ಟೊಮೆಟೊ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರು ಈಗ ಹಸಿ ಮೆಣಸಿನಕಾಯಿ ಮತ್ತು ಶುಂಠಿಯ ‘ಖಾರ’ಕ್ಕೆ ತತ್ತರಿಸಿ ಹೋಗಿದ್ದಾರೆ. ಟೊಮೆಟೊವನ್ನೂ ಹಿಂದಿಕ್ಕಿರುವ ಹಸಿ ಮೆಣಸಿನಕಾಯಿ, ಶುಂಠಿ ದರಗಳು ದ್ವಿಶತಕ ಬಾರಿಸಿವೆ.
ತರಕಾರಿಗಳ ದರ ಏರುತ್ತಲೇ ಇದೆ. ಕಳೆದ ವಾರ ಸ್ವಲ್ಪ ಇಳಿಕೆ ಕಂಡಿದ್ದ ಬೀನ್ಸ್ ಮತ್ತೆ ಕೆ.ಜಿ ಗೆ 110-120 ರೂ. ಆಗಿದೆ. ಡೊಳ್ಳುಮೆಣಸು (ಕ್ಯಾಪ್ಸಿಕಂ) 104 ರೂ. ಆಗಿದ್ದರೆ, ಕ್ಯಾರೆಟ್ ಕೆ.ಜಿಗೆ 102 ರೂ. ದಾಟಿದೆ. ಪ್ರತಿ ಕೆ.ಜಿ ಟೊಮೆಟೊ ಬೆಲೆ 120 ರೂ. ಇದ್ದು, ಸದ್ಯಕ್ಕೆ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಸಿಶುಂಠಿಯಂತೂ 100 ಗ್ರಾಂಗೆ 37 ರೂ. (ಕೆ.ಜಿಗೆ 370 ರೂ.) ದಾಟಿದೆ. ಕ್ಯಾರೆಟ್ ಕೆ.ಜಿ ಗೆ 60 ರೂ. ಬೆಂಡೆ, ಬದನೆಕಾಯಿ, ನುಗ್ಗೆಕಾಯಿ ಸೇರಿದಂತೆ ಬಹುತೇಕ ತರಕಾರಿಗಳು 60-70 ರೂ.ಗಳಿಗೆ ಏರಿಕೆಯಾಗಿವೆ. ತರಕಾರಿಗಳ ಜತೆಗೆ ಐದು, ಹತ್ತು ರೂಪಾಯಿಗೆ ಮುಷ್ಟಿ ತುಂಬ ಮೆಣಸಿನಕಾಯಿ, ಶುಂಠಿ ನೀಡುತ್ತಿದ್ದ ವ್ಯಾಪಾರಿಗಳು ಈಗ 20 ರೂ ಕೊಡುತ್ತೇನೆ ಅಂದರೂ ಕೊಡುತ್ತಿಲ್ಲ.
ಇದನ್ನೂ ಓದಿ : ಮಾರುಕಟ್ಟೆಯ ಅರ್ಧದಷ್ಟು ಬೆಲೆಗೆ ಟಮೆಟೋ ಮಾರಾಟ ಮಾಡಲು ಕ್ರಮ
” ಏಪ್ರಿಲ್-ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗಿತ್ತು. ಅಲ್ಲದೇ ಮೇ ಅಂತ್ಯಕ್ಕೆ ಮತ್ತು ಜೂನ್ ತಿಂಗಳ ಆರಂಭದಲ್ಲಿ ಕೆಲವೆಡೆ ಸಾಕಷ್ಟು ಆಲಿಕಲ್ಲು ಸಹಿತ ಮಳೆ ಸುರಿಯಿತು. ಕೆಲವೆಡೆ ಮಳೆ ಕೈಕೊಟ್ಟಿದೆ. ಹೀಗಾಗಿ, ಹಲವು ಪ್ರದೇಶಗಳಲ್ಲಿ ತರಕಾರಿ ಬೆಳೆಗಳು ಹಾನಿಗೊಳಗಾಗಿವೆ. ಇವೆಲ್ಲದರ ಪರಿಣಾಮವಾಗಿ ಬೇಡಿಕೆಯಷ್ಟು ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ ಎಂದು ಮಾರಾಟಗಾರರು ಪ್ರತಿಕ್ರಿಯಿಸಿದ್ದಾರೆ.
ದೇಶವು ಹಣದುಬ್ಬರ ಕಡಿಮೆಯಾಗಬಹುದೆಂದು ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಬಿಕ್ಕಟ್ಟು ತಲೆದೋರಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ 4.7% ರಿಂದ ಮೇ ತಿಂಗಳಲ್ಲಿ 4.25% ಕ್ಕೆ ಇಳಿದಿದೆ. ತರಕಾರಿಗಳ ದರ ಇನ್ನೂ ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.