ಎಡಭಾಗಕ್ಕೆ ಮೈಲ್ಡ್ ಸ್ಟ್ರೋಕ್ ಆಗಿ ಹೆಚ್‍ಡಿಕೆ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಮಿದುಳಿನಲ್ಲಿ ಮೈಲ್ಡ್ ಸ್ಟ್ರೋಕ್ ಆಗಿತ್ತು. ಇದೀಗ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನಾರೋಗ್ಯಕ್ಕೆ ತುತ್ತಾಗಿ ಬನ್ನೇರುಘಟ್ಟ ರಸ್ತೆಯ ಸಾಗರ್​ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಪೋಲೋ ಆಸ್ಪತ್ರೆ ವೈದ್ಯರು ಬಿಡುಗಡೆ ಮಾಡಿರುವ ಹೆಲ್ತ್​​ ಬುಲೆಟಿನ್​ ಪ್ರಕಾರ, ಮಂಗಳವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದಾರೆ. ಚಿಕಿತ್ಸೆ ಮುಂದುವರಿಸಲಾಗಿದೆ. ಕುಮಾರಸ್ವಾಮಿ ಅವರ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ತಡರಾತ್ರಿ ಸುಸ್ತು ಮತ್ತು ವೀಕ್ನೆಸ್ ಎಂದು ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎನ್ನಲಾಗಿತ್ತು.

ಇದನ್ನೂ ಓದಿ:ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು

ಅಪೋಲೋ ಆಸ್ಪತ್ರೆ ವೈದ್ಯ ಡಾ. ಸತೀಶ್ ಚಂದ್ರ ಮಾಹಿತಿ ನೀಡಿದ್ದು, ಕುಮಾರಸ್ವಾಮಿ ಅವರ ಎಡಭಾಗದಲ್ಲಿ ರಕ್ತನಾಳ ಸಮಸ್ಯೆಯಾಗಿತ್ತು. ಎಡಭಾಗದಲ್ಲಿ ಮೈಲ್ಡ್ ಸ್ಟ್ರೋಕ್ ಆಗಿತ್ತು. ಮಾತು ತೊದಲುತ್ತಿತ್ತು, ತುಂಬಾ ಸುಸ್ತಾಗಿದ್ರು. ಆಡ್ಮಿಟ್ ಆದ ಬಳಿಕ ಒಂದು ಗಂಟೆಯಲ್ಲೇ ಆರೋಗ್ಯ ಸ್ತಿರವಾಗಿದ್ದಾರೆ. ಇನ್ನೂ‌ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಗುರುವಾರ ಜನರಲ್‌ ವಾರ್ಡ್​ಗೆ ಶಿಫ್ಟ್ ಮಾಡ್ತೀವಿ. ಇನ್ನೂ ಎರಡ್ಮೂರು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತೆ. ಗುರುವಾರ ಬೆಳಗ್ಗೆ ಮತ್ತೊಂದು ಹೇಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತೇವೆ. ಮಾಜಿ ಸಿಎಂ ಕುಮಾರಸ್ವಾಮಿ ಎಲ್ಲರ ಜೊತೆ ಮಾತನಾಡುತ್ತಿದ್ದಾರೆ. ಆರೋಗ್ಯವಾಗಿದ್ದಾರೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೈಂಡ್​ಗೆ ಸ್ಟ್ರೋಕ್​ ಆಗಿದ್ದು, ತುಂಬಾ ಸೀರಿಯಸ್​ ಆಗಿದ್ದಾರೆ. ಕಷ್ಟ ಎಂದು ವೈದ್ಯರು ಹೇಳಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಆದರೆ ವೈದ್ಯರು ಮಾತ್ರ ಸ್ಟ್ರೋಕ್​ ಆದ 3 ಗಂಟೆಯೊಳಗೆ ಉತ್ತಮ ವ್ಯವಸ್ಥೆ ಇರುವ ಆಸ್ಪತ್ರೆಗೆ ದಾಖಲು ಮಾಡಿದರೆ ಸ್ಟ್ರೋಕ್ ಸಮಸ್ಯೆ ಸರಿ ಮಾಡಲು ಸಾಧ್ಯವಿದೆ. ಕುಮಾರಸ್ವಾಮಿ ಅವರಿಗೆ ಸ್ಟ್ರೋಕ್​ ಆಗಿದ್ದು ಸತ್ಯ. ಆದರೆ ಕೂಡಲೇ ಆಸ್ಪತ್ರೆಗೆ ಬಂದಿದ್ದರಿಂದ ಯಾವುದೇ ಸಮಸ್ಯೆ ಇಲ್ಲ, ಸಮಸ್ಯೆಗೆ ಚಿಕಿತ್ಸೆ ಕೊಟ್ಟಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದು, ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್​ ಜೊತೆಗೆ ಮಾತನಾಡಿದ್ದಾರೆ. ಬಿ.ಎಸ್​ ಯಡಿಯೂರಪ್ಪ ಕೂಡ ಅಪೋಲೋ ಆಸ್ಪತ್ರೆ ವೈದ್ಯರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಆತಂಕ ಪಡುವ ಅಗತ್ಯವಿಲ್ಲ: ಪತ್ನಿ ಅನಿತಾ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅನಾರೋಗ್ಯದ ಬಗ್ಗೆ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿಯವ್ರು ಆರಾಮಾಗಿದ್ದಾರೆ. ಊಹಾಪೋಹದ ಸುದ್ದಿಗಳನ್ನ ಹರಡಬೇಡಿ. ರಾಜ್ಯದ ಜನತೆ ಗಾಬರಿಯಾಗುವುದು ಬೇಡ. ಯಾರೂ ಸಹ ಆತಂಕಪಡೋದು ಬೇಡ ಎಂದಿದ್ದಾರೆ. ಕುಮಾರಸ್ವಾಮಿ ಸಹೋದರ ರಮೇಶ್ ಹಾಗು ಸಂಸದ ಪ್ರಜ್ವಲ್​ ರೇವಣ್ಣ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿದ್ದಾರೆ. ಆ ಬಳಿಕ ಮಾತನಾಡಿ ಪ್ರಜ್ವಲ್​ ರೇವಣ್ಣ, ಆರಾಮಾಗಿದ್ದಾರೆ, ಸ್ವಲ್ಪ ಜ್ವರ ಇತ್ತು. ನಾಳೆ ಬರ್ತೀನ್ ಬಿಡೋ, ಡಿಸ್ಚಾರ್ಜ್ ಆಗ್ತೀನಿ ಅಂದಿದ್ದಾರೆ. ಆರೋಗ್ಯವಾಗಿದ್ದಾರೆ. ಊಹಾಪೋಹಗಳಿಗೆ ತಲೆಕೆಡಿಕೊಳ್ಳಬೇಡಿ. ನಾನು ಹೋದಾಗ ಊಟ ಮಾಡ್ತಿದ್ರು. ವೈದ್ಯರ ಬಳಿಯೂ ಮಾತಾಡಿದೆ, ಆರೋಗ್ಯ ಚೆನ್ನಾಗಿದೆ ಎಂದಿದ್ದಾರೆ.

ಆಸ್ಪತ್ರೆಯ ಮೂಲಗಳ ಪ್ರಕಾರ ಎಡಭಾಗಕ್ಕೆ ಪಾರ್ಶ್ವವಾಯು ಆಗಿದ್ದು, ಬಾಯಿ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿತ್ತು ಎನ್ನಲಾಗಿದೆ. ಶೀಘ್ರವೇ ಚಿಕಿತ್ಸೆ ನೀಡಿರೋದ್ರಿಂದ ದೊಡ್ಡ ಪ್ರಮಾಣದ ಹಾನಿಯನ್ನು ತಡೆಯಲಾಗಿದ್ದು, ಒಂದೆರಡು ದಿನದಲ್ಲಿ ಬಾಯಿ ಸರಿಯಾಗಲಿದ್ದು, ಆ ನಂತರವಷ್ಟೇ ಮಾಧ್ಯಮಗಳ ಎದುರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಕುಮಾರಸ್ವಾಮಿ ಅವರಿಗೆ ಆರೋಗ್ಯದಲ್ಲಿ ಏರುಪೇರು ಆಗುತ್ತಿದ್ದ ಕೂಡಲೇ ಕ್ಷಣಮಾತ್ರವೂ ತಡ ಮಾಡದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *