ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ 6 ತಂಡಗಳನ್ನು ರಚಿಸಲಾಗಿದ್ದು, ಈವರೆಗೆ 15ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಘಟನೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಹೋಂ ಮಿನಿಸ್ಟರ್ ನಿನ್ನೆಯಿಂದ ಮಾಹಿತಿ ತಗೆದುಕೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿ ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ.
ಮಂಗಳೂರು ಕಮಿಷನರ್ ಸಹಾಯ ಕೂಡ ಪಡೆಯಲಾಗಿದೆ. ಉಡುಪಿ ಪೊಲೀಸರ ಸಹಾಯ ಕೂಡ ಪಡೆಯಲಾಗಿದೆ.
ದಕ್ಷ ಅಧಿಕಾರಿಗಳ 6 ತಂಡ ನಾವು ರಚನೆ ಮಾಡಿದ್ದು ಈಗಾಗಲೇ 15ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ವಶಕ್ಕೆ ಪಡೆದವರು ಕೃತ್ಯದಲ್ಲಿ ಭಾಗಿಯಾದವರೇ ಅಥಾವ ಪರೋಕ್ಷವಾಗಿ ಸಹಕರಿಸಿದವರೇ ಎಂಬ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ. ಆರೋಪಿಗಳನ್ನು ದಸ್ತಗಿರಿ ಮಾಡಿದ ಮೇಲೆ ಹತ್ಯೆಗೆ ಕಾರಣ ತಿಳಿಸುತ್ತೇವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಕೊಲೆಗೆ ಮೂರು ಕಾರಣ ಇರುವ ಶಂಕೆ ಇದೆ. ವಶಕ್ಕೆ ಪಡೆದಿರುವವರು ಯಾವ ಭಾಗದವರು ಎಂಬುದನ್ನು ತಿಳಿಸಲು ಸಾಧ್ಯವಿಲ್ಲ. ಆದರೆ ಇನ್ನೂ ಯಾರನ್ನೂ ಬಂಧಿಸಿಲ್ಲ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.