ಖಾಕಿ ಚೆಡ್ಡಿ ತೊಟ್ಟ ಬಿಜೆಪಿಯು ತಮ್ಮ ಎದುರಾಳಿಗಳನ್ನು ನಿಂದಿಸಲು ತುಕ್ಡೆಗ್ಯಾಂಗ್ ಎಂಬ ಪದವನ್ನು ಬಳಸುತ್ತದೆ. ನಿಜವಾದ ಟೂಲ್ ಕಿಟ್ ರಾಜಕಾರಣ ಅಥವಾ ಪ್ಯಾಕೇಜ್ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಸಂಕಷ್ಟ ಬಂದಾಗಲೆಲ್ಲ ತುಕ್ಡೆ ಗ್ಯಾಂಗು ಎಂಬಂತಹ ಮಾಯಾವಿ ಪದಗಳನ್ನು ಪ್ಯಾಕೇಜಿನಂತೆ ಒಬ್ಬರಾದ ಮೇಲೆ ಒಬ್ಬರು ಬಳಸುತ್ತಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ಪ್ರಕರಣದಿಂದ ಕಂಗೆಟ್ಟಿರುವ ಸರ್ಕಾರ ಮತ್ತು ಅದರ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ತಾವು ಸಚಿವರೆಂಬ ಜವಾಬ್ಧಾರಿಯನ್ನು ಮರೆತು ನಾಡೋಜ ಬರಗೂರು ರಾಮಚಂದ್ರಪ್ಪ ಮುಂತಾದ ದಮನಿತ ವರ್ಗಗಳ ಧ್ವನಿಗಳನ್ನು ಅವಮಾನಿಸಬೇಕೆಂದೆ ‘ತುಕ್ಡೆ ಗ್ಯಾಂಗ್’ ನವರು ಎಂದು ಅವಮಾನಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಎಂಬ ರೋಗಿಷ್ಠ ಮನಸ್ಥಿತಿಯ, ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯು ಉಸಿರಾಡುತ್ತಿರುವ ಜೀವಿಗಳಲ್ಲಿ ಬ್ರಾಹ್ಮಣರು ಶ್ರೇಷ್ಠರು, ಬ್ರಾಹ್ಮಣರಲ್ಲಿ ಮಾಧ್ವರು ಶ್ರೇಷ್ಠರು ಎಂಬ ನಿಲುವಿನಲ್ಲಿ ಪಾಠಗಳನ್ನು ಮಕ್ಕಳಿಗೆ ಕಲಿಸಲು ಶಿಫಾರಸ್ಸು ಮಾಡಿದೆ. ಸರ್ಕಾರ ಇಂಥ ಕೆಟ್ಟ ಮನುಷ್ಯ ವಿರೋಧಿ ನಿಲುವನ್ನು ಮಕ್ಕಳಿಗೆ ಕಲಿಸಲು ಹೊರಟಿದೆ. ಇದರ ಮೂಲಕ ಶೂದ್ರ-ದಲಿತ- ಮಹಿಳೆಯರಿರುವ ಶೇ. 98 ರಷ್ಟು ಜನರನ್ನು ದಮನಿಸಲು ಹೊರಟಿದ್ದಾರೆ.
ಬುದ್ಧ, ಮಹಾವೀರ, ಬಸವಣ್ಣ, ಕನಕದಾಸರು, ನಾರಾಯಣ ಗುರುಗಳು, ಸಾವಿತ್ರಿ ಫುಲೆ, ಅಂಬೇಡ್ಕರ್, ಕುವೆಂಪು, ಉತ್ತರ ಕರ್ನಾಟಕದ ಕವಿ ಸಾಹಿತಿಗಳು, ಹೆಮ್ಮೆಯ ನಾಡಗೀತೆ, ಮನುವಾದ ವಿರೋಧಿ ಭಕ್ತಿ ಪಂಥ, ದೇವನೂರ ಮಹಾದೇವ ಮುಂತಾದ ಶೂದ್ರ-ದಲಿತ ಬರೆಹಗಾರರು ಹೀಗೆ ಎಲ್ಲರನ್ನೂ ಅವಮಾನಿಸಿ, ನಿರ್ಲಕ್ಷಿಸಿ ಶ್ರಮ ವಿರೋಧಿಯಾದ, ಕುವೆಂಪು ಅವರು ಹೇಳಿದ ಹಾಗೆ ಉತ್ಪಾದಕ ವರ್ಗದವರನ್ನು ನಿರ್ಲಕ್ಷಿಸಿ, ಕೇವಲ ಸಂಗ್ರಾಹಕ ವರ್ಗದ ಜನರು ರಚಿಸಿದ ಜೊಳ್ಳನ್ನು ಮಕ್ಕಳಿಗೆ ಕಲಿಸಲು ಹೊರಟಿದ್ದಾರೆ. ಇದನ್ನು ಪ್ರಶ್ನಿಸಿ ನಾಡಿನಾದ್ಯಂತ ಸ್ವಾಮೀಜಿಗಳು, ಗುರು ಹಿರಿಯರು, ಜನ ಸಾಮಾನ್ಯರು, ವಿದ್ವಾಂಸರು, ಜನಪರರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆಯನ್ನು ಕಂಡು ಕಂಗೆಟ್ಟು ಕೂತಿರುವ ಬಿಜೆಪಿಯ ಕೆಲವು ಶೂದ್ರರಾದ ಹಾಗೂ ಅಗ್ರಹಾರದ ಗೇಟ್‍ಕೀಪರುಗಳಾದವರು ಸೇರಿದಂತೆ ಹಲವರು ‘ ತುಕ್ಡೆ ಗ್ಯಾಂಗ್’ನವರು, ರಾಷ್ಟ್ರೀಯ ಹಿತಾಸಕ್ತಿಗಾಗಿ ಇದೆಲ್ಲ ಸಹಿಸಿಕೊಳ್ಳಿ ಎಂದು ಹೇಳುತ್ತಿದ್ದಾರೆ.
ಹಾಗಿದ್ದರೆ ನಿಜವಾದ ತುಕ್ಡೆ ಗ್ಯಾಂಗ್‍ನವರು ಯಾರು? ಎಂದು ಸ್ವಲ್ಪ ಮೆದುಳಿರುವವರು ಯೋಚಿಸಿದರೆ ಅರ್ಥವಾಗುತ್ತದೆ. ಬಿಜೆಪಿಯಲ್ಲಿರುವವರು ಮತ್ತು ಬಿಜೆಪಿಯ ಸಿದ್ಧಾಂತವನ್ನು ಹುಟ್ಟಿಸಿದವರೆ ತುಕ್ಡೆ ಗ್ಯಾಂಗಿನ ಜನ.
ಯಾರು ತುಕ್ಡೆ ಗ್ಯಾಂಗನವರು ಹೇಳಿ ಬಿಜೆಪಿಗರೆ?
- ಜಗತ್ತಿನ ಶ್ರೇಷ್ಠ ಸಂಸ್ಕøತಿಯಾಗಿದ್ದ, ದ್ರಾವಿಡರೆ ನಿರ್ಮಿಸಿದ್ದ ಸಿಂಧೂ ನಾಗರಿಕತೆಯನ್ನು ಧ್ವಂಸ ಮಾಡಿದ ಆರ್ಯರು, ವಿರಾಟ್ ಪುರುಷನ ತಲೆಯಿಂದ ಬ್ರಾಹ್ಮಣ ಹುಟ್ಟಿದ, ಪಾದಗಳಿಂದ ಶೂದ್ರರು ಹುಟ್ಟಿದರು ಎಂದು ಬರೆದು ಅದನ್ನೆ ಕಾನೂನು ಮಾಡಿ ಜನರನ್ನು ಶಾಶ್ವತವಾಗಿ ಒಡೆದು ಹಾಕಿದ ಸಿದ್ಧಾಂತದವರು ತುಕ್ಡೆ ಗ್ಯಾಂಗಿನವರಲ್ಲವೆ?
- ಇಂದು ತಳಿವಿಜ್ಞಾನ ಹೇಳುತ್ತಿರುವ ಪ್ರಕಾರ 2500 ವರ್ಷಗಳ ಹಿಂದೆ ಅಮಾನುಷವಾದ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿ, ವೃತ್ತಿ, ಹುಟ್ಟುಗಳ ಮೇಲೆ ಮನುಷ್ಯ ಸಮುದಾಯಗಳನ್ನು ಒಡೆದು ಹಾಕಿ ಭಾರತದಲ್ಲಿ ನರಕದಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡಿದವರು ತುಕ್ಡೆ ಗ್ಯಾಂಗಿನವರಲ್ಲವೆ?
[ಈ ಕುರಿತು ಯಾರಿಗಾದರೂ ಆಸಕ್ತಿ ಇದ್ದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕ್ರಾಂತಿ ಮತ್ತು ಪ್ರತಿ ಕ್ರಾಂತಿ ಎಂಬ ಗಹನ ವಿದ್ವತ್ತಿನ ಗ್ರಂಥವನ್ನು ಓದಿ]
- ನಾಗಪುರದ ತಮ್ಮ ಕಛೇರಿಯ ಮೇಲೆ ಇತ್ತೀಚಿನವರೆಗೂ ರಾಷ್ಟ್ರಧ್ವಜವನ್ನು ಹಾರಿಸದೆ ನಿರ್ಲಕ್ಷ್ಯ ಮಾಡಿದವರು ತುಕ್ಡೆ ಗ್ಯಾಂಗಿನವರಲ್ಲವೆ?
- ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮನುವಾದವನ್ನು ಜಾರಿಗೆ ತರಲು ನಿರಂತರ ಪ್ರಯತ್ನಿಸುತ್ತಿರುವವರು ತುಕ್ಡೆ ಗ್ಯಾಂಗಿನವರಲ್ಲವೆ?
- ಗಾಂಧೀಜಿಯರನ್ನು ಕೊಂದ ಗೋಡ್ಸೆಯನ್ನು ಆರಾಧಿಸುವ ಸಂಸ್ಕøತಿಯನ್ನು ಹುಟ್ಟು ಹಾಕಿದವರು ತುಕ್ಡೆ ಗ್ಯಾಂಗಿನವರಲ್ಲವೆ?
- ಇಟಲಿಯ ಮುಸಲೋನಿಯಿಂದ ಫ್ಯಾಸಿಸಂ ಅನ್ನು ಕಲಿತು ಬಂದ ಮೂಂಜೆಯವರು ತಮ್ಮ ಶಿಷ್ಯ ಹೆಡಗೆವಾರ್ ಮೂಲಕ ಆರ್‍ಎಸ್‍ಎಸ್ ಅನ್ನು ಸ್ಥಾಪಿಸಿ ಒಂದು ವರ್ಗದ ಹಿತಾಸಕ್ತಿಯನ್ನು ಪೊರೆಯಲು ಕಂಕಣ ತೊಟ್ಟಿದ್ದು ತುಕ್ಡೆವಾದವಲ್ಲವೆ?
- ಹಿಟ್ಲರ್‍ನನ್ನು ರಾಕ್ಷಸ ಎಂದೂ ಅವನ ಸಿದ್ಧಾಂತವನ್ನು ದುಷ್ಟ, ಸೈತಾನ ಸಿದ್ಧಾಂತ ಎಂದು ತೀರ್ಮಾನಿಸಿ ಅದನ್ನು ಇಡೀ ಯುರೋಪಿನಿಂದಲೆ ಹೊಡೆದೋಡಿಸುತ್ತಿದ್ದರೂ ಆರ್‍ಎಸ್‍ಎಸ್ ಮಾತ್ರ ಹಿಟ್ಲರನ ಯೂನಿಫಾರ್ಮು, ಲಾಂಛನ ಇತ್ಯಾದಿಗಳನ್ನು ಹೊತ್ತುಕೊಂಡು ಮೆರೆಯುತ್ತಿರುವುದು, ತಮ್ಮ ಮೆದುಳು, ಹೃದಯ ಎಲ್ಲವೂ ಇಟಲಿ, ಜರ್ಮನಿಗಳಲ್ಲಿ ಇದ್ದರೂ ಸಹ ಸುಳ್ಳು ಸುಳ್ಳೆ ಭಾರತೀಯರು ಎಂದು ಕರೆದುಕೊಳ್ಳುತ್ತಿರುವ ಈ ಜನರ ವಾದ ತುಕ್ಡೆವಾದವಲ್ಲವೆ?
- ಮನುಷ್ಯ ಕಲ್ಯಾಣಕ್ಕಾಗಿ ದುಡಿದ ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ, ನಾರಾಯಣಗುರು, ಅಂಬೇಡ್ಕರ್, ಕುವೆಂಪು ಮುಂತಾದ ಮಹನೀಯರನ್ನು ಅವಮಾನಿಸಿ, ನಿರ್ಲಕ್ಷಿಸಿರುವ ಮನುವಾದಿ ಸಿದ್ಧಾಂತದವರು ಹಾಗೂ ಒಂದು ಗುಂಪು ಮಾತ್ರ ಶ್ರೇಷ್ಠ ಉಳಿದವರೆಲ್ಲ ನಿಕೃಷ್ಟರು ಎಂದು ಭಾವಿಸಿ ಪಠ್ಯ ಪುಸ್ತಕ ಮಾಡಿರುವ ಸಿದ್ಧಾಂತದವರು ತುಕ್ಡೆ ಗ್ಯಾಂಗಿನವರಲ್ಲವೆ?
- ಒಂದು ಗುಂಪಿನ ಹಿತಾಸಕ್ತಿಯನ್ನು ರಾಷ್ಟ್ರೀಯ ಹಿತಾಸಕ್ತಿ ಎಂದು ಬಿಂಬಿಸುತ್ತಿರುವ ಕೆಟ್ಟ ಸಿದ್ಧಾಂತದ ಜನರು ತುಕ್ಡೆ ಗ್ಯಾಂಗಿನವರಲ್ಲವೆ?
- ಮನುಷ್ಯ ವಿರೋಧಿ ಮನುವಾದಿಗಳೆ ಕೇಳಿಸಿಕೊಳ್ಳಿ; ನಮ್ಮದು ಬುದ್ಧ, ಮಹಾವೀರ, ಬಸವಣ್ಣ, ಕನಕದಾಸ, ನಾರಾಯಣ ಗುರು, ಅಂಬೇಡ್ಕರ್, ಕುವೆಂಪು ಮುಂತಾದ ಜಗತ್ತಿನ ಶ್ರೇಷ್ಠ ದಾರ್ಶನಿಕರ ತತ್ವ. ಇಡೀ ಜಗತ್ತಿನಲ್ಲಿ ಶೋಷಿತರು, ದುಃಖಿತರು ಇರಬಾರದು ಎಂದು ಹೇಳಿಕೊಟ್ಟವರು ನಮ್ಮ ನಾಯಕರು. ಇವನಾರವನೆನ್ನದೆ ಇವ ನಮ್ಮವ ಎಂದು ಹೇಳಿಕೊಟ್ಟ ಅಣ್ಣ ಬಸವಣ್ಣನ ದಾರಿ ನಮ್ಮದು. ಕುಲ ಕುಲವೆಂದು ಹೊಡೆದಾಡಬೇಡಿ ಎಂದ ಕನಕದಾಸರ ಪಥ ನಮ್ಮದು. ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಪಂಪ ನಮ್ಮ ನಾಯಕ. ನೀನೆಲ್ಲೆ ಇದ್ದರೂ ನೀನೇರುವ ಮಲೆ ಅದೆ ಸಹ್ಯಾದ್ರಿ, ನೀನ್ ಕುಡಿಯುವ ನೀರ್ ಕಾವೇರಿ ಎಂದ, ನಿರಂಕುಶ ಮತಿಗಳಾಗಿ ಎಂದು ಕರೆಕೊಟ್ಟ ಕುವೆಂಪು ಅವರು ನಮ್ಮ ನಾಯಕರು. ಅಸಮಾನತೆಯನ್ನು ತೊಡೆದು ಹಾಕಿ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳಿದ ಬಾಬಾ ಸಾಹೇಬರು [ ಮನುಸ್ಮೃತಿಯು ಶೂದ್ರರನ್ನು ಪಶುಗಳಿಗಿಂತ ಕನಿಷ್ಠವಾಗಿ ಮಾಡಿ ನ್ಯಾಯ ವ್ಯವಸ್ಥೆಯನ್ನು ಸೃಷ್ಟಿಸಿತ್ತು] ನಮ್ಮ ಮಾರ್ಗದರ್ಶಕರು. ನಾವು ಈ ರಾಷ್ಟ್ರದ ವಾರಸುದಾರರು. ತುಕ್ಡೆ ಗ್ಯಾಂಗು ಎಂದು ಬಾಯಿ ಬಡಿದುಕೊಳ್ಳುವ ಬಿಜೆಪಿಗರೆ ಹೇಳಿ ನಿಮ್ಮ ಸಿದ್ಧಾಂತ ಯಾವುದು? ಯಾರು ನಾಯಕರು?