ಬೆಂಗಳೂರು :ಎರಡು ತಿಂಗಳುಗಳ ಅಂತರದಲ್ಲಿ ಅಡುಗೆ ಅನಿಲ ದರ ಸುಮಾರು 200 ರೂ. ಹೆಚ್ಚಳವಾಗಿದೆ. ಮತ್ತೂಂದೆಡೆ ಕೊರೊನಾದಿಂದಾಗಿ ಸಬ್ಸಿಡಿಯನ್ನೂ ಸರಕಾರ ಹಿಂಪಡೆದಿದ್ದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಒಟ್ಟು 200 ರೂ. ಹೆಚ್ಚಳದಲ್ಲಿ ಫೆಬ್ರವರಿ ತಿಂಗಳಲ್ಲೇ 100 ರೂ. ಏರಿಕೆ ಆಗಿದೆ. ಡಿಸೆಂಬರ್‌ನಲ್ಲಿ ಕೂಡ 100 ರೂ. ಹೆಚ್ಚಳ ಆಗಿತ್ತು. ಈ ಮಧ್ಯೆ ಗ್ರಾಹಕರ ಖಾತೆಗೆ ನೇರವಾಗಿ ಬರುತ್ತಿದ್ದ ಸಬ್ಸಿಡಿ ಕೂಡ ಹಲವು ತಿಂಗಳುಗಳಿಂದ ಸ್ಥಗಿತಗೊಂಡಿದೆ.
ಫೆ. 4ರಂದು 25 ರೂ., ಫೆ. 15 ರಂದು 50 ರೂ. ಮತ್ತು ಫೆ. 25ರಂದು 25 ರೂ.ಗಳಂತೆ ಒಟ್ಟು ಮೂರು ಬಾರಿ ದರ ಏರಿಕೆ ಆಗಿದೆ. ಜನವರಿಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಡಿ. 15ರಂದು ಅಡುಗೆ ಅನಿಲ (14.2 ಕೆ.ಜಿ.) ಒಮ್ಮೆಗೆ 100 ರೂ. ಏರಿಕೆ ಕಂಡಿತ್ತು. ಪ್ರಸ್ತುತ ಸಿಲಿಂಡರ್ ದರಬೆಂಗಳೂರಿನಲ್ಲಿ 797 ರೂ.ಇದೆ.
ಸಿಲಿಂಡರ್ ಕಂಪನಿಯವರು ನಮ್ಮ ಮನೆಗೆ ತಂದು ಕೊಡುವಷ್ಟರಲ್ಲಿ 825 ರೂ ನಿಂದ 850 ರೂ ಆಗುತ್ತದೆ, ಸರಕಾರ ಈ ರೀತಿ ಎಲ್ಲವನ್ನೂ ದುಬಾರಿ ಮಾಡಿದ್ರೆ ನಾವು ಜೀವನ ಸಾಗಿಸೋದು ಹೇಗೆ ಎಂದು ಹೆಬ್ಬಾಳದ ಮುನಿಯಮ್ಮ ಪ್ರಶ್ನಿಸುತ್ತಾರೆ?
11 ತಿಂಗಳಿಂದ ನಮಗೆ ಸಬ್ಸಿಡಿ ಸಿಕ್ಕಿಲ್ಲ, ಸಬ್ಸಿಡಿ ಕೋಡ್ತೇವೆ ಅಂತೆಲ್ಲ ಫೋಟೊಗೆ ಫೋಸ್ ಕೊಟ್ಟರು, ಪತ್ರಿಕೆಯಲ್ಲಿ ಜಾಹಿರಾತು ನೀಡಿದರು, ಕೆಲವರ ಮನೆಗೆ ಉಚಿತ ಸಿಲಿಂಡರ್ ಗ್ಯಾಸ್ ನೀಡಿ ಮತ ಪಡೆದು ಈಗ ದುಬಾರಿ ಮಾಡಿದ್ದಾರೆ, ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಶಾಂತಿನಗರದ ರೂಪ ಡಿ ಆರೋಪಿಸಿದ್ದಾರೆ.