ಮತ ಎಣಿಕೆಗೆ ಎರಡು ದಿನ ಬೇಕೇ ಎಂದ ನಟ ಉಪೇಂದ್ರ; ಪ್ರಬುದ್ಧತೆ ಇರಲಿ ಎಂದ ನೆಟ್ಟಿಗರು

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ. ಮೇ 10ರಂದು ಒಂದೇ ಹಂತದಲ್ಲಿ ಎಲ್ಲ 224 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮತದಾನ ಹಾಗೂ ಫಲಿತಾಂಶದ ನಡುವೆ ಎರಡು ದಿನ ಅಂತರ ಇದೆ.

ಇದಕ್ಕೆ ನಟ ಹಾಗೂ ಪ್ರಜಾಕೀಯದ ಮುಖ್ಯಸ್ಥ ಉಪೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಮತ ಎಣಿಕೆಗೆ ಎರಡು ದಿನ ಬೇಕೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಉಪೇಂದ್ರ ಅವರು, ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದ ಮತದಾನ ಮತ್ತು ಮೇ 13, ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ಮತ ಎಣಿಕೆಗೆ ಎರಡು ದಿನ ಬೇಕೆ? ಏಕೆಂದು ಬಲ್ಲವರು ತಿಳಿಸುತ್ತೀರಾ? ಎಂದು ಜನರನ್ನು ಪ್ರಶ್ನಿಸಿದ್ದಾರೆ. ಉಪೇಂದ್ರ ಅವರ ಪ್ರಶ್ನೆಗೆ ಜನರು ಕೂಡ ತರಹೇವಾರಿ ಉತ್ತರ ನೀಡಿದ್ದು, ಇದೇನು ಹೊಸದಲ್ಲ, ಮತಗಟ್ಟೆಗಳಲ್ಲಿಯೇ ಮತ ಎಣಿಕೆ ನಡೆಯುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕೆಲವರು ಚುನಾವಣಾ ಕರ್ತವ್ಯ ನಿರ್ವಹಿಸಿ ನಿಮಗೆ ಆಗ ಗೊತ್ತಾಗುತ್ತದೆ ಎಂದು ಉಪೇಂದ್ರ ಅವರಿಗೆ ಟಾಂಗ್‌ ಕೊಟ್ಟಿದ್ದು, ಪ್ರಶ್ನೆ ಕೇಳುವುದಕ್ಕೂ ಸ್ವಲ್ಪ ಪ್ರಬುದ್ಧತೆ ಇರಲಿ. ನಿಮ್ಮ ಸಿನಿಮಾ ಶೂಟಿಂಗ್‌ ಮುಗಿದ ತಕ್ಷಣ ಏಕೆ ಸಿನಿಮಾವನ್ನು ರಿಲೀಸ್‌ ಮಾಡಲ್ಲ, ಸಿನಿಮಾ ಡೈಲಾಗ್‌ ಹೊಡೆದಷ್ಟು ಚುನಾವಣಾ ಪ್ರಕ್ರಿಯೆ ಸುಲಭ ಅಲ್ಲ ಎಂದು ಉಪೇಂದ್ರ ಅವರ ಪ್ರಶ್ನೆಗೆ ಖಾರವಾಗಿಯೇ ಉತ್ತರಿಸಿದ್ದಾರೆ.

ಕೆಲವರು ಆ ಮೂರು ದಿನ ಏನಾಗುತ್ತದೆ ಎಂದು ಬರೆದಿದ್ದು, ಮತದಾನದ ದಿನ ಸಂಜೆ 6 ಗಂಟೆಗೆ ಮತದಾನ ಅಂತ್ಯವಾಗುತ್ತದೆ. ಅಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಸ್ಟ್ರಾಂಗ್‌ ರೂಮ್‌ಗೆ ಬರೋಕೆ ರಾತ್ರಿ 8-9 ಗಂಟೆ ಆಗುತ್ತೆ. ಆ ಬಳಿಕ ಎಲ್ಲ ಇವಿಎಂಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಸಂಗ್ರಹಿಸುವ ಹೊತ್ತಿಗೆ ಮಧ್ಯರಾತ್ರಿ 12 ರಿಂದ 1 ಗಂಟೆ ಆಗುತ್ತದೆ. ಆ ಬಳಿಕ ಅವುಗಳನ್ನು ಸ್ಟ್ರಾಂಗ್‌ ರೂಮ್‌ನಲ್ಲಿಡಲು ಮರುದಿನ ಬೆಳಗ್ಗೆ 9-10 ಗಂಟೆ ಆಗುತ್ತದೆ. ಇವುಗಳ ಮಧ್ಯೆ ಬಹಳಷ್ಟು ಪ್ರಕ್ರಿಯೆಗಳು ಇರುತ್ತವೆ ಎಂದು ಚುನಾವಣೆ ಪ್ರಕ್ರಿಯೆಯ ವಿವರಗಳನ್ನು ಉಪೇಂದ್ರ ಅವರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ : ವಿಧಾನಸಭೆ ಚುನಾವಣೆ : ಇಂದಿನಿಂದಲೇ ನೀತಿ ಸಂಹಿತೆ ಜಾರಿ, ಪಾಲಿಸಬೇಕಾದ ನಿಯಮಗಳೇನು ?

ಇನ್ನು, ಗಲಾಟೆ, ಮತಯಂತ್ರಗಳ ದೋಷ ಸೇರಿ ಇತರೆ ಕಾರಣಗಳಿಂದ ಮರು ಮತದಾನದ ಅಗತ್ಯ ಬಂದರೆ ಈ ದಿನಗಳನ್ನು ಚುನಾವಣಾ ಆಯೋಗ ಬಳಸಿಕೊಳ್ಳಲಿದೆ. ಅದಲ್ಲದೇ, ಮತದಾನದ ದಿನ ಚುನಾವಣೆ ಕಾರ್ಯಗಳನ್ನು ನಿರ್ವಹಿಸುವ ಸಿಬ್ಬಂದಿಯೇ ಚುನಾವಣಾ ಫಲಿತಾಂಶದ ದಿನವೂ ಕಾರ್ಯನಿರ್ವಹಣೆ ಮಾಡಬೇಕಾಗಿರುವುದರಿಂದ ಸಿದ್ಧತೆ ಅನುಕೂಲ ಆಗಲಿ ಎಂದು ಎರಡು ದಿನ ಅಂತರ ಇರಲಿದೆ. ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುವುದರಿಂದ ಪೊಲೀಸ್‌ ಭದ್ರತೆಯ ದೃಷ್ಟಿಯಿಂದಲೂ ಎರಡು ದಿನದ ಅಂತರ ಅಗತ್ಯ ಎಂಬುದು ಹಲವರು ವಾದ ಮಂಡಿಸಿದ್ದಾರೆ.

https://www.facebook.com/100044461115286/posts/775513490607348/?mibextid=mna8qTP8xvtPE1tK

ಇನ್ನು, ಹಲವರು ಉಪೇಂದ್ರ ಅವರ ಪ್ರಶ್ನೆಗೆ ತರಲೆ ಹಾಗೂ ಖಾರವಾಗಿ ಉತ್ತರಿಸಿದ್ದು, ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.
“ಚುನಾವಣೆ ಕರ್ತವ್ಯ ನಿರ್ವಹಿಸಿ ಆಗ ಗೊತ್ತಾಗುತ್ತದೆ”.
“ಸಿನಿಮಾ ಡೈಲಾಗ್‌ ಹೊಡೆದಷ್ಟು ಸುಲಭ ಇಲ್ಲ ಚುನಾವಣಾ ಪ್ರಕ್ರಿಯೆ”.
“ಮದುವೆ ಆದ ತಕ್ಷಣ ಮಕ್ಕಳಾಗಲ್ಲ ಸರ್‌”.
“ಇವಿಎಂ ಬದಲಾವಣೆಗೆ ಎರಡು ದಿನ ಬೇಕಾಗಬಹುದು”.
“ಅತಿ ಬುದ್ಧಿವಂತಿಕೆ ದಡ್ಡತನದ ಪರಮಾವಧಿ”.
“ಅದು ಫೇಸ್‌ಬುಕ್‌ ಲೈಕ್ಸ್‌ ಎಣಿಕೆ ಅಲ್ಲ, ಅದಕ್ಕೆ ಎರಡು ದಿನ”.
“ನಿಮ್ಮ ಆಲೋಚನೆಗಳು ಸಂವಿಧಾನ ಮೀರಿ ಇರಬಾರದು. ನೆನಪಿರಲಿ ಸರ್‌”.
“ಎಲೆಕ್ಷನ್ ನಿಂತಿರವ್ರೆಲ್ಲ ಬಿಪಿ, ಶುಗರ್ ಕಂಟ್ರೋಲ್ ಅಲ್ಲಿಟ್ಕಳ್ಲಿ ಅಂತ ಎರಡ್ ದಿನ ಗ್ಯಾಪ್”.
“ಈ ಪ್ರಶ್ನೆಯ ಭಾವಾರ್ಥ ಏನು? ನಿಮ್ಮ ಪ್ರಕಾರ ಒಂದೇ ದಿನದಲ್ಲಿ ಎಲ್ಲವನ್ನು ಮಾಡಬಹುದಾ”.
“ಅಪ್ಪಿ ನೀನು ತಿಳ್ಕೊಳ್ಳೋದು ಇನ್ನೂ ತುಂಬಾ ಇದೆ ಬಿಡು”.

Donate Janashakthi Media

Leave a Reply

Your email address will not be published. Required fields are marked *