ಮಂಗಳೂರು: ಸತತ ಎರಡು ವಾರಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ದಕ್ಷಿಣ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ. ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟಕ್ಕೆ ತಲುಪಿದೆ. ಬಡ್ಡಕಟ್ಟೆ, ಬಸ್ತಿಪಡ್ಪು, ಆಲಡ್ಕ ಹಾಗು ನಾವೂರು ಸಹಿತ ಹಲವು ಪ್ರದೇಶಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ.
ಪೊಳಲಿ ಕ್ಷೇತ್ರದಿಂದ ಹರಿದು ಬರುವ ಫಲ್ಗುಣಿ ನದಿ ಉಕ್ಕಿ ಹರಿದು ಮಂಗಳೂರಿನ ಅದ್ಯಪಾಡಿಯ ಮೊಗೇರ್ ಕುದ್ರು ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯೊಳಗೆ ನೆರೆ ನೀರು ನುಗ್ಗಿದೆ. ಜನರಿಗೆ ಹೆಚ್ಚಿನ ತ್ರಾಸ ಉಂಟಾಗಿದ್ದು, ಜೀವ ಕೈಯಲ್ಲಿಡಿದು ಆತಂಕಗೊಂಡಿದ್ದಾರೆ.
ದ್ವೀಪದಂತಾಗಿರುವ ಈ ಗ್ರಾಮದ ಸುಮಾರು 35ಕ್ಕೂ ಹೆಚ್ಚಿನ ಮನೆ ಮುಳುಗಿದ್ದು, ಜನತೆ ಹೊರಬರದ ಪರಿಸ್ಥಿತಿಯಲ್ಲಿದ್ದಾರೆ. ತೋಟ, ಎಕರೆಗಟ್ಟಲೆ ಕೃಷಿ ಭೂಮಿ ಜಲಾವೃತವಾಗಿವೆ. ಸಂಗ್ರಹಿಸಿಟ್ಟಿದ್ದ ದಿನ ಬಳಕೆ ವಸ್ತುಗಳೆಲ್ಲ ನೀರು ಪಾಲಾಗಿದ್ದು, ಅಳಿದುಳಿದ ಆಹಾರ ವಸ್ತುಗಳಿಂದಲೇ ದಿನದೂಡುವ ಪರಿಸ್ಥಿತಿ ಎದುರಾಗಿದೆ.
ಸತತ ಮಳೆಯಿಂದಾಗಿ ನೇತ್ರಾವತಿ ನದಿ ಅಪಾಯದ ಮಟ್ಟ ತಲುಪಿದೆ. ನೆರೆ ಭೀತಿ ಎದುರಾಗಿದ್ದು ಇಂದು ಬೆಳಗ್ಗೆ 8.4 ಮೀಟರ್ ಎತ್ತರದಲ್ಲಿ ನದಿ ಹರಿಯುತ್ತಿತ್ತು. ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿದೆ.
ಮರವೂರಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಬಳಿಕ ಅದ್ಯಪಾಡಿ ಹಾಗೂ ಮೂಡುಕೆರೆ ಗ್ರಾಮದಲ್ಲಿ ಸಮಸ್ಯೆ ತಲೆದೋರಿದ್ದು, 10-15 ದಿನಗಳಾದರೂ ನೆರೆ ಇಳಿಮುಖವಾಗುತ್ತಿಲ್ಲ. ಕಿಂಡಿ ಅಣೆಕಟ್ಟು ನಿರ್ಮಾಣದ ಬಳಿಕ ಇಲ್ಲಿನ ಜನತೆ ಪ್ರತಿ ವರ್ಷ ಮಳೆಗಾಲದಲ್ಲಿ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ. ತುರ್ತು ಸೇವೆ, ಅಗತ್ಯ ವಸ್ತುಗಳ ಪೂರೈಕೆಗೆ ದೋಣಿಯನ್ನೇ ಅವಲಂಬಿಸಬೇಕಾಗಿದೆ. ಇಲ್ಲಿನ ಜನತೆ ಕೃಷಿಯನ್ನು ನಂಬಿಕೊಂಡಿದ್ದು, ಕೃಷಿಭೂಮಿಯಲ್ಲಿ ನೀರು ನಿಂತು ಸಂಪೂರ್ಣ ಬೆಳೆ ಹಾನಿಯಾಗುತ್ತಿದೆ.