ನವ ಉದಾರೀಕರಣ ಕಾಲಘಟ್ಟದ 1991 ರ ನಂತರದ ಈ ಅವಧಿಯಲ್ಲೇ ಅತ್ಯಂತ ಹೆಚ್ಚು ಸಂಕಷ್ಟದ ಪರಿಸ್ಥಿತಿಯನ್ನು ರಾಜ್ಯ ಹಾಗೂ ದೇಶ ಈಗ ಎದುರಿಸುತ್ತಿದೆ. 2014 ರಲ್ಲಿ ಅಧಿಕಾರಕ್ಕೆ ಬಂದು ಸತತ ಮೂರು ಅವಧಿಗೆ ಚುನಾಯಿಸಲ್ಪಟ್ಟ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರವು, ಕಾರ್ಪೊರೇಟ್-ಕೋಮುವಾದಿ ಆಳ್ವಿಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಕ್ರೂಢೀಕರಿಸಿಕೊಂಡಿದೆ. ಕಾರ್ಪೊರೇಟ್-ಕೋಮುವಾದಿ ಆಳ್ವಿಕೆಯ ಕುಖ್ಯಾತ ಮಾದರಿಯಾಗಿ ಡಬಲ್ ಎಂಜಿನ್ ಸರ್ಕಾರದಂತೆ ಕೆಲಸ ಮಾಡುತ್ತಿದ್ದ ಈ ಹಿಂದಿನ ಬಿಜೆಪಿ ರಾಜ್ಯ ಸರ್ಕಾರವನ್ನು ಜನ ನಿರ್ಣಾಯಕವಾಗಿ ಸೋಲಿಸಿ 2023 ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಬಿಕ್ಕಟ್ಟು
-ಟಿ ಯಶವಂತ
ರೈತಾಪಿ ಕೃಷಿ ಯನ್ನು ನಾಶ ಮಾಡುವ ಕಾರ್ಪೊರೇಟ್ ಸ್ನೇಹಿ ಕೃಷಿ ಕಾಯ್ದೆಗಳಾದ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಎಪಿಎಂಸಿ ತಿದ್ದುಪಡಿ ಕಾಯ್ದೆ 2020, ಕರ್ನಾಟಕ ಜಾನುವಾರು ಸಂರಕ್ಷಣಾ ತಿದ್ದುಪಡಿ ಕಾಯ್ದೆ 2020 ಗಳನ್ನು ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜಾರಿ ಮಾಡಿತ್ತು. ಭೂ ಬ್ಯಾಂಕ್, ಕೆಐಎಡಿಬಿ, ಕೆಹೆಚ್ ಬಿ, ಬಿಡಿಎ ಮುಂತಾದ ಕರಾಳ ಭೂ ಸ್ವಾಧೀನ ಕಾಯ್ದೆಗಳ ಅಡಿಯಲ್ಲಿ ರಾಜ್ಯಾದ್ಯಂತ ರೈತರನ್ನು ಪೊಲೀಸ್ ಬಲ ಬಳಸಿ ಮನಸೋ ಇಚ್ಚೆ ಒಕ್ಕಲೆಬ್ಬಿಸುವ ಕೆಲಸದಲ್ಲಿ ನಿರತವಾಗಿತ್ತು. ಯಾವುದೇ ಬೆಳೆಗಳಿಗೆ ಬೆಂಬಲ ಬೆಲೆಯ ರಕ್ಷಣೆ ಇಲ್ಲದೇ ರಾಜ್ಯಾದ್ಯಂತ ರೈತಾಪಿ ಸಮುದಾಯ ಬಹಳ ದೊಡ್ಡ ಕಷ್ಟ-ನಷ್ಟಗಳಿಗೆ ಗುರಿಯಾಗಿತ್ತು. ಬಿಕ್ಕಟ್ಟು
ಬರಗಾಲ ಅಥವಾ ಅತಿವೃಷ್ಟಿ ಇಂತಹ ಯಾವುದೇ ಸಂದರ್ಭದಲ್ಲಿ ಕೂಡ ಕನಿಷ್ಠ ಪರಿಹಾರದ ಕ್ರಮಗಳು ಕೂಡ ಇಲ್ಲದ ಶೋಚನೀಯ ಪರಿಸ್ಥಿತಿಯು ರೈತಾಪಿ ಸಮುದಾಯದ್ದಾಗಿತ್ತು. ಈ ಎಲ್ಲದರ ಪರಿಣಾಮವಾಗಿ ರೈತರು-ಕೃಷಿಕೂಲಿಕಾರರು, ರೈತ ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶದ ದೈಹಿಕ ದುಡಿಮೆಗಾರರ ಆತ್ಮಹತ್ಯೆಗಳು,ಸಂಕಷ್ಟದ ವಲಸೆ, ವ್ಯಾಪಕ ನಿರುದ್ಯೋಗ, ಸಾಲಭಾದೆ ಮುಂತಾದ ಕೃಷಿ ಬಿಕ್ಕಟ್ಟಿನ ಪರಿಣಾಮಗಳಿಗೆ ಗ್ರಾಮೀಣ ಜನತೆ ತುತ್ತಾಗಿದ್ದರು. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಗಾಗಿ, ರೈತ ಹಾಗೂ ಕೃಷಿ ವಿರೋಧಿ ಕರಾಳ ಕಾಯ್ದೆಗಳ ರದ್ದತಿಗಾಗಿ, ಬಗರ್ ಹುಕಂ-ಅರಣ್ಯ ಸಾಗುವಳಿ ಸೇರಿದಂತೆ ರೈತರ ಭೂಮಿ ಹಕ್ಕಿಗಾಗಿ, ವಿದ್ಯುತ್ ವಲಯ ಸೇರಿದಂತೆ ಕೃಷಿ ಲಾಗುವಾಡುಗಳ ಕಾರ್ಪೋರೇಟೀಕರಣದ ವಿರುದ್ಧ, ಭೂ ಸಂಪತ್ತಿನ ಕಾರ್ಪೊರೇಟ್ ಲೂಟಿಯ ವಿರುದ್ಧ, ಮೈಕ್ರೋ ಪೈನಾನ್ಸ್ ಶೋಷಣೆ ವಿರುದ್ಧ ಹೀಗೆ ವ್ಯಾಪಕವಾಗಿ ರೈತ ಚಳವಳಿಗಳ ಮೂಲಕ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಬಿಕ್ಕಟ್ಟು
ಇದನ್ನೂ ಓದಿ: ರಾಜಸ್ಥಾನ | ಎಥೆನಾಲ್ ಕಾರ್ಖಾನೆ ವಿರುದ್ಧ ರೈತರ ಬೃಹತ್ ಪ್ರತಿಭಟನೆ
ಇಂತಹ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಹಕ್ಕುಗಳಿಗಾಗಿ ನಡೆದ ರೈತ ಚಳವಳಿಗಳ ಜಾಗೃತಿಯನ್ನು ತನ್ನ ಮತ ಬ್ಯಾಂಕ್ ಆಗಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ಈ ಎಲ್ಲಾ ವಿಷಯಗಳನ್ನು ತನ್ನ ಚುನಾವಣಾ ಪ್ರಣಾಳಿಕೆ ಯಲ್ಲಿ ಒಳಗೊಂಡು, ತಾನು ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ಎಲ್ಲಾ ಜನ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ,ರಾಜ್ಯದ ಕೃಷಿ ಬಿಕ್ಕಟ್ಟಿಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಲು ಶ್ರಮಿಸುವುದಾಗಿ ಆಶ್ವಾಸನೆ ನೀಡಿತ್ತು. ಬಿಕ್ಕಟ್ಟು
ಈ ಸರ್ಕಾರ ಅಧಿಕಾರ ಕ್ಕೆ ಬಂದು ಎರಡೂವರೆ ವರ್ಷಗಳಾಗುತ್ತಾ ಬಂದಿದ್ದರೂ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ, ಈ ಹಿಂದಿನ ಸರ್ಕಾರದ ಯಾವ ಕ್ರಮವನ್ನು ಪರಿಣಾಮಕಾರಿಯಾಗಿ ಬದಲಿಸಲಿಲ್ಲ. ಬದಲಾಗಿ ಬಹಳ ವೇಗವಾಗಿ ಮುಂದುವರೆಸುತ್ತಿದೆ. ಇದೊಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳು ಉಳ್ಳ ಹಿಂದಿನ ಬಿಜೆಪಿ ಸರ್ಕಾರದ ಮುಂದುವರೆಕೆಯೇ ಆಗಿದೆ. ಉದಾಹರಣೆಗೆ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ13 ಗ್ರಾಮಗಳ ಸುಮಾರು 1777 ಎಕರೆ ಭೂಮಿಯನ್ನು ಈ ಹಿಂದಿನ ಬಿಜೆಪಿ ಸರ್ಕಾರ 2021 ರಲ್ಲಿ ಕೆಐಎಡಿಬಿ ಮೂಲಕ ಭೂ ಸ್ವಾಧೀನಕ್ಕೆ ಒಳಪಡಿಸಿತ್ತು. ಅಧಿಕಾರಕ್ಕೆ ಬಂದ ತಕ್ಷಣ ಈ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ರದ್ದುಪಡಿಸುವುದಾಗಿ ಕಾಂಗ್ರೆಸ್ ಪಕ್ಷ ಸದನದಲ್ಲಿ ವಿರೋಧ ಪಕ್ಷವಾಗಿ ಹಾಗೂ ಸದನದ ಹೊರಗಡೆ ಚುನಾವಣಾ ಪ್ರಚಾರದಲ್ಲಿ ಸ್ಪಷ್ಟವಾಗಿ ತಿಳಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಎರಡು ವರೆ ವರ್ಷಗಳ ಕಾಲ ಸಮರಶೀಲ ಹೋರಾಟವನ್ನು ನಡೆಸಿಯೇ ಭೂ ಸ್ವಾಧೀನವನ್ನು ರದ್ದುಪಡಿಸಿಕೊಳ್ಳಬೇಕಾಯಿತು. ಕೆಐಎಡಿಬಿ ಗೆ ಮಾರಾಟ ಮಾಡದೇ ಇದ್ದರೆ ಶಾಶ್ವತ ಕೃಷಿ ವಲಯ ಎಂದು ಪಹಣಿಯಲ್ಲಿ ನಮೂದಿಸುವ ಬೆದರಿಕೆ ಜೊತೆಯಲ್ಲೇ ಭೂ ಸ್ವಾಧೀನವನ್ನು ರದ್ದುಪಡಿಸಿದೆ. ಬಿಕ್ಕಟ್ಟು
ಇದೇ ಪರಿಸ್ಥಿತಿ ಪ್ರತಿಯೊಂದು ವಿಷಯದಲ್ಲಿಯೂ ಇರುವಂತಹದ್ದನ್ನು ಕಾಣಬಹುದು. ಈ ಎರಡುವರೆ ವರ್ಷದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳು ನಮ್ಮ ರಾಜ್ಯದ ರೈತರ ಸಂಕಟಕ್ಕೆ ಕಾರಣ ಎಂಬುದು ನಿಜವಾದರೂ, ರಾಜ್ಯ ಸರ್ಕಾರ ತನ್ನ ಪಾತ್ರವನ್ನು ಪರಿಣಾಮಕಾರಿಯಾಗಿ ಮಾಡಲು ನಿರಾಕರಿಸುತ್ತಿದೆ. ಆಹಾರ ಧಾನ್ಯಗಳಾದ ಭತ್ತ, ಜೋಳ,ಸಜ್ಜೆ, ರಾಗಿ, ಮುಂತಾದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಪರಿಣಾಮಕಾರಿಯಾಗಿ ಮಧ್ಯಪ್ರವೇಶ ಮಾಡಲಿಲ್ಲ. ಸುಗ್ಗಿ ಮುಗಿದ ನಂತರ ಖರೀದಿ ಕೇಂದ್ರ ತೆರೆಯುವುದು, ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಖರೀದಿ ಆಗದಂತೆ ಗರಿಷ್ಠ ಮಿತಿ ಹೆಸರಿನಲ್ಲಿ ಹತಾಶ ಮಾರಾಟಕ್ಕೆ ದೂಡುವುದು, ಖರೀದಿ ನಂತರವೂ ತಿಂಗಳಾರುಗಟ್ಟಲೇ ಪಾವತಿ ಮಾಡದಿರುವುದು ಹೀಗೆ ರಾಜ್ಯ ಸರ್ಕಾರದ ಮಾರುಕಟ್ಟೆ ಮಧ್ಯಪ್ರವೇಶವು ಅತ್ಯಂತ ನಿರಾಶಾದಾಯಕ ವಾಗಿತ್ತು ಮತ್ತು ನಕಾರಾತ್ಮಕವಾಗಿ ಇದೆ. ಉದಾಹರಣೆಗೆ ಬಿಳಿ ಜೋಳ ಖರೀದಿಸಲು ಆಗ್ರಹಿಸಿ ಸಿಂಧನೂರಿನಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ರೈತರು ದೊಡ್ಡ ಆಂದೋಲನವನ್ನೇ ಮಾಡಬೇಕಾಯಿತು. ಇದೇ ಪರಿಸ್ಥಿತಿ ಕಬ್ಬು, ಹತ್ತಿ, ದ್ವಿದಳ ಧಾನ್ಯಗಳು, ಈರುಳ್ಳಿ (ಉಳ್ಳಾಗಡ್ಡಿ) ,ಟಮೋಟಾ,ಆಲೂಗೆಡ್ಡೆ,ಮಾವು-ದ್ರಾಕ್ಷಿ ಸೇರಿದಂತೆ ಹಣ್ಣು-ತರಕಾರಿ ಬೆಳೆಗಳ, ಎಣ್ಣೆ ಬೀಜಗಳ, ರೈತರು ಅನುಭವಿಸುತ್ತಿದ್ದಾರೆ. ಬಿಕ್ಕಟ್ಟು
ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆ ಮತ್ತು ಸೂಕ್ತ ಖರೀದಿಗೆ ಒತ್ತಾಯಿಸಿದ ಸಂದರ್ಭದಲ್ಲಿ ಮಾತ್ರ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ರಾಜ್ಯ ಸರ್ಕಾರ ಉಳಿದ ಎಲ್ಲಾ ದಿನಗಳಲ್ಲಿ ಕೇಂದ್ರದ ಎಲ್ಲಾ ಜನ ವಿರೋಧಿ ನೀತಿಗಳನ್ನು ಇಡೀ ದೇಶದಲ್ಲಿ ಅನುಷ್ಠಾನಗೊಳಿಸುವ ಮುಂಚೂಣಿ ರಾಜ್ಯವಾಗಿ ಕುಖ್ಯಾತಿ ಗಳಿಸಿದೆ. ಉದಾಹರಣೆಗೆ ವಿದ್ಯುತ್ ವಲಯದ ಸಂಪೂರ್ಣ ಖಾಸಗೀಕರಣದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನಿರಾಕರಿಸುವ ರೈತ ವಿರೋಧಿ ಕೇಂದ್ರದ ಪ್ರಸ್ತಾಪಗಳನ್ನು ರಾಜ್ಯ ಸರ್ಕಾರ ಸಂಪೂರ್ಣ ಅನುಮೋದಿಸಿ ಜಾರಿಗೊಳಿಸುತ್ತಿದೆ. ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್ ಸೇವೆಗಳನ್ನು, ಸರ್ಕಾರಿ ಆರೋಗ್ಯ ವ್ಯವಸ್ಥೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಖಾಸಗೀಕರಣಕ್ಕೆ, ಆಸ್ತಿಗಳ ನಗದಿಕರಣಕ್ಕೆ ಒತ್ತು ನೀಡುತ್ತಿದೆ. ಕಂದಾಯ, ಕೃಷಿ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಮುಂತಾದ ಎಲ್ಲಾ ಇಲಾಖೆಗಳಲ್ಲೂ ಮಂಜೂರಾದ ಹುದ್ದೇಗಳೇ ಶೇ 30- ಶೇಕಡಾ 60 ರಷ್ಟು ಖಾಲಿ ಇದ್ದು ಭರ್ತಿ ಮಾಡಿಕೊಳ್ಳದೇ ರೈತರಿಗೆ ಅಗತ್ಯ ಸೇವೆಗಳನ್ನು ನಿರಾಕರಿಸಲಾಗುತ್ತಿದೆ. ಬಿಕ್ಕಟ್ಟು

ಕೃಷಿ ಕಾರ್ಪೋರೇಟೀಕರಣ ಮತ್ತು ರೈತಾಪಿ ಸಮುದಾಯಗಳ ದಿವಾಳೀಕರಣ ಬಹಳ ವೇಗವಾಗಿ ನಡೆಯುತ್ತಿರುವ ವಿದ್ಯಮಾನಗಳಾಗಿವೆ. ಬಿತ್ತನೆ ಪೂರ್ವ ಹಾಗೂ ಕಟಾವು ನಂತರದ ಎಲ್ಲಾ ಚಟುವಟಿಕೆಗಳು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿಕೊಂಡಿವೆ. ಗ್ರಾಮೀಣ ಸಹಕಾರಿ ವಲಯ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಗಳನ್ನು ಈ ಪ್ರಕ್ರಿಯೆ ಮತ್ತಷ್ಟು ದುರ್ಬಲಗೊಳಿಸುತ್ತಿದೆ. ವ್ಯವಸಾಯ ಸೇವಾ ಸಹಕಾರ ಸಂಘಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು ಮತ್ತು ಕರ್ನಾಟಕ ಹಾಲು ಒಕ್ಕೂಟದಂತಹ ಮಾದರಿ ಸಹಕಾರಿ ಸಂಸ್ಥೆಗಳು ಈ ಕೃಷಿ ಕಾರ್ಪೋರೇಟೀಕರಣದ ಬಲಿಪಶುಗಳಾಗಿವೆ. ಬಿಕ್ಕಟ್ಟು
ಕಂಪನಿ ಕಾಯಿದೆಯಡಿಯಲ್ಲಿ ಸ್ಥಾಪನೆ ಆಗುತ್ತಿರುವ ರೈತ ಉತ್ಪಾದಕ ಕಂಪನಿಗಳಿಗೆ ಪ್ರೊತ್ಸಾಹ, ರೈತ ಸಹಕಾರಿ ಸಂಸ್ಥೆಗಳ ದಮನ ಮುಂತಾದ ಕೃಷಿ ಕಾರ್ಪೋರೇಟೀಕರಣದ ಉತ್ತೇಜನ ಕ್ರಮಗಳಿಂದಾಗಿ ದೊಡ್ಡ ದೊಡ್ಡ ಪಾರಂ ಹೌಸ್ ಗಳು ತಲೆ ಎತ್ತುತ್ತಿವೆ. ಗುತ್ತಿಗೆ ಕೃಷಿ, ಒಪ್ಪಂದ ಕೃಷಿ ವ್ಯಾಪಕಗೊಳ್ಳುತ್ತಿದೆ. ಒಟ್ಟಾರೆಯಾಗಿ ಕಂಪನಿಗಳು,ಸಂಸ್ಥೆಗಳು, ಮಠಗಳು, ಟ್ರಸ್ಟ್ ಗಳು ಇವತ್ತಿನ ಬಹಳ ದೊಡ್ಡ ಬಂಡವಾಳಶಾಹಿ ಭೂ ಮಾಲೀಕರಾಗಿ ಕ್ರೂಡೀಕರಣಗೊಳ್ಳುತ್ತಿರುವುದು ಕೃಷಿ ಕಾರ್ಪೋರೇಟೀಕರಣದ ಹೆಗ್ಗುರುತುಗಳಾಗಿವೆ. ಮಾನ್ಸೊಂಟೋ, ಕಾರ್ಗಿಲ್ ಮುಂತಾದ ಕೃಷಿ ಕಾರ್ಪೊರೇಟ್ ಸಂಸ್ಥೆಗಳು ನಮ್ಮ ಕೃಷಿ ವಿವಿ ಸಂಶೋಧನೆಗಳನ್ನು ನಿಯಂತ್ರಣಕ್ಕೆ ಒಳಪಡಿಸಿಕೊಂಡಿವೆ ಮಾತ್ರವೇ ಅಲ್ಲ ಖಾಸಗಿ ಕೃಷಿ ವಿಶ್ವವಿದ್ಯಾಲಯ ಹಾಗೂ ಖಾಸಗಿ ಕೃಷಿ ಕಾಲೇಜುಗಳು ಕರ್ನಾಟಕದಲ್ಲೂ ತಲೆ ಎತ್ತಲು ಈ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬಿಕ್ಕಟ್ಟು
ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ಜೀವನ ವೆಚ್ಚಗಳು ರೈತಾಪಿ ಸಮುದಾಯವನ್ನು ತೀವ್ರ ಪ್ರಮಾಣದಲ್ಲಿ ದಿವಾಳೀಕರಣಕ್ಕೆ ಒಳಪಡಿಸಿವೆ. ಒಟ್ಟು ಕೃಷಿಕರಲ್ಲಿ ಶೇ 70 ಕ್ಕಿಂತ ಹೆಚ್ಚು ಇರುವ ಸಣ್ಣ ಮತ್ತು ಅತಿ ಸಣ್ಣ ಕೃಷಿಕರು, ಕೃಷಿಯೇತರ ದೈಹಿಕ ದುಡಿಮೆಗಾರರಾಗಿ ರೂಪಾಂತರ ಗೊಳ್ಳುತ್ತಿರುವುದು ,ಕೃಷಿ ಕೂಲಿಕಾರರೇ ಲಭ್ಯ ಇಲ್ಲದ ಪರಿಸ್ಥಿತಿ, ಕೃಷಿಯ ಮಹಿಳಾಕರಣವು ರೈತಾಪಿ ಸಮುದಾಯದ ದಿವಾಳೀಕರಣದ ಹೆಗ್ಗುರುತುಗಳಾಗಿವೆ. ಕೃಷಿ ಹಾಗೂ ಕೃಷಿಯೇತರ ಮೂಲಗಳಿಂದ ಬರುತ್ತಿರುವ ಯಾವ ಆದಾಯಗಳು ಕನಿಷ್ಠ ಜೀವನ ವೆಚ್ಚ ಹಾಗೂ ಕೃಷಿ ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗದ ಒಂದು ಸಾಮಾಜಿಕ-ಆರ್ಥಿಕ ಪರಿಸ್ಥಿತಿಯು ರಾಜ್ಯದ ಬಹುತೇಕ ಜನರನ್ನು ಬಡತನದಲ್ಲಿ ಹಾಗೂ ಕಡು ಬಡತನದಲ್ಲಿ ಜೀವನ ಸಾಗಿಸುವಂತೆ ಮಾಡಿದೆ. ಬಿಕ್ಕಟ್ಟು
ಯಾವ ಹೆಣ್ಣು ಮಕ್ಕಳು ಇಂತಹ ದಿವಾಳೀತನದ ಕುಟುಂಬಗಳಲ್ಲಿ ಉಳಿಯುತ್ತಿಲ್ಲ, ಯಾವ ಹೆಣ್ಣು ಮಕ್ಕಳು ಇಂತಹ ಕುಟುಂಬ ಗಳಿಗೆ ವಿವಾಹ ಸಂಬಂಧ ಗಳ ಮೂಲಕ ಬರುತ್ತಿಲ್ಲ. ಇದೇ ಪ್ರತಿ ಗ್ರಾಮಗಳಲ್ಲಿ ಬಹುತೇಕ ಮನೆಗಳಲ್ಲಿ ಮದುವೆ ಆಗದೇ ಉಳಿದಿರುವ ಯುವಕರ ಪರಿಸ್ಥಿತಿಗೆ ಕಾರಣವಾಗಿರುವಂತಹದ್ದು. ಮೂವತ್ತು ವರ್ಷ ವಯಸ್ಸು ದಾಟುವ ಮೊದಲು ಹುಡುಗಿ ಹುಡುಕುವುದು ಅಥವಾ ಮದುವೆ ಪ್ರಯತ್ನ ಮಾಡುವುದು ಕೂಡ ಅಸಾಧ್ಯ ಎಂಬ ಪರಿಸ್ಥಿತಿ ಯುವಕರಲ್ಲಿ ಇದೆ. ಅಂದರೆ ಮದುವೆ ಗೆ ಮನಸ್ಸು ಮಾಡುವ ಯುವಕನ ವಯಸ್ಸೇ ಮೂವತ್ತು ಆದ ನಂತರ .ಇದೇ ಸಂದರ್ಭದಲ್ಲಿ ಒಂಟಿ ಮಹಿಳೆಯರ, ಅವಿವಾಹಿತ ಮಹಿಳೆಯರ, ವಿಚ್ಚೇದಿತ ಹಾಗೂ ಪರಿತ್ಯಕ್ತೆಯರ ಸಂಖ್ಯೆಯೂ ಕೂಡ ಗಣನೀಯವಾಗಿ ಏರಿಕೆ ಆಗುತ್ತಿದೆ ಎಂಬುದನ್ನು ಕೂಡ ಜೊತೆ ಜೊತೆಯಾಗಿ ಗ್ರಹಿಸಿದರೆ ಈ ಮಾನವೀಯ ಬಿಕ್ಕಟ್ಟಿಗೂ ಕೃಷಿ ಬಿಕ್ಕಟ್ಟಿಗೂ ಇರುವ ಸಂಬಂಧ ಅರ್ಥವಾಗುತ್ತದೆ. ಬಿಕ್ಕಟ್ಟು
ಭೂ ಸಂಪತ್ತಿನ ಕಾರ್ಪೊರೇಟ್ ಲೂಟಿ ಯು ಕೃಷಿ ಕಾರ್ಪೋರೇಟೀಕರಣದ ಬಹಳ ಮುಖ್ಯ ಚಾಲಕ ಶಕ್ತಿಯಾಗಿರುವುದನ್ನು ಕಾಣಬಹುದು. ರಾಜ್ಯದಾದ್ಯಂತ ಇರುವ ಬಗರ್ ಹುಕಂ ಸಾಗುವಳಿದಾರರನ್ನು ಅವರಿಗೆ ಇರುವ ಕಂದಾಯ ಕಾಯ್ದೆಗಳ ರಕ್ಷಣೆ ಯನ್ನು ಕೂಡ ಆಡಳಿತ ಕ್ರಮಗಳ ಮೂಲಕ ನಿರ್ದಯವಾಗಿ ಈ ಸರ್ಕಾರ ಕಿತ್ತುಕೊಂಡಿದೆ ಅಂದರೆ ಕಾನೂನು ಬಾಹಿರ ವಾಗಿ ಒಕ್ಕಲೆಬ್ಬಿಸುತ್ತಿದೆ. ಉದಾಹರಣೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಂತಹ ಯಾವುದೇ ಅರಣ್ಯ ಪ್ರದೇಶ ಇಲ್ಲದ ಅಪ್ಪಟ ಕೃಷಿ ಬಯಲುಸೀಮೆ ತಾಲ್ಲೂಕಿನಲ್ಲೇ ಸುಮಾರು 96 ಗ್ರಾಮಗಳಲ್ಲಿ ರೈತರನ್ನು ಅರಣ್ಯ ಒತ್ತುವರಿ ತರುವು ಕಾರ್ಯಚರಣೆ ಮೂಲಕ ಒಕ್ಕಲೆಬ್ಬಿಸಲಾಗುತ್ತಿದೆ. ಪಿತ್ರಾರ್ಜಿತ ಹಿಡುವಳಿ ಕೃಷಿ ಭೂಮಿಯನ್ನು ಹಾಗೂ ಕ್ರಮಬದ್ದವಾಗಿ ಬಗರ್ ಹುಕಂ ಸಾಗುವಳಿ ಮಂಜೂರಾತಿ ಆಗಿರುವ ಕೃಷಿ ಭೂಮಿಗಳ ಪಹಣಿಗಳನ್ನು ಅರಣ್ಯ ಇಂಡೀಕರಣಕ್ಕೆ ಒಳಪಡಿಸಿ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಹಳೆ ಮೈಸೂರು ಪ್ರದೇಶದಲ್ಲಿ ಅರಣ್ಯ ಇಂಡೀಕರಣ ಮೂಲಕ ,ಮಲೆನಾಡು ಅರೆ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಅರಣ್ಯ ಅಕ್ರಮ ಒತ್ತುವರಿ ತೆರವು ಮೂಲಕ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅರಣ್ಯ ಹಕ್ಕು ಕಾಯ್ದೆ 2006 ಅನ್ನು ಎಲ್ಲಿಯೂ ಪಾಲಿಸುತ್ತಿಲ್ಲ.
ವಿಶೇಷವಾಗಿ ಬೆಂಗಳೂರು ಮತ್ತು ಬೆಂಗಳೂರು ಸುತ್ತ ಮುತ್ತ ಸುಮಾರು 200 ಕಿ.ಮೀ ವರೆಗಿನ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿ, ಉಪನಗರ ನಿರ್ಮಾಣ, ಹೆದ್ದಾರಿ ವಿಸ್ತರಣೆ, ವಿಮಾನ ನಿಲ್ದಾಣ ಹೀಗೆ ವಿವಿಧ ಹೆಸರಿನಲ್ಲಿ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನಕ್ಕೆ ಒಳಪಡಿಸಲಾಗುತ್ತಿದೆ. ಉದಾಹರಣೆಗೆ ಬಿಡದಿ ಹೋಬಳಿಯ ಭೈರಮಂಗಲ -ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತೀಯ ಎಲ್ಲಾ 25 ಗ್ರಾಮಗಳ ಸುಮಾರು 9680 ಎಕರೆ ಸಂಪೂರ್ಣ ನೀರಾವರಿ ಬಹು ವಾರ್ಷಿಕ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪನಗರ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಳ್ಳಲು ಎಲ್ಲಾ ರೀತಿಯ ಸರ್ವಾಧಿಕಾರಿ ಬಲವನ್ನು ಬಳಸಲಾಗುತ್ತಿದೆ. ಇದೇ ರೀತಿ ಬೆಂಗಳೂರಿನ ಸುತ್ತ ಐದು-ಆರು ಉಪ ನಗರಗಳಿಗಾಗಿ ಸುಮಾರು 40 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಪ್ರಯತ್ನಿಸಲಾಗುತ್ತಿದೆ. ಉಪ ನಗರ ಗಳಲ್ಲದೇ ವಿವಿಧ ಯೋಜನಾ ಪ್ರಾಧಿಕಾರಗಳಡಿಯಲ್ಲಿ ಕೂಡ ವ್ಯಾಪಕ ಭೂ ಸ್ವಾಧೀನ ನಡೆಸಲಾಗುತ್ತಿದೆ. ಉದಾಹರಣೆಗೆ ತುಮಕೂರು ಜಿಲ್ಲೆ ಒಂದರಲ್ಲೇ ಸುಮಾರು 15 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಭೂ ಸ್ವಾಧೀನ ನಡೆಸಲು ಗುರುತಿಸಲಾಗಿದೆ. ಬೆಂಗಳೂರು-ಚನ್ನೈ ಕೈಗಾರಿಕಾ ಕಾರಿಡಾರ್ ತುಮಕೂರು ಸ್ಥಳೀಯ ಪ್ರಾಧಿಕಾರದ ಹೆಸರಿನಲ್ಲೇ ಸುಮಾರು 8 ಸಾವಿರ ಎಕರೆ ಭೂ ಸ್ವಾಧೀನಕ್ಕೆ ಗುರುತಿಸಲಾಗಿದೆ.
ಇವೆಲ್ಲವೂ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಪೊರೇಟ್ ಭೂ ಕಬಳಿಕೆಗಳೇ ಆಗಿವೆ. ಸುಮಾರು 25 ವರ್ಚಗಳ ಹಿಂದೆ ಭೂ ಸ್ವಾಧೀನ ಮಾಡಿ ನಿರ್ಮಿಸಿರುವ ಸುಮಾರು 14 ಸಾವಿರ ಎಕರೆ ಭೂಮಿಯ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಶೇ 80 ರಷ್ಟು ಬಳಕೆಯೇ ಆಗಿಲ್ಲ. ಇಂತಹ ಉದಾಹರಣೆಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಿಗುತ್ತವೆ. ಬಳ್ಳಾರಿ ಜಿಲ್ಲೆಯ ಕುಡಿತಿನಿ ಮುಂತಾದ ಗ್ರಾಮಗಳಲ್ಲಿ ಸುಮಾರು 15 ವರ್ಷಗಳ ಹಿಂದೆ ಕೆಐಎಡಿಬಿ ಮೂಲಕ ವಶ ಪಡಿಸಿಕೊಂಡಿದ್ದ ಕೃಷಿ ಭೂಮಿ ಯಲ್ಲಿ ಕೈಗಾರಿಕೆ ಸ್ಥಾಪಿಸಿ ಇಲ್ಲವೇ ಭೂಮಿ ವಾಪಸು ಮಾಡಿ ಎಂದು ಅಲ್ಲಿನ ಭೂಮಿ ಕಳೆದುಕೊಂಡ ರೈತರು ಸುಮಾರು 1300 ದಿನಗಳಿಂದಲೂ ಪ್ರತಿಭಟಿಸುತ್ತಿದ್ದಾರೆ. ಆದರೆ ಭೂ ಸ್ವಾಧೀನಕ್ಕೆ ರೈತರು ಸಹಕರಿಸದೇ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಎಲ್ಲಾ ಕಡೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಚಿವರು ಹಾಗೂ ರಿಯಲ್ ಎಸ್ಟೇಟ್ ದಲ್ಲಾಳಿಗಳು ಅಪಪ್ರಚಾರವನ್ನೆ ನಡೆಸುತ್ತಿದ್ದಾರೆ. ಬಿಕ್ಕಟ್ಟು

ಕಾರ್ಪೊರೇಟ್ ಭೂ ಕಬಳಿಕೆ ಒಂದು ಕಡೆ ಅತ್ಯಮೂಲ್ಯ ಆಹಾರದ ಕಣಜವಾಗಿರುವ ಕೃಷಿ ಭೂಮಿಯನ್ನು ನಾಶಗೊಳಿಸುತ್ತಿದ್ದರೆ ಇನ್ನೊಂದು ಕಡೆ ಕಾರ್ಪೊರೇಟ್ ಕಂಪನಿಗಳ ಅನುತ್ಪಾದಕ ರಿಯಲ್ ಎಸ್ಟೇಟ್ ಆಸ್ತಿಗಳಾಗಿ ಸಂಪತ್ತಿನ ಮೌಲ್ಯಗಳಾಗಿ ಮಾರ್ಪಾಡಾಗುತ್ತಿವೆ. ಹೀಗೆ ಭೂಮಿ ಪಡೆದ ಕಂಪನಿಗಳೇ ಪರಭಾರೆ ಹಾಗೂ ಲೀಸ್ ಗಳ ಮೂಲಕ ಅಪಾರ ಪ್ರಮಾಣದ ಲಾಭ ಗಳಿಸುತ್ತಿವೆ. ಇದು ಕೃಷಿ ಉತ್ಪಾದಕತೆಗೂ ,ಕೈಗಾರಿಕಾ ಬೆಳವಣಿಗೆ ಎರಡಕ್ಕೂ ಮಾರಕವಾಗಿದೆ. ರಾಜ್ಯ ಸರ್ಕಾರದ ಭೂ ಕಬಳಿಕೆ ಹಿಂದೆ ಬಹಳ ಸ್ಪಷ್ಟವಾಗಿ ರಿಯಲ್ ಎಸ್ಟೇಟ್ ಹಿತಾಸಕ್ತಿ ಕೆಲಸ ಮಾಡುತ್ತಿದೆ. ಈ ಸರ್ಕಾರದ ಎಲ್ಲಾ ಆಗು ಹೋಗುಗಳನ್ನು ಪ್ರಬಲವಾಗಿ ರಿಯಲ್ ಎಸ್ಟೇಟ್ ಲಾಬಿ ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ. ಸಿಎಂ ಕುರ್ಚಿ ಮೇಲಿನ ಹಗ್ಗ-,ಜಗ್ಗಾಟ ಇಂತಹ ವಿಭಿನ್ನ ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ನಡುವಿನ ಸಂಘರ್ಷವಾಗಿದೆ.
ಕರ್ನಾಟಕದ ಕಾರ್ಷಿಕ ಬಿಕ್ಕಟ್ಟಿನ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ನವ ಉದಾರೀಕರಣ ಕೃಷಿ ನೀತಿಗಳು, ಭೂ ನೀತಿಗಳು, ಕೃಷಿ ಮಾರುಕಟ್ಟೆ ನೀತಿಗಳು, ವಿದ್ಯುತ್, ಬೀಜ ,ರಸಗೊಬ್ಬರ ಮುಂತಾದ ಕೃಷಿ ಲಾಗುವಾಡುಗಳಿಗೆ ಸಂಬಂಧಿಸಿದ ಧೋರಣೆಗಳು, ಒಪ್ಪಂದ ಹಾಗೂ ಗುತ್ತಿಗೆ ಕೃಷಿ ಗೆ ಸಿಗುತ್ತಿರುವ ಉತ್ತೇಜನಗಳು, ಭೂ ಸ್ವಾಧೀನ ನೀತಿಗಳು ಕರ್ನಾಟಕದ ಬಹಳ ದೊಡ್ಡ ಸಂಖ್ಯೆಯ ಜನರನ್ನು ಭೂ ಹೀನರನ್ನಾಗಿಸುತ್ತಿದೆ. ಹಸಿವಿಗೆ ನೂಕುತ್ತಿದೆ. ನಿರುದ್ಯೋಗಿಯನ್ನಾಗಿಸುತ್ತಿದೆ. ನಿಕೃಷ್ಟ ಜೀವನ ಪರಿಸ್ಥಿತಿಯ ವಲಸೆ ಕಾರ್ಮಿಕರನ್ನಾಗಿಸುತ್ತಿದೆ. ಕುಟುಂಬ ಜೀವನವೇ ಇಲ್ಲದ ವ್ಯಕ್ತಿಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿದೆ. ಎಲ್ಲಾ ದುಡಿಮೆಗಾರರನ್ನು ಸಾಲಭಾದೆಗೆ ನೂಕಲಾಗಿದೆ . ಆತ್ಮಹತ್ಯೆ-ಆನಾರೋಗ್ಯ-ಅಪಘಾತಗಳ ಸಾವುಗಳು ದಿನನಿತ್ಯದ ಸುದ್ದಿಗಳಾಗಿ ಕೃಷಿ ಬಿಕ್ಕಟ್ಟಿನಿಂದ ನರಳುತ್ತಿರುವ ರೈತಾಪಿ ಜನರ ಅಂತಿಮ ತಾಣಗಳಾಗಿವೆ.
ಕೃಷಿ ಬಿಕ್ಕಟ್ಟು ಮತ್ತು ಕಾರ್ಪೊರೇಟ್ ಭೂ ಕಬಳಿಕೆ ಕರ್ನಾಟಕದ ಕಾರ್ಷಿಕ ಬಿಕ್ಕಟ್ಟನ್ನು ಮುನ್ನಡೆಸುತ್ತಿರುವ ಅತಿದೊಡ್ಡ ಹೆಗ್ಗರುತುಗಳಾಗಿದ್ದರೂ ಗ್ರಾಮೀಣ ಜನ ಜೀವನವನ್ನು ಇನ್ನಿಲ್ಲದ ಸಂಕಟದಲ್ಲಿ ಸಿಲುಕಿಸಿದ್ದರೂ ರಾಜ್ಯದ ರಾಜಕೀಯದಲ್ಲಿ ಹಾಗೂ ಮುಖ್ಯ ವಾಹಿನಿ ಚರ್ಚೆಗಳಲ್ಲಿ ಈ ಬಗ್ಗೆ ಚರ್ಚೆಯೇ ಇಲ್ಲವಾಗಿದೆ. ಹಿಂದು-ಮುಸ್ಲಿಂ ಮುಂತಾದ ಕೋಮು ವಿಭಜನೆಯ ಚರ್ಚೆಗಳು, ಕ್ಷುಲ್ಲಕ ವಿಷಯಗಳ ಮೇಲೆ ಭಾವನೆಗಳನ್ನು ಕೆರಳಿಸುವುದೇ ಮುಖ್ಯವಾಹಿನಿಯಲ್ಲಿ ಚರ್ಚೆಗೆ ಒಳಪಡುತ್ತಿರುವಾಗ ಸಿಪಿಐಎಂ ಪಕ್ಷದ ಜನಾಂದೋಲನದಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಕಾರ್ಪೊರೇಟ್ ಭೂ ಕಬಳಿಕೆ ಬಹಳ ಪ್ರಧಾನವಾಗಿ ಚರ್ಚಿಸಲ್ಪಡುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ ಯಾಗಿದೆ.
ಈಗಂತೂ ಆಮೇರಿಕಾ ಮುಂತಾದ ಸಾಮ್ರಾಜ್ಯಶಾಹಿ ದೇಶಗಳ ಸುಂಕ ರಹಿತ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ರಾಜ್ಯದ ಹಾಗೂ ದೇಶದ ಕೃಷಿಕರನ್ನು ಬಲಿ ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ತೀವ್ರ ಪ್ರಮಾಣದಲ್ಲಿ ಹೆಚ್ಚಳಗೊಳ್ಳುವ ಕೃಷಿ ಬಿಕ್ಕಟ್ಟು ಮತ್ತು ಕಾರ್ಪೊರೇಟ್ ಭೂ ಕಬಳಿಕೆಯನ್ನು ರಾಜಕೀಯ ಜನಾಂದೋಲನದ ಕೇಂದ್ರ ಪ್ರಶ್ನೆಯಾಗಿಸಲು ಡಿಸೆಂಬರ್ 21,2025 ರ ಬೃಹತ್ ರೈತ-ಕಾರ್ಮಿಕರ ಪ್ರತಿಭಟನಾ ಸಭೆಯನ್ನು ಯಶಸ್ವಿಗೊಳಿಸುವುದು ಈ ಸಂಕಟ ಅನುಭವಿಸುತ್ತಿರುವ ಮತ್ತು ಈ ಸಂಕಟದ ವಿರುದ್ಧ ಅನಾಥ ಪ್ರಜ್ಞೆ ಯಲ್ಲಿ ಸೆಣಸುತ್ತಿರುವ ಪ್ರತಿಯೊಬ್ಬ ರೈತ -ಕೃಷಿಕೂಲಿಕಾರರ ಕರ್ತವ್ಯವಾಗಿದೆ.
ಇದನ್ನೂ ನೋಡಿ: ಧರ್ಮಸ್ಥಳ| ಕೊಂದವರು ಯಾರು?ಏಕವ್ಯಕ್ತಿ ಪ್ರದರ್ಶನ Janashakthi Media
