ಹನ್ನೊಂದು ರಾಜಕೀಯ ಪಕ್ಷಗಳ ಮುಖಂಡರ ಆಗ್ರಹ
ದೆಹಲಿ : ಪ್ರಧಾನ ಮಂತ್ರಿ ಮೋದಿ ವಿಪಕ್ಷಗಳ ಮೇಲೆ ಅವು ಹೊಸ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ‘ಪದೇಪದೇ ಸುಳ್ಳು ಹೇಳುತ್ತಿವೆ’ ಎಂದೂ, ‘ಅವರನ್ನು ತಮ್ಮ ರಾಜಕೀಯಕ್ಕೆ ಬಳಸುತ್ತಿವೆ’ ಎಂದೂ ಆಧಾರಹೀನ ಆಪಾದನೆ ಮಾಡುತ್ತಿದ್ದಾರೆ ಎಂದು ಹನ್ನೊಂದು ವಿಪಕ್ಷಗಳ ಮುಖಂಡರು ಹೇಳಿಕೆಯೊಂದರಲ್ಲಿ ಬಲವಾಗಿ ಖಂಡಿಸಿದ್ದಾರೆ. ಪ್ರಧಾನ ಮಂತ್ರಿಗಳ ಆರೋಪಗಳು ಸತ್ಯಕ್ಕೆ ಅಪಚಾರ ಬಗೆಯುತ್ತಿವೆ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆಗೆ ಸಹಿ ಮಾಡಿರುವ ಸೀತಾರಾಮ್ ಯೆಚುರಿ(ಸಿಪಿಐ(ಎಂ)), ರಾಹುಲ್ ಗಾಂಧಿ(ಕಾಂಗ್ರೆಸ್),, ಶರದ್ ಪವಾರ್(ಎನ್. ಸಿ ಪಿ), ಟಿ.ಆರ್.ಬಾಲು(ಡಿ ಎಂ ಕೆ), ಫಾರುಖ್ ಅಬ್ದುಲ್ಲ(ಜಮ್ಮು-ಕಾಶ್ಮೀರ ಪಿ ಎ ಜಿ ಡಿ), ತೇಜಸ್ವಿ ಯಾದವ್(ಆರ್ ಜೆ ಡಿ), ಅಖಿಲೇಶ ಯಾದವ್(ಎಸ್ ಪಿ), ಡಿ.ರಾಜ (ಸಿ ಪಿ ಐ), ದೀಪಂಕರ್ ಭಟ್ಟಾಚಾರ್ಯ(ಸಿ ಪಿ ಐ(ಎಂಎಲ್)), ದೇಬಬ್ರತ ಬಿಸ್ವಾಸ್((ಎ ಐ ಎಫ್ ಬಿ) ಮತ್ತು ಮನೋಜ್ ಭಟ್ಟಾಚಾರ್ಯ(ಆರ್ ಎಸ್ ಪಿ) ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೌಹಾರ್ದವನ್ನು ವ್ಯಕ್ತಪಡಿಸಿದ್ದಾರೆ. ಈ ಚಾರಿತ್ರಿಕ ಹೋರಾಟಕ್ಕೆ ದೇಶದ ವಿವಿಧ ಭಾಗಗಳ 500ಕ್ಕೂ ಹೆಚ್ಚು ರೈತ ಸಂಘಟನೆಗಳು ‘ಸಂಯುಕ್ತ ಕಿಸಾನ್ ಮೋರ್ಚಾ’ದ ಬಾವುಟ ಅಡಿಯಲ್ಲಿ ಕರೆ ನೀಡಿದ್ದು, ವಿಪಕ್ಷಗಳಲ್ಲಿ ಹಲವು ಈ ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅವನ್ನು ಚರ್ಚೆಯಿಲ್ಲದೆ, ಅಥವ ಸರಿಯಾದ ಪರಿಶೀಲನೆ ಇಲ್ಲದೆ ಪಾಸು ಮಾಡಿಸಿಕೊಳ್ಳುವಾಗ ವಿರೋಧಿಸಿದ್ದವು, ಈ ಬಗ್ಗೆ ಮತವಿಭಜನೆಯಾಗಬೇಕು ಎಂದು ಆಗ್ರಹಿಸಿದ ಸಂಸತ್ ಸದಸ್ಯರನ್ನು ಅಮಾನತುಗೊಳಿಸಲಾಯ್ತು ಎಂಬುದನ್ನು ಈ ಹೇಳಿಕೆ ನೆನಪಿಸಿದೆ.
ಅಸತ್ಯಗಳನ್ನು ಹರಡುತ್ತಿರುವವರು ಯಾರು?
ಪ್ರತಿಪಕ್ಷಗಳು ಹರಡುತ್ತಿದ್ದಾರೆ ಎನ್ನಲಾಗಿರುವ “ದೊಡ್ಡ ಸುಳ್ಳು”ಗಳಲ್ಲಿ ‘ಕನಿಷ್ಟ ಬೆಂಬಲ ಬೆಲೆ’(ಎಂ.ಎಸ್.ಪಿ.) ಒಂದು. ಈ ವಿಷಯದಲ್ಲಿ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳುತ್ತಿದ್ದಾರೆ. ಈ ವರದಿ ಸಿ2+50% ಎಂಎಸ್‌ಪಿಯನ್ನು ಶಿಫಾರಸು ಮಾಡಿದೆ. ಆದರೆ ಈ ಸರಕಾರ ಹೆಚ್ಚೆಂದರೆ ಎ2+50%ವನ್ನಷ್ಟೇ ಜಾರಿಗೊಳಿಸಿದೆ. ನಿಜ ಹೇಳಬೇಕೆಂದರೆ, ಈ ಸರಕಾರ ಸಿ2+50%ವನ್ನು ಜಾರಿಗೊಳಿಸಲು ತಾನು ಅಸಮರ್ಥ ಎಂದು ಸುಪ್ರಿಂ ಕೋರ್ಟಿಗೆ ಹೇಳಿದೆ. ಹೀಗಿರುವಾಗ ಅಸತ್ಯಗಳನ್ನು ಹರಡುತ್ತಿರುವವರು ಯಾರು ಎಂದು ವಿಪಕ್ಷಗಳ ಮುಖಂಡರು ಪ್ರಶ್ನಿಸಿದ್ದಾರೆ.
ಅದೇ ರೀತಿಯಲ್ಲಿ, “ಕಳೆದುಕೊಂಡಿರುವ ರಾಜಕೀಯ ಆಧಾರವನ್ನು ಮತ್ತೆ ಪಡೆಯಲು” ವಿಪಕ್ಷಗಳು “ರೈತರ ಹೆಗಲ ಮೆಲೆ ಬಂದೂಕನ್ನಿಟ್ಟು ಹೊಡೆಯುತ್ತಿದ್ದಾರೆ” ಎಂದು ಆರೋಪಿಸಲಾಗುತ್ತಿದೆ. ರೈತರ ಸಮೃದ್ಧಿ ಮಾಡಲಾಗುತ್ತಿದೆ, ಮತ್ತು ಉನ್ನತ ಎಂಎಸ್‌ಪಿ ಜಾರಿ ಮಾಡಲಾಗುತ್ತಿದೆ ಎಂಬ ಸರಕಾರದ ದಾವೆಗಳು ಏನೇ ಇದ್ದರೂ, ಸಾಲದ ಹೊರೆಯಿಂದ ರೈತರ ಹತಾಶೆಗಳು ಬೆಳೆಯುತ್ತಿವೆ, ಅವರಲ್ಲಿ ಹಲವರು ಹತಾಶೆಯಿಂದ ಆತ್ಮಹತ್ಯೆಗಳಿಗೆ ಇಳಿಯುತ್ತಿದ್ದಾರೆ ಎಂಬುದು ನಿಜಸಂಗತಿ ಎಂದು ಈ ಮುಖಂಡರು ಹೇಳಿದ್ದಾರೆ.
ದಿಲ್ಲಿಯ ಸುತ್ತಮುತ್ತಲಿನ ಲಕ್ಷಾಂತರ ರೈತರು ತೀವ್ರ ಚಳಿಯಲ್ಲೂ ಶಾಂತಿಯುತವಾಗಿ ಐಕ್ಯತೆಯನ್ನು, ಗಟ್ಟಿತನವನ್ನು, ದೃಢನಿರ್ಧಾರವನ್ನು ತೋರಿಸುತ್ತಿದ್ದಾರೆ. ವಿವಿಧ ಸ್ಥಳಗಳಿಂದ ಹತ್ತಾರು ಸಾವಿರ ಮಂದಿ ಈಗ ಪ್ರತಿಭಟನೆಗಳಲ್ಲಿ ಸೇರಿಕೊಳ್ಳಲು ದಿಲ್ಲಿಗೆ ಬರುತ್ತಿರುವುದು, ದೇಶಾದ್ಯಂತ ರೈತರು ಈ ಕೃಷಿ ಕಾಯ್ದೆಗಳ ವಿರುದ್ಧ ಎದ್ದು ನಿಂತಿದ್ದಾರೆ ಎಂಬ ಸಂಗತಿಗೆ ಸಾಕ್ಷಿ. ಈಗಾಗಲೇ 32 ರೈತರು ತಮ್ಮ ಪ್ರಾಣ ಕಳಕೊಂಡಿದ್ದಾರೆ.
“ಪ್ರಸ್ತುತ ಕೃಷಿ ಕಾಯ್ದೆಗಳನ್ನು, ಅದರೊಂದಿಗೆ ವಿದ್ಯುತ್(ತಿದ್ದುಪಡಿ) ಮಸೂದೆ 2020ನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದೇವೆ. ಇದನ್ನು ಅನುಸರಿಸಿ ಕೃಷಿ ಸುಧಾರಣೆಗಳ ಮೇಲೆ ಚರ್ಚೆಗಳನ್ನು ಕೇಂದ್ರ ಸರಕಾರ ರೈತರು ಮತ್ತು ಇತರ ಎಲ್ಲ ಭಾಗೀದಾರರೊಂದಿಗೆ ನಡೆಸಬೇಕು. ಈ ಸಮಾಲೋಚನೆಗಳ ಆಧಾರದಲ್ಲಿ ಹೊಸ ವಿಧೇಯಕಗಳನ್ನು ಸಂಸತ್ತು, ಅಗತ್ಯವಿದ್ದರೆ, ಒಂದು ವಿಶೇಷ ಅಥವ ಜಂಟಿ ಅಧಿವೇಶನವನ್ನು ಕರೆದು ಪರಿಶೀಲಿಸಬಹುದು” ಎಂದು ಈ ಹನ್ನೊಂದು ಪಕ್ಷಗಳ ಮುಖಂಡರು ಹೇಳಿದ್ದಾರೆ.