ಬೆಂಗಳೂರು: ರಾಜ್ಯದಲ್ಲಿ ಮದ್ಯ ಖರೀದಿ ನೀತಿಯಲ್ಲಿ ಕೆಲ ಬದಲಾವಣೆ ಮಾಡಲು ಮುಂದಾದ ಸರ್ಕಾರ, ತಾನು ರೂಪಿಸಿದ ಕರಡು ನಿಯಮವನ್ನು ಹಿಂಪಡೆದಿದೆ. ಮದ್ಯ ಖರೀದಿಯ ಕನಿಷ್ಠ ವಯಸ್ಸನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕರಡು ನಿಯಮ ರೂಪಿಸಿ 21 ವರ್ಷದವರೆಗೆ ಮದ್ಯ ಮಾರಾಟ ಮಾಡಬಾರದು ಎಂಬ ನಿಯಮ ಸಡಿಲಿಸಿ ಅದನ್ನು 18 ವರ್ಷ ಎಂದು ಬದಲಿಸಲು ಸರ್ಕಾರ ಮುಂದಾಗಿತ್ತು. ಜನವರಿ 9ರಂದು ಕರಡು ಅಧಿಸೂಚನೆ ಹೊರಡಿಸಿ 30 ದಿನಗಳೊಳಗಾಗಿ ಆಕ್ಷೇಪಣೆ ಸಲ್ಲಿಸಬೇಕೆಂದು ಸೂಚನೆ ನೀಡಿತು. ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತಪಡಿಸಿದರು.
ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು, 1967ರ ನಿಯಮಕ್ಕೆ ತಿದ್ದುಪಡಿ ತಂದು ವಯಸ್ಸಿನ ಮಿತಿ ಬದಲಿಸಲು ಮುಂದಾಗಿ, ತಿದ್ದುಪಡಿ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ. ವಿಧಾನಸಭೆ ಚುನಾವಣಾ ವರ್ಷದಲ್ಲಿ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಿಂದ ವ್ಯಕ್ತವಾದ ತೀವ್ರ ವಿರೋಧದಿಂದಾಗಿ ಯಥಾಸ್ಥಿತಿ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಮೊದಲ ನಿಯಮದಲ್ಲಿ 18 ವರ್ಷ ಹಾಗೂ ಎರಡನೇ ನಿಯಮದಲ್ಲಿ 21 ವರ್ಷ ಇದೆ. ಈ ಗೊಂದಲ ನಿವಾರಿಸಲು 21 ವರ್ಷ ಎಂದು ಇರುವಲ್ಲಿ 18 ವರ್ಷ ಎಂದು ಉಲ್ಲೇಖಿಸಲು ಉನ್ನತ ಮಟ್ಟದ ಸಮಿತಿ ಶಿಫಾರಸು ಮಾಡಿತ್ತು. ಹೀಗಾಗಿ ಕರಡು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು ಎಂದು ಕರಡು ಪ್ರಸ್ತಾವನೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.