ಕಬ್ಬಿನಿಂದ ಎಥೆನಾಲ್ ಉತ್ಪಾದನೆ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ನವದೆಹಲಿ: ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರ್ಕಾರದ ನೀತಿಯನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ತೀವ್ರವಾಗಿ ಟೀಕಿಸಿದ್ದಾರೆ. ಎಥೆನಾಲ್ ಉತ್ಪಾದನೆಗಾಗಿ ಕಬ್ಬನ್ನು ಬಳಸುತ್ತಿರುವುದರಿಂದ ದೇಶದಲ್ಲಿ ಸಕ್ಕರೆ ಕೊರತೆ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಬ್ಬಿನಿಂದ

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, ತೈಲ ಆಮದಿಗೆ ಖರ್ಚಾಗುವ ವಿದೇಶಿ ವಿನಿಮಯವನ್ನು ಉಳಿಸುವ ಉದ್ದೇಶದಿಂದ ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಆರಂಭಿಸಲಾಯಿತು. ಆದರೆ ಇದರ ಪರಿಣಾಮವಾಗಿ ಸಕ್ಕರೆ ಕೊರತೆ ಎದುರಾಗಿದೆ. ಇದೀಗ ಸಕ್ಕರೆಯನ್ನೇ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸಿರುವ ಕೇಜ್ರಿವಾಲ್, ದೇಶವನ್ನು ನಡೆಸುತ್ತಿರುವವರಿಗೆ ನೀತಿಗಳ ಪರಿಣಾಮಗಳ ಬಗ್ಗೆ ಅರಿವಿಲ್ಲ ಎಂದು ಆರೋಪಿಸಿದ್ದಾರೆ. ಒಂದು ಸಮಸ್ಯೆ ಪರಿಹರಿಸುವ ಹೆಸರಿನಲ್ಲಿ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುವ ರೀತಿಯಲ್ಲಿ ಸರ್ಕಾರದ ನಿರ್ಧಾರಗಳು ಸಾಗುತ್ತಿವೆ ಎಂದು ಅವರು ಹೇಳಿದ್ದಾರೆ. ಕಬ್ಬಿನಿಂದ

ಇದನ್ನೂ ಓದಿ : ಕರ್ನಾಟಕದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 428ಕ್ಕೆ ಪ್ರಾಂಶುಪಾಲರೇ ಇಲ್ಲ!

ಕೇಜ್ರಿವಾಲ್ ಅವರ ಟೀಕೆ ಕೇವಲ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಸೀಮಿತವಾಗಿಲ್ಲ. ಕೇಂದ್ರದ ಇ20 ಇಂಧನ ನೀತಿ ವಿರುದ್ಧವೂ ಅವರು ನಿರಂತರವಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇ20 ನೀತಿಯ ಬಗ್ಗೆ ಟೀಕಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ವಿಡಿಯೊಗಳನ್ನು ತೆಗೆದುಹಾಕಲಾಗುತ್ತಿದೆ, ಧ್ವನಿ ಎತ್ತುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚೆಗೆ ಕೇಜ್ರಿವಾಲ್ ಅವರು ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದರು. ಡೀಸೆಲ್ ಮತ್ತು ವಿಮಾನ ಇಂಧನದಲ್ಲೂ ಎಥೆನಾಲ್ ಮಿಶ್ರಣ ಮಾಡುವ ಯೋಜನೆ ಇದೆ ಎಂದು ಅವರು ಪ್ರತ್ಯೇಕವಾಗಿ ಹೇಳಿದ್ದರು. ಈ ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಪ್ರಕಟವಾಗಿಲ್ಲ.

ತೈಲ ಆಮದಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ವಿದೇಶಿ ವಿನಿಮಯ ಉಳಿತಾಯ ಮಾಡುವುದು ಎಥೆನಾಲ್ ಮಿಶ್ರಣ ನೀತಿಯ ಪ್ರಮುಖ ಉದ್ದೇಶಗಳಾಗಿವೆ. ಆದರೆ ಆಹಾರ ಉತ್ಪಾದನೆಗೆ ಬಳಸಬೇಕಾದ ಕಬ್ಬಿನ ಪ್ರಮಾಣವನ್ನು ಇಂಧನ ಉತ್ಪಾದನೆಗೆ ತಿರುಗಿಸುವುದರಿಂದ ಸಕ್ಕರೆ ಲಭ್ಯತೆ ಹಾಗೂ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಯನ್ನು ಕೇಜ್ರಿವಾಲ್ ಅವರ ಹೇಳಿಕೆ ಮತ್ತೆ ಮುನ್ನೆಲೆಗೆ ತಂದಿದೆ.

ಇದನ್ನೂ ನೋಡಿ : 1 ಕೋಟಿ ಮತದಾರರ ಮೇಲೆ SIR ತೂಗುಕತ್ತಿ: Form-8 ಬದಲು Form-6 ಏಕೆ? ವಿಶ್ಲೇಷಣೆ : ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *