ದೇಶದ ಜನ ಕಟ್ಟಿ ಬೆಳಸಿದ ಸಂಸ್ಥೆಯನ್ನು ಮಾರುವ ಹಕ್ಕು ಸರಕಾರಕ್ಕೆ ಇಲ್ಲ – ಸುರೇಶ್ ಕುದೂರ್

  • ಎಲ್‌ಐಸಿಯಲ್ಲಿ ಶೇರು ವಿಕ್ರಯದ ವಿರುದ್ಧ ರಾಜ್ಯ ಮಟ್ಟದ ಸಮಾವೇಶ
  • ಸಮಾವೇಶ ಉದ್ಘಾಟಿಸಿದ ಪ್ರಗತಿಪರ ಚಿಂತಕ ಸುರೇಶ್‌ ಕುದೂರ್‌ 
  • ವಿವಿಧ ಪಕ್ಷಗಳ ಮುಖಂಡರು ಹಾಗೂ ಸಂಘಟನೆಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿ

ವರದಿ: ಹೆಚ್. ಕೆ. ನರಸಿಂಹಮೂರ್ತಿ

ಬೆಂಗಳೂರು : ಭಾರತೀಯ ಜೀವ ವಿಮಾ ನಿಗಮದಲ್ಲಿ ಐಪಿಓ ಮೂಲಕ ಶೇರು ವಿಕ್ರಯ ಮಾಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮದ ವಿರುದ್ಧ ವಿಮಾ ಕಾರ್ಪೋರೇಶನ್ ನೌಕರರ ಸಂಘದಿಂದ (AIIEA)  ಇಂದು ಬೆಂಗಳೂರಿನ ಸಚಿವಾಲಯ ಕ್ಲಬ್‌ನಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ಆಯೋಜಿಸಿತ್ತು. ಬೆಂಗಳೂರು ವಲಯ ಸಾಮಾನ್ಯ ವಿಮಾ ನೌಕರರ ಸಂಘ ಮತ್ತು ವಿಮಾ ಪಿಂಚಣಿದಾರರ ಸಂಘಗಳ ಸಹಕಾರದೊಡನೆ ಏರ್ಪಡಿಸಿದ್ದ ಈ ಸಮಾವೇಶದಲ್ಲಿ ರಾಜ್ಯದ ಹಲವು ರಾಜಕೀಯ ಪಕ್ಷಗಳ ಮತ್ತು ವಿವಿಧ ಕಾರ್ಮಿಕ ಸಂಘಟನೆಯ ನಾಯಕರು ಪಾಲ್ಗೊಂಡು ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಚಿಂತಕರು ಹಾಗೂ ಮಾಹಿತಿ ತಂತ್ರಜ್ಙಾನ ನುರಿತ ಸುರೇಶ್ ಕುದೂರ್ ಅವರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪ್ರಸ್ತುತ ಬಿಜೆಪಿ ಸರ್ಕಾರವು ದೇಶದ ಅತ್ಯಮೂಲ್ಯವಾದ ಸಾರ್ವಜನಿಕ ಸಂಸ್ಥೆಗಳನ್ನು, ಸಂಪನ್ಮೂಲಗಳನ್ನು, ಆಸ್ತಿ ಪಾಸ್ತಿಗಳನ್ನು ಬಂಡವಾಳಗಾರರಿಗೆ ಮಾರಲು ಹೊರಟಿದೆ. ಎಲ್‌ಐಸಿ ಐಪಿಓ ಸಹ ಈ ಕ್ರಮಗಲಲ್ಲಿ ಒಂದಾಗಿದ್ದು ಇದು ಬಾಡಿಗೆದಾರನೇ ಮಾಲಿಕನ ಮನೆಯನ್ನು ಮಾರಾಟಕ್ಕೆ ಇಟ್ಟಂತಾಗಿದೆ. ಏಕೆಂದರೆ, ಎಲ್‌ಐಸಿ ದೇಶದ ಜನರು ಬೆವೆರು ಸುರಿಸಿ ಉಳಿಸಿ ಪಾಲಿಸಿಗಳ ಮೂಲಕ ಕಟ್ಟಿ ಬೆಳೆಸಿದ ಸಂಸ್ಥೆಯಾಗಿದ್ದು ಅದನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದೆ. ಇದರ ಮಾಲೀಕರು 40 ಕೋಟಿ ಪಾಲಿಸಿದಾರರೇ ಆಗಿದ್ದಾರೆ. ಆದ್ದರಿಂದ ಇದನ್ನು ಖಾಸಗಿ ಬಂಡವಾಳದಾರರಿಗೆ ಮಾರಾಟ ಮಾಡುವ ಹಕ್ಕು ಸರ್ಕಾರಕ್ಕಿಲ್ಲ ಎಂದು ಹೇಳಿದರು.

 

ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವ ಮಂದಿ ಕೇವಲ ಶೇಕಡ 1 ಇದ್ದು ಅದರಲ್ಲೂ ರಿಟೈಲ್ ಹೂಡಿಕೆದಾರರು ಕೇವಲ ಶೇಕಡ 3 ಮಾತ್ರ. ಹೀಗಿರುವಾಗ ಲಿಚಯ (LIC) ಲಾಭದ ಹಂಚಿಕೆ ಜನಸಾಮಾನ್ಯರಿಗೆ ಸಿಗಲಿದೆ ಎಂಬ ಕೇಂದ್ರದ ವಾದದಲ್ಲಿ ಹುರುಳಿಲ್ಲ. ಕೆಲವೇ ದೊಡ್ಡ ಬಂಡವಾಳದಾರರಿಗೆ ಇದರಿಂದ ಅನುಕೂಲವಾಗಲಿದ್ದು ಪೂರ್ಣ ಖಾಸಗಿಕರಣಕ್ಕೆ ಇದು ಮೊದಲ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟರು. ಎಲ್‌ಐಸಿ ದೇಶದ ಆರ್ಥಿಕ, ಸಾಮಾಜಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದೆ. ಯಾವುದೇ ಮಾಪನದಿಂದ ಅಳೆದರೂ ಳೀಛಗೆ ಸರಿಸಾಟಿಯಾಗುವ ಹಣಕಾಸು ಸಂಸ್ಥೆ ಇನ್ನೊಂದಿಲ್ಲ. ಇಂತಹ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೆಲವೇ ಮಂದಿಯ ಹಿತಾಸಕ್ತಿಗಾಗಿ ಬಲಿಕೊಡುತ್ತಿರುವುದು ಸರಿಯಲ್ಲ. ಲಿಚಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಳ್ಳುವ ಮತ್ತು ಸರ್ಕಾರದ ನೀತಿಯ ವಿರುದ್ಧ ಹೋರಾಟ ಮಾಡಬೇಕಾದದ್ದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿಮಾ ನೌಕರರ ಹೋರಾಟ ದೇಶಕ್ಕೇ ಮಾದರಿಯಾಗಿದ್ದು ಈ ಹೋರಾಟ ಯಶಸ್ವಿಯಾಗಲಿ ಎಂಬ ಆಶಯವನ್ನು ಸುರೇಶ್ ವ್ಯಕ್ತಪಡಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅಖಿಲ ಭಾರತ ವಿಮಾ ನೌಕರರ ಸಂಘದ ನಾಯಕರಾದ  ಅಮಾನುಲ್ಲಾ ಖಾನ್ ಅವರು ದೇಶದ ಜನರ ವಿಶ್ವಾಸಾರ್ಹ ಸಂಸ್ಥೆಯಾಗಿರುವ ಎಲ್‌ಐಸಿ ಇದುವರೆಗೆ ಸರ್ಕಾರದಿಂದ ಯಾವುದೇ ನೆರವನ್ನು ಪಡೆಯದೇ ಜನರ ಉಳಿತಾಯದ ಹಣದಿಂದಲೇ ಹೆಮ್ಮರವಾಗಿ ಬೆಳೆದುಬಂದಿರುವ ವಿಮಾ ಸಂಸ್ಥೆಯಾಗಿದೆ. ಅದರಲ್ಲೂ ಎಲ್‌ಐಸಿ ದೇಶದ ಪ್ರಗತಿಗೆ ತನ್ನ ಕೊಡುಗೆಯನ್ನು ನೀಡುತ್ತಾ ಬಂದಿದ್ದು ರಾಷ್ಟ್ರೀಕರಣದ ಎಲ್ಲ ಆಶೋತ್ತರಗಳನ್ನು ಅಕ್ಷರಶಹ ಈಡೇರಿಸಿದೆ. ಸರಕಾರ ಈ ಸಂಸ್ಥೆಯ ಮಾಲಿಕರಲ್ಲ ಬದಲಿಗೆ ದೇಶದ 126  ಕೋಟಿ ಜನ ಇದರ ಮಾಲಿಕರಾಗಿದ್ದಾರೆ. ಅಲ್ಲದೆ ಎಲ್‌ಐಸಿಯ ಖಾಸಗೀಕರಣ ದೇಶದ ಸಂಪನ್ಮೂಲಗಳಿಗೆ ಪ್ರತಿಯೊಬ್ಬ ನಾಗರಿಕನೂ ಹಕ್ಕುದಾರ ಹಾಗೂ ಈ ಸಂಪನ್ಮೂಲಗಳ ಲಾಭವು ಕೆಲವೇ ಮಂದಿಯಲ್ಲಿ ಕೇಂದ್ರೀಕೃತಗೊಳ್ಳಬಾರದೆಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದರು. ಪ್ರಸ್ತುತ ಭಾರತವು ಜಗತ್ತಿನ ಅತೀ ಅಸಮಾನತೆ ಹೊಂದಿರುವ ದೇಶಗಳಲ್ಲಿ ಒಂದಾಗಿದ್ದು, ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಸಾಮಾನ್ಯ ಜನ ಜೀವನ ದುಸ್ತರವಾಗಿದ್ದರೆ, ನಮ್ಮ ದೇಶದ ಶ್ರೀಮಂತ ಮಂದಿಯ ಸಂಪತ್ತು ಹಲವು ಪಟ್ಟು ಹೆಚ್ಚಾಗಿದ್ದು ಇದನ್ನು ಪುಷ್ಟೀಕರಿಸಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಗಳ ಪಾತ್ರ ಅತಿ ಹೆಚ್ಚಾಗಿದ್ದು ಸರಕಾರ ಅವುಗಳನ್ನು ಮತ್ತಷ್ಟು ಬಲಪಡಿಸಬೇಕಿದೆ. ಸರಕಾರದ ಈ ಕ್ರಮದಿಂದ ಇಡೀ ದೇಶದ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವಾಗಲಿದೆ. ನಮ್ಮ ಸಂಘಟನೆಯು ಈಗಾಗಲೇ ಸುಮಾರು 469 ಸಂಸತ್ ಸದಸ್ಯರನ್ನು ಭೇಟಿಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಜನಸಾಮಾನ್ಯರಿಗೆ ಅರಿವು ಮೂಡಿಸಿ ಐಪಿಓ ವಿರುದ್ಧ ಹೋರಾಟ ತೀವ್ರಗೊಳಿಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಖಾಸಗೀಕರಣದ ನಡೆಗಳ ವಿರುದ್ಧ ಸಾಮಾನ್ಯ ವಿಮಾ ನೌಕರರ ದೇಶವ್ಯಾಪಿ ಮುಷ್ಕರ

ಸಿಪಿಐಎಂ ಪಕ್ಷದ ಮುಖಂಡ  ಹಾಗೂ ಸಿಐಟಿಯು ನಾಯಕ  ಡಾ. ಕೆ. ಪ್ರಕಾಶ್ ಮಾತನಾಡಿ ಕೇಂದ್ರ ಸರ್ಕಾರವು ಆರ್ಥಿಕ ಸುಧಾರಣೆಯ ನೆಪದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಬಂಡವಾಳದಾರರಿಗೆ ಮಾರುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ. ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆಯಲ್ಲಿ ದೇಶದ ಆಸ್ತಿಗಳನ್ನು ಅತಿ ಕಡಿಮೆ ಬೆಲೆಗೆ ಲೀಸ್ ಮಾಡುವ ಮೂಲಕ ಅವುಗಳನ್ನು ಹಸ್ತಾಂತರಿಸುವ ಹುನ್ನಾರ ನಡೆದಿದೆ. ಎಲ್‌ಐಸಿಯ ಐಪಿಓ ಸಹ ಇದರ ಭಾಗವಾಗಿದ್ದು ಇದನ್ನು ವಿರೋಧಿಸುವುದು ಅನಿವಾರ್ಯವಾಗಿದೆ. ನಿರಂತರ ಹೊರಾಟದಿಂದ ಎಂತಹ ಸರ್ವಾಧಿಕಾರಿ ನೀತಿಯನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ನಮ್ಮ ರೈತರು ತೋರಿಸಿಕೊಟ್ಟಿದ್ದಾರೆ. ಇಂತಹ ನೀತಿಗಳ ವಿರುದ್ಧ ಹೋರಾಡಲು ನಾವು ರಾಜಕೀಯವಾಗಿಯು ಸಹ ನಮ್ಮ ಪ್ರಜ್ಞಾವಂತಿಕೆಯನ್ನು ಮೆರೆಯಬೆಕಾಗಿದೆ ಎಂದು ಅವರು ತಿಳಿಸಿ, ಸಿಪಿಐಎಂ ಪಕ್ಷವು ಕಾರ್ಮಿಕರ, ರೈತರ, ಜನಸಾಮಾನ್ಯರ ನ್ಯಾಯಯುತ ಹೋರಾಟಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿದ್ದು ಇನ್ನು ಮುಂದೆಯೂ ಅವರ ಪರವಾಗಿ ನಿಲ್ಲಲಿದೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು, ಎಐಟಿಯುಸಿ ಸಂಘಟನೆಯ  ವಿಜಯಭಾಸ್ಕರ್, ಬಿಎಂಎಸ್ ಸಂಘಟನೆಯ ರಾಮಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ನಾಯಕರಾದ ಮಠಪತಿಯವರು, ಬಿಎಸ್‌ಎನ್‌ಎಲ್ ನೌಕರರ ಸಂಘದ ಗಿರೀಶ್, ನಬಾರ್ಡ ನೌಕರರ ಸಂಘದ ರಾಜೇಶ್, ಬ್ಯಾಂಕಿಂಗ್ ವಲಯದ ನಾಯಕರಾದ ನಾಗಭೂಷಣ್, ವಿಮಾ ಏಜೆಂಟ್ ಸಂಘಟನೆಯ ಜಯರಾಮ್, ಆಭಿವೃದ್ಧಿ ಅಧಿಕಾರಿಗಳ ಸಂಘದ ಯಶವಂತ್, ವಿಮಾ ಅಧಿಕಾರಿವರ್ಗದ ಸಂಘದ ಪರವಾಗಿ ಪ್ರಸಾದ್, ವಿಮಾ ನೌಕರರ ಫೆಡರೇಶನ್ ಸಂಘಟನೆಯ ಪರಮೇಶ್ವರನ್ ಮತ್ತು ಇನ್ನೂ ಹಲವಾರು ನಾಯಕರು ಈ ಸಂದರ್ಭದಲ್ಲಿ ಮಾತನಾಡಿ ಎಲ್‌ಐಸಿ ಯ ಐಪಿಓ ವಿರುದ್ಧದ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು. ಸಂಘಟನೆಯ ನಾಯಕಿ ಎಸ್‌.ಕೆ ಗೀತಾ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಪದ್ಮನಾಭ ವಂದಿಸಿದರು. ಸಮಾವೇಶದಲ್ಲಿ ವಿವಿಧ ಜಿಲ್ಲೆಗಳಿಂದ ನೂರಾರು ಪ್ರತಿನಿಧಿಗಳು ಭಾಗವಹಿಸಿದ್ದರು.

ಸಮಾವೇಶದಲ್ಲಿ ಎಲ್‌ಐಸಿಯಲ್ಲಿ ಶೇರುವಿಕ್ರಯ ಮಾಡುವ ಸರ್ಕಾರದ ಕ್ರಮವನ್ನು ವಿರೋಧಿಸಿ, ಈ ಪ್ರಕ್ರಿಯೆಯನ್ನು ಕೂಡಲೇ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಲಾಯಿತು.

Donate Janashakthi Media

Leave a Reply

Your email address will not be published. Required fields are marked *