ಆದಿವಾಸಿ ಸಮುದಾಯದ ಜನತೆಗೆ ಕೊರೊನಾ ಬಗ್ಗೆ ಜಾಗೃತಿ ಮತ್ತು ತಪಾಸಣೆ

ಉಡುಪಿ: ಕೋವಿಡ್ ಗುಣಲಕ್ಷಣಗಳು ಇದ್ದರೂ ಗ್ರಾಮೀಣ ಜನರು ಆರಂಭದಲ್ಲಿಯೇ ವೈದ್ಯರ ಬಳಿಗೆ ತೆರಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುವ ದೂರುಗಳಿವೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣದ ಬಗ್ಗೆಯೂ ಅರಿವು ಇರುವುದಿಲ್ಲ. ಈ ಎಲ್ಲ ದೃಷ್ಟಿಯಿಂದ ಪ್ರಾಥಮಿಕ ಹಂತದಲ್ಲಿಯೇ ರೋಗಿಗಳನ್ನು ಗುರುತಿಸುವ ಕೆಲಸವನ್ನು ಆದಿವಾಸಿ ಆರೋಗ್ಯ ಸಂರಕ್ಷಣೆ ಸ್ವಯಂ ಸೇವಕರು ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಜಾ ವೈದ್ಯರಾದ ಡಾ. ಎ. ಅನಿಲ್ ಕುಮಾರ್ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರಾದ ವೈದ್ಯ ಡಾ. ಎ. ಅನಿಲ್‌ಕುಮಾರ್‌ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮದ ಕಾರೆಬೈಲು ಹಸಲರ ಸಮುದಾಯದವರಿಗಾಗಿ ಕೋವಿಡ್ ಮತ್ತು ಆರೋಗ್ಯ ಸಂರಕ್ಷಣೆ ಕುರಿತು ಜಾಗೃತಿ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಇದನ್ನು ಓದಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಅಧಿಕಾರಿಗಳ ನಿರ್ಲಕ್ಷ- ಆದಿವಾಸಿಗಳ ಆಕ್ರೋಶ

ಕನಿಷ್ಠ ಶಿಕ್ಷಣ ಪಡೆದಿರುವ, ಪಲ್ಸ್ ಆಕ್ಸಿಮೀಟರ್ ಮತ್ತು ಥರ್ಮಾಮೀಟರ್ ಬಗ್ಗೆ ತಿಳಿವಳಿಕೆಯುಳ್ಳ ಆಯಾ ಗ್ರಾಮಗಳ ಇಬ್ಬರು ಅಥವಾ ಮೂವರು ಸ್ವಯಂಸೇವಕರು  ಕಾರ್ಯ ನಿರ್ವಹಿಸುವರು ಹಾಗೂ ಕೋವಿಡ್‌ನ ಪ್ರಾಥಮಿಕ ಗುಣಲಕ್ಷಣಗಳ ಚಿಕಿತ್ಸೆಗೆ ಅಗತ್ಯವಿರುವ ಮಾತ್ರೆಗಳು ಇವರ ಬಳಿ ಇರಲಿವೆ’ ಎಂದರು.

ಆದಿವಾಸಿಗಳು ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆಗೆ ಬರುವ ಮನಸ್ಸು ಮಾಡುತ್ತಿಲ್ಲ. ಲಕ್ಷಣಗಳು ಕಾಣಿಸಿಕೊಂಡ ಐದಾರು ದಿನಗಳ ತರುವಾಯ ಆಸ್ಪತ್ರೆಗೆ ಬರುತ್ತಾರೆ. ಅಷ್ಟರಲ್ಲಿ ರೋಗ ತೀವ್ರವಾಗಿರುತ್ತದೆ. ಸಾವುಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡಲು ಈ ಮಹತ್ವದ ಯೋಜನೆಯನ್ನು ಆರಂಭಿಸಿರುವುದು ಉತ್ತಮವಾದ ಕೆಲಸವಾಗಿದೆ ಎಂದು ಹೇಳಿದರು.

ಎಂಟು ಗ್ರಾಮಗಳಿಂದ ಆಗಮಿಸಿದ ಆದಿವಾಸಿ ಸಮುದಾಯಗಳ ಸ್ವಯಂಸೇವಕರ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ ʻʻಕೊರೊನಾ ಸೋಂಕಿನ ಎರಡನೆ ಅಲೆಯು ದೇಶದಲ್ಲಿ ತಲ್ಲಣ ಮೂಡಿಸಿದೆ. ಇದನ್ನು ಎದುರಿಸಲು ಸರ್ಕಾರಗಳ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಬೇಕು. ಕೊರೊನಾ ಸಾಂಕ್ರಾಮಿಕ ರೋಗ‌ವನ್ನು ನಿರ್ಲಕ್ಷಿಸದೇ ಎದುರಿಸೋಣ ಎಂದು ಕರೆ ನೀಡಿದರು.

ಇದನ್ನು ಓದಿ: ಜೂನ್‌ 7: ಜೀವ ಮತ್ತು ಜೀವನ ಉಳಿಸಲು ಆದಿವಾಸಿಗಳ ಪ್ರತಿಭಟನೆ

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವೈಜ್ಞಾನಿಕವಾಗಿ ಕೊರೊನಾ ಸೋಂಕನ್ನು ಎದುರಿಸಬೇಕಿದೆ. ಮುಗ್ಧ ಜನರಲ್ಲಿ ಭಯವನ್ನುಂಟು ಮಾಡದೇ ಧೈರ್ಯವಾಗಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸೋಣ ಎಂದರು.

ಡಾ. ಎಸ್ ವೈ ಗುರುಶಾಂತ್ ಮಾತನಾಡಿ ʻʻಆದಿವಾಸಿ ಸಮುದಾಯಗಳು ಅತ್ಯಂತ ಆರೋಗ್ಯದಾಯಕ ಬದುಕು ನಡೆಸಿದವರು. ಆದರೆ ಇಂದಿನ ದಿನಗಳಲ್ಲಿ ಅತ್ಯಂತ ಅಪೌಷ್ಟಿಕತೆ, ರಕ್ತಹೀನತೆಯಿಂದ  ಬಳಲುತ್ತಿದ್ದಾರೆ. ಕೆಲವು ಸಮುದಾಯಗಳು ಅಳಿವಿನ ಅಂಚಿನಲ್ಲಿ ಇವೆ. ಇದಕ್ಕೆ ಸರಕಾರದ ಅರಣ್ಯ ನೀತಿಗಳು, ಜೀವ ವೈವಿಧ್ಯತೆ ಉಳಿಸುವ ಹೆಸರಿನಲ್ಲಿ ನಡೆಯುತ್ತಿರುವ ನಿರ್ಬಂಧಗಳು ಕೂಡ ಕಾರಣವಾಗಿವೆ.  ಆದಿವಾಸಿ ಸಮುದಾಯಗಳ ಬದುಕು ಉಳಿಯಲು ಒಟ್ಟು ಸಂವೇದನೆ ಅಗತ್ಯವಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಶ್ರೀಕಾಂತ ಬಿಎಎಂ ಕೊಲ್ಲೂರು ಇವರು ಮಾತನಾಡಿ ಆದಿವಾಸಿ ಸಮುದಾಯಗಳ ಆರೋಗ್ಯ ಸಂರಕ್ಷಣೆಗಾಗಿ ಪ್ರತಿ ಗ್ರಾಮದಲ್ಲಿ ಸ್ವಯಂಸೇವಕರ ತಂಡ ರಚಿಸಿ ಅವರ ಮೂಲಕ ಜನರ ಆರೋಗ್ಯ ರಕ್ಷಣೆಗೆ ಮುಂದಾಗಿರುವುದು ಮಹತ್ವದ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಆದಿವಾಸಿಗಳ ಆರೋಗ್ಯ ಸಂರಕ್ಷಣೆಗೆ ನಿರಂತರವಾಗಿ ಸದಾ ಬೆಂಬಲಿಸಿ  ಅವರಿಗೆ ಬೇಕಾದ ಆರೋಗ್ಯ ಚಿಕಿತ್ಸೆ, ಅಗತ್ಯ ಔಷಧಿ ಒದಗಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಲಜ ಕತ್ತಲಕೊಡುರವರು ʻʻಡಾ‌.ಅನಿಲ್ ಕುಮಾರ್ ರವರು ಮಾಡುತ್ತಿರುವ ಸೇವೆಯನ್ನು ಪ್ರತಿ ಆದಿವಾಸಿಗಳ ಕುಟುಂಬಕ್ಕೆ ತಲುಪಿಸಲು ಸದಾ ಸಿದ್ದರಾಗಿರುತ್ತೇವೆ. ನಮ್ಮ ಕಡೆಯಿಂದ ವಿವಿಧ ರೂಪದಲ್ಲಿ ಬೆಂಬಲ ಹಾಗೂ ಸಹಕಾರ ನೀಡುತ್ತೇವೆʼʼ ಎಂದರು.

ಇದೇ ಸಂದರ್ಭದಲ್ಲಿ ಆದಿವಾಸಿ ಆರೋಗ್ಯ ಸ್ವಯಂ ಸೇವಕರಿಗೆ ಅಗತ್ಯ ಔಷಧಿ ಮತ್ತು ತಪಾಸಣೆ ಪರಿಕರಗಳನ್ನು ಡಾ. ಎ ಅನಿಲ ಕುಮಾರ್ ವಿತರಣೆ ಮಾಡಿದರು.

ಆದಿವಾಸಿ ಸಮುದಾಯಗಳ ಆರೋಗ್ಯ ಸಂರಕ್ಷಣೆಗಾಗಿ ಡಾ. ಎ. ಅನಿಲ್ ಕುಮಾರ್ ಮಾರ್ಗದರ್ಶನದೊಂದಿಗೆ ತರಬೇತಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ರಾಜ್ಯದಲ್ಲಿ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಾರ್ಯಾಗಾರ ಆಯೋಜಿಸಿದೆ.

ತರಬೇತಿ ಕಾರ್ಯಾಗಾರದಲ್ಲಿ ಮೂರ್ತಿಕಬ್ಬಿನಾಲೆ, ರವಿ ದೇವರಬಾಳು,ರಾಜೇಶ್ ಕೊಟುಗುಳಿ, ಸುಧಾಕರ ಕಾರೆಬೈಲು, ಸಂಜು ಕಾರೆಬೈಲು, ಬೇಬಿ ಕತ್ತಲಕೊಡು, ಶಿವರಾಜ್ ನಾಡ, ಗಣೇಶ ಆಲೂರು, ಉಪಸ್ಥಿತಿ ಇದ್ದರು. ಶ್ರೀಧರ ನಾಡ ಕಾರ್ಯಕ್ರಮ ನಿರೂಪಿಸಿದರು, ಕವಿತಾ  ಸ್ವಾಗತಿಸಿದರು, ಸುಧಾ ವಂದಿಸಿದರು.

Donate Janashakthi Media

Leave a Reply

Your email address will not be published. Required fields are marked *