ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತರಕ್ಷಣೆ ಮುಖ್ಯ. ಹೀಗಾಗಿ ಈ ವಿಷಯದಲ್ಲಿ ಸಂಪೂರ್ಣ ಪಾರದರ್ಶಕತೆ ಅಗತ್ಯ ಎಂದಿರುವ ಸುಪ್ರೀಂ ಕೋರ್ಟ್ ನ್ಯಾಯಪೀಠ ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ಎ.ಎಂ. ಸಪ್ರೆ ನೇತೃತ್ವದ ಸಮಿತಿಯನ್ನು ರಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ‘ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು. ಆಗ, ನ್ಯಾಯಾಲಯದ ಬಗ್ಗೆ ಎಲ್ಲರಲ್ಲೂ ವಿಶ್ವಾಸ ಮೂಡುತ್ತದೆ. ಈ ವಿಷಯ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನಡೆಸುವರು. ಆದರೆ, ಅವರು ಸಮಿತಿಯ ಭಾಗವಾಗಿರುವುದಿಲ್ಲ’ ಎಂದು ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದರು.
ಇದನ್ನು ಓದಿ: ಹಿಂಡನ್ ಬರ್ಗ್ ವರದಿ : ಅದಾನಿ ಸಮೂಹದ ಅಕ್ರಮ, ವಂಚನೆಗಳ ಚಿತ್ರ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ಸಮಿತಿಯಲ್ಲಿ ಒ.ಪಿ.ಭಟ್, ನ್ಯಾಯಮೂರ್ತಿ ಜೆ.ಪಿ. ದೇವಧರ್ (ನಿವೃತ್ತ), ಕೆ.ವಿ. ಕಾಮತ್, ನಂದನ್ ನಿಲೇಕಣಿ ಮತ್ತು ಸೋಮಶೇಖರ್ ಸುಂದರೇಶನ್ ಅವರನ್ನು ಒಳಗೊಂಡಿರುತ್ತದೆ ಎಂದು ಪೀಠ ಹೇಳಿದೆ.
ಇದರೊಂದಿಗೆ, ಸೆಬಿಗೆ ಈ ವಿಚಾರವಾಗಿ ತನಿಖೆ ಮಾಡುವಂತೆ ಆದೇಶ ನೀಡಿದೆ. ಎರಡು ತಿಂಗಳ ಒಳಗಾಗಿ ಈ ಕುರಿತಾದ ವರದಿಯನ್ನು ನೀಡುವಂತೆ ನ್ಯಾಯಪೀಠ ಸೂಚನೆ ನೀಡಿದೆ. ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆ ಮಾಡಿರುವ ವರದಿ ಹಾಗೂ ಮಾರುಕಟ್ಟೆ ಉಲ್ಲಂಘನೆ ಈ ಎರಡೂ ಆರೋಪಗಳ ಬಗ್ಗೆ ಸೆಬಿ ಈಗಾಗಲೇ ತನಿಖೆ ನಡೆಸುತ್ತಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಇಂಥ ಪರಿಸ್ಥಿತಿಯಲ್ಲಿ ಸೆಬಿ ತನ್ನ ತನಿಖೆಯನ್ನು ಮುಂದುವರಿಸಲಿದೆ. ತನ್ನೆಲ್ಲಾ ತನಿಖೆಯ ವಿವರಗಳನ್ನು ಸೆಬಿ 2 ತಿಂಗಳ ಒಳಗಾಗಿ ನೀಡಬೇಕು ಎಂದಿದೆ.
ಹಿಂಡನ್‌ಬರ್ಗ್ ರಿಸರ್ಚ್ ಬಿಡುಗಡೆ ಮಾಡಿದ ವರದಿಯ ನಂತರದಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಕುಸಿಯಲು ಆರಂಭವಾಯಿತು. ಇದರಿಂದ ದೇಶದ ಹೂಡಿಕೆದಾರರಿಗೆ ನಷ್ಟವಾಗಿದೆ. ಇಂತಹ ನಷ್ಟವನ್ನು ತಪ್ಪಿಸಲು ಅಗತ್ಯ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ವಿಚಾರಣೆಗೆ ಎತ್ತಿಕೊಂಡಿತ್ತು.
ಇದನ್ನು ಓದಿ: ಅದಾನಿ ಸಮೂಹ ಸಂಸ್ಥೆಯ ವ್ಯವಹಾರ ಕುರಿತು ಮಾಹಿತಿ ನೀಡುವಂತೆ ಬ್ಯಾಂಕುಗಳಿಗೆ ಆರ್ಬಿಐ ಸೂಚನೆ
ವಕೀಲರಾದ ವಿಶಾಲ್ ತಿವಾರಿ, ಎಂ.ಎಲ್ ಶರ್ಮಾ, ಕಾಂಗ್ರೆಸ್ ನಾಯಕಿ ಜಯ ಠಾಕೂರ್ ಮತ್ತು ಮತ್ತೋರ್ವ ಅನಾಮಿಕ ಜೈಸ್ವಾಲ್ ಸಲ್ಲಿಸಿದ್ದ ಅರ್ಜಿಗಳ ಮೇಲಿನ ವಿಚಾರಣೆ ಬಳಿಕ ಈ ಆದೇಶ ನೀಡಿದರು.
ಅಭಯ್ ಮನೋಹರ್ ಸಪ್ರೆ ಸಮಿತಿಯು ಒಟ್ಟಾರೆ ಮೌಲ್ಯಮಾಪನವನ್ನು ಮಾಡಲಿದೆ ಮತ್ತು ಮಾರುಕಟ್ಟೆಗಳಲ್ಲಿನ ಚಂಚಲತೆಗೆ ಕಾರಣವಾದ ಅಂಶಗಳನ್ನು ಗುರುತಿಸಲಿದೆ. ಅಲ್ಲದೆ, ಸಮಿತಿಯು ಹೂಡಿಕೆದಾರರ ಜಾಗೃತಿಯನ್ನು ಬಲಪಡಿಸುವ ಕ್ರಮಗಳನ್ನು ಸೂಚಿಸುತ್ತದೆ ಮತ್ತು ಅದಾನಿ ಗ್ರೂಪ್ ಅಥವಾ ಇತರ ಕಂಪನಿಗಳಿಗೆ ಸಂಬಂಧಿಸಿದಂತೆ ಭದ್ರತಾ ಮಾರುಕಟ್ಟೆಗಳಿಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯಲ್ಲಿ ನಿಯಂತ್ರಕದ ವೈಫಲ್ಯವಿದೆಯೇ ಎಂಬ ಬಗ್ಗೆ ತನಿಖೆ ಮಾಡುತ್ತದೆ ಎಂದು ವರದಿಯಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ