ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ; ಸರಿಸುಮಾರು 21 ಸಾವಿರಕ್ಕೂ ಅಧಿಕ ಮಂದಿ ಮರಣ

ಇಸ್ತಾಂಬುಲ್​: ಕಳೆದ ನಾಲ್ಕು ದಿನಗಳ ಹಿಂದೆ ಸಂಭವಿಸಿದ ಭೂಕಂಪನದಿಂದ ನಲುಗಿರುವ ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಸಾವಿನ ಪ್ರಮಾಣವೂ ಏರಿಕೆ ಕಂಡಿದ್ದು, ಇದುವರೆಗೆ ಸುಮಾರು 21 ಸಾವಿರಕ್ಕೂ ಹೆಚ್ಚು ಮಂದಿ ಮರಣ ಹೊಂದಿದ್ದಾರೆ ಎಂದು ವರದಿಯಾಗಿದೆ.

ಅಲ್ಲಿನ ಸರ್ಕಾರಗಳು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪಗಳಿಂದ ಮೃತರ ಸಂಖ್ಯೆ 21,000ಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಅವಶೇಷಗಳಡಿ ಸಿಲುಕಿದವರನ್ನು ರಕ್ಷಣೆ ಮಾಡಲು ರಕ್ಷಣಾ ಸಿಬ್ಬಂದಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಹಲವು ಕಟ್ಟಡಗಳು ಸಂಪೂರ್ಣವಾಗಿ ಧ್ವಂಸಗೊಂಡಿದೆ.

ಇದನ್ನು ಓದಿ: ಸಿರಿಯಾ-ಟರ್ಕಿ ಭೂಕಂಪನ; 4300ಕ್ಕೂ ಹೆಚ್ಚು ಮಂದಿ ಸಾವು; 7 ದಿನ ರಾಷ್ಟ್ರೀಯ ಶೋಕಾಚರಣೆ

ಟರ್ಕಿಯಲ್ಲಿ ಸಾವಿನ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಏರಿಕೆಯಾಗಿದ್ದು, 17,674ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. 72,879 ಮಂದಿ ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಸ್ವಾಮ್ಯದ ಮತ್ತು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳನ್ನು ಒಳಗೊಂಡಿರುವ ಸಿರಿಯಾದಲ್ಲಿ 3,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 5,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಅಲ್ಲಿನ ಸ್ಥಳೀಯ ಕಾಲಮಾನ ಫೆಬ್ರವರಿ 6, 2023 ರಂದು ಮುಂಜಾನೆ 4:17 ಗಂಟೆಗೆ ಟರ್ಕಿಯ ದಕ್ಷಿಣ ಪ್ರಾಂತ್ಯದ ಕಹ್ರಮನ್‌ ಮರಸ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ನಂತರ ಕೆಲವು ನಿಮಿಷಗಳ ನಂತರ ದೇಶದ ದಕ್ಷಿಣ ಪ್ರಾಂತ್ಯ ಗಾಜಿಯಾಂಟೆಪ್‌ನಲ್ಲಿ 6.4 ತೀವ್ರತೆಯ ಭೂಕಂಪ ಮತ್ತು ಮಧ್ಯಾಹ್ನ 1:24 ಕ್ಕೆ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಫೆಬ್ರವರಿ 8ರಂದು ಟರ್ಕಿಗೆ ಆಗಮಿಸಿದ 82 ಸದಸ್ಯರ ಚೀನೀ ರಕ್ಷಣಾ ತಂಡ ಸೇರಿದಂತೆ ಅಂತರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಭೂಕಂಪ ಪೀಡಿತ ವಲಯಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಇದನ್ನು ಓದಿ: ಸಿರಿಯಾ-ಟರ್ಕಿಯಲ್ಲಿ ಪ್ರಬಲ ಭೂಕಂಪನ; 200ಕ್ಕೂ ಮಂದಿ ಸಾವು-ಕಟ್ಟಡಗಳು ಕುಸಿತ

ಭೀಕರ ಭೂಕಂಪನದಿಂದ ಬಹತೇಕ ಕಟ್ಟಡಗಳು ನೆಲಸಮವಾಗಿದ್ದು, ಜನರ ಆಕ್ರಂದನ ಮುಗಿಲು ಮುಟ್ಟಿದೆ. ಒಂದರ ಮೇಲೊಂದರಂತೆ ಅಪ್ಪಳಿಸಿದ ಸರಣಿ ಭೂಕಂಪನದಿಂದ ಜನಜೀವನ ಸಂಪೂರ್ಣ ಛಿದ್ರಗೊಂಡಿವೆ. ಇತ್ತ ತಮ್ಮ ಮನೆಗಳನ್ನು ಕಳೆದುಕೊಂಡ ಜನರು ಆಹಾರ ಮತ್ತು ನೀರಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಮನೆ ಕಳೆದುಕೊಂಡು ನಿರಾಶ್ರಿತಗೊಂಡಿರುವವ ಸಂತ್ರಸ್ಥರು ಹಲವರು ಟೆಂಟ್‌ಗಳು, ಕ್ರೀಡಾಂಗಣಗಳು ಮತ್ತು ಇತರ ತಾತ್ಕಾಲಿಕ ವಸತಿಗಳಲ್ಲಿ ಆಶ್ರಯ ಪಡೆದಿದ್ದಾರೆ. ಕಟ್ಟಡಗಳ ಕುಸಿತದ ಅವಶೇಷಗಳಡಿಯಲ್ಲಿ ಸಿಲುಕಿ ಸಾಯುತ್ತಿದ್ದರೆ, ಇನ್ನೂ ಕೆಲವರು ಚಳಿಯಿಂದ ಸಾವನ್ನಪ್ಪುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ಎರಡರಲ್ಲೂ ಪ್ರತಿಕೂಲ ಹವಾಮಾನ, ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹಾನಿಯಾಗಿವೆ. ಇದರಿಂದ ರಕ್ಷಣಾ ಕಾರ್ಯಕ್ಕೂ ಅಡ್ಡಿಯುಂಟಾಗಿದೆ ಎಂದು ವರದಿಯಾಗಿದೆ.

ವಿದೇಶಗಳಿಂದ ನೆರವಿನ ಹಸ್ತ;

95 ದೇಶಗಳು ನೆರವು ನೀಡಿವೆ ಎಂದು ಟರ್ಕಿ ವಿದೇಶಾಂಗ ಸಚಿವಾಲಯ ತಿಳಿಸಿದ್ದು, ರಕ್ಷಣಾ ಕಾರ್ಯಚರಣೆಗೆ ಟ್ರ್ಯಾಕ್ಟರ್‌ಗಳು, ಕ್ರೇನ್‌ಗಳು, ಬುಲ್‌ಡೋಜರ್‌ಗಳು ಮತ್ತು ಅಗೆಯುವ ಯಂತ್ರಗಳು ಸೇರಿದಂತೆ 5,500 ಕ್ಕೂ ಹೆಚ್ಚು ವಾಹನಗಳನ್ನು ರವಾನಿಸಲಾಗಿದೆ ಎಂದು ಟರ್ಕಿಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನವು ವಿದೇಶಗಳಿಂದ ಒಟ್ಟು 6,500 ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಿದ್ದಾರೆ. ಸಿರಿಯಾಕ್ಕೆ ಅಂತಾರಾಷ್ಟ್ರೀಯ ನೆರವು ವಿರಳವಾಗಿದ್ದು, ರಷ್ಯಾದ ಬೆಂಬಲಿತ ಸರ್ಕಾರಿ ಪಡೆಗಳಿಂದ ಸುತ್ತುವರಿದಿರುವ ಗಡಿಯುದ್ದಕ್ಕೂ ನಾಗರಿಕ ಯುದ್ಧ ಮತ್ತು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶವನ್ನು ಪ್ರತ್ಯೇಕಿಸುವುದರಿಂದ ಅಲ್ಲಿನ ರಕ್ಷಣಾ ಯತ್ನಗಳಿಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

ವರ್ಷದೊಳಗೆ ಮರು ನಿರ್ಮಾಣ:

ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಧ್ವಂಸಗೊಂಡ ಪ್ರದೇಶಗಳಿಗೆ ಭೇಟಿ ನೀಡಿದ್ದು, ಸದ್ಯ ಪರಿಸ್ಥಿತಿ ಸುಧಾರಿಸುತ್ತಿದೆ ಎಂದಿದ್ದಾರೆ. ವಿನಾಶದಿಂದ ಬದುಕುಳಿದವರಿಗೆ ಒಂದು ವರ್ಷದೊಳಗೆ ಮನೆ ಮರುನಿರ್ಮಾಣ ಮಾಡಲಾಗುವುದು. ಜತಗೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ 10,000 ಟರ್ಕಿಶ್ ಲಿರಾ(ಟರ್ಕಿಯ ಅಧಿಕೃತ ಕರೆನ್ಸಿ) ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

 

Donate Janashakthi Media

Leave a Reply

Your email address will not be published. Required fields are marked *