ತಿರುವನಂತಪುರಂ: ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ಚಿತ್ರ ರಂಗದ ಖ್ಯಾತ ನಟ ಇಂದ್ರನ್ಸ್ ಅವರು ಮುಂದಿನ ವರ್ಷ 10ನೇ ತರಗತಿಗೆ ಸಮಾನವಾಗುವ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಶಕಗಳಿಂದ 400 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ 67 ವರ್ಷದ ನಟ ಇಂದ್ರನ್ ಅವರಿಗೆ ನಾಲ್ಕನೇ ತರಗತಿಯಲ್ಲೆ ಆರ್ಥಿಕ ಮುಗ್ಗಟ್ಟಿನಿಂದ ಶಾಲೆ ತೊರೆಯಬೇಕಾಗಿ ಬಂದಿತ್ತು.
ಕೇರಳ ರಾಜಧಾನಿ ತಿರುವನಂತಪುರಂನವರಾದ ಇಂದ್ರನ್ಸ್ ಮನೆಯಲ್ಲಿನ ಕಡು ಬಡತನದಿಂದಾಗಿ 4 ನೇ ತರಗತಿಯ ನಂತರ ಶಾಲೆಯನ್ನು ತೊರೆದಿದ್ದರು. 1981 ರಲ್ಲಿ ತಮ್ಮ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಸಿನಿಮಾ ಪ್ರೊಡಕ್ಷನ್ ಹೌಸ್‌ಗಳಿಗೆ ವೇಷಭೂಷಣ ತಯಾರಿಸುತ್ತಾ ಚಿತ್ರ ರಂಗಕ್ಕೆ ಪ್ರವೇಶಿಸಿದ್ದರು. 1994 ರಲ್ಲಿ ಜನಪ್ರಿಯತೆ ಗಳಿಸಿದ ಅವರು ರಾಜ್ಯ ಸೇರಿದಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇದನ್ನೂ ಓದಿ: ಗುಜರಾತ್ | ವೇತನ ಕೇಳಿದ ದಲಿತ ಯುವಕನಿಗೆ ಥಳಿಸಿ ಬಾಯಿಗೆ ಚಪ್ಪಲಿ ಹಾಕಿದ ಉದ್ಯಮಿ
ಇಂದ್ರನ್ಸ್ ಅವರು ಈಗಾಗಲೆ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರದ (KSLMA) 10ನೇ ತರಗತಿಗೆ ಸಮಾನವಾಗಿರುವ ಕೋರ್ಸ್‌ಗೆ ಸೇರಿಕೊಂಡಿದ್ದಾರೆ. ತಿರುವನಂತಪುರಂ ಕಾರ್ಪೊರೇಷನ್ ಸಹಯೋಗದಲ್ಲಿ ಕೆಎಸ್‌ಎಲ್‌ಎಂಎ ನಡೆಸುವ ‘ಅಕ್ಷರಶ್ರೀ’ ಕಾರ್ಯಕ್ರಮದಡಿಯಲ್ಲಿ 10 ತಿಂಗಳ ಕೋರ್ಸ್ ಅನ್ನು ನೀಡಲಾಗುತ್ತಿದೆ.
10 ತರಗತಿ ಪರೀಕ್ಷೆ ಬರೆಯುವ ತನ್ನ ನಿರ್ಧಾರದ ಬಗ್ಗೆ ಮಾತನಾಡಿರುವ ಅವರು, ಅನಕ್ಷರಸ್ಥನಾಗಿರುವುದು ಎಂದರೆ ಕುರುಡನಂತಾಗುವುದು ಎಂದು ಹೇಳಿದ್ದಾರೆ. “ಈಗ ನಾನು ಜಗತ್ತನ್ನು ‘ನೋಡಲು’ ಬಯಸುತ್ತೇನೆ, ಹಾಗಾಗಿ ಅಧ್ಯಯನಕ್ಕೆ ಮರಳಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.
“ಹಲವಾರು ಸಂದರ್ಭಗಳಲ್ಲಿ ನನ್ನನ್ನು ಏನೋ ಒಂದು ತಡೆಹಿಡಿಯುತ್ತಿರುವ ಬಗ್ಗೆ ನಾನು ಗಮನಿಸಿದ್ದೇನೆ. ನಾನು ಅದನ್ನು ಹೋಗಲಾಡಿಸಲು ಬಯಸುತ್ತೇನೆ. ಆದರೆ ತೀವ್ರವಾದ ಚಲನಚಿತ್ರ ವೇಳಾಪಟ್ಟಿಗಳ ನಡುವೆ ತರಗತಿಗಳಿಗೆ ಹಾಜರಾಗುವುದು ದೊಡ್ಡ ಸವಾಲೆ ಸರಿ” ಎಂದು ಇಂದ್ರನ್ಸ್ TNIE ಹೇಳಿದ್ದಾರೆ.
ಹತ್ತನೇ ತರಗತಿಯ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಏಕೈಕ ಉದ್ದೇಶದಿಂದ ಇಂದ್ರನ್ಸ್ ಈಗ ತಮ್ಮ ಮನೆಯ ಸಮೀಪವಿರುವ ಸರ್ಕಾರಿ ಶಾಲೆಯಲ್ಲಿ ಭಾನುವಾರದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದು ವರದಿಯಾಗಿದೆ. ಮುಂದಿನ ವರ್ಷ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಉತ್ತಮ “ದೃಷ್ಟಿ” ಪಡೆಯುವ ನಿರೀಕ್ಷೆಯಲ್ಲಿ ಅವರಿದ್ದಾರೆ.
ವಿಡಿಯೊ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?