ದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದ ಬಗ್ಗೆ ಊಹಾಪೋಹಗಳು ಮತ್ತು ಕಳವಳಗಳು ಹೆಚ್ಚಾಗುತ್ತಿದ್ದು, ಈ ವರೆಗೆ ಅಧಿವೇಶನಕ್ಕೆ ಯಾವುದೇ ಕಾರ್ಯಸೂಚಿಯನ್ನು ಪಟ್ಟಿ ಮಾಡದ ಕಾರಣ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಈ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದು, ಮಣಿಪುರ ಹಿಂಸಾಚಾರ ಸೇರಿದಂತೆ ಒಂಬತ್ತು ವಿಷಯಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ಪ್ರಸ್ತಾಪಿಸಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನ ಸೆಪ್ಟೆಂಬರ್ 18 ರಿಂದ 22 ರವರೆಗೆ ನಡೆಯಲಿದೆ.
ಸೋನಿಯಾ ಗಾಂಧಿ ಅವರು ಪಟ್ಟಿ ಮಾಡಿದ ವಿಷಯಗಳಲ್ಲಿ ಕೇಂದ್ರ-ರಾಜ್ಯ ಸಂಬಂಧಗಳು, ಕೋಮು ಉದ್ವಿಗ್ನ ಪ್ರಕರಣಗಳ ಹೆಚ್ಚಳ, ಚೀನಾದಿಂದ ಗಡಿ ಉಲ್ಲಂಘನೆಗಳ ವಿಚಾರಗಳೂ ಸೇರಿವೆ. “ಇತರ ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆಯಿಲ್ಲದೆ ಈ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂಬುವುದನ್ನು ನಾನು ಗಮನಿಸಿದ್ದೇನೆ. ನಮ್ಮಲ್ಲಿ ಯಾರಿಗೂ ಅದರ ಕಾರ್ಯಸೂಚಿಯ ಕಲ್ಪನೆಯಿಲ್ಲ. ಎಲ್ಲಾ ಐದು ದಿನಗಳನ್ನು ಸರ್ಕಾರಿ ವ್ಯವಹಾರಕ್ಕೆ ಮೀಸಲಿಡಲಾಗಿದೆ ಎಂದು ನಮಗೆ ತಿಳಿಸಲಾಗಿದೆ” ಎಂದು ಗಾಂಧಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೌರಿ ಹತ್ಯೆಯ ಯಾರೊಬ್ಬರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸದನದ ವ್ಯವಹಾರದಲ್ಲಿ ಯಾವುದೇ ಅಜೆಂಡಾವನ್ನು ಚರ್ಚಿಸದೆ ಅಥವಾ ಪಟ್ಟಿ ಮಾಡದಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
” ‘ಇಂಡಿಯಾ’ ಒಕ್ಕೂಟದ ಎಲ್ಲಾ ಪಕ್ಷಗಳ ಸದನದ ನಾಯಕರು ನಿನ್ನೆ ಸಂಜೆ ಸಭೆ ನಡೆಸಿ ಈ ವಿಶೇಷ ಅಧಿವೇಶನದ ಯುದ್ಧ ತಂತ್ರವನ್ನು ನಿರ್ಧರಿಸಿದ್ದಾರೆ. ಒಕ್ಕೂಟದ ಪಕ್ಷಗಳು ಅಧಿವೇಶನವನ್ನು ಬಹಿಷ್ಕರಿಸುವುದಿಲ್ಲ ಎಂದು ಅವರೆಲ್ಲರೂ ತೀರ್ಮಾನಿಸಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಇದೊಂದು ಅವಕಾಶ. ಸಮಯ ಸೀಮಿತವಾಗಿದ್ದರೂ ಎಲ್ಲಾ ಪಕ್ಷಗಳು ತಮ್ಮ ಸಮಸ್ಯೆಗಳನ್ನು ಪ್ರಸ್ತುತಪಡಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ” ಎಂದು ರಮೇಶ್ ಅವರು ಹೇಳಿದ್ದಾರೆ.
ಮಂಗಳವಾರ ‘ಇಂಡಿಯಾ’ ಒಕ್ಕೂಟದ ವಿರೋಧ ಪಕ್ಷಗಳು ಸಭೆ ನಡೆಸಿ, ವಿಶೇಷ ಅಧಿವೇಶನದ ಕಾರ್ಯಸೂಚಿಯಲ್ಲಿ ಸರ್ಕಾರ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಒಗ್ಗೂಡಿ ‘ಅದಾನಿ’ ವಿಷಯವನ್ನು ಪ್ರಸ್ತಾಪಿಸಲು ವಿರೋಧ ಪಕ್ಷಗಳು ಸಭೆಯಲ್ಲಿ ನಿರ್ಧರಿಸಿವೆ.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಆಹ್ವಾನಿಸದಿರುವುದೇ ಸನಾತನ ಧರ್ಮದ ತಾರತಮ್ಯ: ಉದಯನಿಧಿ ಸ್ಟಾಲಿನ್
ಕಾರ್ಯಸೂಚಿಯನ್ನು ಬಹಿರಂಗಪಡಿಸದೆ ವಿಶೇಷ ಅಧಿವೇಶನವನ್ನು ಕರೆದಿದ್ದಕ್ಕಾಗಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಪ್ರಜಾಪ್ರಭುತ್ವವನ್ನು ನಡೆಸುವ ಮಾರ್ಗ ಇದು ಅಲ್ಲ. ಮೋದಿ ಸರ್ಕಾರ ಪ್ರತಿದಿನ ಭವಿಷ್ಯದ ‘ಕಾರ್ಯಸೂಚಿ’ಯನ್ನು ಮಾಧ್ಯಮಗಳಲ್ಲಿ ಬಿತ್ತರಿಸುತ್ತದೆ. ಆ ಮೂಲಕ ಜನರಿಗೆ ಹೊರೆಯಾಗುತ್ತಿರುವ ನೈಜ ಸಮಸ್ಯೆಗಳಿಂದ ದಿಕ್ಕು ತಪ್ಪಿಸುತ್ತದೆ. ಬೆಲೆ ಏರಿಕೆ, ನಿರುದ್ಯೋಗ, ಮಣಿಪುರ, ಚೀನಾದ ಅಕ್ರಮಗಳು, ಸಿಎಜಿ ವರದಿಗಳು, ಹಗರಣಗಳು ಮತ್ತು ಸಂಸ್ಥೆಗಳ ದುರ್ಬಲಗೊಳಿಸುವಿಕೆಯಂತಹ ಪ್ರಮುಖ ಸಮಸ್ಯೆಗಳನ್ನು ಬದಿಗಿಟ್ಟು ನಮ್ಮ ಜನರನ್ನು ವಂಚಿಸಲು ಬಿಜೆಪಿ ಬಯಸುತ್ತದೆ” ಎಂದು ಅವರು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರಿಯಾನ್ ಕೂಡಾ ವಿಶೇಷ ಅಧಿವೇಶನದ ಬಗ್ಗೆ ಟ್ವಿಟರ್‌ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದು, ಖಾಲಿ ಕಾಗದದ ಚಿತ್ರವನ್ನು ಪೋಸ್ಟ್ ಮಾಡಿ, “ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆದಿದೆ, ಹಿಯರ್ ಈಸ್ ದಿ ಅಜೆಂಡಾ(ಇಲ್ಲಿದೆ ಅಜೆಂಡಾ)” ಎಂಬ ಶಿರ್ಷಿಕೆ ನೀಡಿದ್ದಾರೆ.
PM @narendramodi government calls a Special Session of #Parliament
Here’s the agenda👇 pic.twitter.com/l0hI8QNkTx
— Derek O'Brien | ডেরেক ও'ব্রায়েন (@derekobrienmp) September 6, 2023
ಇದನ್ನೂ ಓದಿ: ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನ ಯಾವಾಗ ಮರುಸ್ಥಾಪಿಸುತ್ತೀರಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಇಂಡಿಯಾ ಒಕ್ಕೂಟದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೆರೆಕ್ ಒ’ಬ್ರಿಯಾನ್ ಅವರು, “ಈ ಅಧಿವೇಶನದ ಕಾರ್ಯಸೂಚಿ ಎಲ್ಲಿದೆ? ಅದನ್ನು ಏಕೆ ರಹಸ್ಯವಾಗಿಡಲಾಗಿದೆ? ಸಂಸದೀಯ ಪ್ರಜಾಪ್ರಭುತ್ವದಲ್ಲಿ ಅಜೆಂಡಾವನ್ನು ಯಾಕೆ ರಹಸ್ಯವಾಗಿಡಲಾಗಿದೆ?” ಎಂದು ಪ್ರಶ್ನಿಸಿದ್ದಾರೆ. ಅವರು ಇಂಡಿಯಾ ಬ್ಲಾಕ್‌ನ ಸಭೆಯಲ್ಲಿ ಭಾಗವಹಿಸಿದ್ದರು, ಅವರು
ಇಂಡಿಯಾ ಒಕ್ಕೂಟದ ಮತ್ತೊಂದು ಮಿತ್ರ ಪಕ್ಷವಾದ ಜನತಾ ದಳ-ಯುನೈಟೆಡ್ ಕೂಡ ಬಿಜೆಪಿ ಸರ್ಕಾರದ ಈ ಕ್ರಮವನ್ನು ಟೀಕಿಸಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಮಾತನಾಡಿ, “ಬಿಜೆಪಿ ಸರ್ಕಾರ ವಿಶೇಷ ಅಧಿವೇಶನದ ಅಜೆಂಡಾವನ್ನು ಹೇಳಬೇಕಿತ್ತು…ಆದರೆ ಈ ವರೆಗೂ ಹೇಳಿಲ್ಲ. ಅಧಿವೇಶನದಲ್ಲಿ ಏನು ಚರ್ಚಿಸಲಾಗುವುದು ಎಂಬುದರ ಕುರಿತು ಸ್ಪಷ್ಟವಾದ ಅಜೆಂಡಾ ಇಲ್ಲ… ಅವರು ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ವಿಡಿಯೊ ನೋಡಿ: ಗೌರಿ ಕೊಂದವರು ಯಾರು? ಕೇಸ್ ಎಲ್ಲಿಗೆ ಬಂತು? – ವಿಶ್ಲೇಷಣೆ : ಕೆ.ನೀಲಾ Janashakthi Media