ರಂಗಭೂಮಿ ಕಲಾವಿದ ಕೃಷ್ಣೇಗೌಡ ನಿಧನ

ಬೆಂಗಳೂರು: ನಟ, ರಂಗಭೂಮಿ ಕಲಾವಿದ ಬಿ.ಎಂ. ಕೃಷ್ಣೇಗೌಡ ಅವರು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. 81 ವರ್ಷ ವಯಸ್ಸಿನ ಕೃಷ್ಣಗೌಡ ಅವರಿಗೆ ಹೃದಯಾಘಾತ ಸಂಭವಿಸಿದ್ದರಿಂದ ಇಂದು ಮುಂಜಾನೆ 4.15 ಗಂಟೆಗೆ ನಿಧನರಾಗಿದ್ದಾರೆ.

ಏಪ್ರಿಲ್‌ 13ಕ್ಕೆ ಅವರಿಗೆ ಕೋವಿಡ್‌ ದೃಢಪಟ್ಟಿತ್ತು. 36 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಮನೆಗೆ ಮರಳಿದ್ದರು. ನಂತರ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಕಾರಣ ಶನಿವಾರದಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ. ಕೃಷ್ಣೇಗೌಡ ಅವರ ಪುತ್ರ ಸತೀಶ್‌ ಎನ್ನುವವರು ಕಳೆದ ತಿಂಗಳು ಕೋವಿಡ್‌ನಿಂದ ಮೃತಪಟ್ಟಿದ್ದರು.

ಇದನ್ನು ಓದಿ: ಖಾಸಗಿ ಆಸ್ಪತ್ರೆಗಳು ಮೃತ ದೇಹದ ಹಸ್ತಾಂತರ ನಿರಾಕರಿಸುವಂತಿಲ್ಲ

‘ಅಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ಸತೀಶ್‌ ನಿಧನರಾದ ವಿಚಾರವನ್ನು ತಿಳಿಸಲಾಗಿಲ್ಲ. ಕೊನೆಗೂ ಅಪ್ಪನಿಗೆ ಇದು ಹೇಳಲಾಗಲಿಲ್ಲ’ ಎಂದು ಪುತ್ರ ಮುರುಳೀಧರ್‌ ಹೇಳಿದರು.

ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಾಲಿಬಾಲ್‌ ಪಟುವಾಗಿದ್ದ ಕೃಷ್ಣೇಗೌಡರು, ವಿಶ್ವವಿದ್ಯಾಲಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ತಂಡದ ನಾಯಕರಾಗಿ ಮಿಂಚಿದ್ದರು. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ(ಎಜಿಎಸ್‌) ಕಾರ್ಯನಿರ್ವಹಿಸಿದ್ದ ಕೃಷ್ಣಗೌಡರು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.  ಅಬ್ಬೂರು ಜಯತೀರ್ಥ, ಆರ್.ನಾಗೇಶ್, ಶ್ರೀನಿವಾಸ ಪ್ರಭು, ಡಾ.ಬಿ.ವಿ.ರಾಜಾರಾಂ ಮುಂತಾದ ನಿರ್ದೇಶಕರ ನಿರ್ದೇಶನದಲ್ಲಿ ಅಭಿನಯಿಸಿದ್ದರು.

ಕಲಾಗಂಗೋತ್ರಿ ತಂಡದ ಜನಪ್ರಿಯ ನಾಟಕ ‘ಮುಖ್ಯಮಂತ್ರಿ’ ಯಲ್ಲಿ ಪಕ್ಷದ ಅಧ್ಯಕ್ಷನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಬಿ.ಎಂ.ಕೃಷ್ಣೇಗೌಡ ಹಲವು ನಾಟಕಗಳು ಸೇರಿದಂತೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

ಇದನ್ನು ಓದಿ: “ಬದುಕಿನ ಹಕ್ಕು” ಆದ್ಯತೆಯಾಗಬೇಕು

‘ಕೃಷ್ಣಗೌಡರು ಕಲಾಗಂಗೋತ್ರಿ ತಂಡದೊಂದಿಗೆ 45 ವರ್ಷದ ನಂಟು ಹೊಂದಿದ್ದರು. ‘ಮುಖ್ಯಮಂತ್ರಿ’ ನಾಟಕದ 450ಕ್ಕೂ ಅಧಿಕ ಪ್ರದರ್ಶನಗಳಲ್ಲಿ ಪಾತ್ರ ನಿರ್ವಹಿಸಿದ ಖ್ಯಾತಿ ಅವರದ್ದು. ಅನಾರೋಗ್ಯದ ಬಳಿಕ ಈ ಪಾತ್ರವನ್ನು ಬೇರೆಯವರು ನಿರ್ವಹಿಸಿದ್ದರು. ಬಹಳ ಸಜ್ಜನ ವ್ಯಕ್ತಿ ಕೊರೊನಾ ಸೋಂಕು ತಗುಲಿತ್ತು. ನಂತರ ಚೇತರಿಸಿಕೊಂಡಿದ್ದರು. ಆದರೆ ಈಗ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. 40 ವರ್ಷದ ಗೆಳೆಯನನ್ನು ಕಳೆದಕೊಂಡಿದ್ದೇವೆ’ ಎಂದು ನೆನಪಿಸಿಕೊಂಡರು ನಟ ಮುಖ್ಯಮಂತ್ರಿ ಚಂದ್ರು.

ಸಿ.ಆರ್‌.ಸಿಂಹ ಅವರ ನಿರ್ದೇಶನದ ‘ಸಿಂಹಾಸನ’ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿದ ಇವರು ‘ಚಕ್ರವ್ಯೂಹ’, ‘ಹಾಲುಂಡ ತವರು’, ‘ಒಲವಿನ ಉಡುಗೊರೆ’, ‘ಸಂಸಾರ ನೌಕೆ’ ಹೀಗೆ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕರಿಮಲೆಯ ಕಗ್ಗತ್ತಲು’ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಇವರು ಪಡೆದಿದ್ದರು. ‘ಒಂದು ಮುತ್ತಿನ ಕಥೆ’ ಹಾಗೂ ‘ಆಕಸ್ಮಿಕ’ ಚಿತ್ರದಲ್ಲಿ ಡಾ.ರಾಜ್‌ಕುಮಾರ್‌ ಅವರ ಜೊತೆಯೂ ಕೃಷ್ಣೇಗೌಡರು ನಟಿಸಿದ್ದಾರೆ.

ಹಿರಿಯ ಕಲಾವಿದರ ನಿಧನಕ್ಕೆ ಚಿತ್ರೋದ್ಯಮದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *