ಭಾರತದ ಮುಖ್ಯವಾಹಿನಿ ಮಾಧ್ಯಮವು ಕಾರ್ಪೊರೇಟ್ ಮಾಲಿಕತ್ವದ ಕಪಿಮುಷ್ಟಿಗೆ ಸಿಲುಕಿರುವ ಸಂದರ್ಭದಲ್ಲಿ, ಹುಸಿ ಸುದ್ದಿ ಮತ್ತು ಸುಳ್ಳು ಮಾಹಿತಿಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಸಾಮಾಜಿಕ ಮಾಧ್ಯಮದ ಪ್ರಭಾವಹೆಚ್ಚುತ್ತಿರುವ ಸಂದರ್ಭದಲ್ಲಿ, ಭಾರತದ ಜನರ ಹಿತವನ್ನೇ ಕೇಂದ್ರವಾಗಿಟ್ಟುಕೊಂಡ ವರದಿಗಳು ಮತ್ತು ವಿಶ್ಲೇಷಣೆಗಳನ್ನು ಪ್ರಕಟಿಸುವ ಮೂಲಕ ಈ ಕೊಳಕು ಪ್ರವೃತ್ತಿಯನ್ನು ಭೇದಿಸಬೇಕಾಗಿದೆ. ಕೆಲವರ ಹಣ ಲಾಭದ ಎದುರು ಜನರು ಗೆಲುವು ಸಾಧಿಸಬೇಕು; ದ್ವೇಷ ಮತ್ತು ವಿಭಜನೆಯ ಮೇಲೆ ಜನರ ಒಗ್ಗಟ್ಟು ಗೆಲ್ಲಬೇಕು. ಹತಾಶೆ
-ನೀಲೋತ್ಪಲ ಬಸು
-ಕನ್ನಡಕ್ಕೆ: ವಿಶ್ವ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಕಳೆದು ಹೋದ ವರ್ಷದ ಪರಿಶೀಲನೆ ನಡೆಸುವುದು ನಮಗೆ ತುಂಬಾ ಮಹತ್ವದ್ದು. ಯಾಕೆಂದರೆ, ಭೂತಕಾಲವು ನಮಗೆ ಈಗ ನಾವೆಲ್ಲಿದ್ದೇವೆ ಮತ್ತು ನಮ್ಮೆಲ್ಲ ಶಕ್ತಿ ಸಾಮರ್ಥ್ಯ ಹಾಗೂ ಉದ್ದೇಶದೊಂದಿಗೆ ಎಲ್ಲಿಗೆ ಸಾಗಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅದು ನೆರವಾಗುತ್ತದೆ.
ಆರಂಭದಲ್ಲಿ, ನಮ್ಮ ಮೂಲಭೂತ ಧೋರಣೆಯನ್ನು ಪುನರುಚ್ಚರಿಸುವುದು ಅಗತ್ಯ. ವಿಶೇಷವಾಗಿ, ಭಾರತದ ಮುಖ್ಯವಾಹಿನಿ ಮಾಧ್ಯಮವು ಕಾರ್ಪೊರೇಟ್ ಮಾಲಿಕತ್ವದ ಕಪಿಮುಷ್ಟಿಗೆ ಸಿಲುಕಿರುವ ಸಂದರ್ಭದಲ್ಲಿ ಇದು ಇನ್ನೂ ಅಗತ್ಯವಾಗುತ್ತದೆ. ಅಷ್ಟು ಮಾತ್ರವಲ್ಲದೆ, ಜಗತ್ತಿನಲ್ಲಿ ಹುಸಿ ಸುದ್ದಿ ಮತ್ತು ಸುಳ್ಳು ಮಾಹಿತಿಗಳ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಭಾರತದಲ್ಲಿ ಸಾಮಾಜಿಕ ಮಾಧ್ಯಮದ ಹೆಚ್ಚುತ್ತಿರುವ ಪ್ರಭಾವ ಕೂಡ ಕಡಿಮೆ ಮಹತ್ವದ್ದೇನೂ ಅಲ್ಲ. ಈ ಜಾಗದಲ್ಲಿ ಕೂಡ ಬಿಜೆಪಿ ಐಟಿ ಸೆಲ್‌ನ ಚಟುವಟಿಕೆಗಳದ್ದೇ ಪ್ರಾಬಲ್ಯ ಎಂದು ಹೇಳುವುದು ಕ್ಲೀಷೆಯಾಗಬಹುದು. ಜನರ ನಡುವೆ ಪರಸ್ಪರ ದ್ವೇಷ ಮತ್ತು ವೈರತ್ವ ಸೃಷ್ಟಿಸುವುದೇ ದೊಡ್ಡಪ್ರಮಾಣದಲ್ಲಿಬಂಡವಾಳಹರಿದಾಡುವಈ ಸೆಲ್‌ನ ಪ್ರಮುಖ ಕೆಲಸವಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ | ಮರ್ಯಾದೆಗೇಡು ಹತ್ಯೆ : ಅಪರಾಧಿಗಳಿಗೆ ಶಿಕ್ಷೆ : ಸೂಕ್ತ ಪರಿಹಾರ ನೀಡುವ ಭರವಸೆ – ಜಿ.ಪರಮೇಶ್ವರ
ಇಂಥ ವಿಷಮಯ ವಾತಾವರಣದಲ್ಲಿ, ಭಾರತದ ಜನರ ಹಿತವನ್ನೇ ಕೇಂದ್ರವಾಗಿಟ್ಟುಕೊಂಡ ವರದಿಗಳು ಮತ್ತು ವಿಶ್ಲೇಷಣೆಗಳನ್ನು ಪ್ರಕಟಿಸುವ ಮೂಲಕ ಈ ಕೊಳಕು ಪ್ರವೃತ್ತಿಯನ್ನು ಭೇದಿಸುವುದಕ್ಕೆ ನಮ್ಮನ್ನು ನಾವು ಪುನಃ ಅರ್ಪಿಸಿಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡುತ್ತೇವೆ. ಲಾಭದಎದುರುಜನರು ಗೆಲುವು ಸಾಧಿಸಬೇಕು; ದ್ವೇಷ ಮತ್ತು ವಿಭಜನೆಯ ಮೇಲೆ ಒಗ್ಗಟ್ಟು ಗೆಲ್ಲಬೇಕು. ಆದರೆ, ಜನರ ʻಸಮೂಹʼದಲ್ಲಿ ಯಾರೆಲ್ಲ ಇರುತ್ತಾರೆಂದು ಸ್ಪಷ್ಟಪಡಿಸುವುದು ಅಷ್ಟೇ ಮುಖ್ಯವಾಗುತ್ತದೆ. ಶ್ರಮಜೀವಿಗಳು – ಕಾರ್ಮಿಕ ವರ್ಗ, ರೈತರು ಮತ್ತು ಕೃಷಿ ಕಾರ್ಮಿಕರು- ಹಾಗೂ ವಿದ್ಯಾರ್ಥಿ ಮತ್ತು ಯುವಜನರು, ಮಹಿಳೆಯರು, ತುಳಿತಕ್ಕೊಳಗಾದ, ಸಾಮಾಜಿಕ ಅಸಮಾನತೆಯಿಂದ ನಲಗುತ್ತಿರುವವರ ಸಹಿತ ಕೋಟ್ಯಂತರ ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ಮನೋಭಾವದ ಜನರು ಮತ್ತುತಮ್ಮ ಅಸ್ತಿತ್ವ ಮತ್ತು ಉಳಿವಿಗಾಗಿ ಸಂಘರ್ಷ ನಡೆಸುತ್ತಿರುವ ಬುಡಕಟ್ಟು ಜನರು, ದಲಿತರು ಮತ್ತು ಅಲ್ಪಸಂಖ್ಯಾತರು ಈ ‘ಜನಸಮೂಹ’ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಜಗತ್ತಿನಾದ್ಯಂತ, ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಅಸಮಾನತೆಯು ವಿನಾಶಕಾರಿ ಪ್ರಮಾಣದಲ್ಲಿ ಬೆಳೆದಿದ್ದಕ್ಕೆ 2025 ಸಾಕ್ಷಿಯಾಗಿದೆ. ಕೇವಲ ಒಂದು ಶೇಕಡ ಜನರು ಶೇಕಡ 40ರಷ್ಟು ಸಂಪತ್ತು ಮತ್ತು ಆದಾಯವನ್ನು ಹೊಂದಿದ್ದಾರೆ. ಆದರೂ, ಅರ್ಥಶಾಸ್ತ್ರಜ್ಞರು, ವಿದ್ವಾಂಸರು ಮತ್ತು ಸಂಶೋಧಕರು ಒಟ್ಟುಗೂಡಿ ಹೊಲಸು ಸಂಪತ್ತು ಮತ್ತು ವಂಚನೆಯ ಅಸಹ್ಯಕರ ಪ್ರವೃತ್ತಿಯನ್ನು ಬಯಲುಗೊಳಿಸಿರುವುದು ಖುಷಿಪಡಿಸುವ ವಿಚಾರವಾಗಿದೆ. ಅಸಮಾನತೆಯ ಜತೆಯಲ್ಲಿ, ಅಗಾಧ ಪ್ರಮಾಣಕ್ಕೆ ಬೆಳೆಯುತ್ತಿರುವ ನಿರುದ್ಯೋಗವು ಭಾರತದ ಜನರನ್ನು ಕಾಡಿಸುವ ಇನ್ನೊಂದು ಮುಖ್ಯ ಪಿಡುಗು. ಈ ಎರಡು ಅಂಶಗಳು ಆರ್ಥಿಕತೆಯಲ್ಲಿ ಒಟ್ಟು ಬೇಡಿಕೆಯ ಮೇಲೆ ಪರಿಣಾಮ ಬೀರಲು ಹಾಗೂ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಆರ್ಥಿಕತೆಯು ಬೆಳೆಯುವುದನ್ನು ತಡೆಯಲು ಕಾರಣ ಎನ್ನುವುದು ಸ್ಪಷ್ಟವಾಗಿದೆ. ಆದರೆ, ಈ ಹೊರೆಯು ಜನರ ಜೀವನದ ಮೇಲೆ ಅಸಮಾನವಾಗಿ ಪರಿಣಾಮ ಬೀರುತ್ತದೆ.
ಇತ್ತೀಚೆಗೆ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಅಧಿಸೂಚನೆ ಮತ್ತು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾನೂನನ್ನು (ಮನರೇಗಾ) ರದ್ದುಪಡಿಸಲು ಮತ್ತು ಗ್ರಾಮೀಣ ಜನರ ಹಕ್ಕು ಆಧಾರಿತ ಅನುಕೂಲವನ್ನು ತಪ್ಪಿಸುವ ಜಿ ರಾಮ್ ಜಿ ಕಾನೂನು, ಉದ್ಯೋಗದ ಪ್ರಶ್ನೆ ಇನ್ನಷ್ಟು ಬಿಗಡಾಯಿಸುವಂತೆ ಮಾಡಲಿವೆ ಎಂಬುದು ಸ್ವಯಂ ವೇದ್ಯ. ಮುಖ್ಯವಾಹಿನಿ ಮಾಧ್ಯಮವು ಜಿಡಿಪಿ ಒಂದು ಆಯಾಮದ ಮೇಲಷ್ಟೇ ಗಮನ ಕೇಂದ್ರೀಕರಿಸುತ್ತದೆ ಹಾಗೂ ಭಾರತೀಯ ಆರ್ಥಿಕತೆಯ ಸಾಪೇಕ್ಷ ಗಾತ್ರ ಕುರಿತ ದಿಟ್ಟ ಭವಿಷ್ಯವಾಣಿಗಳನ್ನು ಕೊಡುತ್ತಲೇ, ಬಹುಪಾಲು ಭಾರತೀಯ ಪ್ರಜೆಗಳು ಎದುರಿಸುತ್ತಿರುವ ಕಟು ವಾಸ್ತವಗಳನ್ನು ಅದು ಮರೆಮಾಚುತ್ತದೆ. ಸಹಜವಾಗಿಯೇ, ಐದು ಮೂಲಭೂತ ಮಾನವಅಗತ್ಯಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಆರೋಗ್ಯವು ಅತ್ಯಂತ ಕೆಟ್ಟ ಬಿಕ್ಕಟ್ಟಿಗೆ ಸಿಲುಕಿವೆ.
ಶಿಕ್ಷಣ ಕ್ಷೇತ್ರಕ್ಕೆ ಏನಾಗುತ್ತಿದೆ ಎನ್ನುವುದು ವಿಶೇಷವಾಗಿ ಪ್ರಸ್ತಾಪಿಸಬೇಕಾದ ವಿಷಯವಾಗಿದೆ. ಪ್ರಸ್ತುತ ಆಡಳಿತವು ಶಿಕ್ಷಣದ ಮೇಲೆ ಅತ್ಯಂತ ಕೆಟ್ಟ ಆಕ್ರಮಣವನ್ನು ನಡೆಸುತ್ತಿರುವುದು ಇದಕ್ಕೆ ಕಾರಣವಾಗಿದೆ. ವಾಣಿಜ್ಯೀಕರಣ ಮತ್ತು ಕಾರ್ಪೊರೇಟೀಕರಣದ ಮೇಲೆ ಹೆಚ್ಚಿನ ಒತ್ತು ನೀಡಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಅನುಷ್ಠಾನಗೊಳಿಸಿರುವುದರಿಂದ ಸರಕಾರಿ ಶಾಲೆಗಳನ್ನು ದೊಡ್ಡ ಪ್ರಮಾಣದಲ್ಲಿ ಮುಚ್ಚಲಾಗುತ್ತಿದೆ. ವಿಕೇಂದ್ರೀಕರಣ ಮತ್ತು ರಾಜ್ಯ ಸರಕಾರಗಳ ಶಾಸನಾತ್ಮಕ ಹಕ್ಕುಗಳ ಮೇಲೆ ಅವಲಂಬಿತವಾಗಿರಬೇಕಾದ ಶೈಕ್ಷಣಿಕ ಆಡಳಿತದ ಇಡೀ ಸಂರಚನೆಯ ಜಾಗವನ್ನು ತೀವ್ರ ಕೇಂದ್ರೀಕರಣವು ಆವರಿಸಿಕೊಳ್ಳುತ್ತಿದೆ.
ಉನ್ನತ ಶಿಕ್ಷಣ ಮಂಡಳಿ (ಹೆಚ್‍ಇಸಿ) ರಚನೆ ಕುರಿತ ಕಾನೂನನ್ನು ಅಂಗೀಕರಿಸಲು ಸಂಸತ್ತಿನ ಚಳಿಗಾಲದ ಅಧಿವೇಶನ ಹತಾಶ ಪ್ರಯತ್ನ ನಡೆಸಿದ್ದನ್ನು ನಾವು ಕಂಡಿದ್ದೇವೆ. ಈ ಹಿಂದಿನ ಎಲ್ಲ ಸಂರಚನೆಗಳನ್ನು ಅಪ್ರಸ್ತುತಗೊಳಿಸಿ ಸೂಪರ್ ಉನ್ನತ ಸಂಸ್ಥೆಯಾಗಿ ಹೆಚ್‍ಇಸಿಗೆ ಅಧಿಕಾರ ನೀಡುವುದು ಪ್ರಸ್ತಾಪಿತ ಕಾನೂನಿನ ಉದ್ದೇಶವಾಗಿದೆ. ಪಠ್ಯ ವಿಷಯಗಳನ್ನು ಕೋಮುವಾದೀಕರಣ ಗೊಳಿಸುವುದು ಮತ್ತು ಸಂಸ್ಥೆಗಳನ್ನು ಸಾರಾಸಗಟಾಗಿ ಕೋಮುವಾದೀಕರಿಸಿ ನಿಯಂತ್ರಣಕ್ಕೆ ಪಡೆಯುವುದು ಮತ್ತು ಇತಿಹಾಸ ಮತ್ತು ವಿಜ್ಞಾನದ ಮೇಲೆ ಆಕ್ರಮಣಗಳನ್ನು ಬಲಪಡಿಸುವುದು ಈ ಕೇಂದ್ರೀಕರಣದ ಎರಡನೇ ಉದ್ದೇಶವಾಗಿದೆ. ವೈಜ್ಞಾನಿಕ ಮನೋಭಾವವನ್ನು ನಾಶಪಡಿಸುವುದನ್ನು ಖಾತರಿಪಡಿಸುವುದು ಅದರ ಗುರಿಯಾಗಿದೆ.
ನಮ್ಮ ಸಂವಿಧಾನದ ಪ್ರಮುಖ ಆಶಯವಾದ ನ್ಯಾಯ ಕೂಡ 2025ರಲ್ಲಿ ಗಂಭೀರ ಒತ್ತಡಕ್ಕೆ ಒಳಗಾಗಿತ್ತು. ಜಾತಿ ಗಣತಿ ನಡೆಸಬೇಕೆಂದು ಮತ್ತೆ-ಮತ್ತೆ ಆಗ್ರಹಿಸಿದರೂ ಮತ್ತು ಸತತ ಒತ್ತಡದಿಂದಾಗಿ ಸರಕಾರ ಆ ಬಗ್ಗೆ ಪ್ರಕಟಿಸಿದರೂ, ವಾಸ್ತವದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ದಲಿತರು ಮತ್ತು ಬುಡಕಟ್ಟು ಜನರು ಈ ವರ್ಷ ಕೆಟ್ಟ ದಾಳಿಗಳಿಗೆ ಒಳಗಾಗಿದ್ದಾರೆ. ಜಲ್, ಜಂಗಲ್, ಜಮೀನ್ (ನೀರು, ಕಾಡು, ಜಮೀನು) – ಇವುಗಳು ಕಾರ್ಪೊರೇಟ್ ದುರಾಸೆಯಿಂದಾಗಿ ಇನ್ನಷ್ಟು ಬೆದರಿಕೆ ಎದುರಿಸಬೇಕಾಗಿದೆ. ಅರಣ್ಯ ಭೂಮಿಯನ್ನುಅತಿಕ್ರಮಣಮಾಡಿ, ವಿಶೇಷವಾಗಿ ಕಾರ್ಪೊರೇಟ್ ಗಣಿ ಕಂಪನಿಗಳು ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ತುದಿಗಾಲಲ್ಲಿ ನಿಂತಿವೆ. ಈಗ ಈ ಪ್ರಶ್ನೆಯನ್ನು ಹವಾಮಾನ ನ್ಯಾಯಕ್ಕೂ ಮತ್ತು ಒಟ್ಟಾರೆಯಾಗಿ ಪರಿಸರದ ಅವನತಿಗೂ ತಳುಕುಹಾಕಲಾಗುತ್ತಿದೆ. ನಗರ ಕೇಂದ್ರಗಳಲ್ಲಿ ಮಾಲಿನ್ಯ ಮಟ್ಟಗಳು ಮತ್ತು ಅರಾವಳಿ ಪರ್ವತ ಶ್ರೇಣಿ ಮೇಲಿನ ದಾಳಿಗಳು ಹೊಸ ಅಸಹ್ಯಕರ ಆಕ್ರಮಣವನ್ನು ತೋರಿಸುತ್ತವೆ. ದಲಿತರು, ಬುಡಕಟ್ಟು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರ ಜತೆಯಲ್ಲಿ ಸಂಕಷ್ಟಕ್ಕೆ ಒಳಗಾದ ಎಲ್ಲ ಸಾಮಾಜಿಕ ಗುಂಪುಗಳಿಗೆನ್ಯಾಯ ಮತ್ತು ಸಮಾನತೆಯು ಹವಾಮಾನ ನ್ಯಾಯದ ಪ್ರಶ್ನೆಯೊಂದಿಗೆ ವಿಲೀನವಾಗುತ್ತಿವೆ. ಹಿಂದೂತ್ವದ ಪೂರ್ಣ- ಪ್ರಮಾಣದ ಆಕ್ರಮಣ ಹಾಗೂ ಮನುವಾದಿ ಸಿದ್ಧಾಂತದ ಅನುಸರಣೆಯಿಂದಾಗಿ ವಿಶೇಷವಾಗಿ ಲಿಂಗ ಪ್ರಶ್ನೆಯು ತುಂಬಾ ಅಪಾಯಕಾರಿ ಪರಿಸ್ಥಿತಿಯನ್ನು ತಲುಪಿದೆ.
ಈ ಎಲ್ಲ ಪ್ರಕ್ರಿಯೆಗಳಿಂದ ಏನೆಲ್ಲಆಗಬಹುದು ಮತ್ತು ರಾಜಕೀಯ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯ ಮೇಲೆ ಅವುಗಳ ವಿನಾಶಕಾರಿ ಪರಿಣಾಮ ಏನಾದೀತೆಂದು ಅರ್ಥ ಮಾಡಿಕೊಳ್ಳುವುದು ಕಷ್ಟದ ವಿಷಯವೇನೂ ಅಲ್ಲ.
ಪ್ರಜಾಪ್ರಭುತ್ವದ ವಿಷಯದಲ್ಲಿ, ಮತದಾನ ಮಾಡುವ ಸಾಂವಿಧಾನಿಕ ಹಕ್ಕು ಎದುರಿಸಿದ ಪರಿಸ್ಥಿತಿಯು 2025ರಲ್ಲಿ ವಿಶೇಷ ಪ್ರಶ್ನೆಯಾಗಿತ್ತು. ಆಕ್ರಮಣವು ಎರಡು ಬಗೆಯದಾಗಿತ್ತು. ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸಿದ ನಂತರವೂ, ಚುನಾವಣಾ ಟ್ರಸ್ಟ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ನೀಡಿದ ಕಾರ್ಪೊರೇಟ್ ದೇಣಿಗೆಯಲ್ಲಿ ಬಿಜೆಪಿ ಪಾಲು ಶೇಕಡ 90ರಷ್ಟಿತ್ತು ಎನ್ನುವುದನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾದ ಅಂಕಿಅಂಶಗಳು ಹೇಳಿವೆ. ಭಾರತ ಚುನಾವಣಾ ಆಯೋಗವು ಬಿಜೆಪಿಯ ಜೇಬಿನಲ್ಲಿರುವ ಸಂಸ್ಥೆಯಾಗಿ ಅವನತಿಗೊಂಡಿರುವುದು ಇನ್ನೊಂದು ಪ್ರಮುಖ ಪ್ರಶ್ನೆಯಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ವಿರುದ್ಧ ಜನರು ಹೋರಾಡಿದರೆನ್ನುವುದು ಸಂತಸದ ಸಂಗತಿಯಾಗಿದೆ.
ಈ ವಿಲಕ್ಷಣಅಭಿಯಾನದ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ಆಯೋಗವು ಸ್ವತಃತನ್ನದೇವಿಧಿ-ವಿಧಾನದ ಅಗತ್ಯಗಳನ್ನು ಕೂಡ ಅನುಸರಿಸಲಿಲ್ಲ ಎನ್ನುವುದು ಇತ್ತೀಚಿನ ವಾಸ್ತವಾಂಶಗಳು ತೋರಿಸಿವೆ. ಎಸ್‌ಐಆರ್, ಮತದಾರರನ್ನು ಕೈಬಿಡುವ ಅತ್ಯಂತ ದೊಡ್ಡ ಕಸರತ್ತಾಗಿ ಪರಿಣಮಿಸಿರುವುದನ್ನು ಅಂಕಿಅಂಶಗಳೇ ಹೇಳುತ್ತವೆ.ಚುನಾವಣಾ ಆಯೋಗ ಮತದಾನದ ಹಕ್ಕುಗಳನ್ನು ಪೌರತ್ವವನ್ನು ನಿರ್ಧರಿಸುವುದದರೊಂದಿಗೆ ತಳಕು ಹಾಕುವ ಹೆಚ್ಚುವರಿ ಪ್ರಯತ್ನದಿದಾಗಿ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಯಾವುದೇ ಕಾನೂನಿಲ್ಲ, ಯಾವುದೇ ನಿಯಮಇಲ್ಲ. ಅಮಿತ್ ಷಾ ಟಂಕಿಸಿದ ʻಡಿಟೆಕ್ಟ್, ಡಿಲೀಟ್ ಆ್ಯಂಡ್ ಡಿಪೋರ್ಟ್ʼ (ಪತ್ತೆ ಹಚ್ಚಿ, ತೆಗೆದುಹಾಕಿ ಮತ್ತು ಗಡಿಪಾರು ಮಾಡಿ) ಎಂಬುದು ಆಯೋಗದ ಎಸ್‍ಒಪಿ, ಅಂದರೆ ಸಾಮಾನ್ಯ ಕಾರ್ಯಾಚರಣಾ ವಿಧಾನ ಆಗಿಬಿಟ್ಟಿದೆ. ನಿಜವಾದ ಅರ್ಥದಲ್ಲಿ ಹೇಳಬೇಕೆಂದರೆ ನಾವೀಗ ಒಂದು ಠಕ್ಕತನದ ಸನ್ನಿವೇಶದತ್ತ ಸಾಗುತ್ತಿದ್ದೇವೆ.
ಇದನ್ನೂ ನೋಡಿ: 2025 ಹಿನ್ನೋಟ | ಮರೆಯಲಾಗದ ಮರೆಯಬಾರದ ವರ್ಷ 2025 | ಗುರುರಾಜ ದೇಸಾಯಿ ಕೆ.ಎಸ್.ವಿಮಲಾ ಮಾತುಕತೆ Janashakthi Media
ಜಗತ್ತಿನಾದ್ಯಂತ ಅನೇಕ ಅಲ್ಲೋಲಕಲ್ಲೋಲದ ಘಟನೆಗಳು ನಡೆದಿವೆ. ಅಮೆರಿಕದ ಬೆಂಬಲದೊಂದಿಗೆ ಗಾಜಾದಲ್ಲಿ ಪ್ಯಾಲೆಸ್ತೀನಿ ಜನರ ಮಾರಣಹೋಮಕ್ಕೆ 2025 ಸಾಕ್ಷಿಯಾಗಿದೆ. ಗಾಜಾದಿಂದ ಅರಬ್ಬರನ್ನು ಅಳಿಸಿಹಾಕುವುದು, ಈ ಪ್ರಯತ್ನದ ಉದ್ದೇಶವಾಗಿದೆ. ಆದರೆ, ಜಗತ್ತಿನಾದ್ಯಂತದ ಜನರು ಈ ಹೇಯ ಯತ್ನದ ವಿರುದ್ಧ ದನಿಯೆತ್ತಿರುವುದು ಸಮಾಧಾನದ ಸಂಗತಿಯಾಗಿದೆ. ಅದರ ಫಲವಾಗಿ, ಅಂತಿಮವಾಗಿ ಝಿಯೋನಿಸ್ಟ್ ಇಸ್ರೇಲಿಗಳಿಗೆ ಹಿಂದೆ ಬೆಂಬಲ ನೀಡುತ್ತಿದ್ದ ದೇಶಗಳು ಕೂಡ ಕದನ ವಿರಾಮಕ್ಕೆ ಒತ್ತಾಯಿಸುವ ಬಲವಂತಕ್ಕೆ ಒಳಗಾದವು. ಆದರೂ ಕದನವಿರಾಮದ ಉಲ್ಲಂಘನೆಗಳು ನಡೆಯುತ್ತಲೇ ಇವೆ. ನೇತನ್ಯಾಹು ಮತ್ತು ಆತನ ಗ್ಯಾಂಗ್‌ಅನ್ನು ಮಾನವತೆಯ ವಿರುದ್ಧದ ಅಪರಾಧಕ್ಕಾಗಿ ಹೊಣೆ ಮಾಡದ ಹೊರತು ಇದು ಹಾಗೇ ಇರುತ್ತದೆ. ವೆನಿಜುವೆಲಾದಲ್ಲಿ ಮಾಡುತ್ತಿರುವಂತೆ, ಹೊಸ ಸಾಹಸಗಳಿಗೆ ಕೈ ಹಾಕಲು ಅಮೆರಿಕ ಪ್ರಯತ್ನಿಸುತ್ತಿದೆ. ಆದರೆ ಇಲ್ಲಿ ಕೂಡ ಬೆಳೆಯುತ್ತಿರುವ ಬಹುಧ್ರುವೀಯತೆ ಮತ್ತು ಚೀನಾದ ಪ್ರಾಬಲ್ಯದಿಂದಾಗಿ ಅಮೆರಿಕದ ಏಕಪಕ್ಷೀಯತೆಯು ಹಿಂದಿನಂತೆ ನಿರ್ಣಾಯಕ ಅಂಶವಾಗಿ ಉಳಿದಿಲ್ಲ. ಟ್ರಂಪ್‌ರ ತೆರಿಗೆ ಭಯೋತ್ಪಾದನೆಯು ಉದ್ದೇಶಿತ ಪಾರಮ್ಯ ಸಾಧನೆಯ ಗುರಿಯಲ್ಲಿ ಸೋತಿದೆ.
ನೆರೆಯ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಕಳವಳಕಾರಿಯಾಗಿದೆ. ಮೂಲಭೂತವಾದಿಗಳ ಆಕ್ರಮಣವು ಅಲ್ಪಸಂಖ್ಯಾತರ ವಿರುದ್ಧ ಮಾತ್ರ ನಿರ್ದೇಶಿತವಾಗಿಲ್ಲ. 1971ರ ವಿಮೋಚನಾ ಹೋರಾಟದ ನಂತರ ಹೊರಹೊಮ್ಮಿದ ವಿವೇಕದ ವಿರುದ್ಧವೂ ಮೂಲಭೂತವಾದಿದಾಳಿಬೆಳೆಯುತ್ತಿರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ಬಾಂಗ್ಲಾದೇಶ ಮತ್ತು ಭಾರತದಲ್ಲಿ ಮೂಲಭೂತವಾದಿ ಮತ್ತು ಕೋಮುವಾದಿ ಶಕ್ತಿಗಳು ಮೇಲುಗೈ ಪಡೆಯುತ್ತಿರುವುದು ಮಾತ್ರವಲ್ಲದೆ ಜಾತ್ಯತೀತ ಪ್ರಜಾಪ್ರಭುತ್ವಗಳನ್ನು ಧರ್ಮಾಧಾರಿತ ಅಸ್ಮಿತೆಯ ಸಂಕುಚಿತ ರಾಷ್ಟ್ರೀಯತೆಯ ನೆಲೆಯಲ್ಲಿ ಪರಿವರ್ತಿಸುವತ್ತ ರಾಷ್ಟ್ರೀಯ ಅಸ್ಮಿತೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಪ್ರಯತ್ನವಾಗಿದೆ.
ಹೀಗಾಗಿ, 2026ರಲ್ಲಿ ಅಗಾಧವಾದ ಸವಾಲುಗಳಿರುವುದು ಸ್ಪಷ್ಟ.ಡಿಕನ್ಸ್ರವರಮಾತುಗಳಲ್ಲಿ ಹೇಳುವುದಾದರೆ ʻಇದು ಹತಾಶೆಯ ಚಳಿಗಾಲವಾಗಿದೆʼ. ಆದರೆ, `ಆಶಾವಾದದ ವಸಂತದತ್ತ’ ಸಾಗುವ ಹಾದಿಯನ್ನೂ ತೋರುತ್ತದೆ. ಜನತೆ ಹಾಗೂ ಅವರ ವಿಶಾಲ ಒಗ್ಗಟ್ಟು ಮತ್ತು ಪ್ರಜ್ಞಾಶೀಲ, ಚೈತನ್ಯಭರಿತಹೋರಾಟಗಳು ಈ ಬದಲಾವಣೆಯನ್ನು ಖಾತರಿಪಡಿಸಬಲ್ಲವು. ಈ ವಿಶಾಲ ಒಗ್ಗಟ್ಟಿನ ಜತೆ ಜತೆಯಲ್ಲೇ ಒಂದು ಪರ್ಯಾಯಕ್ಕಾಗಿನ ಹಾಗೂ ಆ ದಿಕ್ಕಿನಲ್ಲಿ ಸಾಗುವ ಸ್ಪಷ್ಟತೆಯು ಈ ಒಗ್ಗಟ್ಟು ಸುಸ್ಥಿರವಾಗಿರಲು ನೆರವಾಗುತ್ತದೆ. 2025ರ ಕೈಬಿಡಬೇಕಾದಅಂಶಗಳನ್ನೆಲ್ಲತ್ಯಜಿಸಿ 2026 ಕ್ಕೆ ಹೊಸ ನಿರೀಕ್ಷೆ ಮತ್ತು ಸಂತೋಷವನ್ನು ತರುವುದನ್ನು ಖಚಿತಗೊಳಿಸುವಲ್ಲಿ ಜನತೆಯೇ ಪ್ರಮುಖ ಕೊಂಡಿ. ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆಯು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ದ ಬೆಂಬಲದೊಂದಿಗೆ ಕಾರ್ಮಿಕ ಸಂಹಿತೆಗಳು ಮತ್ತು ಸರಕಾರದ ಇತರ ಎಲ್ಲ ಜನವಿರೋಧಿ ಕ್ರಮಗಳಿಗೆ ಸಂಪೂರ್ಣ ವಿರೋಧವನ್ನು ವ್ಯಕ್ತಪಡಿಸಲು 2026ರ ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದು ಆ ವಿಶಾಲ ಒಗ್ಗಟ್ಟನ್ನು ಬೆಸೆಯಲು ಒಂದು ಮೂರ್ತ ಅವಕಾಶವಾಗಿದೆ. ಇದು ಇಂಥ ಬೃಹತ್ ಹೋರಾಟಗಳಿಗೆ ಹೊಸ ಅವಕಾಶಗಳನ್ನು ತೆರೆದು ಕೊಡುವ ಸಾಮರ್ಥ್ಯವನ್ನು ಹೊಂದಿದೆ.
(ಕೃಪೆ: ಪೀಪಲ್ಸ್ ಡೆಮಾಕ್ರಸಿ)
