ಬೆಂಗಳೂರು: ಕಳೆದ ತಿಂಗಳು ಅಮೆರಿಕಾಕ್ಕೆ ತೆರಳಿ ಅಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸಂಪೂರ್ಣ ಚೇತರಿಸಿಕೊಂಡು ಇಂದು ಭಾನುವಾರ ತವರಿಗೆ ಆಗಮಿಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಬಂದಿಳಿದ ಶಿವರಾಜ್ ಕುಮಾರ್‌ನನ್ನು ಅವರ ಅಭಿಮಾನಿಗಳು ವಿಮಾನ ನಿಲ್ದಾಣ ಬಳಿ ಅದ್ಧೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿರುವುದರಿಂದ ಸಾದಹಳ್ಳಿ ಟೋಲ್ ಬಳಿ ಸ್ವಾಗತಿಸಿದರು.
ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗೆ, ಸ್ವಾಗತಕ್ಕೆ ಅವಕಾಶವಿಲ್ಲ. ಈ ಕಾರಣದಿಂದ ಅಭಿಮಾನಿಗಳು ಸಾದಹಳ್ಳಿ ಟೋಲ್ ಬಳಿ ಅದ್ಧೂರಿ ಸ್ವಾಗತಿಸಿದರು.
ಇದನ್ನೂ ಓದಿ: ನಂಜನಗೂಡು| ಬಸ್ ನಿಂದ ತಲೆ ಹೊರಹಾಕಿದ ಮಹಿಳೆ; ಟಿಪ್ಪರ್ ಓವರ್ ಟೇಕ್ ವೇಳೆ ರುಂಡ ಕಟ್!
ಇಂದು ಬೆಳಗ್ಗೆ 8.50ಕ್ಕೆ ಶಿವರಾಜ್ ಕುಮಾರ್ ಪ್ರಯಾಣಿಸಿದ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಟರ್ಮಿನಲ್ 2 ಮುಖಾಂತರ ಶಿವರಾಜ್ ಕುಮಾರ್ ನಿಲ್ದಾಣದಿಂದ ಹೊರಬಂದಿದ್ದಾರೆ. ಸಾದಹಳ್ಳಿ ಟೋಲ್‌ನಿಂದ ಶಿವರಾಜ್ ಕುಮಾರ್ ಮನೆಯವರೆಗೆ ಅದ್ಧೂರಿ ಸ್ವಾಗತಕ್ಕೆ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟ ಆರೋಗ್ಯವಂತರಾಗಿ ಮರಳಿ ಬಂದಿರುವುದು ಶಿವಣ್ಣ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಅಭಿಮಾನಿಗಳು ಕೇಕ್, ಹಾರ, ಹೂವುಗಳನ್ನು ತಂದಿದ್ದಾರೆ.ಶಿವರಾಜ್ ಕುಮಾರ್ ಅಭಿಮಾನಿಗಳು ಈಗಾಗಲೇ ಶಿವರಾಜ್ ಕುಮಾರ್‌ಗೆ ಜೈಕಾರ ಕೂಗುತ್ತಿದ್ದಾರೆ.
ಮೂತ್ರ ಕೋಶದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಮತ್ತು ಬಾಮೈದ ಸಚಿವ ಮಧು ಬಂಗಾರಪ್ಪ ಜೊತೆಗೆ ಡಿಸೆಂಬರ್ 18 ರಂದು ಅಮೆರಿಕಕ್ಕೆ ಹೋಗಿದ್ದರು. ಡಿಸೆಂಬರ್ 24ರಂದು ಶಿವರಾಜ್ ಕುಮಾರ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆರೋಗ್ಯ ಸಂಬಂಧ ಶಿವರಾಜ್ ಕುಮಾರ್ 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರ ಆರೋಗ್ಯದ ಬಗ್ಗೆ ವಿಡಿಯೊ ಮಾಡಿ ಅಪ್ ಡೇಟ್ ಕೊಟ್ಟಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಸಹ ಮಾತನಾಡಿದ್ದರು.
ಇದನ್ನೂ ನೋಡಿ: LIVE: ಸಾಂಸ್ಕೃತಿಕ ಸಂವಿಧಾನ ಪರಿಷೆ