ಬಿಎಸ್‌ಸಿ ಡಿಗ್ರಿ ಪದವಿ: ರೈತರು, ಕೃಷಿ ಕಾರ್ಮಿಕರ ಮಕ್ಕಳಿಗೆ ಶೇಕಡಾ 50ರಷ್ಟು ಮೀಸಲಿಗೆ ರಾಜ್ಯ ಸಚಿವ ಸಂಪುಟ ತೀರ್ಮಾನ

ಬೆಂಗಳೂರು: ಕೃಷಿಯ ಶೈಕ್ಷಣಿಕ ವಿಭಾಗದಲ್ಲಿ ಅಧ್ಯಯನಕ್ಕಾಗಿ ಕೃಷಿ ಡಿಪ್ಲೋಮಾ, ಬಿಎಸ್‌ಸಿ ಮತ್ತು ತತ್ಸಮಾನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ರೈತರು ಮತ್ತು ಕೃಷಿ ಕಾರ್ಮಿಕ ಮಕ್ಕಳಿಗೆ ಮೀಸಲಾತಿ ಪ್ರಮಾಣವನ್ನು ಶೇಕಡಾ 40 ರಿಂದ ಶೇಕಡಾ 50 ಕ್ಕೆ ಹೆಚ್ಚಿಸಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ಈ ಹಿಂದೆ ಮೀಸಲಾತಿ ಪ್ರಮಾಣವು ಶೇಕಡಾ 40 ಇತ್ತು. ಅದನ್ನು ಈಗ ಶೇಕಡಾ 50 ರಷ್ಟು ಹೆಚ್ಚಿಸಲು ಬಜೆಟ್‌ನಲ್ಲಿ  ಘೋಷಿಸಲಾಗಿತ್ತು ಅದರಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಸ ಸಂಪುಟ ಸಭೆಯ ಇತರ ಪ್ರಮುಖ ತೀರ್ಮಾನಗಳನ್ನು ಸಚಿವ ಬವರಾಜ ಬೊಮ್ಮಾಯಿ ಅವರು ವಿವರಿಸಿದರು.

2021–22 ನೇ ಸಾಲಿಗೆ ಸರ್ಕಾರಿ ಶಾಲ ಮಕ್ಕಳ ಸಮವಸ್ತ್ರ ಖರೀದಿಗೆ ₹83.62 ಕೋಟಿ ನೀಡಲು ತೀರ್ಮಾನ. ಸಮವಸ್ತ್ರವನ್ನು ಕೈಮಗ್ಗ ನಿಗಮದಿಂದ ಖರೀದಿಸಲಾಗುವುದು.

ರಾಜ್ಯದ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್‌, ಇತ್ಯಾದಿಗಳ ಖರೀದಿಗೆ ₹83 ಕೋಟಿ ಮಂಜೂರು

ರಾಜ್ಯದ ಹೊಸ ಜಲನೀತಿ ಕರಡು ರೂಪಿಸಿ, ಪ್ರಾಧಿಕಾರ ರಚಿಸುವ ಉದ್ದೇಶದಿಂದ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ನಿರ್ಧರ

ಹಾಸನದಲ್ಲಿ ಗ್ರೀನ್‌ ದೇಶಿ ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಎರಡು ಹಂತಗಳಲ್ಲಿ ₹196.35 ಕೋಟಿ ನೀಡಲು ಒಪ್ಪಿಗೆ. ರನ್‌ವೇ, ಟರ್ಮಿನಲ್‌, ತಾಂತ್ರಿಕ ಕಟ್ಟಡ ಇತ್ಯಾದಿಗಳ ನಿರ್ಮಾಣ

ಕರ್ನಾಟಕ ನಾಗರಿಕ ಸೇವೆಗಳು (ನಿರ್ವಹಣಾ ವರದಿ) ತಿದ್ದು‍ಪಡಿ ನಿಯಮ 2021. ಈ ಹಿಂದೆ ಗೋಪ್ಯ ವರದಿಯನ್ನು ಕೈ ಬರಹದ ಮೂಲಕ ನೀಡಲಾಗುತ್ತಿತ್ತು. ಇನ್ನು ಮುಂದೆ ಡಿಜಿಟಲ್‌ ರೂಪದಲ್ಲಿ ನೀಡಲು ತಿದ್ದುಪಡಿ

ಬೆಳಗಾವಿ ತಾಲ್ಲೂಕು ಹಿರೇಬಾಗೇವಾಡಿಯಲ್ಲಿ  ₹110 ಕೋಟಿ ವೆಚ್ಚದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ

ಕರ್ನಾಟಕ ತುರ್ತುನಿಧಿ ₹500 ಕೋಟಿಯಿಂದ ₹2500 ಕೋಟಿಗೆ ಹೆಚ್ಚಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗುವುದು. ಕೋವಿಡ್‌ ಕಾರಣ ಮುಂದಿನ ದಿನಗಳಲ್ಲಿ ಖರ್ಚು ಮಾಡಲು ಇಷ್ಟು ಮೊತ್ತ ಬಳಕೆ ಮಾಡಲಾಗುವುದು

200 ಕೋಟಿ ವೆಚ್ಚದಲ್ಲಿ 100 ನೂತನ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ. ಎರಡು ವರ್ಷದಲ್ಲಿ ಪೂರ್ಣಗೊಳಿಸಲು ಸೂಚನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೇಂದ್ರೀಯ ಗ್ರಂಥಾಲಯ ಮತ್ತು ಪರೀಕ್ಷಾ ಹಾಲ್‌ ನಿರ್ಮಾಣಕ್ಕೆ ₹10.27 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವ್ಯಾಪ್ತಿಗೆ ಒಳಪಡಿವ ಪಿಕೆಟಿಬಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹154.44 ಕೋಟಿ ಪರಿಷ್ಕೃತ ಅಂದಾಜಿಗೆ  ಆಡಳಿತಾತ್ಮಕ ಅನುಮೋದನೆ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌, ನರ್ಸಿಂಗ್‌ ಪರೀಕ್ಷಾ ಮಂಡಳಿ ಮತ್ತು ಅರೆ ವೈದ್ಯಕೀಯ ಮಂಡಳಿಗಳ ಕಚೇರಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ₹75 ಕೋಟಿ ಆಡಳಿತಾತ್ಮಕ ಅನುಮೋದನೆ

ಉತ್ತರ ಕನ್ನಡ ಜಿಲ್ಲೆಯ ರಾಮನಗುಳಿ ಮತ್ತು ಡೋಗ್ರಿ ಗ್ರಾಮವನ್ನು ಸಂಪರ್ಕಿಸುವ ಅಂಕೋಲ ತಾಲೂಕು ಗಂಗಾವಳಿ ನದಿಗೆ ₹25 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಆಡಳಿತಾತ್ಮಕ ಒಪ್ಪಿಗೆ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12.96 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ

ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕು ಗಂಡಸಿ ಮತ್ತು ಬಾಣಾವರದ 530 ವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು₹ 307.17 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಆಡಳಿತಾತ್ಮಕ ಅನುಮತಿ

ಮೈಸೂರಿನಲ್ಲಿ ಮುಡಾ ಅಭಿವೃದ್ಧಿಪಡಿಸಿರುವ ಬಡಾವಣೆಗಳನ್ನು ಸಂಬಂಧಿಸಿ ಸ್ಥಳೀಯ ಆಡಳಿತಗಳಿಗೆ ಒಪ್ಪಿಸುವುದಕ್ಕೆ ಮುನ್ನ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ₹377.60 ಕೋಟಿ ಹಣ ಒದಗಿಸಲು ಒಪ್ಪಿಗೆ

ಭೂ ಅನುಮೋದನೆ 22 ಎ ಅಡಿ ಇನ್ನು ಮುಂದೆ ಖರಾಬು ಜಮೀನುಗಳಲ್ಲಿ ಕೆರೆ, ತೊರೆ, ಹಳ್ಳಗಳ ಸ್ವರೂಪ ನಾಶವಾಗಿ 10 ವರ್ಷಗಳು ಕಳೆದಿದ್ದರೆ, ಇತರ ಬಳಕೆಗೆ ಅವಕಾಶ ನೀಡಬಹುದು. ಇದಕ್ಕೆ ಸರ್ವೇ ವರದಿ ಅಗತ್ಯವಿದೆ. ಈ ಹಿಂದೆ ನಿರ್ಬಂಧವಿರಲಿಲ್ಲ

ಅಣೆಕಟ್ಟು ಸುವ್ಯವಸ್ಥೆಗೊಳಿಸುವ (ಡಿಆರ್‌ಪಿಐ) ಹಂತ 2 ಮತ್ತು 3 ರ ಅಡಿ 58 ಅಣೆಕಟ್ಟುಗಳ ನಿರ್ವಹಣೆಗೆ ವಿಶ್ವಬ್ಯಾಂಕ್‌ ನೆರವಿನಡಿ ಯೋಜನೆ ಕೈಗೆತ್ತಿಕೊಳ್ಳುವ ₹1500 ಕೋಟಿ ಯೋಜನೆಗೆ ಒಪ್ಪಿಗೆ ಈ ಯೋಜನೆಗೆ ವಿಶ್ವಬ್ಯಾಂಕ್‌ ಶೇಕಡಾ 70 ಮತ್ತು ರಾಜ್ಯ ಸರ್ಕಾರ ಶೇಕಡಾ 30 ರಷ್ಟು ವೆಚ್ಚ ಭರಿಸಲಿವೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಗೋವಿನಕೋವಿ, ಹನುಸಾಗರದ 94 ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ₹415 ಕೋಟಿ ಅಂದಾಜಿಗೆ ಒಪ್ಪಿಗೆ

ದಾವಣಗೆರೆ ಜಿಲ್ಲೆಯ ಸಾಸ್ವೆ ಹಳ್ಳಿ ಏತ ನೀರಾವರಿ ವ್ಯಾಪ್ತಿಗೆ ಬರುವ ಕೆರೆಗಳ ಸಂವರ್ಧನೆಗೆ ₹167 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ

ನಬಾರ್ಡ್ ಯೋಜನೆಯಡಿ  ಬಳ್ಳಾರಿ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 74 ಕೆರೆಗಳನ್ನು ತುಂಬಿಸುವ ₹670 ಕೋಟಿ ಯೋಜನೆಗೆ ಒಪ್ಪಿಗೆ. ತುಂಗಭದ್ರಾ ನದಿಯಿಂದ ನೀರೆತ್ತಲಾಗುವುದು

ಅಥಣಿಯಲ್ಲಿ ಪಶು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒಪ್ಪಿಗೆ.‌

ಮಕ್ಕಳಿಗೆ ಸಮವಸ್ತ್ರ ನೀಡಲು 83 ಕೋಟಿ ರೂ. ನೀಡಲು ಅನುಮೋದನೆ

ಶಿವಮೊಗ್ಗ ಆಸ್ಪತ್ರೆಯ ಬೆಡ್‌ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲು 32 ಕೋಟಿ ರೂ. ಅನುದಾನ ನೀಡಲು ಅನುಮೋದನೆ

Donate Janashakthi Media

Leave a Reply

Your email address will not be published. Required fields are marked *