ಅಹಿಂಸೆ ಎಂದರೆ ಎಲ್ಲರನ್ನೂ ಪ್ರೀತಿಸುವುದು

“ಬುದ್ಧನನ್ನು ಎಷ್ಟು ಅಪ್ಪಿಕೊಳ್ಳುತ್ತಾರೋ ಅಷ್ಟರಮಟ್ಟಿಗೆ ಜಗತ್ತು ಯುದ್ಧದಿಂದ ದೂರವಾಗುತ್ತದೆ”
ಪವಿತ್ರ ಎಸ್, ಸಹಾಯಕ ಪ್ರಾಧ್ಯಾಪಕರು

ಬುದ್ದ

ಶಾಕ್ಯರ ರಾಜನಾದ ಶುದ್ದೋಧನ ಮತ್ತು ಮಾಯಾದೇವಿಯ ಮಗ ಸಿದ್ದಾರ್ಥ ಗೌತಮ. ಪ್ರಜಾಪತಿ ಗೌತಮಿ ಸಿದ್ಧಾರ್ಥನ ಸಾಕು ತಾಯಿ. ಹೆಂಡತಿ ಯಶೋಧರ ಮತ್ತು ಮಗ ರಾಹುಲ. ಸಂಘದ ತೀರ್ಮಾನವನ್ನು ವಿರೊಧಿಸಿದ್ದರಿಂದ, ಶಾಕ್ಯರ ಸಂಘದಲ್ಲಿ ಸಂಘರ್ಷ ಉಂಟಾಗುತ್ತದೆ. ಆದರಿಂದ ಸಂಘವು ಈ ರೀತಿ ಹೇಳುತ್ತದೆ. 1. ಸೈನ್ಯವನ್ನು ಸೇರಿ ಯುದ್ದದಲ್ಲಿ ತೊಡಗುವುದು. 2. ಗಲ್ಲಿಗೇರಿಸುವ ಅಥವಾ ಗಡಿಪಾರು ಶಿಕ್ಷೆಯನ್ನು ಅನುಭವಿಸುವುದು. 3. ತನ್ನ ಕುಟುಂಬದ ಸದಸ್ಯರನ್ನು ಸಾಮಾಜಿಕ ಬಹಿಷ್ಕಾರಕ್ಕೆ ಈಡು ಮಾಡಿ ಅವರ ಆಸ್ತಿಯಲ್ಲ ಮುಟ್ಟುಗೋಲಿಗೆ ಗುರಿ ಮಾಡುವುದು.
ಬುದ್ಧ ಈ ಮೂರು ಸಾಧ್ಯತೆಗಳಲ್ಲಿ ಎರಡನೆಯದು ಸೂಕ್ತವಾದದ್ದು ಎಂದು ನಿಶ್ಚಯಿಸಿದನು. ಅದರಂತೆ ಪರಿವ್ರಾಜಕ ವ್ರತವನ್ನು ಅಂಗೀಕರಿಸಿ ರಾಜ್ಯವನ್ನು ಬಿಟ್ಟು ಹೊರಡುತ್ತಾನೆ.

ಬುದ್ಧ ಪೂರ್ಣಿಮೆಯ ವಿಶೇಷತೆ

ವೈಶಾಖ ಶುದ್ಧ ಪೂರ್ಣಿಮೆಯನ್ನು ಬುದ್ಧ ಪೂರ್ಣಿಮೆ ಅಥವಾ ಬುದ್ಧ ಜಯಂತಿ ಎಂದು ಆಚರಿಸುತ್ತಾರೆ. ವೈಶಾಖ ಪೂರ್ಣಿಮೆ ಎಂದೇ ಮೂರು ಪ್ರಮುಖ ಘಟನೆಗಳು ನಡೆಯುತ್ತವೆ.
1. ಬುದ್ದನ ಜನನ : ಕ್ರಿ.ಪೂ. 563 ರಲ್ಲಿ ಸಿದ್ದಾರ್ಥ ಗೌತಮನು ವೈಶಾಖ ಪೂರ್ಣಿಮೆ ಎಂದೇ ಲುಂಬಿಣಿಯಲ್ಲಿ ಜನಿಸುತ್ತಾನೆ.
2. ಜ್ಞಾನೋದಯ : ಬುದ್ಧ ಗಯಾದಲ್ಲಿ ತಪಸ್ಸು ಮಾಡುತ್ತಿದ್ದ ಸಿದ್ಧಾರ್ಥ ಗೌತಮನಿಗೆ ಜ್ಞಾನೋದಯವಾಗಿ ತಥಾಗತ ಗೌತಮ ಬುದ್ಧ ನೆನೆಸಿಕೊಳ್ಳುತ್ತಾನೆ.
3. ಪರಿನಿಬ್ಬಾಣ : ಕ್ರಿ.ಪೂ. 482 ರಲ್ಲಿ ಕುಶೀನಾರಾದಲ್ಲಿ ಬುದ್ಧನು ವೈಶಾಖ ಪೂರ್ಣಿಮೆಯ ನಡುರಾತ್ರಿಯಲ್ಲಿ ಪರಿನಿಬ್ಬಾಣ ಹೊಂದುತ್ತಾನೆ.
ಬುದ್ಧನ ಜೀವನದ ಈ ಮೂರು ಘಟನೆಗಳು ಬಹಳ ಮಹತ್ವಪೂರ್ಣದಾಗಿದೆ. ಈ ಕಾರಣದಿಂದಲೇ ವೈಶಾಖ ಶುದ್ಧ ಪೂರ್ಣಿಮೆಯನ್ನು ಬುದ್ದ ಪೂರ್ಣಿಮೆ ಎಂದು ಆಚರಿಸಲಾಗುತ್ತಿದೆ.

ಬುದ್ದನ ಧಮ್ಮ

ಫ್ರಾನ್ಸ್ ಕ್ರಾಂತಿ ಎಷ್ಟು ಮಹತ್ವದ್ದೋ ಮಾನವ ಜಾತಿಗಾಗಿ ಬೌದ್ಧ ಧರ್ಮದ ಉದಯವೂ ಅಷ್ಟೇ ಮಹತ್ವದ್ದು ಎಂದು ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳುತ್ತಾರೆ. ಏಕೆಂದರೆ ಇವೆರಡು ಯುಗಾಂತ ಕಾರ್ಯ ಮತ್ತು ಮಹತ್ವದ ಘಟನೆಗಳಾಗಿವೆ. ಬುದ್ಧ ಮಾನವನಾಗಿದ್ದನು. ಬುದ್ಧನ ತತ್ವಗಳು ಜಾತಿ, ವರ್ಣ, ವರ್ಗದ ವಿರುದ್ಧವಾಗಿವೆ. ಬುದ್ಧ ಸಾಮಾನ್ಯ ಜನರ ಜೊತೆಗೆ ಬದುಕಿದನು. ಮಾನವ ದೃಷ್ಟಿಯಿಂದಲೇ ಜನರ ದುಃಖವನ್ನು ದೂರ ಮಾಡುವ ಪ್ರಯತ್ನ ಮಾಡಿದನು. ಹೀಗಾಗಿ ಎಂದಿಗಿಂತಲೂ ಇಂದು ಬುದ್ಧ ಅಗತ್ಯವಾಗಿ ಬೇಕಾಗಿದ್ದಾನೆ.
ಸಾಮ್ರಾಟ ಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿ ಕಳಿಂಗ ಯುದ್ಧದ ನಂತರದಲ್ಲಿ ಶಾಂತಿಯತ ಹೊರಳುತ್ತಾನೆ. ಇದನ್ನು ಗಮನಿಸಿದಾಗ ಬುದ್ಧನ ತತ್ವಜ್ಞಾನದಿಂದ ಮಾತ್ರವೇ ಜಗತ್ತು ಯುದ್ಧದಿಂದ ದೂರ ಉಳಿಯಲು ಮತ್ತು ಶಾಂತತೆಯ ಹತ್ತಿರಕ್ಕೆ ಹೋಗಲು ಸಾಧ್ಯ ಎಂಬುದು ತಿಳಿಯುತ್ತದೆ. ಒಂದೆಡೆ ಅಂಬೇಡ್ಕರ್ ಅವರು ಹೇಳುತ್ತಾರೆ ಜಗತ್ತು ಬುದ್ಧನನ್ನು ಎಷ್ಟರಮಟ್ಟಿಗೆ ಅಪ್ಪಿಕೊಳ್ಳುತ್ತದೋ ಅಷ್ಟರಮಟ್ಟಿಗೆ ಜಗತ್ತು ಯುದ್ಧದಿಂದ ದೂರವಾಗುತ್ತದೆ ಎಂದು.
ಬೇರೆ ಧರ್ಮಗಳಿಗೂ ಬೌದ್ಧಧರ್ಮಕ್ಕೂ ಇರುವ ವ್ಯತ್ಯಾಸವನ್ನು ಅಂಬೇಡ್ಕರ್ ಅವರು ಹೀಗೆ ಗುರುತಿಸಿದ್ದಾರೆ. ಇಸ್ಲಾಂ ಧರ್ಮವು ಕತ್ತಿಯ ಬಲದಿಂದ ಬೆಳೆಯಿತು. ಕ್ರೈಸ್ತ ಧರ್ಮವು ಕಾನೂನಿನ ಬಲದಿಂದ ಬೆಳೆಯಿತು. ಬರಿ ಬುದ್ಧ ಒಬ್ಬನ ಧರ್ಮದ ಪ್ರಸಾರ ಮಾತ್ರ ತನ್ನ ಗುಣಗಳಿಂದಲೇ ಬೆಳೆಯಿತು ಎಂಬುದು ನಿರ್ವಿವಾದ.

ಬುದ್ಧನ ಸಮಕಾಲೀನ ಅಗತ್ಯತೆ

ಜ್ಞಾನೋದಯಕ್ಕೆ ಮುಂಚೆಯೂ ಬುದ್ಧ ಯುದ್ಧದ ವಿರೋಧಿಯಾಗಿರುತ್ತಾನೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರೋಹಿಣಿ ನದಿಯ ನೀರನ್ನು ಬಳಸಿಕೊಳ್ಳಲು ಶಾಕ್ಯರು ಮತ್ತು ಕೋಲಿಯರ ನಡುವೆ ಯುದ್ಧದ ತೀರ್ಮಾನವಾದಾಗ ಸಿದ್ದಾರ್ಥ ಗೌತಮನು ಯುದ್ಧವನ್ನು ವಿರೋಧಿಸುತ್ತಾನೆ. ಯುದ್ಧದಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಯುದ್ಧವು ಮತ್ತೊಂದು ಯುದ್ಧಕ್ಕೆ ಬೀಜ ಬಿತ್ತುತ್ತದೆ. ಕೊಂದವನನ್ನು ಕೊಲ್ಲಲು ಮತ್ತೊಬ್ಬ ಹುಟ್ಟಿಕೊಳ್ಳುತ್ತಾನೆ. ಆಕ್ರಮಿಸಿಕೊಂಡವನನ್ನು ಆಕ್ರಮಿಸಲು ಮತ್ತೊಬ್ಬ ಆಕ್ರಮಣಕಾರ ಬರುತ್ತಾನೆ. ಲೂಟಿಕೋರರನ್ನು ಲೂಟಿ ಮಾಡಲು ಮತ್ತೊಬ್ಬ ಸಿದ್ದಲಿರುತ್ತಾನೆ ಎಂದು ಹೇಳುತ್ತಾನೆ. ಸಂಘಕ್ಕೆ ಈ ಮಾತು ಹಿಡಿಸದೆ ಬುದ್ಧನ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಆಗ ಬುದ್ಧ ತನ್ನ ಸ್ಥಳವನ್ನು ತೊರೆದು ಪರಿವ್ರಾಜಕ ಧರ್ಮವನ್ನು ಸ್ವೀಕರಿಸಲು ಹೊರಡುತ್ತಾನೆ.

ಜ್ಞಾನೋದಯದ ನಂತರ

ಬುದ್ದನ ಶಾಂತಿಯ ಸಂದೇಶ
ತನ್ನ ಸಹಜೀವಿಗಳನ್ನು ಎಲ್ಲಿಯೂ ಅಪಹಾಸ್ಯ ಮಾಡದಿರಲಿ, ದ್ವೇಷಿಸದಿರಲಿ. ಕ್ರೋಧದಿಂದಾಗಲಿ, ದ್ವೇಷದಿಂದಾಗಲಿ ಬೇರೆಯವರಿಗೆ ಕೇಡನ್ನು ಬಯಸದಿರಲಿ. ವಿಶ್ವದ ಎಲ್ಲ ಎತ್ತರ, ಎಲ್ಲ ಆಳ, ಎಲ್ಲ ಅಗಲಗಳಲ್ಲಿರುವ ಜೀವಿಗಳ ಪ್ರೀತಿ, ನಿರ್ಮಲ ಪ್ರೀತಿ, ದ್ವೇಷ ರಹಿತ ಪ್ರೀತಿ ನಿಮ್ಮದಾಗಲಿ ಎಂಬ ಬುದ್ಧನ ಶಾಂತಿಯ ಸಂದೇಶವನ್ನು, ಬುದ್ಧನನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು ಇಂದಿನ ದಿನಮಾನಗಳಲ್ಲಿ ಶಾಂತಿ ಮಂತ್ರವನ್ನು ಜಪಿಸುವವರು ನಗೆಪಾಟಲಿಗೀಡಾಗಿ, ಸಮಾಜದಿಂದ ತಿರಸ್ಕೃತಗೊಳ್ಳುತ್ತಿದ್ದಾರೆ. ದ್ವೇಷ ಬಿತ್ತುವ ಜನರಿಗೆ ಶಾಂತಿ ಮಂತ್ರದ ರುಚಿ ಹತ್ತದಾಗಿದೆ, ಮನೆಯನ್ನು ರಕ್ಷಿಸಿಕೊಂಡು ಸಮಾಜವನ್ನು ನರಳುವಂತೆ ಮಾಡುತ್ತಿರುವ ಇಂಥವರನ್ನು ಜನರು ನಂಬಿ ಪುರಸ್ಕರಿಸುತ್ತಿರುವುದು ಖೇದದ ಸಂಗತಿಯಾಗಿದೆ.

ಬುದ್ದನ ಅಹಿಂಸಾ ತತ್ತ್ವ

ಬೌದ್ಧ ಧರ್ಮ ಹೇಳುವ ಅಹಿಂಸೆಗೂ ಜೈನ ಧರ್ಮ ಹೇಳುವ ಅಹಿಂಸೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಜೈನ ಧರ್ಮದಲ್ಲಿ ಅಹಿಂಸೆ ಎಂದರೆ ಕೊಲ್ಲದಿರುವುದು, ಬೌದ್ಧ ಧರ್ಮದಲ್ಲಿ ಅಹಿಂಸೆ ಎಂದರೆ ಎಲ್ಲವನ್ನು, ಎಲ್ಲರನ್ನೂ ಪ್ರೀತಿಸುವುದು ಅಂದರೆ ಎಲ್ಲರನ್ನೂ ಪ್ರೀತಿಸು ಆಗ ನೀನು ಯಾರನ್ನು ಕೊಲ್ಲಲು ಇಚ್ಚಿಸಲಾರೆ ಎಂಬುದು ಬುದ್ಧನ ಅಹಿಂಸಾ ತತ್ತ್ವವಾಗಿದೆ. ಬುದ್ಧನ ಪ್ರಕಾರ ಕೊಲ್ಲುವುದು ಎಂದರೆ, ಇಲ್ಲಿ ಕೊಲ್ಲುವ ಇಚ್ಛೆಯು ಕೊಲ್ಲುವುದು ಅನಿವಾರ್ಯ ಎಂಬ ಕಡೆಗಳಲ್ಲಿ ಮಾತ್ರ ಕೊಲ್ಲುವುದನ್ನು ಬುದ್ಧ ನಿಷೇಧಿಸಲಿಲ್ಲ. ಕೊಲ್ಲುವ ಇಚ್ಛೆ ಬಿಟ್ಟು ಮತ್ತೇನು ಇರದಾ ಸಂದರ್ಭದಲ್ಲಿ ಕೊಲ್ಲುವುದನ್ನು ನಿಷೇಧಿಸಿದ್ದಾನೆ. ವೈದಿಕ ಧರ್ಮ ಮತ್ತು ಜೈನ ಧರ್ಮ ನೋಡುವುದಾದರೆ ವೈದಿಕ ಧರ್ಮದಲ್ಲಿ ಕೊಲ್ಲುವ ಇಚ್ಛೆ ಅಂತರ್ಗತವಾಗಿದೆ. ಜೈನ ಧರ್ಮದಲ್ಲಿ ಕೊಲ್ಲದ ಇಚ್ಛೆ ಅಂತರ್ಗತವಾಗಿದೆ. ಆದ್ದರಿಂದ ಬುದ್ಧನು ಮಧ್ಯಮ ಮಾರ್ಗವನ್ನು ಹೇಳಿದ್ದಾನೆ. ಪ್ರಸ್ತುತ ಸಮಾಜದಲ್ಲಿ ಈ ಮಧ್ಯಮ ಮಾರ್ಗವನ್ನು ಅನುಸರಿಸಿ ಸರಿಯಾದ ದಾರಿಯಲ್ಲಿ ಸಮಾಜದ ಜನರನ್ನು ನಡೆಸುವ ನಾಯಕರ ಕೊರತೆ ಇದೆ.
ರಾಜನ ಬಗ್ಗೆ ಬುದ್ಧನ ಅಭಿಪ್ರಾಯ.
ದನಗಳು ದಾರಿಯಲ್ಲಿ ಸಾಗುವಾಗ ಹೋರಿ ನೇರವಾಗಿ ನಡೆದರೆ ಅವುಗಳು ನೇರವಾಗಿ ಚಲಿಸುತ್ತವೆ ಏಕೆಂದರೆ ಹೋರಿಯ ಮಾರ್ಗ ನೇರವಾಗಿರುತ್ತದೆ. ಅದೇ ರೀತಿ ಮನುಷ್ಯರಲ್ಲಿಯೂ ಸಹ ಮುಂದಾಳೆನಿಸಿಕೊಂಡವನು ಧರ್ಮ ಮಾರ್ಗದಲ್ಲಿ ನಡೆದರೆ ಉಳಿದವರು ಸರಿಯಾಗಿ ಬಾಳುತ್ತಾರೆ. ರಾಜರು ಒಳ್ಳೆಯವರಾಗಿದ್ದರೆ ಇಡೀ ರಾಜ್ಯದ ಜನರೆಲ್ಲ ಸುಖದಿಂದ ಬಾಳ್ವೆ ನಡೆಸುತ್ತಾರೆ ಎಂದು ಹೇಳುವ ಮೂಲಕ ಬುದ್ಧನು ರಾಜನಾದವನು ಎಚ್ಚರಿಕೆಯಿಂದ ತನ್ನ ಹೆಜ್ಜೆಗಳನ್ನು ಇಡಬೇಕು ಇಲ್ಲದಿದ್ದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿನಂತೆ ಆಗುತ್ತದೆ. ಆಳುವವರು ದಾರಿ ತಪ್ಪಿದರೆ, ಜನರನ್ನು ದಾರಿ ತಪ್ಪಿಸಿದರೆ ಆಗುವ ಸಮಸ್ಯೆಗಳನ್ನು ಊಹಿಸಲು ಸಾಧ್ಯವಿಲ್ಲ ಎಂಬುದು ಬುದ್ಧನ ನಿಲುವಾಗಿದೆ.

ಕೆಡುಕು ಮತ್ತು ಪಾಪದ ಬಗ್ಗೆ ಬುದ್ದನ ನಿಲುವು

ಕೆಡುಕು ನನ್ನ ಹತ್ತಿರ ನೇರವಾಗಿ ಬರುವುದಿಲ್ಲ ಎಂದು ಯೋಚಿಸಿದರೆ ಅವರಷ್ಟು ಮತಿಹೀನರು ಬೇರೆ ಇಲ್ಲ. ಕೆಟ್ಟದ್ದರ ಬಗ್ಗೆ ಯಾವ ಮನುಷ್ಯನು ಭಾವಿಸಿರಲಿಲ್ಲ ಕೇವಲ ನೀರಿನ ಹನಿಗಳು ಬೀಳುವುದರಿಂದಲೇ ಗಡಿಗೆ ತುಂಬುತ್ತದೆ. ಅವಿವೇಕಿಯಾದವನು ಕೆಟ್ಟದ್ದನ್ನು ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸಿದರು ಆತನಲ್ಲಿ ಕೆಟ್ಟತನ ತುಂಬುತ್ತದೆ. ಒಂದು ವಜ್ರವು ಅಮೂಲ್ಯ ರತ್ನಗಳನ್ನು ಒಡೆಯುವಂತೆ ತನ್ನಿಂದಲೇ ಮಾಡಲಾದ, ತನ್ನಿಂದಲೇ ಪೋಷಿತವಾದ ಕೆಟ್ಟ ಕಾರ್ಯವು ಅವನನ್ನೇ ಬಗ್ಗು ಬಡಿಯುತ್ತದೆ. ಇದು ಕೆಡುಕು ಮತ್ತು ಪಾಪದ ಬಗ್ಗೆ ಬುದ್ಧನ ನಿಲುವಾಗಿದೆ.

ಶಿಕ್ಷೆಯ ಬಗ್ಗೆ ಬುದ್ದನ ನುಡಿಗಳು

ತಥಾಗತಾ ಗೌತಮ ಬುದ್ಧನು ತನ್ನ ನಿಬ್ಬಾಣದ ಸಮಯದಲ್ಲಿ ಶಿಕ್ಷೆಯ ಬಗ್ಗೆ ಆನಂದನ ಹತ್ತಿರ ಹೀಗೆ ಹೇಳುತ್ತಾನೆ. “ಭಿಕ್ಷು ಚೆನ್ನ ಎಷ್ಟು ಹಠಮಾರಿ ದುಷ್ಟ ಹಾಗೂ ಅಶಿಸ್ತಿನ ಮನುಷ್ಯ, ನನ್ನ ಮರಣದ ನಂತರ ಅವನಿಗೆ ಕಠಿಣವಾದ ಶಿಕ್ಷೆಯು ವಿಧಿಸಲ್ಪಡಲಿ”. ಅದಕ್ಕೆ ಆನಂದ ಕೇಳುತ್ತಾನೆ
ಭಗವಾನ್ ಕಠಿಣವಾದ ಶಿಕ್ಷೆ ಎಂದರೇನು ಅರ್ಥ ಎಂದು ಆನಂದ ಕೇಳಿದನು. ಆಗ ಹೇಳುವ ಬುದ್ದನ ಮಾತುಗಳು ನಿಜಕ್ಕೂ ನಿಬ್ಬೆರಗಾಗಿಸುತ್ತದೆ.
“ಚೆನ್ನ ಏನೇ ಹೇಳಲಿ ಅವನ ಜೊತೆ ಮಾತನಾಡಬೇಡಿ ಯಾರು ಅವನಿಗೆ ಬುದ್ಧಿ ಹೇಳಬೇಡಿ ಭಿಕ್ಷುಗಳ್ಯಾರು ಅವನಿಗೆ ಯಾವ ಸೂಚನೆಯನ್ನು ನೀಡಬೇಡಿ ಅವನನ್ನು ಒಂಟಿಯಾಗಿ ಬಿಟ್ಟುಬಿಡಿ ಎಂದನು ಆಗ ಅವನು ಸುಧಾರಿಸಬಹುದು” ಎಂಬ ಮಾತುಗಳು ದೈಹಿಕ ದಂಡನೆ ಮಾಡಿ ಬದಲಾವಣೆ ಮಾಡುವುದಕ್ಕಿಂತ ಮಾನಸಿಕ ದಂಡನೆ ಬಹಳ ಪರಿಣಾಮಕಾರಿ ಎಂಬುದನ್ನು ಬುದ್ಧನು ಅರಿತಿದ್ದ. ಇದೂ ಸಹ ಶಿಕ್ಷೆಯಾಗಿ ವಿಧಿಸಬಹುದು ಎಂಬುದನ್ನು ಬುದ್ದ ಜಗತ್ತಿಗೆ ಸಾರಿದ.

ಯುದ್ಧದ ಬಗ್ಗೆ ಬುದ್ದನ ನಿಲುವು

ಪ್ರತಿಯೊಬ್ಬ ತಲೆಗಡುಕನಿಗೂ ಪ್ರತಿಯಾಗಿ ಮತ್ತೊಬ್ಬ ತಲೆಗಡುಕನಿರುತ್ತಾನೆ. ಒಬ್ಬ ಗೆಲ್ಲುವವನಿದ್ದರೆ ಅವನನ್ನು ಗೆಲ್ಲುವ ಮತ್ತೊಬ್ಬನಿರುತ್ತಾನೆ. ಯಾರು ಇತರರಿಗೆ ಕೇಡು ಮಾಡುತ್ತಾರೋ ಅವರು ಅದಕ್ಕೆ ಪ್ರತಿಯಾಗಿ ಕೇಡನ್ನು ಅನುಭವಿಸುತ್ತಾರೆ. ಜಯವು ದ್ವೇಷವನ್ನು ಹೆಚ್ಚಿಸುತ್ತದೆ. ಸೋತವನು ನರಳಾಟದಲ್ಲಿರುತ್ತಾನೆ. ಆದ್ದರಿಂದ ಯುದ್ಧವನ್ನು ಮಾಡಬಾರದು, ಯುದ್ಧವನ್ನು ಮಾಡದೆ ಶಾಂತಿ, ಅಹಿಂಸೆ, ಪ್ರೀತಿ, ಕರುಣೆ ಮತ್ತು ಮೈತ್ರಿಗಳಿಂದ ಜಗತ್ತನ್ನು ಗೆಲ್ಲಬೇಕು ಎಂದು ಹೇಳುತ್ತಾನೆ.

ಪ್ರಸ್ತುತ ಜಗತ್ತಿನಲ್ಲಿ ಯುದ್ಧದ ಬಗ್ಗೆ ಭೀತಿ ಇಲ್ಲದಾಗಿದೆ. ಜನರಲ್ಲಿ ರಣೋತ್ಸಾಹ, ಯುದ್ದದ ವಿಜೃಂಭಣೆ ಹೆಚ್ಚಾಗಿದೆ. ಸಾವನ್ನು ಸಂಭ್ರಮಿಸುವ ರಾಜಕೀಯಕ್ಕೆ ಬಳಸಿಕೊಳ್ಳುವ ಹಪಹಪಿಕೆ ಹೆಚ್ಚಾಗಿದೆ. ಯಾವುದೇ ಘಟನೆಯನ್ನು ತನಗೆ ಬೇಕಾದಂತೆ, ತನ್ನ ಏಳಿಗೆಗೆ ಬೇಕಾದಂತೆ ಬಳಸಿಕೊಳ್ಳುವ ಇರಾದೆ ಹೆಚ್ಚಾಗುತ್ತಿದೆ. ಮನುಷ್ಯರಲ್ಲಿ ಮನುಷ್ಯತ್ವವೇ ಮರೆಯಾಗಿ ಹೋಗಿದೆಯೇನೋ ಎನಿಸುತ್ತಿದೆ. ಜಾಗತಿಕವಾಗಿ ಇಂದು ಅಣ್ವಸ್ತ್ರಗಳನ್ನು, ತಂತ್ರಜ್ಞಾನಗಳನ್ನು, ಆಧುನಿಕ ಯುದ್ದೋಪಕರಣಗಳನ್ನು ಎಲ್ಲಾ ದೇಶಗಳು ಒಂದಿಲ್ಲೊಂದು ಬಗೆಯಲ್ಲಿ ಹೊಂದಿವೆ. ಕೆಲವೊಂದು ದೇಶಗಳು ಹಿಂಬಾಗಿಲಿನಿಂದ ತರಿಸಿಕೊಂಡಿವೆ. ಯುದ್ಧವಾದರೆ ವಿನಾಶ ಯಾವ ಹಂತಕ್ಕೆ ಬೇಕಾದರೂ ಆಗಬಹುದು. ಈಗಿನ ಯುವಜನತೆಗೆ ಯುದ್ಧ ಬೇಕಾಗಿದೆ. ವೃದ್ಧರಿಗೆ ಶಾಂತಿ ಬೇಕಾಗಿದೆ. ಬುದ್ಧ ಮತ್ತು ಬುದ್ಧನ ಸಂದೇಶಗಳು ವಿಸ್ಮೃತಿಗೆ ಸರಿದಿವೆ.
ಸಮಕಾಲೀನ ಜಗತ್ತು ಏನನ್ನು ಬಯಸುತ್ತಿದೆ? ಶಾಂತಿಯನ್ನೋ, ಯುದ್ಧವನ್ನೋ ಎಂಬುದು ಗೊಂದಲವಾಗಿದೆ. ಪ್ರೀತಿ, ಕರುಣೆ, ಶಾಂತಿ, ಮೈತ್ರಿ ಪದಗಳು ಮೊನಚುಗೊಂಡು ಯುವಕರ ಎದೆಯಲ್ಲಿ, ಮಕ್ಕಳ ಎದೆಯಲ್ಲಿ ಗದ್ದೆಗಳಾಗಿ ಬೆಳೆಯಬೇಕಾಗಿದೆ. ನೆಲ ಅಗೆದಾಗ ಪ್ರತ್ಯಕ್ಷನಾಗುವ ಬುದ್ಧನಂತೆ ಇವರ ಹೃದಯ ತೆರೆದಾಗ ಪ್ರೀತಿಯ ಕಾರಂಜಿಗಳು ಚಿಮ್ಮಲಿ, ಮಮತೆ. ಕರುಣೆ, ಮೈತ್ರಿ, ಸಹನೆ, ಭ್ರಾತೃತ್ವ ಭಾವನೆಗಳು ಚಿಗುರೊಡೆಯಲಿ ಎಂಬ ಸದಾಶಯದೊಂದಿಗೆ ಈ ಬುದ್ಧ ಪೂರ್ಣಿಮೆಯನ್ನು ಶಾಂತಿಯ ಸಂಕೇತವಾಗಿ ಆಚರಿಸೋಣ.

Donate Janashakthi Media

Leave a Reply

Your email address will not be published. Required fields are marked *