ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು ಫೆ 20 : ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ಬೆಂಗಳೂರು ಉತ್ತರ-ದಕ್ಷಿಣ ಜಿಲ್ಲಾ ಸಮಿತಿಗಳಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಪೆಟ್ರೋಲ್, ಡಿಸೆಲ್ ಹಾಗೂ ಅಡುಗೆ ಅನಿಲ (ಗ್ಯಾಸ್), ಹಣ್ಣು ತರಕಾರಿ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಜನಸಾಮಾನ್ಯರ, ಮಧ್ಯಮ ವರ್ಗದವರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಸರ್ಕಾರವೇ ಪೆಟ್ರೋಲ್/ಡೀಸೆಲ್ ಬೆಲೆ ಏರಿಸುವುದರ ಮೂಲಕ ಎಲ್ಲಾ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಜತೆಯಲ್ಲೇ ಅಡುಗೆ ಅನಿಲದ ಬೆಲೆಯನ್ನೂ ತೀವ್ರವಾಗಿ ಹೆಚ್ಚಿಸಿದೆ.

ಮೋದಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ರೂ.72 ರ ಆಸುಪಾಸಿನಲ್ಲಿತ್ತು, ಆಗ ಅಂತರಾಷ್ಟ್ರೀಯ ಕಚ್ಛಾತೈಲದ ಬೆಲೆ ಒಂದು ಬ್ಯಾರೆಲ್ಲಿಗೆ 110 ಡಾಲರುಗಳ ಆಸುಪಾಸಿನಲ್ಲಿತ್ತು. ಈಗ ಅಂತರಾಷ್ಟ್ರೀಯ ಕಚ್ಛಾತೈಲದ ಬೆಲೆ 56 ಡಾಲರ್ ಗೆ ಇಳಿದಿದೆ. 2014ರ ತೈಲ ಬೆಲೆಗೆ ಹೋಲಿಸಿದರೆ ಈಗ ಅದು ಸರಿ ಸುಮಾರು ಅರ್ಧಕ್ಕೆ ಇಳಿದಿದೆ. ಅಂದರೆ ಪೆಟ್ರೋಲ್ ಬೆಲೆ ರೂ.36 ಕ್ಕೆ ಇರಬೇಕಿತ್ತು. ಆದರೆ ಅದು ಬೆಂಗಳೂರು ನಗರದಲ್ಲಿ ರೂ.90 ನ್ನುದಾಟಿ ರೂ. 100 ರತ್ತ ವೇಗದಿಂದ ಧಾವಿಸುತ್ತಿದೆ. ಹೆಚ್ಚುವರಿ ರೂ.೫೪ ಎಲ್ಲಿಗೆ ಹೋಯಿತು? ಎಂದು ಪ್ರತಿಭಟನೆಕಾರರು ಪ್ರಶ್ನಿಸಿದರು.

ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ

 

ಪ್ರತಿಭಟನೆಯನ್ನು ಉದ್ದೇಶಿಸಿ ಉತ್ತರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ ಮಾತನಾಡಿ,  ಅಬಕಾರಿ ಸುಂಕಗಳಲ್ಲಿನ ಈ ಹೆಚ್ಚಳವು ಕಾರ್ಪೊರೇಟ್‌ಗಳು ಮತ್ತು ಆದಾಯ ತೆರಿಗೆ ಪಾವತಿದಾರರಿಗೆ ಒದಗಿಸಿರುವ ತೆರಿಗೆ ರಿಯಾಯಿತಿಗಳಿಂದಾಗಿ ಸರ್ಕಾರದ ಆದಾಯಕ್ಕೆ ಆಗುತ್ತಿರುವ ನಷ್ಟವನ್ನು ಭರ್ತಿ ಮಾಡಿಕೊಳ್ಳಲಿಕ್ಕಾಗಿ ಎಂಬುದು ಸ್ಪಷ್ಟ. ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಆದಾಯದಲ್ಲಿಕಳೆದ ವರ್ಷದ ಅನುಕ್ರಮವಾಗಿ 6.81 ಮತ್ತು 6.38 ಲಕ್ಷ ಕೋಟಿಗಳಿಂದ ಗಮನಾರ್ಹ ಇಳಿಕೆ ಕಂಡುಬಂದಿದೆ. ಅವು 2020-21ರ ಬಜೆಟ್‌ನಲ್ಲಿ ತೋರಿಸಿರುವಂತೆ ಅನುಕ್ರಮವಾಗಿ 5.47 ಮತ್ತು 5.61 ಲಕ್ಷ ಕೋಟಿ ರೂ.ಗಳಿಗೆ ಇಳಿದಿವೆ.

ಮೋದಿ ಸರ್ಕಾರ ಶ್ರೀಮಂತರು ಮತ್ತು ತಮ್ಮ ಬಂಟರಿಗೆ ಬಕ್ಷೀಸು ಕೊಡಲು ಈ ಅಬಕಾರಿ ಸುಂಕಗಳನ್ನು ಹೆಚ್ಚಿಸುವ ಮೂಲಕ ಪ್ರಯತ್ನಿಸುತ್ತಿದೆ. ಇದು ಕೊರೊನ ಮಹಾಸೋಂಕು ಮತ್ತು ಆರ್ಥಿಕ ಹಿಂಜರಿತದಿಂದ ತಮ್ಮ ಜೀವನೋಪಾಯದ ಮೇಲೆ ಈಗಾಗಲೇ ಇಬ್ಬಗೆಗಳ ದಾಳಿಯಿಂದ ನರಳುತ್ತಿರುವ ಜನರ ಮೇಲೆ ಮತ್ತಷ್ಟು ಹೊರೆಗಳನ್ನು ಹೇರುತ್ತಿದೆ ಎಂದು ಆರೋಪಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಹೆಚ್ಚಳವು ಸಾರಿಗೆ ವೆಚ್ಚಗಳು ಹೆಚ್ಚಲು ಕಾರಣವಾಗುತ್ತದೆ ಮತ್ತು ಇದು ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸುತ್ತದೆ. ಇದರಿಂದ ಸರಣಿ-ಸರಣಿಯಾಗಿ ಏರುವ ಹಣದುಬ್ಬರದ ಪರಿಣಾಮವಾಗಿ ಆರ್ಥಿಕ ಹಿಂಜರಿತ ಇನ್ನಷ್ಟು ಹದಗೆಡುತ್ತದೆ. ಆದ್ದರಿಂದ ಈ ಅಬಕಾರಿ ಸುಂಕಗಳನ್ನು ಕೇಂದ್ರ ಸರಕಾರ ಹಿಂತೆಗೆದುಕೊಳ್ಳಬೇಕೆಂದು ಜಿಲ್ಲಾ ಮುಖಂಡರಾದ ಕೆ.ಎಸ್. ವಿಮಲಾರವರು ಆಗ್ರಹಿಸಿದರು. ಮುಖಂಡರಾದ ಬಿ.ಎನ್.ಮಂಜುನಾಥ್, ಲಿಂಗರಾಜು, ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಎಚ್.ಎನ್.ಗೋಪಾಲಗೌಡ, ಗೋಪಾಲಕೃಷ್ಣ ಅರಳಹಳ್ಳಿ ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *