ನವದೆಹಲಿ: ನನಗೂ ಒಳ್ಳೆಯ ಚಿಕಿತ್ಸೆ ದೊರೆತಿದ್ದರೆ ನಾನೂ ಬದುಕುತ್ತಿದ್ದೆ. ಈಗ ಯಾವ ಭರವಸೆಯೂ ಇಲ್ಲ. ಮತ್ತೆ ಹುಟ್ಟಿ ಬರುವೆ, ಒಳ್ಳೆಯ ಕೆಲಸ ಮಾಡುವೆ, ಇತಿ ನಿಮ್ಮ ರಾಹುಲ್ ವೊಹ್ರಾ…
ಇನ್ನೇನು ಉಸಿರು ನಿಲ್ಲುತ್ತದೆ, ಸಾವು ಕಣ್ಣೆದುರಿಗೇ ನಿಂತಿದೆ, ಬದುಕುವ ಸಾಧ್ಯವೇ ಇಲ್ಲ ಎಂದು ಅರಿತ ಚಿತ್ರನಟ ರಾಹುಲ್ ವೊಹ್ರಾ (35) ಬರೆದಿರುವ ಕೊನೆಯ ಸಾಲುಗಳಿವು, ಇದನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾರೆ.
ಕರೊನಾ ಸೋಂಕು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ರಾಹುಲ್ ಅವರನ್ನು ದೆಹಲಿಯ ತೆಹರೀಪುರದಲ್ಲಿರುವ ರಾಜೀವ್‌ಗಾಂಧಿ ಸೂಪರ್‌ಸ್ಪೆಷ್ಯಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತಮಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಎನ್ನುವುದು ರಾಹುಲ್ ಅವರ ಅಳಲಾಗಿತ್ತು ಎಂದು ಅವರು ಬರೆದುಕೊಂಡ ಈ ಸಾಲುಗಳು ಹೇಳುತ್ತಿವೆ.
ಪ್ರಧಾನಿ ನರೇಂದ್ರಮೋದಿ ಹಾಗೂ ದೆಹಲಿಯ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಅವರಿಗೂ ಇದನ್ನು ರಾಹುಲ್ ಟ್ಯಾಗ್ ಮಾಡಿದ್ದಾರೆ. ಅದರಲ್ಲಿ ತಮ್ಮ ಹೆಸರು, ತಮಗೆ ವಯಸ್ಸು, ಬೆಡ್ ನಂಬರ್ ಸಹಿತ ಮಾಹಿತಿ ಶೇರ್ ಮಾಡಿಕೊಂಡಿದ್ದರು.
ಉತ್ತರಾಖಂಡ ಮೂಲದ ರಾಹುಲ್ ವೊಹ್ರಾ ಅವರು ಅನ್‌ಫ್ರೀಡಂ ಚಿತ್ರದ ಮೂಲಕ ಭಾರಿ ಪ್ರಸಿದ್ಧಿಗೆ ಬಂದವರು. ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ (Digital Platform) ಜನಪ್ರಿಯ ಮುಖ. ರಂಗಭೂಮಿ ಮತ್ತು ಕಿರುತೆರೆಗಳಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಕ್ಷಮಿಸು ರಾಹುಲ್, ನಿನ್ನನ್ನು ಬದುಕಿಸಿಕೊಳ್ಳದ ನಾವು ಅಪರಾಧಿಗಳು. ನಿನಗೆ ನನ್ನ ಅಂತಿಮ ನಮನಗಳು ಎಂದು ಅನ್‍ಫ್ರೀಡಂ ಚಿತ್ರದ ನಿರ್ದೇಶಕ ಅರವಿಂದ್ ಗೌರ್ ಸಂತಾಪ ಸೂಚಿಸಿದ್ದಾರೆ. ಪ್ರತಿಭಾನ್ವಿತ ಕಲಾವಿದ ನಮ್ಮೊಂದಿಗಿಲ್ಲ. ವಿಷಯ ತಿಳಿಯುತ್ತಲೇ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಆಯುಷ್ಮಾನ್ ದ್ವಾರಾಕಗೆ ಅವನನ್ನು ಶಿಫ್ಟ್ ಮಾಡಲಾಗಿತ್ತು. ಆದರೂ ಬದುಕಲಿಲ್ಲ ಎಂದರು.
ಇದನ್ನೂ ಓದಿ : ಜಿಂದಾಲ್ ಕೋವಿಡ್ ರೋಗಿಗಳ ಬೆಡ್‌ಗಳ ವಿಚಾರದಲ್ಲಿ ಜನರು ಮತ್ತು ಸಚಿವ ಆನಂದ್‌ಸಿಂಗ್ ಕಿತ್ತಾಟ