ಆಡಳಿತ ಪಕ್ಷದ ಶಾಸಕರ ವಿರೋಧದ ನಡುವೆಯೂ ಖಾಸಗಿ ವಿ.ವಿ ವಿಧೇಯಕ ಅಂಗೀಕಾರ

ಬೆಂಗಳೂರು ಫೆ 04: ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ವಿಧೇಯಕಕ್ಕೆ ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿದೆ. ಬರೋಬ್ಬರಿ 5 ಖಾಸಗಿ ವಿವಿಗಳ ವಿಧೇಯಕಗಳು ಮಂಡನೆಯಾದ ಹಿನ್ನೆಲೆಯಲ್ಲಿ, ಮೇಲ್ಮನೆ ಅಕ್ಷರಶಃ ಶೈಕ್ಷಣಿಕ ಸಭೆಯಾಗಿ ರೂಪಾಂತರ ಆಗಿತ್ತು.

ಯಾವ್ಯಾವ ವಿವಿಗಳಿಗೆ ಅಂಗೀಕಾರ :  ವಿದ್ಯಾಶಿಲ್ಪ ವಿಶ್ವವಿದ್ಯಾನಿಲಯ ವಿಧೇಯಕ, ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿವೆ. ಇವುಗಳ ಜೊತೆಗೆ ನ್ಯೂ ಹೊರೈಜನ್ ವಿಶ್ವವಿದ್ಯಾನಿಲಯ ವಿಧೇಯಕಗಳು ಸದನದಲ್ಲಿ ಅನುಮೋದನೆಗೊಂಡಿವೆ. ಇನ್ನು ಡಾ.ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಯುನಿವರ್ಸಿಟಿ ಬೆಂಗಳೂರು ಎಂದು ಹೆಸರು ಬದಲಾವಣೆ ವಿಧೇಯಕಕ್ಕೂ ಅಂಗೀಕಾರ ಸಿಕ್ಕಿದೆ. ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರ ವಿರೋಧದ ನಡುವೆಯೂ ಜಗದ್ಗುರು ಮುರುಘ ರಾಜೇಂದ್ರ ವಿಶ್ವವಿದ್ಯಾನಿಲಯ ವಿಧೇಯಕ ಅಂಗೀಕಾರಗೊಂಡಿದೆ.

ಇನ್ನು ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಸೇಂಟ್ ಜೋಸೆಫ್ ವಿವಿ ವಿಧೇಯಕ ಅಂಗಿಕಾರಕ್ಕೆ ರಾಜ್ಯಪಾಲರ ಒಪ್ಪಿಗೆ ಬೇಕಾದ ಹಿನ್ನೆಲೆಯಲ್ಲಿ ವಿಧೇಯಕ ಮಂಡನೆಯನ್ನು ಡಿಸಿಎಂ ಅಶ್ವಥ್ ನಾರಾಯಣ ಮುಂದೂಡಿದ್ರು. ಅಲ್ಪಸಂಖ್ಯಾತರ ವಿವಿ ಎನ್ನುವ ಕಾರಣಕ್ಕೆ ಉದ್ದೇಶ ಪೂರ್ವಕವಾಗಿ ಇದನ್ನ ತಡೆ ಹಿಡಿದಿದ್ದೀರಾ ಅಂತ ವಿಪಕ್ಷ ಸದಸ್ಯರಾದ ನಜೀರ್ ಅಹಮದ್ ಮತ್ತು ಅಪ್ಪಾಜಿಗೌಡ ಆರೋಪಿಸುತ್ತಿದ್ದಂತೆ, ತಾಂತ್ರಿಕ ಕಾರಣ ವಿವರಿಸಿ ಸಚಿವರು ಸ್ಪಷ್ಟನೆ ನೀಡಿದ್ರು.

ಇದನ್ನೂ ಓದಿ : 11 ವಿಧೇಯಕ ಮಂಡನೆ : ಮೂರು ಖಾಸಗಿ ವಿ.ವಿ ಗೆ ಅನುಮತಿ

ಇದಕ್ಕೂ ಮೊದಲು ಖಾಸಗಿ ವಿವಿಗಳಿಗೆ ಮಾನ್ಯತೆ ನೀಡುವುದರಿಂದ ಆಗಲಿರುವ ಸಮಸ್ಯೆಗಳನ್ನು ವಿಪಕ್ಷ ಸದಸ್ಯರು ಮಾತ್ರವಲ್ಲ, ಆಡಳಿತ ಪಕ್ಷದ ಸದಸ್ಯರೂ ತಮ್ಮ ಆತಂಕ ವ್ಯಕ್ತಪಡಿಸಿದ್ದು ಕೆಲ ಕಾಲ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತು. ಹೆಚ್ಚು ಖಾಸಗಿ ವಿವಿಗಳು ರಾಜ್ಯಕ್ಕೆ ಬಂದ್ರೆ, ಸರ್ಕಾರಿ ವಿವಿಗಳ ಮಾನ್ಯತೆ ಕಡಿಮೆ ಆಗುತ್ತೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತೆ. ಇದರಿಂದ ಸರ್ಕಾರಿ ವಿವಿಗಳು ಮುಂದಿನ ದಿನಗಳಲ್ಲಿ ಮುಚ್ಚಿ ಹೋಗೋ ಸ್ಥಿತಿ ಬರುತ್ತೆ‌. ಉನ್ನತ ಶಿಕ್ಷಣವನ್ನ ಖಾಸಗಿ ವಿವಿಗಳ ಕೈಗೆ ಕೊಡಬೇಡಿ. ಸರ್ಕಾರಕ್ಕೆ ಈ ಖಾಸಗಿ ವಿವಿಗಳ ಮೇಲೆ ನಿಯಂತ್ರಣ ಇರಲ್ಲ ಅಂತ ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಬಸವರಾಜ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ರು. ಶುಲ್ಕ, ಪರೀಕ್ಷಾ ವಿಧಾನ, ವಿದ್ಯಾರ್ಥಿಗಳ‌ ಪ್ರವೇಶಾತಿ ಹೀಗೆ ಎಲ್ಲ ಜುಟ್ಟು ಜನಿವಾರ ಖಾಸಗಿ ವಿವಿಗಳ ಕೈಯಲ್ಲೇ ಇರಲಿದೆ ಎಂದು ಬಿಜೆಪಿ ಸದಸ್ಯರಾದ ವೈ.ಎ.ನಾರಾಯಣ ಸ್ವಾಮಿ ಹಾಗೂ ಪುಟ್ಟಣ್ಣ ಎಚ್ಚರಿಕೆ ನೀಡಿದ್ರು.

ಇದಕ್ಕೆ ಉತ್ತರ ನೀಡಿದ ಡಿಸಿಎಂ ಅಶ್ವಥ್ ನಾರಾಯಣ್- ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಶಿಕ್ಷಣ‌ ವಿಕೇಂದ್ರೀಕರಣ ಕುರಿತ ಒತ್ತು ನೀಡಲಾಗಿದೆ. ಹಣ ಮಾಡುವ ಉದ್ದೇಶದಿಂದ ಈ ಶೈಕ್ಷಣಿಕ ಸಂಸ್ಥೆಗಳು ಕೆಲಸ ಮಾಡುತ್ತಿಲ್ಲ ಎಂದು ಖಾತ್ರಿ ಮಾಡಿಕೊಂಡೇ ಇದಕ್ಕೆ ವಿವಿ ಮಾನ್ಯತೆ ನೀಡಲು ನಿರ್ಧಾರ ಮಾಡಿದ್ದೇವೆ ಎಂದ್ರು. ಉಳಿದಂತೆ, ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ಸೈನಿಕ ಶಾಲೆ ಸ್ಥಾಪಿಸಲು ರಕ್ಷಣಾ ಇಲಾಖೆ ಜತೆ ಮಾತನಾಡುವುದಾಗಿ ಮತ್ತು ಇಲಾಖೆಯಿಂದ ಗುತ್ತಿಗೆ ಪಡೆದು ಕಾನೂನು ಬಾಹಿರವಾಗಿ ಉಪಗುತ್ತಿಗೆ ನೀಡುವ ಕಂಟ್ರಾಕ್ಟರ್‌ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಅಂತ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ರು. ಒಟ್ನಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ ವಿಧೇಯಕಗಳಿಗೆ ಪರಿಷತ್‍ನಲ್ಲೂ ಧ್ವನಿಮತದ ಮೂಲಕ ಅಂಗೀಕಾರ ದೊರೆತಿದೆ.

ಸರಕರಾದ ನಿಲುವಿಗೆ ಖಂಡನೆ : ಬಿಜೆಪಿ ಸರಕಾರ ಅಧಿಕಾರವಿದ್ದಾಗಲೆಲ್ಲ ಖಾಸಗಿ ವಿ.ವಿ ಸ್ಥಾಪನೆ ಮಾಡುತ್ತಿದೆ. ಹಿಂದೆ ಸಿ.ಟಿ ರವಿ ಉನ್ನತ ಶಿಕ್ಷಣ ಸಚಿವರಾಗಿದ್ದಾಗ 20 ಕ್ಕೂ ಹೆಚ್ಚು ಖಾಸಗಿ ವಿ.ವಿ ಗಳ ಸ್ಥಾಪನೆ ಮಾಡಿದ್ದರು. ಉನ್ನತ ಶಿಕ್ಷಣವನ್ನು ಖಾಸಗೀಕರಣ ಮಾಡುವ ಮೂಲಕ ಶಿಕ್ಷಣವನ್ನು ಉಳ್ಳವರಪರ ಮಾಡುತ್ತಿದ್ದಾರೆ. ಸಂಶೋಧನಾ ಶಿಕ್ಷಣವನ್ನು ತಳ ಸಮುದಾಯಗಳು ಪಡೆಯಬಾರದು ಎಂಬುದು ಬಿಜೆಪಿ ಉದ್ದೇಶವಾಗಿದೆ. ಸರಕಾರಿ ವಿಶ್ವವಿದ್ಯಾಲಯಗಳು ಮೂಲಸೌಲಭ್ಯವಿಲ್ಲದೆ ನರಳುತ್ತಿವೆ. ಅವುಗಳನ್ನು ಬಲಪಡಿಸಲು ಮುಂದಾಗುವ ಬದಲು ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗಿರುವುದು ಖಂಡನೀಯ ಎಂದು ಶಿಕ್ಷಣ ತಜ್ಞ ಶ್ರೀಪಾದ್ ಭಟ್ ತಿಳಿಸಿದ್ದಾರೆ. ಪ್ರಗತಿಪರ  ವಿದ್ಯಾರ್ಥಿ ಸಂಘಟನೆಗಳು ಸರಕಾರದ ನಿಲುವನ್ನು ವಿರೋಧಿಸಿದ್ದು ಸಾರ್ವಜನಿಕ ವಲಯಗಳನ್ನು ಬಿಜೆಪಿ ದುರ್ಭಲಗೊಳಿಸಿದ್ದು ಇದರ ವಿರುದ್ಧ ಹೋರಾಟ ರೂಪಿಸುವುದಾಗಿ ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *