ತಕ್ಷಣ ಕ್ರಮವಹಿಸಲು ಎಸ್ ಎಫ್ ಐ ಆಗ್ರಹ
ಕ್ರಮ ವಹಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ
ಬೆಂಗಳೂರು : ರಾಜ್ಯ ಸರ್ಕಾರವು 1203 ಪದವಿ ಪೂರ್ವ ಶಿಕ್ಷಣ ಉಪನ್ಯಾಸಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದರೂ ನೇಮಕಾತಿ ಆದೇಶ ನೀಡದೆ ಕರೋನಾ ನೆಪದಲ್ಲಿ ಸತಾಯಿಸುತ್ತಿರುವುದನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ಕರ್ನಾಟಕ ರಾಜ್ಯ ಸಮಿತಿ ಖಂಡಿಸಿದೆ.
ಪಿಯು ಬೋರ್ಡ್ ಮುಂದೆ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿರುವ ಆಯ್ಕೆಯಾದ ಪಿಯು ಉಪನ್ಯಾಸಕ ಅಭ್ಯರ್ಥಿಗಳ ಹೋರಾಟವನ್ನು ಬೆಂಬಲಿಸಿ ಮಾತನಾಡಿ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಕೂಡಲೇ ನೇಮಕಾತಿ ಆದೇಶ ನೀಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ನೇಮಕಾತಿ ನಿಯಮಾವಳಿಗಳ ಅನುಸಾರ ಅಭ್ಯರ್ಥಿಗಳಿಗೆ ಆಯ್ಕೆಯಾದ ಒಂದು ವರ್ಷದಲ್ಲಿ ನೇಮಕಾತಿ ಆದೇಶ ನೀಡಬೇಕಿದೆ. ಇದನ್ನೇ ಮಾನ್ಯ ಉಚ್ಛ ನ್ಯಾಯಾಲಯವು ಸಹಾ ಪ್ರತಿಪಾದಿಸಿದೆ. ಹಾಗಿದ್ದರೂ ಸಹಾ ರಾಜ್ಯ ಸರ್ಕಾರವು ಕೊರೋನ ನೆಪಮಾಡಿ ನೇಮಕಾತಿ ಆದೇಶ ನೀಡಿದ ಮೇಲೆ ವೇತನ ಕೊಡಬೇಕಾಗುತ್ತದೆ ಎಂಬ ಕಾರಣದಿಂದ ನೇಮಕಾತಿ ಆದೇಶ ನೀಡದೆ ಸತಾಯಿಸುತ್ತಿರುವುದು ಶಿಕ್ಷಣ ವಿರೋಧಿ ನೀತಿ ಎಂದು ಟೀಕಿಸಿದರು.
ರಾಜ್ಯ ಸರ್ಕಾರವು ವಿವಿಧ ಲಾಭಿಗಳಿಗೆ ಮಣಿದು ತನಗೆ ಬೇಕಾದಂತೆ ಸುಗ್ರೀವಾಜ್ಞೆಗಳನ್ನು ಹೊರಡಿಸಿ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿದೆ. ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಲು ಅಥವಾ ನೇಮಕಾತಿ ಆದೇಶ ನೀಡಿ ವೇತನ ನೀಡಲು ಅಗತ್ಯ ಆಸಕ್ತಿ ತೋರುತ್ತಿಲ್ಲ. ಬಹುತೇಕ ಬಡ, ಗ್ರಾಮೀಣ, ದಲಿತ , ಹಿಂದುಳಿದ ವರ್ಗದ ವಿದ್ಯಾರ್ಥಿಗಳಿರುವ ರಾಜ್ಯದ ಸರ್ಕಾರಿ ಪಿಯು ಕಾಲೇಜಿಗಳಲ್ಲಿ ಉಪನ್ಯಾಸಕರ ಕೊರತೆಯಿಂದ ಗುಣಮಟ್ಟದ ಬೋಧನೆ ಸಿಗುತ್ತಿಲ್ಲ. ಹೀಗಿರುವಾಗ ಐದು ವರ್ಷಗಳ ಹಿಂದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತೀವ್ರ ಅನ್ಯಾಯವಾಗಿದೆ ಎಂದು ಎಸ್ ಎಫ್ ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ್ ಮ್ಯಾಗಳಮನಿ ಆರೋಪಿಸಿದರು.
ಈಗಾಗಲೇ ಈ ಶೈಕ್ಷಣಿಕ ವರ್ಷದ ದಾಖಲಾತಿ, ಆನ್ ಲೈನ್ ತರಗತಿಗಳು ಪ್ರಾರಂಭವಾಗಿದ್ದು ಸ್ಥಳ ಆಯ್ಕೆಯಾಗಿ ಸ್ಥಳ ನಿಗದಿಯಾಗಿರುವ ಪಿಯು ಉಪನ್ಯಾಸಕರಿಗೆ ಆದೇಶ ಪ್ರತಿ ನೀಡಿಲ್ಲ ಇದರಿಂದ ವಿದ್ಯಾರ್ಥಿಗಳಲ್ಲಿ ಸರ್ಕಾರ ಆತಂಕ ಮೂಡಿಸಿದೆ. ಜೊತೆಗೆ ಉದ್ಯೋಗದ ಭರವಸೆಯಲ್ಲಿರುವ ವಿದ್ಯಾವಂತ ಪದವಿಪೂರ್ವ ಶಿಕ್ಷಣ ಉಪನ್ಯಾಸಕ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಾಜ್ಯಸರ್ಕಾರ ಕೇವಲ ಭರವಸೆ ನೀಡುವ ಬದಲು ನೇಮಕಾತಿ ಆದೇಶ ನೀಡಲು ತಕ್ಷಣ ಅಗತ್ಯ ಕ್ರಮವಹಿಸಬೇಕು ಇಲ್ಲದಿದ್ದರೆ ಎಸ್ಎಫ್ಐ ರಾಜ್ಯ ವ್ಯಾಪ್ತಿ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ಹೋರಾಟಕ್ಕೆ ಮುಂದಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು, ಎಸ್ ಎಫ್ ಐ ನ ಬೆಂಗಳೂರು ಜಿಲ್ಲಾ ಜಂಟಿ ಕಾರ್ಯದರ್ಶಿ ಸಾಗರ್ ಮತ್ತಿತರರು ಭಾಗವಹಿಸಿದ್ದರು.