ʻಅಗ್ನಿʼಪಥ್‌ ಯೋಜನೆ ವಿರೋಧಿಸಿ ಮುಂದುವರಿದ ಪ್ರತಿಭಟನೆ

  • ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಗೆ ವ್ಯಾಪಕ ವಿರೋಧ
  • ಬಿಹಾರದಲ್ಲಿ ಹಿಂಸೆಗೆ ತಿರುಗಿದ ಎರಡನೇ ದಿನದ ಪ್ರತಿಭಟನೆ
  • ರೈಲ್ವೆ ನಿಲ್ದಾಣಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿ

ನವದೆಹಲಿ: ಕೇಂದ್ರ ಸರ್ಕಾರ  ಘೋಷಿಸಿರುವ  ಅಲ್ವಾವಧಿಯ ಸೇನಾ ನೇಮಕಾತಿ ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ, ಜಾರ್ಖಂಡ್ ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದೆ. ಬಿಹಾರದ ಚಾಪ್ರಾದಲ್ಲಿ ಪ್ರತಿಭಟನೆ ನಡೆಸಿದ ಯುವಕರು, ಟೈರ್ ಗೆ ಬೆಂಕಿ ಹಚ್ಚಿಗೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ ವೊಂದನ್ನು ಧ್ವಂಸಗೊಳಿಸಿದರು.

ಬುಧವಾರ ಆರಂಭವಾಗಿದ್ದ ಪ್ರತಿಭಟನೆ, ಗುರುವಾರ ಕೂಡ ಮುಂದುವರಿದಿದ್ದು, ಬಿಹಾರದ ಹಲವು ಭಾಗಗಳಲ್ಲಿ ಸತತ ಎರಡನೇ ದಿನ ರೈಲು ಮತ್ತು ವಾಹನ ಸಂಚಾರಕ್ಕೆ ಸೇನಾ ಆಕಾಂಕ್ಷಿಗಳು ಅಡ್ಡಿಪಡಿಸಿದರು. ಭಭುವಾ ರೋಡ್ ರೈಲ್ವೆ ನಿಲ್ದಾಣಕ್ಕೆ ನುಗ್ಗಿದ ಪ್ರತಿಭಟನಾಕಾರರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿನ ಗಾಜಿನ ಕಿಟಕಿಗಳನ್ನು ಲಾಠಿಗಳಿಂದ ಒಡೆದು ಹಾಕಿದರು. ಅಲ್ಲದೆ, ಒಂದು ಕೋಚ್‌ಗೆ ಬೆಂಕಿ ಕೂಡ ಹಾಕಿದರು. ಆರಾಹ್‌ದಲ್ಲಿನ ರೈಲ್ವೆ ನಿಲ್ದಾಣದಿಂದ ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು. ‘ಇಂಡಿಯನ್ ಆರ್ಮಿ ಲವರ್ಸ್’ ಎಂಬ ಬ್ಯಾನರ್ ಹಿಡಿದು, ಹೊಸ ನೇಮಕಾತಿ ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ : “ಉದ್ಯೋಗ ನೀಡಿ, ಇಲ್ಲದಿದ್ದರೆ ಕೊಂದುಬಿಡಿ” : ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆ

ನಾವಡಾದಲ್ಲಿ ಯುವಕರ ಗುಂಪೊಂದು ರಸ್ತೆ ಮಧ್ಯೆ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದೆ. ಅಗ್ನಿಪಥ್ ಯೋಜನೆ ಕೈಬಿಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಸಹರ್ಸಾದಲ್ಲಿ ಕೂಡ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದ್ದು, ಅವರನ್ನು ನಿಯಂತ್ರಿಸಲು ತೆರಳಿದ ಪೊಲೀಸರ ಮೇಲೆ ಕಲ್ಲುತೂರಾಟ ನಡೆದಿದೆ. ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಪೀಠೋಪಕರಣಗಳನ್ನು ಎಸೆದು ಬೆಂಕಿ ಹಚ್ಚಿದ್ದಾರೆ. ರೈಲ್ವೆ ಸಿಬ್ಬಂದಿ ಅಗ್ನಿ ನಂದಿಸುವ ಸಾಧನಗಳ ಮೂಲಕ ಬೆಂಕಿ ಆರಿಸಿದ್ದಾರೆ.

ರಾಜಸ್ಥಾನದಲ್ಲಿ ಪ್ರತಿಭಟನೆ :  ಅಗ್ನಿಪಥ್ ಯೋಜನೆ ವಿರೋಧಿಸಿ ರಾಜಸ್ತಾನದ ಜೈಪುರದಲ್ಲಿ ಸುಮಾರು 150 ಮಂದಿ ಅಜ್ಮೇರ್- ದಿಲ್ಲಿ ಹೆದ್ದಾರಿಗೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಅಲ್ಲಿಂದ ಚೆದುರಿಸಿ. ಹೆದ್ದಾರಿ ತೆರವುಗೊಳಿಸಲಾಯಿತು. 10 ಮಂದಿಯನ್ನು ಬಂಧಿಸಲಾಗಿದೆ. ಸೇನೆ ಸೇರುವ ಹಂಬಲದೊಂದಿಗೆ ಸಾವಿರಾರು ಜನರು ಹಲವು ವರ್ಷಗಳಿಂದ ತಯಾರಿ ನಡೆಸುತ್ತಿದ್ದಾರೆ. ಆದರೆ ಅಗ್ನಿಪಥ್ ಯೋಜನೆಯು ಅವರ ಪ್ರಯತ್ನಗಳಿಗೆ ಹಿನ್ನಡೆ ಉಂಟು ಮಾಡಲಿದೆ. ಅಗ್ನಿಪಥ್ ಯೋಜನೆಯಡಿ ಅವರಿಗೆ ನೇಮಕಾತಿ ಆದರೂ, ಉದ್ಯೋಗ ಭದ್ರತೆ ಮತ್ತು ಪಿಂಚಣಿಯಂತಹ ಪ್ರಯೋಜನಗಳು ಅವರಿಗೆ ಸಿಗುವುದಿಲ್ಲ. ಇದು ಸೇನೆಗೆ ಸೇರುವ ಬಯಕೆಯುಳ್ಳ ಯುವಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದು ಮತ್ತಷ್ಟು ತೀವ್ರಗೊಳ್ಳುವ ಸೂಚನೆ ನೀಡಿದೆ. ಜಾರ್ಖಂಡ್‌ನಲ್ಲಿಯೂ ಪ್ರತಿಭಟನೆ ನಡೆದ ಬಗ್ಗೆ ವರದಿಯಾಗಿದೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

Donate Janashakthi Media

Leave a Reply

Your email address will not be published. Required fields are marked *