ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಮೂಲಕ ಆರೋಗ್ಯ ತಪಾಸಣೆ ಮಾಡುವ ಯೋಜನೆಗೆ ಕಾರ್ಯದೇಶ ನೀಡಿದ್ದು ಇದು ಕಾರ್ಮಿಕರಿಗೆ ಅವರ ಕುಟುಂಬಗಳಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಿಲ್ಲ ಆದ್ದರಿಂದ ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ರಾಜ್ಯಾದ್ಯಂತ ನಡೆಯುವ ಈ ಆರೋಗ್ಯ ತಪಾಸಣೆ ಶಿಬಿರಗಳಿಗೆ ಹಾಜರಾಗದೇ ಸಾಮೂಹಿಕ ಬಹಿಷ್ಕಾರ ಹಾಕಿ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಕರೆ ನೀಡಿದೆ. ಕಟ್ಟಡ ಕಾರ್ಮಿಕ
ಖಾಸಗಿ ಆಸ್ಪತ್ರೆಗಳ ಜತೆ ಶಾಮೀಲಾಗಿ ಕಲ್ಯಾಣ ಮಂಡಳಿಯ ನೂರಾರು ಕೋಟಿ ನಿಧಿಯನ್ನು ಬಳಸಿ ಈ ಕಾರ್ಯಕ್ರಮ ಜಾರಿಗೊಳಿಸಲು ಕಲ್ಯಾಣ ಮಂಡಳಿಯಲ್ಲಿ ಚರ್ಚಿಸದೆ ತೀರ್ಮಾನ ಕೈಗೊಂಡಿದೆ.ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಇದೇ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗಿತ್ತು ಇದರಿಂದ ಕಾರ್ಮಿಕರಿಗೆ ಅವರ ಕುಟುಂಬದ ಸದಸ್ಯರಿಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಿಐಟಿಯು ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿಯವರು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ನಡೆಸುವ ರಕ್ತ ಪರೀಕ್ಷಾ ವರದಿಗಳು ಎರಡು ಮೂರು ತಿಂಗಳ ಮೇಲೆ ನೀಡಲಾಗಿದೆ ಇನ್ನೂ ಸಾವಿರಾರು ಕಾರ್ಮಿಕರಿಗೆ ಇದುವರೆಗೂ ವರದಿಗಳೇ ನೀಡಿಲ್ಲ. ಈ ಬಗ್ಗೆ ನೂರಾರು ಸಾಕ್ಷ್ಯಧಾರಗಳಿವೆ. ಅಲ್ಲದೆ ತಪಾಸಣೆ ವೇಳೆ ಗುರುತಿಸಿದ ಖಾಯಿಲೆಗಳಿಗೆ ಯಾವುದೇ ಚಿಕಿತ್ಸೆಯನ್ನು ಮಂಡಳಿ ಖಾತ್ರಿಪಡಿಸಲಿಲ್ಲ. ಜತೆಗೆ ತಪಾಸಣೆಗೆ ಹಾಜರಾಗದ ಅಥವಾ ವಿರೋಧಿಸಿದ ಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಗಳು ಸಕ್ಕರೆ,ಅಕ್ಕಿ ಮೊದಲಾದ ಪದಾರ್ಥಗಳನ್ನು ನೀಡಿವೆ ಮತ್ತು ಇತರೆ ಆಶೆ ಆಮಿಷ ಒಡ್ಡಿವೆ ಅದಕ್ಕೂ ಕಾರ್ಮಿಕರು ಮಣಿಯದಿದ್ದಾಗ ಮಂಡಳಿ ಸದಸತ್ವ ರದ್ದುಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲ ಮಾಹಿತಿಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಚಿವರು ಹಾಗೂ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಲ್ಯಾಣ ಮಂಡಳಿಯ ನೂರಾರು ಕೋಟಿ ನಿಧಿಯನ್ನು ಖಾಸಗೀ ಆಸ್ಪತ್ರೆಗಳಿಗೆ ವರ್ಗಾಹಿಸಲು ಕೈ ಜೋಡಿಸಿ ಬಡ ಕಟ್ಟಡ ಕಾರ್ಮಿಕರ ಬೆವರಿನಿಂದ ಸಂಗ್ರಹಿಸಲಾದ ಸೆಸ್ ಹಣಕ್ಕೆ ಕನ್ನ ಹಾಕುತ್ತಿದ್ದಾರೆ ಎಂದು ಹೇಳಿದರು.
ಅಲ್ಲದೆ ಮಂಡಳಿಯಿಂದ 2 ಲಕ್ಷ ವೈದ್ಯಕೀಯ ಸಹಾಯಧನ ಕಾರ್ಯಕ್ರಮ ಜಾರಿಯಲ್ಲಿದೆ ಇದಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅರ್ಜಿಗಳಿಗೆ ಹಣವೇ ಬಂದಿಲ್ಲ ಪಾವತಿಸಲಾದ ಹಣವು ಅತ್ಯಂತ ಕಡಿಮೆ ಸಿಕ್ಕಿದೆ. ಈ ಅನುಭವಿರುವಾಗ ಸಚಿವರು ಹಾಗೂ ಮಂಡಳಿ ಅಧಿಕಾರಿಗಳು ಮತ್ತೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು CWFI ಬೇಸರ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರು ಇಂತಹ ಆರೋಗ್ಯ ತಪಾಸಣೆ ಶಿಬಿರಗಳಿಗೆ ಸಾಮೂಹಿಕ ಬಹಿಷ್ಕಾರ ಹಾಕಬೇಕು ಆ ಮೂಲಕ ಸೆಸ್ ಹಣವನ್ನು ಲೂಟಿ ಹೊಡೆಯಲು ಹೊರಟಿರುವ ಎಲ್ಲರಿಗೂ ಪಾಠ ಕಲಿಸಲು ಮುಂದಾಗಬೇಕು ಎಂದು ಹೋರಾಟಕ್ಕೆ ಕರೆ ನೀಡಿದ್ದೇವೆ ಎಂದರು.
ಇದನ್ನೂ ಓದಿ: ಹೊಳೆನರಸೀಪುರ| ಚಿಟ್ಟನಹಳ್ಳಿ ಗ್ರಾಮದ ವಾಟರ್‌ಮನ್ ಭೈರಯ್ಯ ಬದುಕು ದುಸ್ತರ
ಕಟ್ಟಡ ಕಾರ್ಮಿಕರು ಆರೋಗ್ಯ ತಪಾಸಣೆಗೆ ವಿರೋಧ ಮಾಡುತ್ತಿಲ್ಲ. ಬದಲಾಗಿ ಇಂತಹ ತಪಾಸಣೆಯನ್ನು ಕರ್ನಾಟಕ ಸರ್ಕಾರದ ಹೆಸರಾಂತ ವೈದ್ಯಕೀಯ ಸಂಸ್ಥೆಗಳಾದ ಕಿದ್ವಾಯಿ, ಜಯದೇವ, ಇಎಸ್‌ಐ, ಸಂಜಯಗಾಂಧಿ, ರಾಜೀವಗಾಂಧಿ, ನಿಮಾನ್ಸ್, ವಿಕ್ಟೋರಿಯಾ, ಮಿಂಟೋ.ಕೆ.ಸಿ ಜನರಲ್, ಬೌರಿಂಗ್, ಹುಬ್ಬಳ್ಳಿ ಕೆಎಂಸಿ ಸೇರಿ ರಾಜ್ಯದ್ಯಾಂತ ಇರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಅತ್ಯಂತ ಕಡಿಮೆ ಖರ್ಚಿನೊಂದಿಗೆ ನಡೆಸಬೇಕು ಎನ್ನುವ ಸಲಹೆಗಳನ್ನು ಹಲವಾರು ಬಾರಿ ಕಾರ್ಮಿಕ ಸಂಘಗಳು ನೀಡಿವೆ ಮತ್ತು ನವೆಂಬರ್ 29 ರಂದು ಕಲ್ಯಾಣ ಮಂಡಳಿ ಮುಂದೆ ನಡೆಸಲಾದ ಪ್ರತಿಭಟನೆಯಲ್ಲೂ ಇದನ್ನು ಅಧಿಕಾರಿಗಳಿಗೆ ಸ್ಪಷ್ಟಪಡಿಸಿ ಈ ಕಾರ್ಯಕ್ರಮ ಕೈ ಬಿಡಲು ಆಗ್ರಹಿಸಲಾಗಿದೆ. ಆದರೆ ನಾಳೆ ಉಡುಪಿ ಜಿಲ್ಲೆ ಸೇರಿ ಹಲವಾರು ಕಡೆ ಆರೋಗ್ಯ ತಪಾಸಣೆ ಹೆಸರಿನ ನಾಟಕ ಮುಂದುವರೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ಖಾಸಗಿ ಆಸ್ಪತ್ರೆಗಳ ಜತೆ ಸೇರಿ ನಡೆಸಲಾಗುವ ಕಾರ್ಯಕ್ರಮಗಳ ಮುಂದೆ ರದ್ದು ಮಾಡುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ಆಯೋಜಿಸಲು ಮತ್ತು ಬಹಿಷ್ಕರಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಎಲ್ಲ ಕಾರ್ಮಿಕರಿಗೂ ಕರೆ ನೀಡಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದ್ದಾರೆ.
ವಿಡಿಯೋ ನೋಡಿ: ದುಡಿಯುವ ಜನರ ಐಕ್ಯ ಹೋರಾಟ ರೂಪಗೊಂಡಿದ್ದು ಹೇಗೆ? – ಎಚ್.ಆರ್. ನವೀನ್ ಕುಮಾರ್ ಜೊತೆ ಮಾತುಕತೆ Janashakthi Media