ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಗೆ ದೇಶದ ಹಲವೆಡೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದ್ದು, ಉದ್ಯೋಗದ ನಿರೀಕ್ಷೆಯಲ್ಲಿದ್ದ ಸಹಸ್ರಾರು ಯುವಜನತೆಯ ಆಕಾಂಕ್ಷೆಗಳಿಗೆ ತಣ್ಣಿರೇರಚಿದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಬಿಹಾರ, ತೆಲಂಗಾಣದಲ್ಲಿ ಪ್ರಬಲ ಹೋರಾಟ ಇಂದು ಸಹ ಮುಂದುವರೆದಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಮಧ್ಯಪ್ರದೇಶದಲ್ಲೂ ಹಿಂಸಾಚಾರ ನಡೆದಿದೆ. ಈ ಸಂದರ್ಭದಲ್ಲಿ ಹೋರಾಟಗಾರರ ಆಕ್ರೋಶವನ್ನು ತಣ್ಣಗಾಗಿಸಲು ಅಗ್ನಿಪಥ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಕೆಲವು ಮಾರ್ಪಾಟುಗಳನ್ನು ಮಾಡಿದೆ.
ಇದನ್ನು ಓದಿ: ಅಗ್ನಿಪಥ ಯೋಜನೆ ರದ್ದುಗೊಳಿಸಿ, ನಿಯಮಿತ ನೇಮಕಾತಿ ತುರ್ತಾಗಿ ಆರಂಭಿಸಿ: ಸಿಪಿಐ(ಎಂ)
ಅಗ್ನಿವೀರರ ಗರಿಷ್ಠ ವಯೋಮಿತಿಯನ್ನು 21ರಿಂದ 23ಕ್ಕೆ ಏರಿಕೆ ಮಾಡಿದ್ದು, ಅಗ್ನಿಪಥ್ ಯೋಜನೆಯಲ್ಲಿ ಇನ್ನೊಂದಿಷ್ಟು ಬದಲಾವಣೆಗಳನ್ನು ತಂದಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ‘ಅಗ್ನಿವೀರ್’ಗಳಿಗೆ ಶೇ. 10ರಷ್ಟು ಮೀಸಲಾತಿ ನೀಡಲಾಗುವುದೆಂದು ಘೋಷಿಸಿದೆ. ಎರಡು ಅರೆಸೇನಾ ಪಡೆಗಳಲ್ಲಿ ನೇಮಕಾತಿಗಾಗಿ ಅಗ್ನಿವೀರ್‌ಗಳಿಗೆ ನಿಗದಿತ ಗರಿಷ್ಠ ವಯಸ್ಸಿನ ಮಿತಿ ಸಡಿಲಿಕೆಯನ್ನು ಗೃಹ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಮೊದಲ ಅವಧಿಯ ಪಡೆಗಳ ತಂಡಕ್ಕೆ ನಿಗದಿತ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಸಿಆರ್‌ಪಿಎಫ್‌ಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಹೊಸ ಸೇನಾ ನೇಮಕಾತಿ ಯೋಜನೆಯ ವಯೋಮಿತಿ 21ರಿಂದ 23ಕ್ಕೆ ಹೆಚ್ಚಿಸುವುದಾಗಿ ಘೋಷಣೆ ಮಾಡಿದ್ದು, ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿ ನಡೆಯದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಇದನ್ನು ಓದಿ: ‘ಅಗ್ನಿಪಥ್’ ಬಿಜೆಪಿ ಸರಕಾರದ ಹುಸಿ ರಾಷ್ಟ್ರವಾದ ಮತ್ತು ನಕಲಿ ದೇಶಪ್ರೇಮವನ್ನು ಬಯಲಿಗೆಳೆದಿದೆ- ಸಿಐಟಿಯು
ಸಾವಿರಾರು ಹುದ್ದೆಗಳು ಖಾಲಿ ಇವೆ;
ಪ್ರಸ್ತುತ, ಅರೆಸೈನಿಕ ಪಡೆಗಳ ಐದು ವಿಭಾಗಗಳಲ್ಲಿ 73,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್), ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ), ಶಾಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ) ಮತ್ತು ಕೇಂದ್ರ ಕೈಗಾರಿಕಾ ಭದ್ರತೆ ಫೋರ್ಸ್ (ಸಿಐಎಸ್ಎಫ್)ಯ ಹುದ್ದೆಗಳು ಖಾಲಿ ಇವೆ. ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ 73,219 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳು ಸೂಚಿಸುತ್ತವೆ. ಅಲ್ಲದೆ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೊಲೀಸ್ ಪಡೆಗಳಲ್ಲಿ 18,124 ಹುದ್ದೆಗಳು ಖಾಲಿ ಇವೆ.