ಹೊಸದಿಲ್ಲಿ: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡನ್‌ಬರ್ಗ್ ರೀಸರ್ಚ್ ವರದಿ ಬಳಿಕ ಕಳೆದ ಆರು ವಹಿವಾಟಿನಲ್ಲಿ ಅದಾನಿ ಗ್ರೂಪ್ ಕಂಪನಿಗಳು ಬರೋಬ್ಬರಿ 107 ಶತಕೋಟಿ ಡಾಲರ್ (8.56 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿವೆ. ಕಂಪನಿಗಳ ಮಾರುಕಟ್ಟೆ ಮೌಲ್ಯವು 8.56 ಲಕ್ಷ ಕೋಟಿ ರೂ. ಅಥವಾ ಶೇ. 45ರಷ್ಟು ಕರಗಿದೆ.
ಮೊದಲು ಅದಾನಿ ಷೇರುಗಳ ಮಾರುಕಟ್ಟೆ ಮೌಲ್ಯವು 19.2 ಲಕ್ಷ ಕೋಟಿ ರೂ. ಇತ್ತು. ಅದೀಗ (ಫೆ.2ರ ವಹಿವಾಟಿನ ಅಂತ್ಯದ ಹೊತ್ತಿಗೆ) 10.5 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಅದಾನಿ ಗ್ರೂಪ್‌ನಲ್ಲಿ ಹೆಚ್ಚು ನಷ್ಟ ಅನುಭವಿಸಿದ ಕಂಪನಿಗಳಲ್ಲಿ ಅದಾನಿ ಟೋಟಲ್ ಗ್ಯಾಸ್ ಮೊದಲ ಸ್ಥಾನದಲ್ಲಿದೆ. ಈ ಕಂಪನಿಯು 2.39 ಲಕ್ಷ ಕೋಟಿ ರೂ. ಮೌಲ್ಯ ಕಳೆದುಕೊಂಡಿದೆ. ಅದಾನಿ ಎಂಟರ್‌ಪ್ರೈಸಸ್‌ಗೆ 1.86 ಲಕ್ಷ ಕೋಟಿ ರೂ. ನಷ್ಟವಾಗಿದೆ. ಅದಾನಿ ಗ್ರೀನ್ ಎನರ್ಜಿ 1.39 ಲಕ್ಷ ಕೋಟಿ ರೂ. ಮತ್ತು ಅದಾನಿ ಟ್ರಾನ್ಸ್‌ಮಿಷನ್ 1.33 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿವೆ.
ಇದನ್ನೂ ಓದಿ : ಅದಾನಿ ಸಮೂಹ ಸಂಸ್ಥೆಯ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ
ಕ್ರ. ಸಂ. | ಕಂಪನಿಯ ಹೆಸರು | ಕುಸಿತ (%) | ಸದ್ಯದ ಮಾರುಕಟ್ಟೆ ಮೌಲ್ಯ | ನಷ್ಟ |
1 | ಅದಾನಿ ಟೋಟಲ್ ಗ್ಯಾಸ್ ಲಿ. | -56 | 1,87,815 | -2,40,122 |
2 | ಅದಾನಿ ಎಂಟರ್‌ಪ್ರೈಸಸ್ ಲಿ. | -54.6 | 1,75,207 | -2,17,182 |
3 | ಅದಾನಿ ಗ್ರೀನ್ ಎನರ್ಜಿ ಲಿ. | -45.8 | 1,62,634 | -1,37,188 |
4 | ಅದಾನಿ ಟ್ರಾನ್ಸ್‌ಮಿಷನ್ ಲಿ. | -43.5 | 1,70,597 | -1,33,171 |
5 | ಅದಾನಿ ಪೋರ್ಟ್ಸ್-ಎಸ್‌ಇಜೆಡ್ ಲಿ. | -39.3 | 99,863 | -64,523 |
6 | ಅಂಬುಜಾ ಸಿಮೆಂಟ್ಸ್ ಲಿ. | -29.3 | 70,232 | -28,851 |
7 | ಅದಾನಿ ಪವರ್ ಲಿ. | -26.4 | 77,929 | -28,136 |
ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ : ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ ಎಂದು ವಿಪಕ್ಷಗಳು ಆರೋಪಿಸಿವೆ. ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ಜಂಟಿ ಸದನ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸಿವೆ. ಶತಮಾನದ ದೊಡ್ಡ ಹಗರಣದ ವಿರುದ್ಧ ನಾವು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದೇವೆ. ನಾವು ಜೆಪಿಸಿ ಅಥವಾ ಸಿಜೆಐ ಅಡಿಯಲ್ಲಿ ತನಿಖೆಗೆ ಒತ್ತಾಯಿಸುತ್ತೇವೆ. ಲಕ್ಷಾಂತರ ರೂಪಾಯಿ ಹಿಂಪಡೆಯುವಾಗ ಇಡಿ, ಆದಾಯ ತೆರಿಗೆ ಇಲಾಖೆ ಎಲ್ಲಿತ್ತು? ಇದು ಅತಿದೊಡ್ಡ ಭ್ರಷ್ಟಾಚಾರವಾಗಿದ್ದು, ಸರ್ಕಾರದ ಕಣ್ಗಾವಲಿನಲ್ಲೇ ಈ ಹಗರಣ ನಡೆದಿದೆ” ಎಂದು ವಾಗ್ದಾಳಿ ನಡೆಸಿವೆ.
ಕಾಂಗ್ರೆಸ್, ಸಿಪಿಐಎಂ, ಟಿಎಂಸಿ, ಸಮಾಜವಾದಿ ಪಕ್ಷ, ಎನ್ಸಿಪಿ, ಶಿವಸೇನೆ, ಡಿಎಂಕೆ, ಎಎಪಿ, ಮೊದಲಾದ ವಿಪಕ್ಷಗಳು ಜಂಟಿ ಸದನ ಸಮಿತಿ ತನಿಖೆಗೆ ಒತ್ತಾಯಿಸಿವೆ.