ಕರ್ನಾಟಕದಲ್ಲಿ ಆಫ್ರಿಕನ್ ಸೋಗು

ರಹಮತ್‌ ತರೀಕರೆ
ಕರ್ನಾಟಕದ ಮೊಹರಂ ಆಚರಣೆಗಳಲ್ಲಿ ಹುಲಿ ಕರಡಿ ಕೋಡಂಗಿ ಹಿಡಿಂಬೆ ಪಾಳೇಗಾರ ಫಕೀರ ಕೊರವಂಜಿ ಬಸುರಿ ಬಾಣಂತಿ ಇತ್ಯಾದಿ ಸೋಗು ಅಥವಾ ವೇಷಗಳ ಪ್ರದರ್ಶನ ಜರುಗುತ್ತದೆ. ಇವುಗಳಲ್ಲೆಲ್ಲ ವಿಶೇಷವಾದುದು ಸಿದ್ದಿವೇಷ. ಉತ್ತರ ಕರ್ನಾಟಕದ ಬಹುತೇಕ ಕಡೆ ಕಾಣಬರುವ ಈ ವೇಷಕ್ಕೆ ಒಂದೊಂದು ಕಡೆ ಒಂದೊಂದು ಹೆಸರಿದೆ. ಗೋಕಾಕದ ಕಡೆ ಸಿದ್ದಿಕಶಾನಿ, ಬೀಳಗಿಯಲ್ಲಿ ಸಿದ್ದಿಕ ಬಕರಾ, ಅಥಣಿಯಲ್ಲಿ ಸಿದ್ದಿಕಬಾಬಾ, ಬಿಜಾಪುರದಲ್ಲಿ ಅಚೊಳ್ಳಿ ಬಿಚೊಳ್ಳಿ, ಬಳ್ಳಾರಿ ಭಾಗದಲ್ಲಿ ಅಚ್ಚಳ್ಳಿ ಪಿಚ್ಚಳಿ, ರಾಮದುರ್ಗ ಭಾಗದಲ್ಲಿ ಕಳ್ಳಿಬಾಬಾ-ಇತ್ಯಾದಿ. ಕರ್ನಾಟಕ

ಇದರ ಲಕ್ಷಣಗಳನ್ನು ಗಮನಿಸಿದರೆ, ಇದು ಬಹುಶಃ ಆಫ್ರಿಕಾದಿಂದ ಬಂದಿರುವ ವೇಷವೆಂದು ಅನಿಸುತ್ತದೆ. ಈ ವೇಷದ ಲಕ್ಷಣಗಳಿವು: ಮೈ ಮತ್ತು ಮುಖಕ್ಕೆ ಕಪ್ಪುಬಣ್ಣ; ತಲೆಯ ಮೇಲೆ ಬಣ್ಣದ ಕಾಗದದ ಚೂಪನೆಯ ಟೊಪ್ಪಿಗೆ; ಸೊಂಟಕ್ಕೆ ಸುತ್ತಿದ ಗೋಣಿತಾಟು ಇಲ್ಲವೇ ಕರಿಕಂಬಳಿ; ಅದರ ಮೇಲೆ ಬಿಗಿದ ಗಂಟೆಸರ; ದಟ್ಟ ಗಡ್ಡಮೀಸೆ; ಕೈಯಲ್ಲಿ ದೊಣ್ಣೆ. ಈ ವೇಷವನ್ನು ಹರಕೆಯ ಭಾಗವಾಗಿಯೂ ರಂಜನೆಯ ಭಾಗವಾಗಿಯೂ ಹಾಕಲಾಗುವುದು.

ವ್ಯತ್ಯಾಸವೆಂದರೆ, ಹರಕೆಗಾಗಿ ವೇಷ ಧರಿಸಿ ಮೌನಧಾರಣೆ ಮಾಡಿ ಶ್ರದ್ಧೆಯಿಂದ ಮನೆಮನೆಗೆ ಹೋಗಿ ಭಿಕ್ಷೆ ಬೇಡುವರು; ಹಗ್ಗದಂತೆ ಹೊಸೆದ ಟವೆಲ್ಲಿನಿಂದ ಜನರ ಬೆನ್ನಮೇಲೆ ಬಾರಿಸಿ ಹಣ ಕೇಳುವರು; ದೇವರ ಸವಾರಿ ಹೊರಟಾಗ ಅದರ ಮುಂದೆಮುಂದೆ ಇರುವರು. ಮನರಂಜನೆಗಾಗಿ ವೇಷ ಹಾಕಿದವರು ಚಂಚಲವಾಗಿ ಹರಿದಾಡುತ್ತಾ, ವಾದ್ಯಕಾರನ ಜತೆಗೂಡಿ ಗಲಭೆ ಎಬ್ಬಿಸುತ್ತ ಗಲ್ಲಿಗಲ್ಲಿ ತಿರುಗುವರು. ಬೂದಿ ಬಡಿದುಕೊಂಡು, ಕಪ್ಪು ಕನ್ನಡಕ ಹಾಕಿ ಧರಿಸಿದ ಇವರನ್ನು ಬೀದಿಮಕ್ಕಳು ಛೇಡಿಸುತ್ತಾ ‘ಅಚಳ್ಳಿ ಪಿಚಳ್ಳಿ ಬೇವಿನಮರದಾಗ ಬೆಳ್ಳುಳ್ಳಿ’ ಎಂದು ಅಣಕಿಸುವರು. ವೇಷಗಾರರು ಅವರ ಮೇಲೆ ಏರಿ ಹೋಗಿ ಹೊಡೆವಂತೆ ನಟಿಸುವರು. ಕರ್ನಾಟಕ

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ : ಕಳೆದ 32 ತಿಂಗಳಲ್ಲಿ 48 ಯೋಧರು ಹುತಾತ್ಮ

ಈ ಸಿದ್ದಿವೇಷವು ಕುಂದಾಪುರ ಸೀಮೆಯ ಮೊಹರಂನಲ್ಲೂ ಕಾಣಬರುತ್ತದೆ. ಅಲ್ಲಿ ಇದನ್ನು ‘ಸಿದ್ದಿಬಾಯ್ ಸಿದ್ದಿʼ ಎಂದು ಕರೆಯುವರು. ಲೇಖಕಿ ವೈದೇಹಿಯವರು ಇದನ್ನು ಬಣ್ಣಿಸುತ್ತ “ಕಂಬಳಿ ಸುತ್ತಿಕೊಂಡು, ತಲೆ ಕೆದರಿಕೊಂಡು, ಸೊಂಟಕ್ಕೆ ಒಂದು ಮರದ ಗಂಟೆ ಕಟ್ಟಿಕೊಂಡು, ಕೊಟಕೊಟ ಸದ್ದುಮಾಡುತ್ತ ನಿಂತಲ್ಲಿಂದ ನೆಗೆದು ಹಾರಿ, ಒಮ್ಮೆ ಸಿದ್ದಿಬಾಯ್ ಸಿದ್ದಿ ಎಂದು ಕರ್ಕಶವಾಗಿ ಕೂಗು ಹಾಕುತ್ತಾರೆ” ಎಂದು ಬಣ್ಣಿಸಿರುವರು. ಈ ಲಕ್ಷಣಗಳು ಉತ್ತರ ಕರ್ನಾಟಕದ ಸಿದ್ದಿವೇಷವನ್ನೇ ನೆನಪಿಸುತ್ತವೆ. ಹಾಗೆಂದು ಸಿದ್ದಿವೇಷವು ಬಿಜಾಪುರ ಸೀಮೆಯಿಂದ ಕರಾವಳಿಗೆ ಹೋದದ್ದಲ್ಲ. ಬಹುಶಃ ಸಿದ್ದಿ ಜನರು ನೆಲೆಸಿದ ಕಡೆಯಲ್ಲೆಲ್ಲ ಅದು ಇದ್ದಂತಿದೆ. ಫರಕೆಂದರೆ, ಕುಂದಾಪುರದಲ್ಲಿ ಸಿದ್ಧಿವೇಷವನ್ನು ಆಫ್ರಿಕನ್ ಮೂಲದ ಕಪ್ಪುಜನರೇ ಬಂದು ಹಾಕುತ್ತಿದ್ದರು; ಉತ್ತರ ಕರ್ನಾಟಕದಲ್ಲಿ ಇದನ್ನು ಸ್ಥಳೀಯರು ಹಾಕುತ್ತಿದ್ದಾರೆ.

ಕರ್ನಾಟಕ

ತುಮಕೂರು ಸೀಮೆಯ ಮೊಹರಂ ಆಚರಣೆಗಳಲ್ಲಿ ಕೋಡಂಗಿ ವೇಷವಿದ್ದು, ಅದೂ ಸಿದ್ದಿವೇಷಕ್ಕೆ ಹತ್ತಿರವಿದೆ. ಸಣ್ಣ ವ್ಯತ್ಯಾಸವೆಂದರೆ, ಕೋಡಂಗಿಯ ಕೈಯಲ್ಲಿ ಅಡಕೆಹಾಳೆ ಸುತ್ತಿ ಮಾಡಿದ, ದೊಡ್ಡಸದ್ದು ಎಬ್ಬಿಸುತ್ತ ಹುಸಿಪೆಟ್ಟು ಕೊಡುವ ಕೋಲಿದ್ದು, ಮುಖಕ್ಕೆ ಕಪ್ಪುಬಣ್ಣದ ಬದಲು ಕಪ್ಪು ಬಳಿದ ಕೆನ್ನಾಲಗೆ ಚಾಚಿದ ಮುಖವಾಡವಿದೆ. ಈ ಕೋಡಂಗಿಯು ಮೊಹರಂ ದಿನಗಳಲ್ಲಿ ಆಸುಪಾಸಿನ ಹಳ್ಳಿಗಳ ಮೇಲೆ ಹೋಗಿ ಹಬ್ಬದ ಖರ್ಚನ್ನು ಗಿಟ್ಟಿಸುವುದು. ತಮಟೆ ಹೊಡೆತಕ್ಕೆ ಸರಿಯಾಗಿ ಹೆಜ್ಜೆಹಾಕುವ ಕೋಡಂಗಿಯ ಹಿಂದೆಯೂ ಮಕ್ಕಳ ಹಿಂಡು ಇರುತ್ತದೆ. ಮಕ್ಕಳು ಕೋಡಂಗಿಯ ಸೊಂಟಕ್ಕೆ ಕಟ್ಟಿದ ಗಂಟೆಯನ್ನು ಅಲುಗಿಸಿ ಅಥವಾ ಅದು ಉಟ್ಟಗೋಣಿಯನ್ನು ಎಳೆದು ಓಡಿಹೋಗುತ್ತವೆ; ಕೋಡಂಗಿ ಇದಕ್ಕೇ ಕಾಯುತ್ತಿದ್ದಂತೆ, ಕುಣಿತ ಬಿಟ್ಟು ಮಕ್ಕಳನ್ನು ಅಟ್ಟಿಸಿಕೊಂಡು ಓಡಿಹೋಗುತ್ತದೆ.

ದಂಡಿನಶಿವರದ ಪ್ರಸಿದ್ಧ ಕೋಡಂಗಿ ಪಾತ್ರಧಾರಿ ಲಕ್ಷ್ಮಣಯ್ಯನವರಲ್ಲಿ ಈ ವೇಷ ಹೇಗೆ ಬಂತು ಎಂದು ವಿಚಾರಿಸಿದೆ. ಅದಕ್ಕವರು “ನಮ್ಮ ಹಿರೇರು ಹಾಕ್ತಿದ್ರು ಅಂತ ನಾವೂ ಹಾಕ್ತಿದ್ದೀವಿ ಸೋಮಿ. ಮಕ್ಕಳು ಇಲ್ದಿದ್ದರೆ ಈ ಆಟವೇ ಇಲ್ಲ. ಮಕ್ಕಳನ್ನ ಓಡಿಸೋದೇ ನಮಗೆ ಪ್ರೀತಿ. ಮಕ್ಕಳಿಗೆ ಹೆದರ್ಕೊಂಡು ಓಡೋದೇ ಪ್ರೀತಿ. ತಾಯಂದಿರು ಮಕ್ಕಳ ತಲೆಮೇಲೆ ನಮ್ಮ ಕೈಲಿ ಮೂರು ಏಟು ಹಾಕಿಸ್ತಾರೆ ಹೆದರಿಕೆ ಬಿಡಲಿ ಅಂತ. ಆದರೆ ಕೋಡಂಗಿಗೆ ಹೆದರಿ ಅವು ಉಚ್ಚೆ ಹುಯ್ಕೊಂಡಿರೋದೇ ಜಾಸ್ತಿ” ಎಂದು ವಿವರಿಸಿದರು.

ಈ ವೇಷಗಳ ನಿಜವಾದ ಮೂಲ ಯಾವುದು? ಈ ವೇಷಗಾರರು ಯಾಕೆ ಮುಖಕ್ಕೆ ಕಪ್ಪು ಬಳಿದುಕೊಂಡು ಕಾಳಾಮುಖಿಗಳಾಗುತ್ತಾರೆ? ಅಚ್ಚಳ್ಳಿ ಪಿಚ್ಚಳಿ, ಕಳ್ಳೊಳ್ಳಿ, ಅಳ್ಳೊಳ್ಳಿ, ಸಿದ್ಧಿಕಸಿದ್ಧಿ, ಸಿದ್ದಿಕಬಾವಾ ಮುಂತಾದ ಹೆಸರುಗಳ ಹಿಂದಿನ ಅರ್ಥವೇನು? ಸಿದ್ದಿಕಸಿದ್ದಿ ವೇಷಹಾಕುವುದಕ್ಕೆ ಖ್ಯಾತರಾಗಿರುವ ಹೈದರಾಬಾದ್ ಕರ್ನಾಟಕದ ಜಾತಿಗಾರ ಸಮುದಾಯಕ್ಕೂ ಇದಕ್ಕೂ ಏನು ಸಂಬಂಧ? ಈ ವೇಷ ಯಾಕೆ ಮೊಹರಂ ಹಬ್ಬದಲ್ಲೇ ಕಾಣಿಸುತ್ತದೆ? ಹರಕೆ ವೇಷಧಾರಿಗಳೇಕೆ ಮಾತಾಡುವುದಿಲ್ಲ? ಮಕ್ಕಳೇಕೆ ಇವರನ್ನು ಛೇಡಿಸುತ್ತಾರೆ? ಈ ಪ್ರಶ್ನೆಗಳಿಗೆ ಸಮರ್ಪಕ ಜವಾಬು ಸಿಗುತ್ತಿಲ್ಲ. ಆದರೆ ‘ಸಿದ್ಧಿ ಎಂಬ ಪದ ಮತ್ತು ಮುಖಕ್ಕೆ ಬಳಿದುಕೊಳ್ಳುವ ಕಪ್ಪುಬಣ್ಣಗಳು, ಈ ಸೋಗು ಆಫ್ರಿಕಾ ಮೂಲದಿಂದ ಕರ್ನಾಟಕಕ್ಕೆ ಬಂದಿರುವ ನೃತ್ಯವೆಂಬ ಸೂಚನೆಯನ್ನಂತೂ ನೀಡುತ್ತದೆ. ಈ ಸೂಚನೆಯ ಬೆನ್ನುಹತ್ತಿ ಹೋದರೆ ಕೆಲವು ಸ್ವಾರಸ್ಯಕರ ಹೊಳಹುಗಳು ಸಿಗುತ್ತವೆ.

ಅರಬ್ಬಿ ಸಮುದ್ರಕ್ಕೆ ತನ್ನ ಮೈಯನ್ನು ತೆರೆದುಕೊಂಡಿರುವ, ಪೂರ್ವ ಆಫ್ರಿಕದ ದೇಶಗಳಿಂದ ಗಟ್ಟಿಮುಟ್ಟಾದ ಜನರನ್ನು ಹಿಡಿದು ಹಡಗುಗಳಲ್ಲಿ ತುಂಬಿಕೊಂಡು ಹೋಗಿ ಬೇರೆಬೇರೆ ದೇಶದ ಮಾರುಕಟ್ಟೆಗಳಲ್ಲಿ ಮಾರುವ ಕೆಲಸವನ್ನು ಅರಬ್ ವರ್ತಕರು ಹಿಂದಿನಿಂದ ಮಾಡುತ್ತಿದ್ದರಷ್ಟೆ. ಗುಲಾಮರಿಗೆ ಅರಬ್ಬಿ ಭಾಷೆಯಲ್ಲಿ ಹಬಶಿ ಅಥವಾ ಸಿದ್ದಿ ಎನ್ನಲಾಗುತ್ತದೆ. ‘ಹಬಶಿ ಎಂದರೆ ಅಬಿಸೀನಿಯಾ (ಈಗಿನ ಇಥಿಯೋಪಿಯಾ) ದೇಶದವರು ಎಂದರ್ಥ. ‘ಸಿದ್ದಿ ಶಬ್ದವು ಆಫ್ರಿಕಾದ ಶಿದಿಮಾಸ್ ಎಂಬ ಆಫ್ರಿಕನ್ ಜನಾಂಗದಿಂದ ಬಂದಿದೆ. ಈಗಲೂ ಯಲ್ಲಾಪುರ ಸೀಮೆಯಲ್ಲಿರುವ ಆಫ್ರಿಕಾ ಮೂಲದ ಜನರನ್ನು ಸಿದ್ಧಿಗಳೆಂದೇ ಕರೆಯಲಾಗುತ್ತಿದೆ.

ಮುಂದೆ ಯೂರೋಪಿನ ದೇಶಗಳು ಆಫ್ರಿಕಾ ಖಂಡವನ್ನು ಆಕ್ರಮಿಸಿಕೊಂಡು, ಅದನ್ನು ಹರಿದು ಹಂಚಿಕೊಂಡರು. ಅದರಲ್ಲೂ ಪೋರ್ಚುಗೀಸರು ತಮ್ಮ ಆಫ್ರಿಕನ್ ವಸಾಹತುಗಳಿಂದ ಜನರನ್ನು ಹಿಡಿದು ತಂದು, ಗುಲಾಮರ ಮಾರಾಟವನ್ನು ಅರಬರ ಜತೆಗೂಡಿ ಮುಂದುವರೆಸಿದರು. ಗೋವೆಯನ್ನು ಹಿಡಿದ ಬಳಿಕ ಪೋರ್ಚುಗೀಜರಿಗೆ ಗುಲಾಮರ ಮಾರಾಟಕ್ಕೆ ದೊಡ್ಡ ಮಾರುಕಟ್ಟೆ ನಿರ್ಮಾಣವಾಯಿತು. ಈ ಧಂದೆಯ ಭಾಗವಾಗಿ ಆಫ್ರಿಕದ ಜನರು ತಮ್ಮ ಇಚ್ಛೆಗೆ ವಿರುದ್ಧವಾಗಿ ಜಗತ್ತಿನ ಬೇರೆಬೇರೆ ಭಾಗಗಳಿಗೆ ಸಾಗಿಸಲ್ಪಟ್ಟರು. ಈ ಸಾಗಾಟದ ಭಾಗವಾಗಿಯೇ ಅವರು ಭಾರತದ ಪಶ್ಚಿಮ ಕರಾವಳಿಯಲ್ಲಿದ್ದ ರಾಜ್ಯಗಳಿಗೂ ತರಲ್ಪಟ್ಟರು. ಈಗಲೂ ಕರಾಚಿಯಿಂದ ಹಿಡಿದು ಗುಜರಾತ್-ಮಹಾರಾಷ್ಟ್ರಗಳ ಕಡಲ ಬದಿಯ ಊರುಗಳಿಂದ ಹಿಡಿದು, ಉತ್ತರ ಕನ್ನಡದ ಹೊನ್ನಾವರ-ಭಟ್ಕಳಗಳ ತನಕ ಪಡುವಣ ಕಡಲ ತೀರದ ಉದ್ದಕ್ಕೂ ಆಫ್ರಿಕಾ ಮೂಲದ ಜನ ಕಾಣಸಿಗುತ್ತಾರೆ.

ಮುಂದೆ ದೆಹಲಿ, ಅಹಮದ್‌ನಗರ ಹಾಗೂ ಬಿಜಾಪುರ ರಾಜ್ಯಗಳ ಸುಲ್ತಾನರ ಕಾಲದಲ್ಲಿ, ಬೇರೆಬೇರೆ ಸೇವೆಗಳಿಗೆಂದು ಆಫ್ರಿಕನ್ ದೇಶಗಳಿಂದ ಗುಲಾಮರು ತರಲ್ಪಟ್ಟರು. ಅಹಮದ್‌ನಗರ ಬಿಜಾಪುರಗಳು ಗುಲಾಮರ ಮಾರಾಟದ ಪ್ರಸಿದ್ಧ ಮಾರುಕಟ್ಟೆಗಳೂ ಆಗಿದ್ದವು. ಇದರ ಜತೆಗೆ ಆಫ್ರಿಕಾ ದೇಶಗಳಿಂದ ರಾಯಭಾರಿಗಳಾಗಿಯೊ ವ್ಯಾಪಾರಿಗಳಾಗಿಯೊ ಬಂದ ಆಫ್ರಿಕನರಲ್ಲಿ ಕೆಲವರು ಇಲ್ಲಿಯೇ ಉಳಿದುಕೊಂಡರು. ಕಾಲಾನಂತರ, ರಾಜಪ್ರಭುತ್ವದ ಬೇರೆಬೇರೆ ಸ್ತರಗಳಲ್ಲಿ ಸೇವೆಗೆ ಸೇರಿದ ಸಿದ್ದಿಗಳಲ್ಲಿ ಕೆಲವು ಆಫ್ರಿಕನರು ಗುಲಾಮರಿಗಿಯಿಂದ ಬಿಡುಗಡೆ ಪಡೆದು ಸ್ವತಂತ್ರ ಜೀವನ ಆರಂಭಿಸಿದರು; ಕೆಲವರು ಗುಲಾಮಗಿರಿಯಿಂದ ತಪ್ಪಿಸಿಕೊಂಡು ಹೋಗಿ ನೆಲೆಸಿದರು; ಇನ್ನೂ ಕೆಲವರು ಕೆಚ್ಚು ಜಾಣತನ ನಿಷ್ಠೆಗಳ ಮೂಲಕ ದೊಡ್ಡದೊಡ್ಡ ಅಧಿಕಾರ ಸ್ಥಾನಕ್ಕೇರಿದರು.

ಅಂತಹವರಲ್ಲಿ ವಿಜಾಪುರದ ಸಿದ್ದಿ ಜವಾಹರ್, ಸಿದ್ದಿ ಅಂಬರ್, ಸಿದ್ದಿ ಮಸೂದ್‌ಖಾನ್, ಸಿದ್ದಿ ರೇಹಾನ್, ಸಿದ್ದಿ ಇಖಲಾಸ್‌ಖಾನ್, ಸಿದ್ದಿ ಮಲಿಕ್‌ಅಂಬರ್ ಮುಖ್ಯರು. ಬಿಜಾಪುರದ ಕಲಾವಿದರು ಈ ಪ್ರಸಿದ್ಧ ಸಿದ್ದಿಗಳ ವರ್ಣಚಿತ್ರಗಳನ್ನು ಬಿಡಿಸಿಟ್ಟಿದ್ದಾರೆ. ಬಿಜಾಪುರದಲ್ಲಿ ಮಹಮ್ಮದ್ ಆದಿಲಶಾಹನ ಬಾಲ್ಯ ಸ್ನೇಹಿತನಾಗಿದ್ದ ಸಿದ್ದಿ ರೇಹಾನನು ಶೂರತನಕ್ಕೆ ಹೆಸರಾಗಿದ್ದನು. ಮಹಮದ್ ಆದಿಲಶಾಹನಿಗೆ ಇಖಲಾಸ್‌ಖಾನ್ ಸಿದ್ದಿಯು ಪ್ರಧಾನ ಮಂತ್ರಿಯಾಗಿದ್ದನು. ಇಖಲಾಸಖಾನನು ಸುಲ್ತಾನನ ಜತೆ ಆನೆಸವಾರಿ ಮಾಡುವ ವರ್ಣಚಿತ್ರಗಳಿವೆ. ಅವನು ಕಟ್ಟಿಸಿದ ಮಸೀದಿಯೊಂದು ಈಗಲೂ ಬಿಜಾಪುರದಲ್ಲಿದೆ. ಇಖಲಾಸನ ಸೋದರರಾದ ಹಮೀದಖಾನ್ ಹಾಗೂ ದಿಲಾವರ್‌ಖಾನರು ಕೂಡ ಆದಿಲಶಾಹಿ ಸೇನೆಯಲ್ಲಿ ಪ್ರತಿಷ್ಠಿತ ಸರದಾರರಾಗಿದ್ದರು.

ಅಹಮದಾಬಾದಿನ ಅಹಮದಶಾಹ ಸುಲ್ತಾನನ ಗುಲಾಮನಾದ ಸಿದ್ದಿ ಸೈಯದನು ಭಾರತದ ಬಹುಸುಂದರ ಮಸೀದಿಗಳಲ್ಲಿ ಒಂದನ್ನು ಕಟ್ಟಿಸಿದನು. ನಾನು ಅಹಮದಾಬಾದಿಗೆ ಹೋಗಿದ್ದಾಗ, ಸುಂದರವಾದ ಜಾಲಂದ್ರಗಳನ್ನು ನೋಡಲೆಂದೇ ಆ ಮಸೀದಿಗೆ ಭೇಟಿ ನೀಡಿದೆ. ಈ ವಿವರಗಳು ಸಿದ್ದಿಗಳು ಅಧಿಕಾರ ಮತ್ತು ಪ್ರತಿಷ್ಠೆ ಪಡೆದ ಪರಿಯನ್ನು ಸೂಚಿಸುತ್ತವೆ. ದೆಹಲಿಯಲ್ಲಿ ರಾಜಕುವರಿ ರಜಿಯಾ ಸುಲ್ತಾನಳು, ಯಾಖೂತ್ ಸಿದ್ದಿಯನ್ನು ಮೋಹಿಸಿ, ಅವನಿಗೆ ಕುದುರೆಲಾಯದ ಉಸ್ತುವಾರಿದಾರನಾಗಿ ಬಡ್ತಿ ನೀಡಿದಳು. ಈ ಪ್ರಕರಣ, ಮಧ್ಯಕಾಲದ ಚರಿತ್ರೆಯಲ್ಲಿ ಬಹಳ ವರ್ಣರಂಜಿತವಾಗಿದೆ. ಈ ಪ್ರೇಮವನ್ನು ವಸ್ತುವನ್ನಾಗಿ ಮಾಡಿಕೊಂಡು ಹಿಂದಿಯಲ್ಲಿ ಸಿನಿಮಾ ಕೂಡ ಬಂದಿದೆ.

ವಿಜಾಪುರದ ಸಿದ್ದಿಗಳಲ್ಲೆಲ್ಲ ದೊಡ್ಡ ಹೆಸರು ಪಡೆದವನೆಂದರೆ ಮಲಿಕ್ ಅಂಬರ್. ಅಂಬರನ ಜೀವನವು ನಾಟಕೀಯವಾದ ಘಟನೆಗಳಿಂದಲೂ ಅನೂಹ್ಯವಾದ ತಿರುವುಗಳಿಂದಲೂ ಅಗಾಧ ಸಾಹಸಗಳಿಂದಲೂ ಕೂಡಿದ್ದು, ಒಂದು ಕಾದಂಬರಿಗೆ ವಸ್ತುವಾಗಬಲ್ಲದು. ಇಥಿಯೋಪಿಯಾದಲ್ಲಿ ಹುಟ್ಟಿದ ಅಂಬರ್, ಮಗುವಿದ್ದಾಗಲೇ ತಂದೆಯಿಂದ ಗುಲಾಮ ವ್ಯಾಪಾರಿಗಳಿಗೆ ಮಾರಲ್ಪಟ್ಟನು. ವ್ಯಾಪಾರಿಗಳ ಕೈಯಿಂದ ಕೈಗೆ ಬದಲಾಗುತ್ತ ಕಡೆಗೆ ಅಹಮದ್‌ನಗರ ಸೇರಿದನು. ಸ್ವತಂತ್ರಗೊಂಡ ಬಳಿಕ ಬಿಜಾಪುರಕ್ಕೆ ಬಂದು ಆದಿಲಶಾಹಿ ಸೇನೆಯ ತುಕಡಿಗೆ ದಂಡನಾಯಕನಾದನು. ಆದಿಲಶಾಹಿಗಳ ಚರಿತ್ರೆಯಲ್ಲಿ ಧೀಮಂತ ಮಹಿಳೆಯಾದ ಚಾಂದಬೀಬಿಯ ಆಪ್ತಬಂಟನಾದನು. ಸುಲ್ತಾನನೊಡನೆ ಭಿನ್ನಮತ ಹುಟ್ಟಿ, ಬಿಜಾಪುರ ಬಿಟ್ಟು ತನ್ನದೇ ಆದ ಸೈನ್ಯ ಕಟ್ಟಿದನು. ಅವನ ಸಹಾಯ ಪಡೆಯುವುದಕ್ಕೆ ದಖನ್ನಿನ ಸುಲ್ತಾನರು ಹಾತೊರೆಯುತ್ತಿದ್ದರು. ಅಹಮದ್‌ನಗರಕ್ಕೆ ಮರಳಿ ಹೋದ ಅಂಬರನು ೬೦ ಸಾವಿರ ಅಶ್ವದಳಕ್ಕೆ ಸರದಾರನಾದನು.

ಅಂಬರನು ಮೊಗಲರು ದಖನ್ನಿಗೆ ಹೆಜ್ಜೆಯಿಡದಂತೆ ತನ್ನ ಜೀವಿತದ ಕೊನೆಯ ತನಕ ತಡೆದನು. ಚರಿತ್ರಕಾರನಾದ ಫೆರಿಸ್ತಾ ತನ್ನ ‘ತಾರೀಖೆ ಫೆರಿಸ್ತಾದಲ್ಲಿ ಅಂಬರಖಾನನ ಸಾಹಸ ಮತ್ತು ದಕ್ಷತೆಗಳನ್ನು ಕೊಂಡಾಡುತ್ತಾನೆ. ಮೊಗಲ್ ಸಾಮ್ರಾಜ್ಯ ವಿಸ್ತರಣೆಗೆ ಹಾದಿ ಮುಳ್ಳಾಗಿದ್ದ ಅಂಬರನ ವಿಷಯ ಬಂದಾಗಲೆಲ್ಲ ಚಕ್ರವರ್ತಿ ಜಹಾಂಗೀರನು ‘ಆ ಕರಿಮುಖದ ಸಿದ್ದಿ’ಎಂದು ರೇಗಾಡುತ್ತಿದ್ದ. ಈತ ಶಿವಾಜಿಯ ಅಜ್ಜ ಮಲೋಜಿಯು ಅಂಬರನ ಬಲಗೈ ಬಂಟನಾಗಿದ್ದನು. ಗೆರಿಲ್ಲಾ ಯುದ್ಧವನ್ನು ಅಂಬರಖಾನನಿಂದ ಕಲಿತು ಮೊಗಲರ ಮೇಲೆ ಪ್ರಯೋಗಿಸಿದ ಮರಾಠರು, ಅಂಬರನ್ನು ತಮ್ಮ ಮಿಲಿಟರಿ ಗುರುವೆಂದು ಭಾವಿಸಿದ್ದರು. ವ್ಯಂಗ್ಯವೆಂದರೆ, ಬಿಜಾಪುರದಲ್ಲಿ ಬೆಳೆದ ಅಂಬರನು, ಅಹಮದ್‌ನಗರದ ವತಿಯಿಂದ ಬಂದು ಎರಡನೇ ಇಬ್ರಾಹಿಮನ ಕನಸಿನ ನಗರವಾದ ನವರಸಪುರವನ್ನು ಹಾಳುಗೆಡವಿದ್ದು. ಅದೊಂದು ಬೇರೆಯೇ ಕತೆ. ರಾಜಕೀಯ ಯುದ್ಧಗಳನ್ನು ಧಾರ್ಮಿಕ ಸಮುದಾಯಗಳ ನಡುವಣ ಕದನಗಳೆಂದು ಬಿಂಬಿಸುವವರು ಚರಿತ್ರೆಯ ಈ ವೈರುಧ್ಯಗಳನ್ನು ಗಮನಿಸುವುದಿಲ್ಲ.

ಹೀಗೆ ಅರಮನೆ ಸೇವೆ, ವ್ಯಾಪಾರ, ಆಡಳಿತ ಹಾಗೂ ಸೈನ್ಯದ ಭಾಗವಾಗಿ ಹೋದ ಆಫ್ರಿಕನ್ ಸಿದ್ದಿಗಳು, ಮುಂದೆ ಸ್ಥಳೀಯ ಮಹಿಳೆಯರೊಂದಿಗೆ ಲಗ್ನವಾಗುತ್ತ ಹೋದರು. ಅದರಲ್ಲೂ ಪ್ರತಿಷ್ಠಿತ ಸ್ಥಾನಕ್ಕೇರಿದ ಸಿದ್ದಿಗಳು ರಾಜಮನೆತನದ ಜತೆ ಕೌಟುಂಬಿಕ ಸಂಪರ್ಕವನ್ನೂ ಏರ್ಪಡಿಸಿಕೊಂಡರು. ಅಂಬರಖಾನನು ಬಿಜಾಪುರದ ಸುಲ್ತಾನರಿಗೆ ಕಾಡಿಬೇಡಿ ಮಗನಿಗೆ ‘ಬಿಳಿಯ ಮನೆತನ’ದ ಹೆಣ್ಣನ್ನು ತಂದು ಮದುವೆ ಮಾಡಿದನು. ಎತ್ತರ ನಿಲುವಿನ ಗೌರವರ್ಣದ ಅರಬ್ ತುರ್ಕಿ ಆಫಘನ್ ಪರ್ಶಿಯಾ ಮೂಲದ ಜನರ ಜತೆ ಹೋಲಿಸಿದರೆ, ದಖನ್ನಿನ ನಸುಗಪ್ಪು ಬಣ್ಣದ ಸ್ಥಳೀಯ ಜನರ ಜತೆ ಆಫ್ರಿಕಾದ ಸಿದ್ದಿಗಳು ಬೇಗನೆ ಹೆಚ್ಚು ಹೊಂದಿಕೊಂಡರೆಂದು ಕಾಣುತ್ತದೆ. ಹೀಗೆ ಎರಡು ಶತಮಾನ ಕಾಲ ನಿರಂತರ ನಡೆದ ಜನಾಂಗ ಸಂಕರದ ಕಾರಣ, ಬಿಜಾಪುರ ಸೀಮೆಯಲ್ಲಿ ಆಫ್ರಿಕನ್ ಜನಾಂಗಿಕ ಲಕ್ಷಣವನ್ನು ಯಥಾವತ್ ಉಳಿಸಿಕೊಂಡವರು ಕೆಲವರಷ್ಟೆ ಉಳಿದಿರುವರು.

ಇವರಿಗೆ ಹೋಲಿಸಿದರೆ, ಯಲ್ಲಾಪುರದ ಕಾಡುವಾಸಿ ಸಿದ್ದಿಗಳು, ಹೆಚ್ಚಿನ ಜನಾಂಗ ಸಂಕರವಿಲ್ಲದೆ ಮೂಲ ಚಹರೆ ಉಳಿಸಿಕೊಂಡರು. ಇದಕ್ಕೆ ಕಾರಣ, ಇವರಲ್ಲಿ ಹೆಚ್ಚಿನವರು ಪೋರ್ಚುಗೀಸರ ಹಿಡಿತದಿಂದ ತಪ್ಪಿಸಿಕೊಂಡು ಗೋವೆಯಿಂದ ಪಲಾಯನ ಮಾಡಿ ಬಂದವರಾಗಿದ್ದುದು. ಇವರಲ್ಲಿ ಕೆಲವರಾದರೂ ಆದಿಲಶಾಹಿ ರಾಜ್ಯವನ್ನು ಔರಂಗಜೇಬನು ನಾಶಮಾಡಿದ ಬಳಿಕ ಬಿಜಾಪುರದಿಂದ ಹೋಗಿ ಸೇರಿಕೊಂಡಿರಬೇಕು. ಇದಕ್ಕೆ ಸಾಕ್ಷಿ, ಉತ್ತರ ಕನ್ನಡದ ಸಿದ್ದಿಗಳಲ್ಲಿ ಮುಸ್ಲಿಂ ಸಿದ್ದಿಗಳೂ ಇರುವುದು.

ಬಿಜಾಪುರ ಸೀಮೆಯಲ್ಲಿ ಆಫ್ರಿಕನ್ ಜನಾಂಗ ಲಕ್ಷಣಗಳನ್ನು ಉಳಿಸಿಕೊಂಡ ಸಿದ್ದಿಗಳು ಕಾಣುವುದು ಕಡಿಮೆಯಾದರೂ, ಅವರ ಜತೆ ಬಂದಿದ್ದ ಕುಣಿತವೊಂದು ಮಾತ್ರ ಉಳಿದುಕೊಂಡಿತು. ದಖನ್ನಿನ ಸಿದ್ದಿಗಳು ಇಸ್ಲಾಮನ್ನು ಸ್ವೀಕರಿಸಿ ಸ್ಥಳೀಕರಣ ಹೊಂದಿದ ಬಳಿಕ, ಆಫ್ರಿಕಾ ಮೂಲದ ಕೆಲವು ಆಚರಣೆಗಳನ್ನು ತಮ್ಮ ಅಸ್ಮಿತೆಯಾಗಿ ಉಳಿಸಿಕೊಂಡರೆಂದು ಕಾಣುತ್ತದೆ. ಅವರಿಗೆ ನಮಾಜು ಮಾಡುವ ಶಿಷ್ಟ ಇಸ್ಲಾಮಿಗಿಂತ, ಕುಣಿತಕ್ಕೂ ಆಯುಧ ಪ್ರದರ್ಶನಕ್ಕೂ ಹಾಡಿಗೂ ಅವಕಾಶವಿದ್ದ ಮೊಹರಂನ ಆಚರಣೆಗಳು ಪ್ರಿಯವಾಗಿರಬಹುದು; ಅದರಲ್ಲಿ ತಮ್ಮ ಶೌರ್ಯ ಪ್ರದರ್ಶನ, ವೇಷ ಕುಣಿತಗಳನ್ನು ಅವರು ಸೇರಿಸಿರಬಹುದು; ಉತ್ತರ ಕನ್ನಡ ಮತ್ತು ಗುಜರಾತಿನ ಸಿದ್ಧಿಯರಲ್ಲಿ ಈಗಲೂ ಇರುವ ಕುಣಿತಗಳಲ್ಲಿ ಸಿದ್ದಿಸೋಗಿನ ಲಕ್ಷಣಗಳು ಗೋಚರಿಸುತ್ತವೆ.

ಮುಖ್ಯವಾಗಿ ಸೊಂಟದ ಮೇಲಿನ ನಗ್ನತೆ, ಮುಖಕ್ಕೆ ಬಣ್ಣದ ಪಟ್ಟೆ ಬಳಿದುಕೊಳ್ಳುವಿಕೆ ಹಾಗೂ ಕಲ್ಲಹರಳು ತುಂಬಿದ ತೆಂಗಿನಚಿಪ್ಪನ್ನು ಬಟ್ಟೆಯಲ್ಲಿ ಕಟ್ಟಿ ಕೈಯಲ್ಲಿ ಹಿಡಿದಿರುವುದು. ವೇಷಗಾರರು ಸೊಂಟಕ್ಕೆ ಕಟ್ಟಿಕೊಂಡ ಗಂಟೆಯ ಲೊಳ್‌ಲೊಳ್ ಸದ್ದಿನಿಂದ ‘ಅಚೊಳ್ಳಿ ‘ಅಳ್ಳೊಳ್ಳಿ ಮುಂತಾದ ಪದಗಳು ಬಂದಿರಬಹುದೇ? ಕೊಪ್ಪಳ ಜಿಲ್ಲೆಯ ಕೆಲವು ಕಡೆ ಸಿದ್ದಿ ವೇಷಧಾರಿಯ ಜತೆ ಹ್ಯಾಟುಕೋಟು ತೊಟ್ಟ ಯೂರೋಪಿಯನ್ ಬಿಳಿಯನ ವೇಷವಿದೆ. ಇದು ಗುಲಾಮರ ಮಾರಾಟ ಮಾಡುತ್ತಿದ್ದ ಪೋರ್ಚುಗೀಸರ ಅಣಕುರೂಪವೂ ಆಗಿರಬಹುದು.

ಈ ಎಲ್ಲ ‘ಬಹುದುಗಳು ನಿಜವೇ ಆಗಿದ್ದರೆ, ಆಫ್ರಿಕಾ ಮೂಲದ ನೃತ್ಯವೊಂದು ಅರಬಸ್ಥಾನದಿಂದ ಬಂದ ಧಾರ್ಮಿಕ ಆಚರಣೆಯೊಡನೆ ಸೇರಿ, ಕರ್ನಾಟಕದ ಸಮಾಜದಲ್ಲಿ ನೆಲೆಸಿದೆ ಎಂದಂತಾಯಿತು. ಕಲೆಯೊಂದರ ಈ ಖಂಡಾಂತರ ಪಯಣ ಮತ್ತು ಸಾಂಸ್ಕೃತಿಕ ರೂಪಾಂತರ ಬೆರಗು ಹುಟ್ಟಿಸುತ್ತದೆ. ವೈರುಧ್ಯದ ಸಂಗತಿಯೆಂದರೆ: ‘ನಾಗರಿಕ ‘ಗೌರವರ್ಣದ ‘ಕುಲೀನ’ ಎನಿಸಿಕೊಂಡ ಸಮಾಜಗಳು ತಮ್ಮಂತೇ ಇರುವ ನರಮನುಷ್ಯರನ್ನು ಬೇಟೆಯಾಡಿ, ನಾವೆಗಳಲ್ಲಿ ಸಾಗಿಸಿ, ಮಾರುಕಟ್ಟೆಗಳಲ್ಲಿಟ್ಟು ಪಶುಗಳಂತೆ ಮಾರಾಟ ಮಾಡಿದವು; ಅವರ ಬಿಟ್ಟಿ ದುಡಿಮೆ ಪಡೆದು ಮನುಕುಲದ ಚರಿತ್ರೆಯಲ್ಲೇ ಕರಾಳ ಎನ್ನಬಹುದಾದ ಕೃತ್ಯವೆಸಗಿದವು. ಅದಕ್ಕೆ ಪ್ರತಿಯಾಗಿ ‘ಅನಾಗರಿಕ ‘ಕಪ್ಪು ‘ಗುಲಾಮ ಎನಿಸಿಕೊಂಡ ಆಫ್ರಿಕನರು, ತಮ್ಮನ್ನು ಅಮಾನುಷವಾಗಿ ನಡೆಸಿಕೊಂಡ ಸಮಾಜಗಳಿಗೆ ತಮ್ಮ ದುಡಿಮೆಯ ಜತೆಗೆ ಹಾಡು ನೃತ್ಯಗಳನ್ನೂ ಉಡುಗೊರೆಯಾಗಿ ಕೊಟ್ಟರು. ಯಾರ ಹಂಗಿನಲ್ಲಿ ಯಾರಿದ್ದಾರೆ? ಯಾರ ಮೌಲ್ಯಮಾಪನವನ್ನು ಯಾರು ಮಾಡುತ್ತಿದ್ದಾರೆ?

ಕರ್ನಾಟಕದ ಚರಿತ್ರೆ ಕಲೆ ಸಂಗೀತ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಆಫ್ರಿಕಾ ಮೂಲದ ಇನ್ನೂ ಯಾವ್ಯಾವ ಪಳೆಯುಳಿಕೆಗಳು ಇವೆಯೊ, ತಪಶೀಲಾದ ಶೋಧ ನಡೆಯಬೇಕಿದೆ. ಉತ್ತರ ಕನ್ನಡದ ಸಿದ್ಧಿಗಳನ್ನು ಕುರಿತು ಜನಪದ ವಿದ್ವಾಂಸರು ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಆದರೆ ಬಿಜಾಪುರದ ಸಿದ್ಧಿ ಮತ್ತು ಹಬಶಿಗಳನ್ನು ಕುರಿತು ಇತಿಹಾಸದವರು ಅಧ್ಯಯನ ಮಾಡಿರುವುದು ಕಡಿಮೆ. ಇಂತಹ ಹಲವು ಬಗೆಯ ಹುಡುಕಾಟಗಳಿಗೆ ಉತ್ತರ ಕರ್ನಾಟಕದ ಸಿದ್ದಿಸೋಗು ಕೆಣಕುತ್ತಿದೆ. ಆದರೆ ಈ ಆಹ್ವಾನವನ್ನು ಎತ್ತಿಕೊಳ್ಳಬೇಕು ಯಾರು? ಆಚಾರ್ಯ ಬಿಎಂಶ್ರೀಯವರು ಒಂದೆಡೆ ಹೇಳಿದ ಮಾತು ನೆನಪಾಗುತ್ತಿದೆ: “ಬೆಳೆಯೇನೋ ಬೇಕಾದ ಹಾಗಿದೆ; ಕುಯ್ಯುವವರು ಕಡಮೆ”.

(ನಡೆದಷ್ಟೂ ನಾಡು ಕೃತಿಯಿಂದ. ನವಕರ್ನಾಟಕ ಪ್ರಕಟಣೆ)

ಇದನ್ನೂ ನೋಡಿ: ನಾಕುತಂತಿ | ಆವು ಈವಿನ ನಾವು ನೀವಿಗೆ ಆನು ತಾನಾದ ತನನನ… – ದ ರಾ ಬೇಂದ್ರ, ಗಾಯನ Janashakthi Media

Donate Janashakthi Media

Leave a Reply

Your email address will not be published. Required fields are marked *