ಬೆಂಗಳೂರು: ಮಲ್ಲೇಶ್ವರಂ ಮತ್ತು ಸದಾಶಿವನಗರ ಭಾಗದ ಸ್ಯಾಂಕಿ ಕೆರೆ ಬಳಿ ನಿರ್ಮಿಸಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆಗೆ ಆಹ್ವಾನಿಸುವುದಾಗಿ ಸದಾಶಿವನಗರ ಮತ್ತು ಮಲ್ಲೇಶ್ವರಂ ನಿವಾಸಿಗಳಿಗೆ ಭರವಸೆ ನೀಡಿದ್ದಾರೆ.
ಸ್ಯಾಂಕಿ ಮೇಲ್ಸೇತುವೆ ವಿರುದ್ಧ ಹೋರಾಟ ಹೆಚ್ಚಾಗುತ್ತಲೇ ಇದೆ. ಈ ನಡುವೆ, ಸ್ಥಳೀಯ ನಾಗರಿಕರನ್ನು ಪ್ರತಿನಿಧಿಸುವ ನಿವಾಸಿಗಳ ನಿಯೋಗವೊಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಯೋಜನೆ ಕೈಬಿಡುವಂತೆ ಮನವಿ ಮಾಡಿದೆ.
ಇದನ್ನು ಓದಿ: `ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ’ ಮುಖ್ಯಮಂತ್ರಿಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನಮಗೆ ಈ ಯೋಜನೆ ಏಕೆ ಬೇಕು ಎಂದು ನಮಗೆಲ್ಲರಿಗೂ ತಿಳಿದಿದೆ, ಈ ಯೋಜನೆ ನಿಮಗೆ ಬೇಡವಾದರೆ ಏಕೆ ಬೇಡ ಎಂದು ನನಗೆ ತಿಳಿಸಿ, ನಾನು ಮುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳುತ್ತೇನೆ. ನಾನು ಅಧಿಕಾರಿಗಳೊಂದಿಗೆ ಮಾತನಾಡಿ ಯೋಜನೆಯ ಬಗ್ಗೆ ನಿಮ್ಮೊಂದಿಗೆ ಚರ್ಚೆ ನಡೆಸುತ್ತೇನೆ” ಎಂದು ಹೇಳಿದ್ದಾರೆ.
ನಿವಾಸಿಗಳ ನಿಯೋಗದ ಸದಸ್ಯ ಲಕ್ಷ್ಮಿ ಶರತ್ ಮುಖ್ಯಮಂತ್ರಿಗಳಿಗೆ ವಿಷಯವನ್ನು ತಿಳಿಸಲಾಗಿದ್ದು, ಶೀರ್ಘದಲ್ಲಿಯೇ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ಎಂದರು.
ಕೆಲ ದಿನಗಳ ಹಿಂದೆ ಸುಮಾರು 2,000ಕ್ಕೂ ಹೆಚ್ಚು ಶಾಲಾ ಮಕ್ಕಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಉದ್ದೇಶಿತ ಸ್ಯಾಂಕಿ ರಸ್ತೆ ಮೇಲ್ಸೇತುವೆ ಕೈಬಿಡಬೇಕೆಂದು ಮವಿ ಮಾಡಿಕೊಂಡಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂ 18ನೇ ಕ್ರಾಸ್‌ವರೆಗೆ ರಸ್ತೆ ಅಗಲೀಕರಣ ಹಾಗೂ ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಭಾಷ್ಯಂ ವೃತ್ತ ಹಾಗೂ ಗುಟ್ಟಹಳ್ಳಿ ವೃತ್ತದಲ್ಲಿ ಆಗಾಗ್ಗೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂಬುದು ಪಾಲಿಕೆ ಅಧಿಕಾರಿಗಳ ವಾದ. ಆದರೆ, ಈ ಮೇಲ್ಸೇತುವೆಯಿಂದ ನೂರಾರು ಮರಗಳ ಮಾರಣಹೋಮವಾಗುತ್ತದೆ, ಉತ್ತಮ ವಾತಾವರಣ ಹಾಳಾಗುತ್ತದೆ ಎಂಬುದು ಇಲ್ಲಿನ ನಿವಾಸಿಗಳ ವಾದವಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ