ಮುಕ್ತಮಾರುಕಟ್ಟೆಯ ಸವಾಲುಗಳೂ ನಂದಿನಿಯ ಪ್ರಲಾಪವೂ

ನಾ ದಿವಾಕರ 

                  ನವ ಉದಾರವಾದದ ಮಾರುಕಟ್ಟೆ ಶಕ್ತಿಗಳು ಸಹಕಾರಿ ಕ್ಷೇತ್ರದಲ್ಲಿ ಹಿಂಬಾಗಿಲಿನಿಂದ ಪ್ರವೇಶಿಸುತ್ತವೆ

ಭಾರತ ಮುಕ್ತ ಮಾರುಕಟ್ಟೆಯನ್ನು ಅಪ್ಪಿಕೊಂಡು ಮೂರು ದಶಕಗಳಾಗಿವೆ. ಮೊದಲ ಎರಡು ಹಂತಗಳಲ್ಲಿ ಹಣಕಾಸು ವಲಯ, ಔದ್ಯೋಗಿಕ ಕ್ಷೇತ್ರ ಮತ್ತು ಸೇವಾ ವಲಯಗಳಲ್ಲಿ ತನ್ನ ಕಬಂಧ ಬಾಹುಗಳನ್ನು ಚಾಚಿದ್ದ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳ ದೇಶವ್ಯಾಪಿಯಾಗಿ ತನ್ನದೇ ಆದ ಸುಭದ್ರ ನೆಲೆಯನ್ನು ಸ್ಥಾಪಿಸಿಕೊಂಡಾದ ನಂತರ ಈಗ ಮೂರನೆಯ ಹಂತದಲ್ಲಿ ಕೃಷಿ, ಹೈನುಗಾರಿಕೆ, ಪಶುಸಂಗೋಪನೆ ಮತ್ತು ಭಾರತದ ಗ್ರಾಮೀಣ ಬದುಕಿನ ಇತರ ಕ್ಷೇತ್ರಗಳನ್ನೂ ಆವರಿಸಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಬಂಡವಾಳಶಾಹಿಯ ಸುಭದ್ರ-ಸುಸ್ಥಿರ ನೆಲೆಯನ್ನು ಖಾತರಿಪಡಿಸಲು ಅಗತ್ಯವಾದ ಎಲ್ಲ ಕಾಯ್ದೆ ಕಾನೂನುಗಳನ್ನೂ ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೊಳಿಸಿವೆ. ಮುಕ್ತ ಬಂಡವಾಳ ಹೂಡಿಕೆ, ವಿದೇಶಿ ನೇರ ಬಂಡವಾಳ ಹೂಡಿಕೆಯೊಂದಿಗೇ ಉತ್ಪಾದನಾ ಪ್ರಕ್ರಿಯೆಯ ವೆಚ್ಚವನ್ನು ಕಡಿಮೆ ಮಾಡುವಂತಹ ಕಾರ್ಮಿಕ ವಿರೋಧಿ ನೀತಿಗಳನ್ನೂ ಸಹ ಅನುಸರಿಸಲಾಗುತ್ತಿದೆ.

ಕರ್ನಾಟಕ ಸರ್ಕಾರವೂ ಸಹ ಇತ್ತೀಚೆಗೆ ದುಡಿಯುವ ಅವಧಿಯನ್ನು ದಿನಕ್ಕೆ 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸುವ ಮೂಲಕ  ಬಂಡವಾಳಶಾಹಿ ಔದ್ಯೋಗಿಕ ಮಾರುಕಟ್ಟೆಗೆ ರಾಜ್ಯವನ್ನು ಸಿದ್ಧಪಡಿಸಿದೆ. ಹಣಕಾಸು ಮತ್ತು ವಿಮೆ ವಲಯದಲ್ಲಿ ಈಗಾಗಲೇ ಖಾಸಗೀಕರಣ ಮತ್ತು ಹೊರಗುತ್ತಿಗೆಯ ಮೂಲಕ ಕಾರ್ಪೋರೇಟೀಕರಣ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಸರ್ಕಾರಿ ಸ್ವಾಮ್ಯದಲ್ಲಿರುವ ಕೆಲವೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಸಹ ಸಾಫ್ಟ್‌ವೇರ್‌ ನಿರ್ವಹಣೆ ಮತ್ತಿತರ ಬ್ಯಾಂಕಿಂಗ್-ವಿಮೆ ಚಟುವಟಿಕೆಗಳು ಕಾರ್ಪೋರೇಟ್‌ ಉದ್ದಿಮೆಗಳಿಗೆ ಹೊರಗುತ್ತಿಗೆ ನೀಡಲಾಗಿದೆ. ಅಸಮಾನತೆಯಿಂದ ಕೂಡಿರುವ ಭಾರತದಂತಹ ದೇಶಗಳಲ್ಲಿ ಖಾಸಗೀಕರಣ ಅಥವಾ ಕಾರ್ಪೋರೇಟೀಕರಣಕ್ಕೆ ಸಹಜವಾಗಿಯೇ ವಿರೋಧ ಕಂಡುಬರುವುದರಿಂದ, ಬಂಡವಾಳಿಗರು ಮತ್ತು ಮಾರುಕಟ್ಟೆ ಪ್ರಾಯೋಜಕರು , ತಳಮಟ್ಟದ ಜನಜೀವನವನ್ನು ಬಾಧಿಸುವ ಹಾಗೂ ಬಹುಸಂಖ್ಯೆಯಲ್ಲಿರುವ ಗ್ರಾಮೀಣ ಜನತೆಯ ಬದುಕಿಗೆ ಮಾರಕವಾಗುವ ಮಾರುಕಟ್ಟೆ ನೀತಿಗಳನ್ನು ಜಾರಿಗೊಳಿಸಲು ಹಿಂಬಾಗಿಲಿನಿಂದ ಪ್ರವೇಶಿಸುತ್ತವೆ.

ಹಾಗಾಗಿಯೇ ಕೃಷಿ ವಲಯದಲ್ಲಿ, ಬೀಜಗಳ ಮಾರಾಟ ಮತ್ತು ವಿತರಣೆ, ಕೃಷಿ ಉತ್ಪನ್ನಗಳ ಒಳಸುರಿಯ ನಿರ್ವಹಣೆ ಮತ್ತು ದಾಸ್ತಾನು ಮಾಡುವ ಚಟುವಟಿಕೆಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು, ಕಾರ್ಪೋರೇಟ್‌ ಉದ್ದಿಮೆಗಳು ತಮ್ಮದೇ ಆದ ಜಾಲವನ್ನು ಹರಡಿವೆ. ಈ ಜಾಲವನ್ನು ವಿಸ್ತರಿಸಲೆಂದೇ ಜಾರಿಗೊಳಿಸಲಾದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರೈತರ ಒಂದು ವರ್ಷದ ಮುಷ್ಕರಕ್ಕೆ ಮಣಿದು ಹಿಂಪಡೆದಿದ್ದರೂ, ಕರ್ನಾಟಕದಲ್ಲಿ ರೈತರ ಪಾಲಿಗೆ ಇನ್ನೂ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಮುಂದುವರೆಸಲಾಗಿದೆ. ಕರ್ನಾಟಕ ಭೂಕಂದಾಯ (ತಿದ್ದುಪಡಿ ಕಾಯ್ದೆ) , ಕರ್ನಾಟಕ ಎಪಿಎಂಸಿ (ತಿದ್ದುಪಡಿ ಕಾಯ್ದೆ) ಮತ್ತು ಕರ್ನಾಟಕ ಜಾನುವಾರು ಹತ್ಯೆ ನಿರ್ಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಗಳು ಜಾರಿಯಲ್ಲಿವೆ. ಇದರೊಂದಿಗೆ ಜಾರಿಯಲ್ಲಿ ಭೂ ಸ್ವಾಧೀನ ನಿಯಮಗಳು ಕರ್ನಾಟಕದ ರೈತರ ಪಾಲಿಗೆ ಮರಣಶಾಸನಗಳೇ ಆಗಿದ್ದರೂ, ಈ ಕಾಯ್ದೆಗಳಿಂದ ಉಂಟಾಗಿರುವ ಪಲ್ಲಟಗಳು, ಸಣ್ನ-ಅತಿಸಣ್ಣ ಹಾಗೂ ಭೂ ರಹಿತ ರೈತರು ಎದುರಿಸುತ್ತಿರುವ ಜಟಿಲ ಸವಾಲುಗಳ ಬಗ್ಗೆ ಸಮಗ್ರವಾದ ಅಧ್ಯಯನದ ಕೊರತೆಯ ನಡುವೆಯೇ, ರಾಜ್ಯ ರೈತರು ಕೃಷಿಭೂಮಿಯ ರಕ್ಷಣೆಗಾಗಿ ನಿರಂತರವಾಗಿ ಹೋರಾಡುತ್ತಲೇ ಇದ್ದಾರೆ.

ಕಾರ್ಪೋರೇಟ್‌ ಮಾರುಕಟ್ಟೆ ಉದ್ಯಮದ ಹಿಂಬಾಗಿಲ ಪ್ರವೇಶಕ್ಕೆ ಈಗ ರಾಜ್ಯದ ಹೈನುಗಾರಿಕೆ ವಲಯ ಮತ್ತು ಡೈರಿ ಕ್ಷೇತ್ರವು ತುತ್ತಾಗುವುದರಲ್ಲಿದೆ. ಕಳೆದ ಹತ್ತು ವರ್ಷಗಳಿಂದ ಮತ್ತಷ್ಟು ಸುಭದ್ರ ನೆಲೆ ಕಂಡುಕೊಂಡಿರುವ ಆಪ್ತ ಬಂಡವಾಳಶಾಹಿಯು ಈಗ ಔದ್ಯೋಗಿಕ- ಸೇವಾ ಮತ್ತು ಕೃಷಿ ವಲಯಗಳನ್ನೂ ದಾಟಿ ಸಹಕಾರಿ ಕ್ಷೇತ್ರವನ್ನೂ ಆವರಿಸಲು ವಿನೂತನ ಮಾರ್ಗಗಳನ್ನು ಅರಸುತ್ತಿದೆ. ಆದರೆ ಸಹಕಾರಿ ಕ್ಷೇತ್ರವು ಮೂಲತಃ ಸಹಭಾಗಿತ್ವದ ಆಧಾರದಲ್ಲಿ ನಡೆಯುವುದರಿಂದ, ಮಾರುಕಟ್ಟೆ ಶಕ್ತಿಗಳ ರಣತಂತ್ರಗಳು ಸುಲಭವಾಗಿ ಕಾರ್ಯಗತವಾಗುವುದೂ ಇಲ್ಲ. ಈ ಜಟಿಲ ಸವಾಲುಗಳ ನಡುವೆಯೇ ಕರ್ನಾಟಕದ ಪ್ರತಿಷ್ಠಿತ ಕೆಎಂಎಫ್‌, ಒಂದು ಸಹಕಾರಿ ಒಕ್ಕೂಟವಾಗಿದ್ದುಕೊಂಡೂ, ತನ್ನ ನೆಲೆಯನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದೆ. ಈ ಭೀತಿಗೆ ಕಾರಣ ನೇರ ಬಂಡವಾಳಿಗರ ಪ್ರವೇಶ ಅಲ್ಲವಾದರೂ ಏಷ್ಯಾದಲ್ಲೇ ಅತಿದೊಡ್ಡ ಸಹಕಾರಿ ಒಕ್ಕೂಟ ಎಂದು ಹೆಸರಾಗಿರುವ ಗುಜರಾತ್‌ನ ಅಮುಲ್‌ ಕರ್ನಾಟಕದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ರಾಜ್ಯಾದ್ಯಂತ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ಕೆಎಂಎಫ್‌-ನಂದಿನಿಯ ಜಟಿಲ ಸವಾಲುಗಳು :
1974ರಲ್ಲಿ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮ ಎಂದು ಸ್ಥಾಪನೆಯಾದ ಈಗಿನ ಕೆಎಂಎಫ್‌ 1984ರಲ್ಲಿ ರೂಪಾಂತರಗೊಂಡು ಕರ್ನಾಟಕ ಹಾಲು ಮಹಾಮಂಡಲಿ ಎಂದು ಮರುನಾಮಕರಣವಾಗಿತ್ತು. ಒಟ್ಟು 16 ಹಾಲು ಒಕ್ಕೂಟಗಳನ್ನು ಒಳಗೊಂಡಿರುವ ಮಹಾಮಂಡಲಿ ತನ್ನದೇ ಆದ ʼ ನಂದಿನಿ ʼ ಬ್ರ್ಯಾಂಡ್‌ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಾ ರಾಜ್ಯಾದ್ಯಂತ ತನ್ನ ಮಳಿಗೆಗಳನ್ನೂ ತೆರೆದಿದೆ. ಜಿಲ್ಲಾ ಮಟ್ಟದ ಹಾಲು ಒಕ್ಕೂಟಗಳು ಕೆಎಂಎಫ್‌ನ ಜೀವನಾಡಿಯಾಗಿದ್ದು, ಹಾಲು, ಮೊಸರು, ತುಪ್ಪ, ಸಿಹಿತಿಂಡಿಗಳು, ಬೆಣ್ಣೆ ಮತ್ತು ಇತರ ಹಾಲಿನ ಉತ್ಪನ್ನಗಳನ್ನೂ ಇತ್ತೀಚೆಗೆ ಮಾರುಕಟ್ಟೆ ಮಾಡುತ್ತಿದ್ದು ಒಂದು ರೀತಿಯಲ್ಲಿ ಕನ್ನಡಿಗರ ಅಸ್ಮಿತೆಯಂತೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡುಬಂದಿದೆ. ಒಟ್ಟು 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ನಂದಿನಿ ನಿತ್ಯ 76 ಲಕ್ಷ ಕಿಲೋ ಹಾಲು ಸಂಗ್ರಹಿಸುತ್ತದೆ, 26 ಲಕ್ಷ ಹಾಲು ಉತ್ಪಾದಕರು ಒಕ್ಕೂಟಗಳ ಸದಸ್ಯತ್ವ ಪಡೆದಿದ್ದಾರೆ, ವಾರ್ಷಿಕ 22 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ.

ಈ ಮಹತ್ಸಾಧನೆಯ ನಡುವೆಯೇ ಮತ್ತೊಂದು ಆಯಾಮವನ್ನು ಗಮನಿಸಿದಾಗ ಕೆಎಂಎಫ್‌ ಕೆಲವು ಜಟಿಲ ಸಿಕ್ಕುಗಳನ್ನು ಎದುರಿಸುತ್ತಿದೆ. ಗುಜರಾತ್‌ನ ಅಮುಲ್‌ ತನ್ನ ಬ್ರ್ಯಾಂಡ್‌ ಅಡಿಯಲ್ಲಿ ಬೆಂಗಳೂರಿನಲ್ಲಿ ಹಾಲು, ಮೊಸರು , ತುಪ್ಪ ಮುಂತಾದ ಉತ್ಪನ್ನಗಳನ್ನು ಮಾರಾಟ ಮಾಡುವುದಾಗಿ ಜಾಹೀರಾತು ನೀಡಿರುವುದು ರಾಜ್ಯದಾದ್ಯಂತ ರೈತ ಸಮುದಾಯದ, ಕನ್ನಡಪರ ಸಂಘಟನೆಗಳ ಹಾಗೂ ರಾಜಕೀಯ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ನೆಹರೂ ಆರ್ಥಿಕತೆಯ ಒಂದು ಭಾಗವಾಗಿ, ಸಹಕಾರ ಸಂಘದ ಆಂದೋಲನದ ಭಾಗವಾಗಿ 1946ರಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಸ್ಥಾಪನೆಯಾದ ಇವತ್ತಿನ ಅಮುಲ್‌ (ಆನಂದ್‌ ಮಿಲ್ಕ್‌ ಯೂನಿಯನ್‌ ಲಿಮಿಟೆಡ್‌ AMUL) ವಿಶ್ವದಲ್ಲೇ ಅತಿ ಸಹಕಾರಿ ಒಕ್ಕೂಟವಾಗಿ ಇಂದಿಗೂ ಸಹ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ ಎಂದರೆ ಅದರ ಹಿಂದೆ ನೆಹರೂ ಆರ್ಥಿಕತೆಯ ತಾತ್ವಿಕ ನೆಲೆ ಮತ್ತು ಸರ್ದಾರ್‌ ಪಟೇಲ್‌, ಮುರಾರ್ಜಿದೇಸಾಯಿ ಅವರಂತಹ ನಾಯಕರ ಪರಿಶ್ರಮವೂ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ವರ್ಗಿಸ್‌ ಕುರಿಯನ್‌ ಮಾರ್ಗದರ್ಶನದಲ್ಲಿ ವಿಶ್ವದ ಅತಿದೊಡ್ಡ ಸಹಕಾರಿ ಒಕ್ಕೂಟವಾಗಿ ಬೆಳೆದ ಅಮುಲ್‌ ಇಂದು ನಿತ್ಯ 260 ಲಕ್ಷ ಕಿಲೋ ಹಾಲು ಉತ್ಪಾದಿಸುತ್ತಿದೆ. 36 ಲಕ್ಷ ಹಾಲು ಉತ್ಪಾದಕರನ್ನೊಳಗೊಂಡ ಈ ಮಹಾಒಕ್ಕೂಟ ತನ್ನದೇ ಆದ 26 ಬ್ರ್ಯಾಂಡ್‌ಗಳನ್ನು ಮಾರುಕಟ್ಟೆ ಮಾಡುತ್ತಿದೆ. ವಾರ್ಷಿಕ 46 ಸಾವಿರ ಕೋಟಿ ರೂಗಳ ವಹಿವಾಟು ನಡೆಸುತ್ತಿದೆ. ಭಾರತೀಯ ಸೇನೆಗೆ ಅಗತ್ಯವಾದ ಹಾಲಿನ ಪುಡಿಯನ್ನು ಸಂಪೂರ್ಣವಾಗಿ ಅಮುಲ್‌ ಹಲವು ವರ್ಷಗಳಿಂದಲೇ ಒದಗಿಸುತ್ತಿದೆ. ನೆಹರೂ ಏನನ್ನೂ ಸಾಧಿಸಿಲ್ಲ ಎಂಬ ಮೂದಲಿಕೆಯ ಮಾತುಗಳನ್ನು ಬದಿಗೊತ್ತಿ, ಅಮುಲ್‌ ಇತಿಹಾಸದ ಹೆಜ್ಜೆಗಳನ್ನು ಗಮನಿಸಿದಾಗ ಸಹಕಾರಿ ಆಂದೋಲನವೊಂದು ಹೇಗೆ ದೇಶದಲ್ಲಿ ವಿಶ್ವ ಮಾದರಿಯಾದ ಶ್ವೇತ ಕ್ರಾಂತಿಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಯಿತು ಎನ್ನುವುದನ್ನೂ ಗಮನಿಸಬಹುದಾಗಿದೆ. ಇಂದಿಗೂ ಸಹ ಅಮುಲ್‌ ಒಕ್ಕೂಟದಲ್ಲಿ ಭಾಗಿಯಾಗಿರುವ ಲಕ್ಷಾಂತರ ರೈತರು ತಮ್ಮ ಸ್ಥಳೀಯ ಹಾಲು ಉತ್ಪಾದನಾ ಮಂಡಲಿಗಳನ್ನು ಸಹಕಾರಿ ತತ್ವದಲ್ಲೇ ನಿರ್ವಹಿಸುತ್ತಿದ್ದು, ಅತ್ಯಂತ ಕಡಿಮೆ ರಾಜಕೀಯ ಹಸ್ತಕ್ಷೇಪದೊಂದಿಗೆ ಅಮುಲ್‌ ಸಂಸ್ಥೆಯನ್ನು ಬೆಳೆಸುತ್ತಿದ್ದಾರೆ. ಅಧಿಕಾರ ರಾಜಕಾರಣ ಅಮುಲ್‌ ಸಂಸ್ಥೆಯನ್ನು ಪೂರ್ಣವಾಗಿ ಭೇದಿಸಲು ಸಾಧ್ಯವಾಗಿಲ್ಲ ಎಂಬ ಅಂಶವನ್ನೂ ಪ್ರಧಾನವಾಗಿ ಗುರುತಿಸಬೇಕಾಗಿದೆ.

ಏಕೆಂದರೆ ಕರ್ನಾಟಕ ಹಾಲು ಮಹಾಮಂಡಲ ಅಥವಾ ಕೆಎಂಎಫ್‌ ಆರಂಭದಿಂದಲೂ ಸ್ಥಳೀಯ ರಾಜ್ಯಮಟ್ಟದ ರಾಜಕೀಯ ನಾಯಕರ ಅಂಗಳವಾಗಿಯೇ ಬೆಳೆದುಬಂದಿದ್ದು, ಅಲ್ಲಿ ನಡೆಯುವ ಚುನಾವಣೆಗಳು, ಪದಾಧಿಕಾರಿಗಳ ಆಯ್ಕೆ ಮತ್ತು ಒಕ್ಕೂಟದ ನಿತ್ಯ ಚಟುವಟಿಕೆಗಳಲ್ಲಿ ಪ್ರಬಲ ರಾಜಕೀಯ ಪಕ್ಷಗಳ ನಾಯಕರೇ ಪ್ರಧಾನ ಪಾತ್ರ ವಹಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಗುಜರಾತ್‌ನ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಮ್‌ಎಮ್‌ಎಫ್)‌ ಮಾದರಿಯನ್ನೇ ಆಧರಿಸಿ ಕರ್ನಾಟಕದಲ್ಲಿ ನಾಲ್ಕು ದಶಕಗಳ ಮುನ್ನ ಆರಂಭವಾದ ಕೆಎಂಎಫ್‌ ಇಂದು ರಾಜಕೀಕರಣಕ್ಕೊಳಗಾಗಿರುವುದೇ ಅಲ್ಲದೆ, ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಕಾಡುವ ಅಧಿಕಾರಶಾಹಿ ಸಾಂಸ್ಥಿಕ ಸಮಸ್ಯೆಗಳಿಂದಲೂ ಜರ್ಝರಿತವಾಗಿವುದು ವಾಸ್ತವ. ಸರ್ಕಾರದ ಕೃಪಾಕಟಾಕ್ಷ ಇಲ್ಲದೆ ಒಂದು ಹೆಜ್ಜೆಯೂ ಮುಂದಿಡಲಾರದಷ್ಟು ಮಟ್ಟಿಗೆ ಕೆಎಂಎಫ್‌ ಒಂದು ಪರಾವಲಂಬಿ ಸಹಕಾರಿ ಸಂಘಟನೆಯಾಗಿ ರಾಜ್ಯದ ಜನತೆಯ ಮುಂದೆ ತನ್ನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿದೆ.

ಇದನ್ನೂ ಓದಿನಂದಿನಿ ಜೊತೆ ಅಮುಲ್‌ ಸ್ಪರ್ಧಿಸುತ್ತಿಲ್ಲ : ಅಮುಲ್‌ ಎಂಡಿ ಜಯನ್‌ ಮೆಹ್ತಾ

ಹಾಗಾಗಿಯೇ ಕೆಎಂಎಫ್‌ ನಿರ್ಧರಿಸುವ ಹಾಲಿನ ದರಗಳೂ ಸಹ ರೈತಾಪಿಯನ್ನು, ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ತೃಪ್ತಿಪಡಿಸಲಾಗುತ್ತಿಲ್ಲ. ರೈತರಿಗೆ ಒಕ್ಕೂಟವು ನೀಡುವ ಲೀಟರ್‌ ದರಕ್ಕೂ ಮಾರುಕಟ್ಟೆ ಬೆಲೆಗೂ ಇರುವ ಅಪಾರ ಅಂತರವೇ ಒಕ್ಕೂಟದಲ್ಲಿರುವ ಅಧಿಕಾರಶಾಹಿಯ ವೆಚ್ಚ ಮತ್ತು ಆಡಳಿತ ವೆಚ್ಚಗಳನ್ನು ಸೂಚಿಸುತ್ತದೆ. ಹಲವು ವರ್ಷಗಳಿಂದ ಸತತ ನಷ್ಟದಲ್ಲೇ ನಡೆಯುತ್ತಿರುವ ಕೆಎಂಎಫ್‌ ಒಕ್ಕೂಟವನ್ನು ಜೀವಂತವಾಗಿರಿಸಲು ರಾಜ್ಯ ಸರ್ಕಾರ ಪ್ರತಿವರ್ಷ ಸಾವಿರಾರು ಕೋಟಿ ಸಬ್ಸಿಡಿಯನ್ನೂ ನೀಡುತ್ತಿದೆ. 70ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರುಕಟ್ಟೆ ಮಾಡುತ್ತಿರುವ ಕೆಎಂಎಫ್‌ ಈ ಮಾರುಕಟ್ಟೆ ವಿಸ್ತರಣೆಗೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಹೆಚ್ಚಿಸಿಲ್ಲ ಎನ್ನುವುದೂ ಸಹ ಗಮನಿಸಬೇಕಾದ ಸಂಗತಿ. ಹಾಗಾಗಿಯೇ ತಮಿಳುನಾಡಿನ ಆರೋಕ್ಯ, ಆಂಧ್ರದ ಹೆರಿಟೇಜ್‌ ಮತ್ತು ದೋಡ್ಲಾ ಮುಂತಾದ ಹಾಲು ಉತ್ಪನ್ನಗಳು ರಾಜ್ಯದ ಮಾರುಕಟ್ಟೆಯನ್ನು ಆಕ್ರಮಿಸಿವೆ. ಈಗ ಅಮುಲ್‌ ಹೊಸ ಸೇರ್ಪಡೆಯಾಗಿದೆ.

ಕೆಎಂಎಫ್‌ ಹಾಲು ಖರೀದಿಸುವ ದರಗಳ ಬಗ್ಗೆಯೂ ಕರ್ನಾಟಕದ ಬಹುಪಾಲು ರೈತರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಗುಜರಾತ್‌ನಲ್ಲಿ ಅಮುಲ್‌ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ರೈತರಿಗೆ ಒಂದು ಲೀಟರ್‌ಗೆ 32 ರೂ ದೊರೆಯುತ್ತದೆ. ಒಕ್ಕೂಟವು ಅಮುಲ್‌ ಹಾಲಿನ ದರವನ್ನು 38 ರೂಗಳಿಗೆ ನಿಗದಿಪಡಿಸಿದೆ. ಆದರೆ ಕರ್ನಾಟಕದಲ್ಲಿ ಕೆಎಂಎಫ್‌ ರೈತರಿಗೆ ಲೀಟರ್‌ ಒಂದಕ್ಕೆ 23 ರೂ ನೀಡಿ ಖರೀದಿಸುವ ಹಾಲನ್ನು ಗ್ರಾಹಕರಿಗೆ 33 ರೂನಂತೆ ಮಾರಾಟ ಮಾಡುತ್ತದೆ. ಇಂದಿಗೂ ರೈತರು ತಮ್ಮ ಹಳ್ಳಿಗಳ ಹಾಲು ಒಕ್ಕೂಟಕ್ಕೆ ಲೀಟರ್‌ಗೆ 26 ರೂನಂತೆ ಸರಬರಾಜು ಮಾಡುತ್ತಿದ್ದು, ದರಗಳನ್ನು ಹೆಚ್ಚಿಸಲು ರೈತ ಸಂಘಗಳು ನಿರಂತರವಾಗಿ ಆಗ್ರಹಿಸುತ್ತಲೇ ಇವೆ. ಆಡಳಿತಾರೂಢ ಅಥವಾ ಪ್ರಬಲ ವಿರೋಧ ಪಕ್ಷಗಳ ನಾಯಕರೇ ಹಾಲು ಮಹಾಮಂಡಲದ ಅಧ್ಯಕ್ಷರಾಗಿಯೂ ಆಯ್ಕೆಯಾಗುವ ಒಂದು ಪರಂಪರೆಗೆ ಒಗ್ಗಿ ಹೋಗಿರುವ ಕೆಎಂಎಫ್‌ ಒಂದು ಸ್ವಾಯತ್ತ ಸಹಕಾರಿ ಸಂಸ್ಥೆಯಾಗಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನೀಡುವ ಸಬ್ಸಿಡಿಯ ಮೂಲಕವೇ ತನ್ನ ನಿರ್ವಹಣಾ ವೆಚ್ಚ ಹಾಗೂ ಮೂಲ ಸೌಕರ್ಯದ-ಅಧಿಕಾರಶಾಹಿಯ ವೆಚ್ಚಗಳನ್ನು ಸರಿದೂಗಿಸುವ ಮೂಲಕ ಕೆಎಂಎಫ್‌ ಕುಂಟುತ್ತಲೇ ಸಾಗಿದೆ.

ಅಮುಲ್‌ ಪ್ರವೇಶ ಮತ್ತು ಮಾರುಕಟ್ಟೆ ಪಾರಮ್ಯ :
ಕರ್ನಾಟಕದಲ್ಲಿ ಅಮುಲ್‌ ಉತ್ಪನ್ನಗಳು ಹೊಸತಾಗಿ ಪ್ರವೇಶಿಸಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ. 2015ರಿಂದಲೇ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಅಮುಲ್‌ ಹಾಲಿನ ಮಾರಾಟ ವಹಿವಾಟು ನಡೆಯುತ್ತಿದೆ. ಆದರೆ ಈ ಜಿಲ್ಲೆಗಳಲ್ಲೂ ನಂದಿನಿ ಹಾಲು ಹೆಚ್ಚು ಜನಪ್ರಿಯವಾಗಿರುವುದರಿಂದ ಅಮುಲ್‌ ಮಾರಾಟದ ಪ್ರಮಾಣ ನಗಣ್ಯವಾಗಿದೆ. ಬೆಂಗಳೂರು, ಹಾಸನ ಮತ್ತು ಬಳ್ಳಾರಿ ಹಾಲಿನ ಡೈರಿಗಳಲ್ಲಿ ಉತ್ಪಾದನೆಯಾಗುವ ಐಸ್‌ ಕ್ರೀಂ 1998ರಿಂದಲೂ ಅಮುಲ್‌ ಬ್ರ್ಯಾಂಡಿನಲ್ಲೇ ಮಾರಾಟವಾಗುತ್ತಿದೆ. ಇದು ನವ ಉದಾರವಾದದ ಮಾರುಕಟ್ಟೆಯ ಒಂದು ಲಕ್ಷಣವಾಗಿದೆ. ತಮ್ಮ ಉತ್ಪಾದನೆಯ ನೆಲೆಗಳನ್ನೂ ಮತ್ತೊಂದು ಉದ್ದಿಮೆಗೆ ವಹಿಸುವ ಮೂಲಕ ವಿಶಿಷ್ಟ ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಯಲ್ಲಿ ಪ್ರಾಯೋಜಿಸಲು ನೆರವಾಗುವ ಹಲವು ಉದ್ದಿಮೆಗಳನ್ನು ಇತರ ಕ್ಷೇತ್ರಗಳಲ್ಲೂ ಕಾಣಬಹುದು. ಹಾಲಿನ ಉದ್ಯಮದಲ್ಲೂ ಇದು ಜಾರಿಯಲ್ಲಿದೆ.

ಈಗ ಅಮುಲ್‌ ಬೆಂಗಳೂರು ನಗರವನ್ನೂ ಪ್ರವೇಶಿಸುವುದಾಗಿ ಘೋಷಿಸಿರುವುದು ರೈತ ಸಮುದಾಯದ ಮತ್ತು ಕನ್ನಡಿಗರ ಆತಂಕಗಳಿಗೆ ಕಾರಣವಾಗಿದೆ. ಕಳೆದ ವರ್ಷ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಬಹುರಾಜ್ಯ ಸಹಕಾರಿ ಸಂಘಗಳ (ತಿದ್ದುಪಡಿ) ಮಸೂದೆಯ ಅನುಸಾರ ಸಹಕಾರಿ ತತ್ವದಡಿ ಕಾರ್ಯನಿರ್ವಹಿಸುವ ಯಾವುದೇ ಸಹಕಾರಿ ಸಂಘಗಳು, ಒಕ್ಕೂಟಗಳು ಭಾರತದ ಯಾವುದೇ ರಾಜ್ಯದಲ್ಲಿ ತಮ್ಮ ವ್ಯಾಪಾರ ಜಾಲವನ್ನು ವಿಸ್ತರಿಸಲು ಅವಕಾಶವಿದೆ. ಅಮುಲ್‌ ಈ ಕಾಯ್ದೆಯ ಫಲಾನುಭವಿಯಾಗಿ ಕರ್ನಾಟಕವನ್ನು ಪ್ರವೇಶಿಸುತ್ತಿದೆ. ಇಲ್ಲಿ ಕರ್ನಾಟಕದ ಹೈನುಗಾರಿಕೆ ಮತ್ತು ಹಾಲು ಉತ್ಪಾದನಾ ವಲಯವನ್ನು ಆಕ್ರಮಿಸುತ್ತಿರುವುದ ಬಂಡವಾಳಶಾಹಿ ಉದ್ಯಮಿ ಅಲ್ಲ ಬದಲಾಗಿ ಮತ್ತೊಂದು ರಾಜ್ಯದ ದೊಡ್ಡ ಸಹಕಾರ ಸಂಘ. ಅಂದರೆ ಕಾರ್ಪೋರೇಟ್‌ ಮಾರುಕಟ್ಟೆ ವ್ಯವಸ್ಥೆಯಲ್ಲಿ ಸ್ವಾಭಾವಿಕವಾಗಿ ನಡೆಯುವಂತೆ, ಬಂಡವಾಳಹೂಡಿಕೆ, ಮಾರುಕಟ್ಟೆ ವಿಸ್ತೀರ್ಣ ಮತ್ತು ವಹಿವಾಟುಗಳ ಪ್ರಮಾಣ ಇವುಗಳನ್ನೇ ಆಧರಿಸಿ ಮುಕ್ತ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಯಾವುದೇ ಔದ್ಯಮಿಕ ಸಂಸ್ಥೆಗಳು ತಮಗಿಂತಲೂ ದುರ್ಬಲವಾಗಿರುವ, ಕಡಿಮೆ ಮಾರುಕಟ್ಟೆ ವಿಸ್ತೀರ್ಣ ಇರುವ ಸಂಸ್ಥೆಗಳನ್ನು ನುಂಗಿಹಾಕಲು ಸಿದ್ಧವಾಗಿರುತ್ತವೆ. ಕೇಂದ್ರ ಗೃಹಸಚಿವ ಅಮಿತ್‌ ಶಾ ಕಳೆದ ವರ್ಷ ಪ್ರಸ್ತಾಪಿಸಿದ ಅಮುಲ್-ನಂದಿನಿ ವಿಲೀನದ ಪರೋಕ್ಷ ಸೂಚನೆಯನ್ನೂ ಈ ನಿಟ್ಟಿನಲ್ಲೇ ನೋಡಬೇಕಿದೆ.

ಅಮುಲ್‌ ಕರ್ನಾಟಕದಲ್ಲಿ ಶೀಘ್ರಗತಿಯಲ್ಲಿ ಮಾರುಕಟ್ಟೆಯ ಹಿಡಿತ ಸಾಧಿಸುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿ ಕಾಣುತ್ತಲೇ ಇವೆ. ಏಕೆಂದರೆ ಅಮುಲ್‌ ಸಂಸ್ಥೆಯ ಮಾರುಕಟ್ಟೆ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ. ಈ ದೃಷ್ಟಿಯಿಂದ ನೋಡಿದಾಗ ಕರ್ನಾಟಕದ ಕೆಎಂಎಫ್‌ ತನ್ನ ಬ್ರ್ಯಾಂಡ್‌ಗಳನ್ನು ಜನರಿಗೆ ತಲುಪಿಸಲು, ಹೊರರಾಜ್ಯದ ಅಥವಾ ಹೊರದೇಶದ ಗ್ರಾಹಕರಿಗೆ ತಲುಪಿಸಲು ಕೈಗೊಂಡಿರುವ ಕ್ರಮಗಳು ನಗಣ್ಯ ಎಂದೇ ಹೇಳಬಹುದು. ಕೆಎಂಎಫ್‌ ಅಥವಾ ನಂದಿನಿ ಕನ್ನಡಿಗರ ಅಸ್ಮಿತೆ ಎಂಬ ಭಾವನೆಯನ್ನೂ ಉದ್ಧೀಪನಗೊಳಿಸುವುದಕ್ಕೂ ಅಮುಲ್‌ ಪ್ರವೇಶವಾಗಬೇಕಾಯಿತು. ಆದರೆ ಇದೇ ಅಸ್ಮಿತೆಯ ಪ್ರಶ್ನೆ ಮೈಸೂರು ಬ್ಯಾಂಕ್‌ ಅವಸಾನ ಹೊಂದಿದಾಗ, ವಿಜಯ- ಕಾರ್ಪೋರೇಷನ್-ಸಿಂಡಿಕೇಟ್‌ ಬ್ಯಾಂಕುಗಳು ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಳೆದುಕೊಂಡಾಗ ಕಿರುದನಿಯನ್ನೂ ಮೂಡಿಸಲಿಲ್ಲ. ಏಕೆಂದರೆ ಕನ್ನಡಿಗರು ಸದಾ ಪ್ರತಿಪಾದಿಸುವ ಕನ್ನಡದ ಅಸ್ಮಿತೆ ಒಂದು ನಿರ್ದಿಷ್ಟ ಆಯಾಮವನ್ನು ಪಡೆಯಬೇಕಾದರೆ, ಕನ್ನಡ ಔದ್ಯೋಗಿಕ ಭಾಷೆಯಾಗಬೇಕು, ಔದ್ಯಮಿಕ ಭಾಷೆಯಾಗಬೇಕು, ಕನ್ನಡ ಜನರ ಬದುಕಿನ ಭಾಷೆಯಾಗಬೇಕು. ಈ ನಿಟ್ಟಿನಲ್ಲಿ ಆಲೋಚನೆ ಮಾಡುವ ಸಂಘಟನೆಗಳೂ ನಮ್ಮ ನಡುವೆ ಇಲ್ಲದಿರುವುದು ಸುಡು ವಾಸ್ತವ.

ಈಗ ಅಮುಲ್‌ ಪ್ರವೇಶಿಸಿದೆ. ಕೆಎಂಎಫ್‌ ಪಾಲಿಗೆ ಅಥವಾ ನಂದಿನಿಯ ಪಾಲಿಗೆ ತನ್ನ ಅಸ್ತಿತ್ವವನ್ನೇ ಇಲ್ಲವಾಗಿಸುವ ಬ್ರಹ್ಮರಾಕ್ಷಸನಂತೆ ಕಾಣುತ್ತಿರಬಹುದು. ಆದರೆ ಅಮುಲ್‌ ಪ್ರವೇಶವನ್ನು ತಡೆಗಟ್ಟಲು ಸಾಧ್ಯವೇ ? ಎಲ್ಲಿಯವರೆಗೂ ಪ್ರಧಾನ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ನೀತಿಗಳನ್ನು ಅಪ್ಪಿಕೊಂಡು, ಒಪ್ಪಿಕೊಂಡು, ಅಧಿಕಾರ ರಾಜಕಾರಣದ ನೆಲೆಗಳಲ್ಲಿ ತಮ್ಮ ಸುಭದ್ರ ನೆಲೆಗಳನ್ನು ಕಂಡುಕೊಳ್ಳುವ ಧಾವಂತರದಲ್ಲಿರುತ್ತವೆಯೋ ಅಲ್ಲಿಯವರೆಗೂ, ಸಣ್ಣ ಮೀನುಗಳನ್ನು ದೊಡ್ಡ ಮೀನುಗಳು ನುಂಗುವ ಈ ಮಾರುಕಟ್ಟೆ ಪ್ರಕ್ರಿಯೆಯನ್ನು ತಡೆಗಟ್ಟಲೂ ಸಾದ್ಯವಾಗುವುದಿಲ್ಲ. ಇದರ ಮೂಲ ಸತ್ವ ಅಡಗಿರುವುದು ನವಉದಾರವಾದದ ಆರ್ಥಿಕ ನೀತಿಗಳಲ್ಲಿ. ಕರ್ನಾಟಕದಲ್ಲಿ ಸಹಕಾರಿ ಸಂಘಗಳು ಮಹಾರಾಷ್ಟ್ರ ಅಥವಾ ಗುಜರಾತ್‌ನಲ್ಲಿ ಆದಂತೆ ಒಂದು ಆಂದೋಲನದ ರೂಪವನ್ನು ಪಡೆದುಕೊಳ್ಳದಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಇದರ ಕಾರಣಗಳನ್ನು ಶೋಧಿಸಬೇಕಿದೆ.

ಅಂತಾರಾಷ್ಟ್ರೀಯ ಬಂಡವಾಳ ಮತ್ತು ಜಾಗತಿಕ ಮಾರುಕಟ್ಟೆಯ ಶಕ್ತಿಗಳು ಸ್ಥಳೀಯ ಬಂಡವಾಳಿಗರೊಂದಿಗೆ ಸೇರಿ, ಸರ್ಕಾರಗಳ ಆಪ್ತಬಂಡವಾಳಶಾಹಿ ಆರ್ಥಿಕ ನೀತಿಗಳ ಆಸರೆ ಪಡೆದು, ದೇಶದ ಸಮಸ್ತ ಉತ್ಪಾದನಾ ವಲಯಗಳನ್ನೂ ಆಕ್ರಮಿಸುತ್ತಿರುವ ಈ ಹೊತ್ತಿನಲ್ಲಿ ನಮ್ಮನ್ನು ಕಾಡಬೇಕಿರುವುದು ಕೇವಲ ನಂದಿನಿ ಅಥವಾ ಕೆಎಂಎಫ್‌ ಅಥವಾ ಅಮುಲ್‌ ಅಲ್ಲ, ಈ ಸಹಕಾರಿ ತತ್ವಗಳನ್ನಾಧರಿಸಿದ ಸಂಸ್ಥೆಗಳನ್ನೂ ಕಬಳಿಸಲು ಮುಂದಾಗುತ್ತಿರುವ ಮಾರುಕಟ್ಟೆ ಶಕ್ತಿಗಳ ರಣತಂತ್ರಗಳು ನಮ್ಮನ್ನು ಬಾಧಿಸಬೇಕಿದೆ. ನವ ಉದಾರವಾದ- ಬಂಡವಾಳಶಾಹಿ ಆರ್ಥಿಕತೆ ಹಾಗೂ ಮಾರುಕಟ್ಟೆ ಆರ್ಥಿಕತೆಯ ಕಾರ್ಯತಂತ್ರಗಳನ್ನು ಅರ್ಥಮಾಡಿಕೊಳ್ಳದೆ, ಅಸ್ಮಿತೆಗಳನ್ನಾಧರಿಸಿದ ಭಾವನಾತ್ಮಕ ಹೋರಾಟಗಳಲ್ಲಿ ನಿರತರಾಗದೆ, ಗುಜರಾತ್-ಕರ್ನಾಟಕ-ಅಂಬಾನಿ-ಅದಾನಿ ಸೂತ್ರಗಳ ಸಿಕ್ಕುಗಳಲ್ಲಿ ಸಿಲುಕದೆ, ಕರ್ನಾಟಕದ ಉತ್ಪಾದನೆಯ ನೆಲೆಗಳನ್ನು , ಉತ್ಪಾದನಾ ಸಾಧನಗಳನ್ನು ಮತ್ತು ಉತ್ಪಾದಕೀಯ ಶಕ್ತಿಗಳನ್ನು ಅಂತಾರಾಷ್ಟ್ರೀಯ ಬಂಡವಾಳಶಾಹಿ ಮಾರುಕಟ್ಟೆ ಹಿಡಿತದಿಮದ ಹೇಗೆ ಪಾರುಮಾಡುವುದು ಎನ್ನುವ ಪ್ರಶ್ನೆ ನಮ್ಮನ್ನು ಕಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *