ಡಾ:ಎನ್.ಬಿ.ಶ್ರೀಧರ
ತನ್ನ ತವರಿನ ನದಿಯ ಮಣ್ಣಿನ ವಾಸನೆ, ಅಲ್ಲಿನ ಗಿಡಗಂಟೆ ಮತ್ತು ಪ್ರಾಣಿಗಳಿಂದುಂಟಾದ ಪರಿಮಳದ ನೆನಪು ಅವುಗಳ ಸುಪ್ತಾವಸ್ಥೆಯಲ್ಲಿ ಅಷ್ಟೊತ್ತಿರುತ್ತದೆ. ಸಂತಾನ ಬಯಕೆ ತೀವ್ರವಾದಾಗ ಆ ನೆನಪು ಅವುಗಳಲ್ಲಿ ಜಾಗೃತವಾಗುತ್ತದೆ. ತನ್ನ ತವರಿನ ವಾಸನೆ ಕೋಟಿಯಲ್ಲಿ ಒಂದು ಭಾಗವಿದ್ದರೂ ಸಾಲ್ಮನ್’ ಪತ್ತೆ ಹಚ್ಚಬಲ್ಲದು, ಈ ವಾಸನೆಯಿಂದಲೇ ಅವು ಸಾಗರದಲ್ಲಿ ಸಾವಿರಾರು ಮೈಲು ಕ್ರಮಿಸಿ ಕರಾರುವಕ್ಕಾಗಿ ತಮ್ಮ ಮೂಲ ನದಿಯ ಬಳಿಗೆ ಬರುತ್ತದೆ. ವಾಸನೆಯೇ ಅವುಗಳನ್ನು ಮುನ್ನಡೆಸುವ ಮಾರ್ಗದರ್ಶಿ, ಸಾಲ್ಮನ್ ಮೀನುಗಳಿಗೆ ಮೂಗು ಕಟ್ಟಿತೆಂದರೆ ದಿಕ್ಕು ತಪ್ಪುತ್ತವೆ. ಸಾಲ್ಮನ್‌ಗಳ
ನಮಗೆಲ್ಲಾ ತಿಳಿದಂತೆ ಸಮುದ್ರದ ಉಪ್ಪು ನೀರಿನಲ್ಲಿ ಬದುಕುವ ಜೀವಿಗಳು, ಸಿಹಿ ನೀರಿನ ನದಿ ಕೊಳ್ಳಗಳಲ್ಲಿ ಬದುಕಲಾರವು. ಹಾಗೆಯೇ ಸಿಹಿ ನೀರಿನ ಜೀವಿ ಸಾಗರದಲ್ಲಿ ಬದುಕಲಾರದು. ಉಪ್ಪುನೀರಿನ ಜೀವಿ ಸಿಹಿನೀರಿಗೆ ಬಂದರೆ ಅದರ ಶರೀರಕ್ಕೆ ಸಿಹಿನೀರು ನುಗ್ಗಿ ಕೋಸಗಳನ್ನು ಹಾಳುಗೆಡವುತ್ತದೆ. ಸಿಹಿನೀರಿನ ಜೀವಿ ಉಪ್ಪು ನೀರಿಗೆ ಹೋದರೆ ಅದರ ಶರೀರದ ನೀರು ಹೀರಲ್ಪಟ್ಟು ಉಪ್ಪಿನಲ್ಲಿ ಹಾಕಿದ ಮಾವಿನ ಮಿಡಿಯ ತರ ಚಿರುಟಿಕೊಳ್ಳಬಹುದು. ಇದು ಸಾಮಾನ್ಯ ನಿಯಮ. ನದಿ ಕೆರೆಗಳ ಮತ್ತು ಸಾಗರಗಳ ಲವಣ ಸಾಂದ್ರತೆಯಲ್ಲಿ ಅಗಾಧ ವ್ಯತ್ಯಾಸವಿರುವುದರಿಂದ ಸಾಗರದ ಜೀವಿಗಳಿಗೆ ಸಿಹಿ ನೀರಿಗೆ ಒಗ್ಗಿಕೊಳ್ಳಲು ಕಷ್ಟವಾಗುತ್ತದೆ. ಹಾಗೆಯೇ ಸಿಹಿ ನೀರಿನ ಜೀವಿಗಳು ಸಾಗರದ ವಾತಾವರಣಕ್ಕೆ ಹೊಂದಿಕೊಳ್ಳಲಾರವು. ಈ ಅಂಶ ಜಲಚರಗಳ ವಲಸೆಗೆ ಮಿತಿ ಹೇರುತ್ತದೆ. ಇಲ್ಲದಿದ್ದರೆ ಸಮದ್ರದ ಅನೇಕ ಜೀವಿಗಳು ನದಿಗೂ, ನದಿಯ ಅನೇಕ ಜಲಚರಗಳು ಸಮುದ್ರಕ್ಕೂ ನುಗ್ಗಿ ಪ್ರಕ್ರತಿಯಲ್ಲಿ ಆಹಾರದ ಕೊರತೆಯಾಗಬಹುದಿತ್ತು.
ಈ ಸಾಮಾನ್ಯ ನಿಯಮವನ್ನು ಪ್ರತಿರೋಧಿಸಿ ಸಮರ್ಥವಾಗಿ ಬದುಕಬಲ್ಲ ಜೀವಿಗಳೆಂದರೆ ಸಮುದ್ರ ಮತ್ತು ನದಿ ನೀರು ಎರಡರಲ್ಲು ಬದುಕಬಲ್ಲ ಸಾಲ್ಮನ್ ಮೀನುಗಳು. ಇವುಗಳನ್ನು ಉಪ್ಪು ನೀರಿನ ಜೀವಿಗಳೋ ಸಿಹಿ ನೀರಿನ ಜೀವಿಗಳೋ ಎಂದು ವರ್ಗೀಕರಿಸುವುದೇ ಕಷ್ಟವಾಗುತ್ತದೆ. ಸಾಲ್ಮನ್ ಮೀನುಗಳು ಹುಟ್ಟುವುದು ಸಿಹಿ ನೀರಿನಲ್ಲಿ ಬೆಳೆಯುವುದು ಸಾಗರದಲ್ಲಿ. ಮತ್ತೆ ಸಂತಾನೋತ್ಪತ್ತಿ ಸಿಹಿ ನೀರಿನಲ್ಲಿ, ಮರಣಿಸುವುದು ಸಿಹಿ ನೀರಿನಲ್ಲಿ. ಹುಟ್ಟು ಸಾವಿನ ನಡುವೆ ಅವು ಬಹು ದೀರ್ಘವಾದ ವಲಸೆಯನ್ನು ಕಾಣುತ್ತವೆ. ಈ ಮೀನುಗಳು ವಿಶೇಷವಾದ ಈ ಸಂಚಾರವನ್ನು ವಲಸೆ ಎನ್ನಬಹುದು.ಸಾಲ್ಮನ್ ಮೀನು ಕುಟುಂಬದಲ್ಲಿ ಆರು ಜಾತಿಗಳಿವೆ. ಇವೆಲ್ಲ ವಿವಿಧ ಸಾಗರಗಳಲ್ಲಿ ಹಂಚಿಕೆಯಾಗಿವೆ. ಕಿಂಗ್‍ಸಾಲ್ಮನ್ ಎಂಬ ಜಾತಿಯ ಮೀನಿನ ಜೀವನ ಯಾತ್ರೆ ಹೆಚ್ಚು ಕಡಿಮೆ ಎಲ್ಲಾ ಸಾಲ್ಮನ್‌ಗಳ ಯಾತ್ರೆಗೆ ಒಂದು ಮಾದರಿಯಾಗಿದೆ.
ಹುಟ್ಟಿದ ನಂತರ ಒಂದು ವರ್ಷದಲ್ಲಿ ಸಾಗರಕ್ಕೆ ಬರುವ ಈ ಸಾಲನ್‌ಗಳು ಶಾಂತಿ ಸಾಗರದಲ್ಲಿ ವಾಸಿಸುತ್ತವೆ. ಚಿಕ್ಕವಿದ್ದಾಗ ಹುಳು ಹುಪ್ಪಟೆ ತಿನ್ನುತ್ತಾ ದೊಡ್ಡವಾದಾಗ ಸಣ್ಣ ಮೀನುಗಳನ್ನು ಅವು ಭಕ್ಷಿಸುತ್ತವೆ. ನಾಲ್ಕು ವರ್ಷಕ್ಕೆ ಇವು ಯೌವನಕ್ಕೆ ಕಾಲಿರಿಸುತ್ತವೆ. ಆಗ ಸಂತಾನೋತ್ಪತ್ತಿ ಬಯಕೆ ಅವುಗಳಲ್ಲಿ ತೀವ್ರಗೊಳ್ಳುತ್ತದೆ. ಹೀಗೆ ಯೌವನಕ್ಕೆ ಬಂದ ಸಾಲ್ಮನ್‌ಗಳು ಆಗಸ್ಟ್ ತಿಂಗಳಲ್ಲಿ ತಮ್ಮ ವಲಸೆಯನ್ನು ಆರಂಭಿಸುತ್ತವೆ. ನಿಧಾನವಾಗಿ ಅಮೆರಿಕದ ಕರಾವಳಿಯೆಡೆಗೆ ಸಾಗುತ್ತವೆ. ಸಾಗರ-ನದಿ ಸಂಗಮದ ನದಿ ಮುಖಜ ಭೂಮಿಗೆ ಬರುವ ವೇಳೆಗೆ ಅವು ನೂರಾರು ಮೈಲಿ ಈಜಿರುತ್ತವೆ. ಆನಂತರ ಅವು ತಾವು ಸಾಗಬೇಕಾದ ನದಿಯನ್ನು ಆರಿಸಿಕೊಳ್ಳುತ್ತವೆ. ಸಾಲ್ಮನ್‌ಗಳು ನದಿಯನ್ನು ಬೇಕಾಬಿಟ್ಟಿ ಆರಿಸಿಕೊಳ್ಳುವುದಿಲ್ಲ. ಪ್ರತಿ ಸಾಲನ್ ಮೀನು ತಾನು ಹುಟ್ಟಿಬಂದ ನದಿಯನ್ನೇ ಆರಿಸಿಕೊಳುತ್ತದೆ. ಇದು ಹೇಗೆ ಎಂಬುದು ಯಕ್ಷ ಪ್ರಶ್ನೆ .
ತನ್ನ ತವರಿನ ನದಿಯ ಮಣ್ಣಿನ ವಾಸನೆ, ಅಲ್ಲಿನ ಗಿಡಗಂಟೆ ಮತ್ತು ಪ್ರಾಣಿಗಳಿಂದುಂಟಾದ ಪರಿಮಳದ ನೆನಪು ಅವುಗಳ ಸುಪ್ತಾವಸ್ಥೆಯಲ್ಲಿ ಅಷ್ಟೊತ್ತಿರುತ್ತದೆ. ಸಂತಾನ ಬಯಕೆ ತೀವ್ರವಾದಾಗ ಆ ನೆನಪು ಅವುಗಳಲ್ಲಿ ಜಾಗೃತವಾಗುತ್ತದೆ. ತನ್ನ ತವರಿನ ವಾಸನೆ ಕೋಟಿಯಲ್ಲಿ ಒಂದು ಭಾಗವಿದ್ದರೂ ಸಾಲ್ಮನ್’ ಪತ್ತೆ ಹಚ್ಚಬಲ್ಲದು, ಈ ವಾಸನೆಯಿಂದಲೇ ಅವು ಸಾಗರದಲ್ಲಿ ಸಾವಿರಾರು ಮೈಲು ಕ್ರಮಿಸಿ ಕರಾರುವಕ್ಕಾಗಿ ತಮ್ಮ ಮೂಲ ನದಿಯ ಬಳಿಗೆ ಬರುತ್ತದೆ. ವಾಸನೆಯೇ ಅವುಗಳನ್ನು ಮುನ್ನಡೆಸುವ ಮಾರ್ಗದರ್ಶಿ, ಸಾಲ್ಮನ್ ಮೀನುಗಳಿಗೆ ಮೂಗು ಕಟ್ಟಿತೆಂದರೆ ದಿಕ್ಕು ತಪ್ಪುತ್ತವೆ.
ವಂಶಾಭಿವೃದ್ಧಿ ಕಾಲದಲ್ಲಿ ಸಾಲ್ಮನ್ ಮೀನುಗಳಿಗೆ ತವರಿಗೆ ಹಿಂದಿರುಗುವ ಒತ್ತಡ ತೀವ್ರವಾಗಿರಬಹುದು, ಆದರೆ ಅವು ಎದುರಿಸಬೇಕಾದ ಅಡೆ-ತಡೆಗಳು ಅಪಾರ. ಸಮುದ್ರದ ಉಪ್ಪು ನೀರಿನಿಂದ ಸಿಹಿ ನೀರಿಗೆ ಪ್ರವೇಶಿಸಬೇಕಾದರೆ ಶರೀರದ ರಾಸಾಯನಿಕ ಕ್ರಿಯೆಯಲ್ಲಿ ಅವು ಕ್ಷಿಪ್ರವಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ಇದಾದ ನಂತರ ಸೆಳೆವಿನಿಂದ ಹರಿವ ನದಿಯನ್ನು ಪ್ರತಿರೋಧಿಸಿ ಈಜಬೇಕು. ಅದಾದ ನಂತರ ಎದುರಾಗುವ ಜಲಪಾತಗಳನ್ನು ಹಾರಿ ಮುನ್ನಡೆಸಬೇಕು. ಸಾಲ್ಮನ್‌ಗಳಿಗೆ ತೀವ್ರವಾದ ದೃಷ್ಟಿ ಜಲಪಾತ ಕಡಿಮೆ ಎತ್ತರದಿಂದ ಧುಮ್ಮಿಕ್ಕುವ ಜಾಗವನ್ನು ಅವು ಆರಿಸಿಕೊಳ್ಳುತ್ತವೆ. ಇಲ್ಲವೆ ಎತ್ತರದ ಜಲಪಾತ ನಡುವೆ ಸಣ್ಣ ಪುಟ್ಟ ಹೊಂಡಗಳಿದ್ದರೆ ಅಲ್ಲಿಗೆ ಹಾರಿ ವಿಶ್ರಾಂತಿ ಪಡೆದು, ಮತ್ತೆಹಾರಿ ಮುಂದುವರಿಯುತ್ತವೆ. ಒಮ್ಮೊಮ್ಮೆ ಸುಮಾರು 8-10 ಅಡಿ ಮೇಲಕ್ಕೆ ಹಾರಬಲ್ಲವು. ಇವುಗಳ ದೇಹ ಸರಾಸರಿ ಹನ್ನೊಂದು ಕೆ.ಜಿ. ಇರುತ್ತದೆ.
ಇದನ್ನೂ ಓದಿ:ಆಮೆಯೆಂಬ ಅದ್ಭುತ ಪ್ರಾಣಿ !
ಸಾಲ್ಮನ್ ಯಾತ್ರೆಯನ್ನು ಅಭ್ಯಸಿಸಿರುವ ಅನೇಕ ಬೇಟೆಗಾರರು ಅವುಗಳಿಗೆ ಕಾದು ಕೂತಿರುತ್ತಾರೆ. ಕಂದು ಕರಡಿ, ಕಡಲ ರಾಣಿ ಮತ್ತು ಮನುಷ್ಯರ ಬಲೆ, ಗಾಳಗಳ ಅಡೆ ತಡೆಗಳನ್ನು ಅವು ದಾಟಬೇಕು. ಜಲಪಾತದ ಅಂಚಿನಲ್ಲಿ ಹೊಂಚುಹಾಕಿ ನಿಲ್ಲುವ ಕಂದು ಕರಡಿಗಳು ಹಾರಿಬರುವ ಸಾಲ್ಮನ್‌ಗಳನ್ನು ಬಾಯಲ್ಲಿ ಹಿಡಿವ ಕೌಶಲ್ಯ ಪ್ರದರ್ಶಿಸುತ್ತವೆ. ಕರಡಿಗಳ ಬಾಯನ್ನೂ ತಪ್ಪಿಸಿ ಕೆಲವು ಮೀನುಗಳು ನದಿಗೆ ವ್ಯತಿರಿಕ್ತವಾಗಿ ಹಾರಿ ಮುಂದುವರಿಯುತ್ತವೆ.
ಹೀಗೆ ಅಡೆ ತಡೆಗಳನ್ನು ದಾಟಿ ಯಶಸ್ವಿಯಾಗಿ ಸಾಗಿದ ಸಾಲ್ಮನ್‌ಗಳು ತಾವು ಹುಟ್ಟಿದ ಆಳವಿಲ್ಲದ ನದಿಯ ಜಾಗವನ್ನು ಸೇರುವ ವೇಳೆಗೆ ಸುಸ್ತಾಗಿರುತ್ತವೆ. ಒಂದರ ಪಕ್ಕ ಒಂದು ಸೇರಿ ಹರಿವ ನದಿಗೆ ಎದುರು ತಲೆ ಇಟ್ಟು ವಿಶ್ರಾಂತಿಗೆ ತೊಡಗುತ್ತವೆ.
ಹಾಗೆಯೇ ಗಂಡುಗಳ ಶರೀರದಲ್ಲಿ ಅದ್ಭುತ ವೇಗದಲ್ಲಿ ಬದಲಾವಣೆ ಕಾಣಲಾರಂಭಿಸುತ್ತದೆ. ಬೆನ್ನು ಬಾಗಿ ದೊಡ್ಡ ಡುಬ್ಬ ಕಾಣಿಸಿಕೊಳ್ಳುತ್ತದೆ. ಮೇಲ್ದವಡೆ ಕೊಕ್ಕೆಯಾಕಾರಕ್ಕೆ ತಿರುಗುತ್ತದೆ. ಹಲ್ಲುಗಳು ಆಯುಧದಂಥ ಕೋರೆಗಳಾಗಿ ಮಾರ್ಪಾಡಾಗುತ್ತವೆ. ಗಂಡು ಸಾಲ್ಮನ್‌ಗಳು ಪರಸ್ಪರ ಕಾಳಗಕ್ಕೆ ಇಳಿಯುತ್ತವೆ. ಕೊಕ್ಕೆ ದವಡೆಯಲ್ಲಿ ಒಂದನ್ನೊಂದು ಹಿಡಿಯುತ್ತಾ ಹಲ್ಲಿನಿಂದ ತಿವಿಯುತ್ತಾ ದಿನವಿಡೀ ಹೋರಾಡುತ್ತವೆ. ಅಂತೂ ಒಂದು ಸೋಲುತ್ತದೆ. ಗೆದ್ದ ಗಂಡು ಉಸುಕಿನಲ್ಲಿ ಗೂಡು ನೋಡುತ್ತದೆ. ಹೆಣ್ಣು ಇದ್ದುದರಲ್ಲಿಯೇ ದೊಡ್ಡ ಮತ್ತು ಬಲಶಾಲಿ ಗಂಡನ್ನು ಆಯ್ದು ಅದನ್ನು ಸೇರಿಕೊಳ್ಳುತ್ತದೆ.
ಹೆಣ್ಣು ಸ್ರವಿಸಿದ ಅಂಡಕಗಳ ಮೇಲೆ ಗಂಡು ತನ್ನ ಶುಕ್ಲವನ್ನು ನೀರಿನಡಿಯೇ ಬಿಟ್ಟು ಮರಳನ್ನು ಮುಚ್ಚುತ್ತದೆ. ಕೆಲವೊಮ್ಮೆ ಯುವ ಸ್ಪಾರ್ ಮೀನುಗಳೂ ಸಹ ಈ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಅಲ್ಲಿಗೆ ಮೀನಿನ ಮೊಟ್ಟೆಗಳು ಸುರಕ್ಷಿತವಾಗುತ್ತವೆ.
ಈಗ ಗಂಡುಗಳು ಪೂರ್ಣವಾಗಿ ಸುಸ್ತಾಗಿವೆ. ಸುಮಾರು ಒಂದು ವರ್ಷ ಏನೂ ಸೇವಿಸದೇ ಅವುಗಳ ದೇಹ ಬಸವಳಿಯುತ್ತದೆ.ಹೋರಾಟದಲ್ಲಿನ ಗಾಯಗಳನ್ನು ವಾಸಿ ಮಾಡಿಕೊಳ್ಳುವ ಶಕ್ತಿಯೂ ಅವಕ್ಕಿಲ್ಲ. ಅವುಗಳ ಪೊರೆ ಕಳಚಿಬೀಳುತ್ತದೆ. ನದಿಯ ಸೆಳವನ್ನು ಪ್ರತಿರೋಧಿಸಿ, ಜಲಪಾತವನ್ನು ನೆಗೆದು ಬಂದ ಅವುಗಳ ಬಲಶಾಲಿ ಸ್ನಾಯುಗಳು ಸೊರಗತೊಡಗುತ್ತವೆ. ಕೆಲವೊಂದಕ್ಕೆ ಶಿಲೀಂದ್ರ ರೋಗವೂ ತಗಲಬಹುದು. ಸೇ 40 ರಷ್ಟು ಅವುಗಳ ಸರೀರದ ತೂಕ ಇಳಿಯತೆಂದರೆ ಅವು ಬದುಕಲಾರವು ಎಂದರ್ಥ. ಸಾಗರದಿಂದ ಯಶಸ್ವಿಯಾಗಿ ಈಜಿ ಬಂದ ಈ ಲಕ್ಷಾಂತರ ಮೀನುಗಳಲ್ಲಿ ಒಂದಾದರೂ ಮತ್ತೆ ಸಾಗರಕ್ಕೆ ಹಿಂದಿರುಗಲಾರದು. ಅವು ನಿಧಾನವಾಗಿ ಅಲ್ಲೇ ಸಾಯುತ್ತವೆ. ಅಪರೂಪಕ್ಕೆ ಕೆಲವು ಜಾತಿಯ ಹೆಣ್ಣು ಸಾಲ್ಮನ್‌ಗಳು ಮಾತ್ರ ವಾಪಸ್ಸು ಹೋಗುತ್ತವೆ. ಸತ್ತ ಮೀನುಗಳು ನಿಧಾನವಾಗಿ ದಂಡೆಯ ಕಡೆ ತೇಲಿ ಬರುತ್ತವೆ. ಈ ಮೀನುಗಳು ಹತ್ತಾರು ಜೀವಿಗಳಿಗೆ ಆಹಾರವಾಗುತ್ತವೆ.
ಮರಳಿನಲ್ಲಿ ಮೊಟ್ಟೆಗಳು ತೀವ್ರ ಚಳಿಯನ್ನು ಸಹಿಸಿ ವಸಂತ ಕಾಲಕ್ಕೆ ಮರಿಯಾಗುತ್ತವೆ, ಹೊರಗೆ ಬಂದ ಮರಿಗಳಲ್ಲಿ ಕೆಲವು ಎರಡು ವರ್ಷದವರೆಗೆ ಆದೇ ನೀರಿನಲ್ಲಿ ಆಡ್ಡಾಡುತ್ತವೆ. ಕೆಲವು ಐದು ವರ್ಷಗಳವರೆಗೆ ಇದ್ದು ಸಾಗರದೆಡೆಗೆ ಚಲಿಸಲಾರಂಭಿಸುತ್ತವೆ. ಸಾಗರ ಸೇರಿದ ನಂತರ ಯೌವನಕ್ಕೆ ಕಾಲಿಡುವವರೆಗೆ ಅಲ್ಲೇ ಜೀವನ ಸಾಗಿಸುತ್ತವೆ.ಸಂತಾನಾಭಿವೃದ್ಧಿ ಬಯಕೆ ತೀವ್ರಗೊಂಡಾಗ ಮತ್ತೆ ಯಾತ್ರೆ ಆರಂಭವಾಗುತ್ತದೆ. ಸಾಲ್ಮನ್‌ಗಳ ಈ ಜೀವನಯಾತ್ರೆ ವಂಶಾಭಿವೃದ್ಧಿ ಮತ್ತು ಅಸ್ತಿತ್ವಕ್ಕಾಗಿ ನಡೆಯುವ ಹೋರಾಟದ ಒಂದು ಯಶಸ್ವಿಗಾಥೆ.
ಇದನ್ನೂ ಓದಿ: ‘ಕೃಷಿಯ ಬದುಕು’ ಅಸ್ಥಿರವೂ ಅತಂತ್ರವೂ ಆಗುತ್ತಿದೆ
ಸಾಲ್ಮನ್ ಮೀನುಗಳ ಕುರಿತು ಇನ್ನೂ ಅನೇಕ ವಿಸ್ಮಯಕಾರಿ ವಿಷಯಗಳು ಉಳಿದುಬಿಡುತ್ತವೆ.
- ಸಿಹಿ ಮತ್ತು ಉಪ್ಪು ನೀರಿನಲ್ಲಿ ಬದುಕುವ ಸಾಲ್ಮನ್ನುಗಳಿಗೆ “ಅನಾಡ್ರೋಮಸ್” ಪ್ರಾಣಿಗಳು ಎನ್ನುತ್ತಾರೆ. ಇದಲ್ಲದೇ ಈ ವರ್ಗಕ್ಕೆ ಸ್ಟೀಲ್ ಹೆಡ್ ಟ್ರೌಟ್ ಮೀನು, ಸ್ಟುರ್ಜಿಯಾನ್, ಸ್ಟ್ರೈಪಾಡ್ ಬಾಸ್, ಶಾಡ್ ಮತ್ತಿತರ ಮೀನುಗಳು ಸೇರುತ್ತವೆ.
- ಸಾಲ್ಮನ್ ಮೀನುಗಳು 5-7 ವರ್ಷ ಬದುಕುತ್ತವೆ. ಇವುಗಳಲ್ಲಿ 7 ಕ್ಕಿಂತ ಜಾಸ್ತಿ ಪ್ರಬೇಧಗಳಿವೆ. ಹೆಣ್ಣು ಸಾಲ್ಮನ್ ಮೀನು ಒಮ್ಮೆ 4000 ತತ್ತಿಗಳನ್ನು ಹೊತ್ತೊಯ್ಯುತ್ತದೆ.
- ಜಗತ್ತಿನಲ್ಲಿಯೇ ಮೀನುಗಳ ಮೇಲೆ ಹೆಚ್ಚಿನ ಅಧ್ಯಯನ ನಡೆದಿರುವುದು ಸಾಲ್ಮನ್ನುಗಳ ಮೇಲೆ.
- ಸಾಲ್ಮನ್ ಸಮೂಹ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೊತೆಯೇ ಸಾಗುವುದರಿಂದ ಭಕ್ಷಕ ಸಮುದ್ರ ಪ್ರಾಣಿಗಳು ಗುರುತಿಸಲಾಗದೇ ದಿಕ್ಕೆಡುತ್ತವೆ.
- ಸಾಲ್ಮನ್ ಮೀನುಗಳು ಸಂತಾನೋತ್ಪತ್ತಿಗಾಗಿ ಸುಮಾರು 38೦೦ ಕಿಮಿ ಪ್ರಯಾಣ ಮಾಡುತ್ತವೆ ಮತ್ತು ಅವುಗಳ ಮೂಲ ಸೇರಲು ಒಂದು ವರ್ಷಕ್ಕಿಂತ ಜಾಸ್ತಿ ಸಮಯ ತೆಗೆದುಕೊಳ್ಳುತ್ತವೆ.
- ಹೆಣ್ಣು ಸಾಲ್ಮನ್ನುಗಳು ಜೀವಿತಾವಧಿಯಲ್ಲಿ 3 ಭಾರಿ ಮೊಟ್ಟೆಯಿಕ್ಕಲು ಸುಮಾರು 29,೦೦೦ ಕಿಮಿ ಪ್ರಯಾಣ ಮಾಡುತ್ತವೆ.
- ಸಂತಾನೋತ್ಪತ್ತಿ ಕ್ರಿಯೆ ಮುಗಿದ ನಂತರ ಸಾಲ್ಮನ್ನುಗಳು ಮಹಾಭಾರತದ ಭೀಷ್ಮನಂತೆ ಸ್ವಯಂ ಮರಣ ಹೊಂದಿ ಇತರ ಪ್ರಾಣಿಗಳಿಗೆ ಆಹಾರವಾಗುತ್ತವೆ.
- ಸಾಲ್ಮನ್ ಮೀನುಗಳು ಜಲಪಾತದೆದುರು ಈಜುತ್ತವೆ ಮತ್ತು 3-7 ಅಡಿಯವರೆಗೆ ಜಿಗಿದು ಹಾರಿ ಜಲಪಾತವನ್ನು ಏರುತ್ತವೆ.
- ಸಾಲ್ಮನ್ ಮೊಟ್ಟೆಯಿಡಲು ತಯಾರಾಗುತ್ತಿದ್ದಂತೆ ಅವುಗಳ ಬಣ್ಣ ರೋಮಾಂಚಕ ಕೆಂಪು, ಗುಲಾಬಿ ಅಥವಾ ಹಸಿರು ಬಣ್ಣಗಳಾಗಿ ನಾಟಕೀಯ ದೈಹಿಕ ಬದಲಾವಣೆಗಳಿಗೆ ಒಳಗಾಗುತ್ತವೆ.
- ಸಾಲ್ಮನ್ನುಗಳಿಗೆ ಮೀನುಗಳ ಜಾತಿಯಲ್ಲಿಯೇ ಅತ್ಯಂತ ಹೆಚ್ಚಿನ ಜಿಗಿಯುವ ಸಾಮರ್ಥ್ಯವಿದೆ. ಅವು ಜಲಪಾತದಂತ ರಭಸ ಜಲಪಾತದ ಎದುರು 10-15 ಅಡಿ ಜಿಗಿದು ಮೇಲೇರುತ್ತವೆ.
- ಸಾಲ್ಮನ್‌ಗಳು ಅಸಾಧಾರಣವಾದ ವಾಸನಾಗ್ರಹಣ ಸಾಮರ್ಥ್ಯ ಹೊಂದಿವೆ. ಇವು ವಿಶಾಲ ಸಾಗರದಿಂದ ಎಷ್ಟೋ ದೂರ ಇರುವ ತಾವು ಮೂಲ ಜನ್ಮ ತಳೆದ ಹೊಳೆಯನ್ನು ಘ್ರಾಣ ಸಾಮರ್ಥ್ಯದಿಂದ ಪತ್ತೆ ಹಚ್ಚಿ ಅಲ್ಲಿಯೇ ಸಂತಾನೋತ್ಪತ್ತಿ ಮುಂದುವರೆಸುತ್ತವೆ.
- ಸಾಲ್ಮನ್ ಮೀನುಗಳು ಅತ್ಯಂತ ಜಾಸ್ತಿ ಪ್ರೊಟೀನ್‌ಗಳು ಹಾಗು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿವೆ. ಕಾರಣ ಇವುಗಳನ್ನು ಮನುಷ್ಯ ಭಕ್ಷಣೆಗೆ ಹೇರಳವಾಗಿ ಬಳಸುತ್ತಿದ್ದು ಇವುಗಳ ರಕ್ಷಣೆ ಬೇಕಿದೆ.
- ಸಾಲ್ಮನ್ನುಗಳು ಸಂತಾನೋತ್ಪತ್ತಿಗಾಗಿ ನದಿಗೆ ಬರುವ ಮುನ್ನವೇ ಅವುಗಳನ್ನು ಹಿಡಿದು ಮನುಷ್ಯರು ತಿನ್ನುವುದರಿಂದ ಅವುಗಳ ಸಂತತಿ ನರ‍್ನಾಮದ ಅಂಚಿನಲ್ಲಿದೆ.
ಈ ಸಂಗತಿಗಳು ಸಾಲ್ಮನ್‌ನ ಗಮನಾರ್ಹ ಸ್ವರೂಪವನ್ನು ಅವುಗಳ ಜೀವಶಾಸ್ತ್ರ ಮತ್ತು ಅವುಗಳ ಪರಿಸರ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ದೃಷ್ಟಿಯಿಂದ ಎತ್ತಿ ತೋರಿಸುತ್ತವೆ. ಗಮನವಿಟ್ಟು ನೋಡಿದರೆ ನಮ್ಮ ಸುತ್ತಲಿನ ಪ್ರಕೃತಿಯ ಎಲ್ಲ ವಿಷಯಗಳೂ ವಿಸ್ಮಯಗಳೇ. ನೋಡುವ ಮನಸ್ಸು ಮತ್ತು ತಾಳ್ಮೆ ಇರಬೇಕು ಅಷ್ಟೆ !
ವಿಡಿಯೋ ನೋಡಿ: ಜೀವ ಜಗತ್ತಿನ ಓಟದಲ್ಲಿ ಗೆದ್ದ ಆಮೆಯೆಂಬ ಅದ್ಭುತ ಪ್ರಾಣಿ Janashakthi Media