ರೈತರ ಬೇಡಿಕೆ ಮೇರೆಗೆ ತುಂಗಭದ್ರಾದಿಂದ 5,575 ಕ್ಯೂಸೆಕ್ಸ್‌ ನೀರು ಹರಿಸಲು ಒಪ್ಪಿಗೆ :ಡಿ.ಕೆ.ಶಿವಕುಮಾರ್

ನವದೆಹಲಿ: ರೈತರು ಬೇಡಿಕೆ, ಜಿಲ್ಲಾ ಸಚಿವರುಗಳು ಹಾಗೂ ಶಾಸಕರ ಒತ್ತಡದ ಹಿನ್ನೆಲೆಯಲ್ಲಿ ತುಂಗಾಭದ್ರಾದಿಂದ 5,575 ಕ್ಯೂಸೆಕ್ಸ್‌ ನೀರು ಹರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್‌ ಅವರು ತಿಳಿಸಿದರು.

ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿಗಳು ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಗುರುವಾರ ಮಾತನಾಡಿದರು.

ಇದನ್ನೂ ಓದಿ:ಬಿಜೆಪಿಯದ್ದು ಬರೀ ಸುಳ್ಳು-ನಾವು ನುಡಿದಂತೆ ನಡೆದಿದ್ದೇವೆ: ಡಿ.ಕೆ. ಶಿವಕುಮಾರ್‌

ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ತುಂಗಭದ್ರಾ ಆಣೆಕಟ್ಟೆ ಮೂಲಕ ನೀರು ಹರಿಸಲು ಬಹಳ ಒತ್ತಡ ಬಂದಿದೆ. ಜಿಲ್ಲಾ ಸಚಿವರು,ಶಾಸಕರುಗಳು ನೀರು ಹರಿಸುವಂತೆ ಕೇಳುತ್ತಿದ್ದಾರೆ. ಇಲ್ಲಿ 105 ಟಿಎಂಸಿ ಶೇಖರಣಾ ಸಾಮರ್ಥ್ಯವಿದ್ದು, ಈಗಾಗಲೇ 83 ಟಿಎಂಸಿ ನೀರಿದೆ. ರೈತರಿಂದ ಬಹಳ ಬೇಡಿಕೆ ಇರುವ ಕಾರಣ 5575 ಕ್ಯೂಸೆಕ್ಸ್‌ ನೀರನ್ನು ಹರಿಸಲು ಅನುಮತಿ ನೀಡಲಾಗಿದೆ. ಟಿಎಲ್‌ ಬಿಸಿಗೆ ಸುಮಾರು 1300 ರಿಂದ 1500 ಕ್ಯೂಸೆಕ್ಸ್‌, ಆರ್‌ಬಿಎಲ್‌ಸಿಯಲ್ಲಿ 1200 ಕ್ಯೂಸೆಕ್ಸ್‌,ಆರ್‌ಎಚ್‌ಬಿಎಲ್‌ಸಿಗೆ 1375 ಕ್ಯೂಸೆಕ್ಸ್‌ ನೀರು ನೀಡಬೇಕಾಗಿದೆ. ಇದರ ಜತೆಗೆ ಆಂಧ್ರಪ್ರದೇಶದ ಪಾಲಿನ ನೀರನ್ನು ಬಿಡಬೇಕಾಗಿದ್ದು, ಒಟ್ಟು 5575 ಕ್ಯೂಸೆಕ್ಸ್‌ ನೀರು ಹರಿಸಲು ಅನುಮತಿ ನೀಡಲಾಗಿದೆ. ಆ ಮೂಲಕ ರೈತರ ಬೇಡಿಕೆಗೆ ಸ್ಪಂದಿಸಿದ್ದೇನೆ ಎಂದು ಹೇಳಿದರು.

ಸಚಿವ ಶಿವರಾಜ್‌ ತಂಗಡಗಿ ನೇತೃತ್ವದಲ್ಲಿ ತುಂಗಭದ್ರಾ ಸಲಹಾ ಸಮಿತಿ:

ತುಂಗಭದ್ರಾ ಸಲಹಾ ಸಮಿತಿಗೆ ಸಚಿವ ಶಿವರಾಜ್‌ ತಂಗಡಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರ ಅಧ್ಯಕ್ಷತೆಯಲ್ಲಿ ತುಂಗಭದ್ರಾ ಸಲಹಾ ಸಮಿತಿ ಸಭೆ ಮಾಡಿ, ರೈತರ ಬೆಳೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವ,ಯಾವ ಕಾಲಕ್ಕೆ ಎಷ್ಟು ನೀರು ಬೀಡಬೇಕು ಎಂಬುವುದನ್ನು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *