿಗೆ ಅನ್ಯಾಯವಾದ ತಕ್ಷಣದಲ್ಲಿ ಜರುಗುವ) ಮುಷ್ಕರಕ್ಕೆ ಜೈಲು ಮತ್ತು ಜುಲ್ಮಾನೆ ವಿಧಿಸುವ ಮೂಲಕ ಕಾರ್ಮಿಕರ ಸಂಘಟನೆ ಹಾಗೂ ಸಮೂಹಬಲವನ್ನು ದುರ್ಬಲಗೊಳಿಸಲಾಗಿದೆ. ಮತ್ತೊಂದು ಕಡೆ, ಯೂನಿಯನ್‌ಗಳನ್ನು ರದ್ದುಪಡಿಸುವ ಅಧಿಕಾರವನ್ನು ರಿಜಿಸ್ಟಾçರ್‌ಗೆ ಏಕಪಕ್ಷೀಯವಾಗಿ ನೀಡಲಾಗಿದೆ. ಹೀಗಾಗಿ ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಲಾಗಿದೆ” ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರದ ಕನಿಷ್ಠ ವೇತನ ಹೆಚ್ಚಳದ ಭರವಸೆ ಶುದ್ಧ ಸುಳ್ಳು : ಪಿ.ಪಿ.ಅಪ್ಪಣ್ಣ
ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಪಿ.ಪಿ.ಅಪ್ಪಣ್ಣ ಮಾತನಾಡಿ, “ವೇತನ ಸಂಹಿತೆ ಮೂಲಕ ಕನಿಷ್ಠ ವೇತನವನ್ನು ಹೆಚ್ಚಿಸಲಾಗಿದೆ ಎಂಬುದು ಅಸತ್ಯದಿಂದ ಕೂಡಿದೆ. ಪ್ಲೋರ್‌ವೇಜ್‌ನಿಂದ ಪ್ರಸ್ತುತ ಕನಿಷ್ಠ ವೇತನಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಇದರಿಂದ ಕಾರ್ಮಿಕರ ಮಾಸಿಕ ಕನಿಷ್ಠ ವೇತನವು ರೂ. 27,613 ರಿಂದ ರೂ. 19,154ಕ್ಕೆ ಇಳಿಯುತ್ತದೆ. ಕಾರ್ಮಿಕರ ಸಾಮಾಜಿಕ ಭದ್ರತೆ ಹೆಚ್ಚಿಸಲಾಗಿದೆ ಎಂಬ ಹೇಳಿಕೆಯೂ ಶುದ್ಧ ಸುಳ್ಳಾಗಿದೆ. ಗಿಗ್ ಮತ್ತು ಅಸಂಘಟಿತ ಕಾರ್ಮಿಕರಿಗೆ ಕೇವಲ “ನೋಂದಣಿ” ಮಾತ್ರವಿದ್ದು, ಪಿಎಫ್, ಇಎಸ್‌ಐ ವಿಮೆ ಮತ್ತಿತರ ಕಡ್ಡಾಯ ಹಕ್ಕುಗಳನ್ನು ಈ ಸಂಹಿತೆಗಳು ಒದಗಿಸುವುದಿಲ್ಲ. ಈ ಮೂಲಕ ಎರಡು ವರ್ಗಗಳ ಕಾರ್ಮಿಕರನ್ನು ಅಂದರೆ, ಹಕ್ಕುಗಳಿರುವವರು ಮತ್ತು ಹಕ್ಕುಗಳಿಲ್ಲದವರು ಎಂಬುದಾಗಿ ವಿಭಜಿಸಿ ಅನ್ಯಾಯ ಮಾಡಲಾಗಿದೆ” ಎಂದು ಆರೋಪಿಸಿದರು.
ಪ್ರತಿಭಟನೆಗೂ ಮುನ್ನ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಯ ಅಣಕು ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಂಘಟನೆಯ ಮುಖಂಡರು ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರವರಿಗೆ ವಿವಿಧ ಬೇಡಿಕೆಗಳ ಮನವಿಪತ್ರವನ್ನು ಸಲ್ಲಿಸಿದರು. ರಾಜ್ಯಮಟ್ಟದ ಪ್ರತಿಭಟನೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳಿಗೆ ವಿರೋಧ ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ನಿರ್ಮಲಾ, ನಾಗರಾಜ ಪೂಜಾರ್, ಪುಟ್ಟಿಗೌಡ, ಪ್ರತಿಭಾ, ವಿಜಯಕುಮಾರ್, ಸಂತೋಷ ಗುಳೆದಟ್ಟಿ, ಪರುಶುರಾಮ ಸಂದೇರ್, ವಿನಯ್, ಮಾಯಮ್ಮ, ಕೆ. ನಾಗಲಿಸ್ವಾಮಿ, ಅಜಿಜ್ ಜಾಗೀದಾರ್, ವಿಜಯ್ ದೊರೆರಾಜು, ಇತರರು ಇದ್ದರು.
ಇದನ್ನೂ ನೋಡಿ: SIR – ಸಾಧಕ – ಬಾಧಕಗಳು ವಿಚಾರ ಮಂಡನೆ – ಸಂವಾದ
