ಸಾರಿಗೆ ನೌಕರರ ಶೇ.17 ರಷ್ಟು ವೇತನ ಪರಿಷ್ಕರಣೆಗೆ ಸರ್ಕಾರ ಒಪ್ಪಿಗೆ : ಪೂರ್ಣ ಬೇಡಿಕೆಗೆ ಪಟ್ಟು

ಬೆಂಗಳೂರು: ಕೆಎಸ್​ಆ‌ರ್​ಟಿಸಿ ಸಾರಿಗೆ ಕಾರ್ಮಿಕ ಸಂಘಟನೆಗಳ ಜೊತೆ ವೇತನ‌ ಪರಿಷ್ಕರಣೆ ಸಂಬಂಧ ಸಿಎಂ ಸಿದ್ದರಾಮಯ್ಯ ನಡೆಸಿದ ಸಭೆ ಅಪೂರ್ಣವಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನಿಸಲು ನಿರ್ಧರಿಸಲಾಗಿದೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕೆ.ಎಸ್.ಆ‌ರ್.ಟಿ.ಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಕೆ.ಎಸ್.ಆರ್.ಟಿ.ಸಿ (KSRTC) ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದೊಂದಿಗೆ ಬುಧವಾರ ಪ್ರತ್ಯೇಕ ಸಭೆ ನಡೆಸಲಾಯಿತು. ಆದರೆ, ಈ ಸಭೆಯಲ್ಲಿ ರಸ್ತೆ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ವೇತನದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.‌

ಇದನ್ನೂ ಓದಿ : ಬೆಂಗಳೂರು | ಧರಣಿ ಸ್ಥಳಕ್ಕೆ ಬಾರದ ಸಚಿವರು ರಸ್ತೆಗಿಳಿದು ರೈತರು

ಡಿ.6ರಂದು ಸಾರಿಗೆ ಸಚಿವರ ಜೊತೆ ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. 38 ತಿಂಗಳ ಬಾಕಿ ವೇತನ ಕೊಡುವಂತೆ ನಾವು ಬೇಡಿಕೆ ಇಟ್ಟಿದ್ದೇವೆ. ಸಭೆ ಬಳಿಕ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಮುಖಂಡರಾದ ಅನಂತ ಸುಬ್ಬರಾವ್, ಬೇಡಿಕೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಎರಡು ಬೇಡಿಕೆ ಈಡೇರಿಸುವ ಪ್ರಯತ್ನದ ಭರವಸೆ ನೀಡಿದ್ದಾರೆ.  ಆದರೆ, 14 ತಿಂಗಳ ಬಾಕಿ ವೇತನ ಕೊಡುವುದಾಗಿ ಸರ್ಕಾರ ಒಪ್ಪಿಕೊಂಡಿದೆ. ಅದಕ್ಕೆ ನಾವು ಒಪ್ಪಿಲ್ಲ. 1.01.2024ರಿಂದ ವೇತನ‌ ಪರಿಷ್ಕರಣೆ ಮಾಡಲು ಮನವಿ ಮಾಡಿದ್ದೇವೆ. ಸರ್ಕಾರ 01.01.2026ರಿಂದ ವೇತನ ಪರಿಷ್ಕರಣೆಗೆ ಒಲವು ಹೊಂದಿದೆ.‌ 38 ತಿಂಗಳು ಬಾಕಿ ವೇತನ ನೀಡಿದರೆ ಬೊಕ್ಕಸಕ್ಕೆ 1,800 ಕೋಟಿ ರೂ. ಹೊರೆಯಾಗಲಿದೆ. ಇನ್ನು 24% ವೇತನ ಪರಿಷ್ಕರಿಸುವಂತೆ ಕೋರಲಾಗಿದೆ. ಆದರೆ, ಸರ್ಕಾರ 17% ಕೊಡಲು ಸರ್ಕಾರಕ್ಕೆ ಒಪ್ಪಿಗೆ ಇದೆ ಎಂದರು.‌

ಜಂಟಿ ಕ್ರಿಯಾ ಸಮಿತಿ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಕೆ.ಎಸ್.ಆರ್.ಟಿ.ಸಿ (KSRTC) ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ ಜೊತೆ ಸಭೆ ನಡೆಸಿದರು.‌ ಸಂಘಟನೆಗಳ ಒಕ್ಕೂಟ ಸರ್ಕಾರಿ ನೌಕರರ ಸರಿಸಮಾನ ವೇತನ‌ ನೀಡುವಂತೆ ಕೋರಿದ್ದು, 38 ತಿಂಗಳ ಹಿಂಬಾಕಿ ನೀಡುವಂತೆ ಒತ್ತಾಯಿಸಿದೆ. ಸಭೆ ಬಳಿಕ ಮಾತನಾಡಿದ ಒಕ್ಕೂಟದ ಚಂದ್ರಶೇಖರ್, ಸಾರಿಗೆ ಸಚಿವರು ಡಿ.5ರಂದು ಚರ್ಚೆ ಮಾಡಿ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.‌ ಡಿ.5ರತನಕ‌ ನಾವು ಕಾಯುತ್ತೇವೆ.‌ ನೌಕರರ ಅಭಿಪ್ರಾಯ ಸಂಗ್ರಹಿಸಿ ಮುಂದಿನ‌ ನಡೆ ಬಗ್ಗೆ ತೀರ್ಮಾನ ಮಾಡುತ್ತೇವೆ. ಡಿ.5ರಂದು ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಕಾನೂನು ಸಲಹೆಗಾರರಾದ ಪೊನ್ನಣ್ಣ ಮತ್ತು ಸಾರಿಗೆ ನಿಗಮಗಳ ಅಧ್ಯಕ್ಷರು, ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಹಣಕಾಸು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ನೋಡಿ : ಕರ್ನಾಟಕದ 17 ಭಾಷೆಗಳಲ್ಲಿ ಸಂವಿಧಾನ ಪೀಠಿಕೆ

Donate Janashakthi Media

Leave a Reply

Your email address will not be published. Required fields are marked *