ನಟ ಚೇತನ್‌ ಬಂಧನ; ಅಭಿವ್ಯಕ್ತಿ ಸ್ವಾತಂತ್ರ್ಯ ಮೇಲಿನ ದಾಳಿಯನ್ನು ಸರ್ಕಾರ ನಿಲ್ಲಿಸಬೇಕು

ಬೆಂಗಳೂರು: ನಟ,  ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾರವರ ಬಂಧನವನ್ನು ಖಂಡಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ಸರಕಾರ ತಕ್ಷಣ ನಿಲ್ಲಿಸಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ಹೇಳಿಕೆ ನೀಡಿದೆ.

ಇದು ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆ ಎಂದು ಕರೆದಿರುವ ಜಾಗೃತ ನಾಗರಿಕರು ಕರ್ನಾಟಕ, ದೇಶವೊಂದು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಸರ್ವಾಧಿಕಾರಕ್ಕೆ ಹೊರಳುತ್ತಿರುವುದರ ನೇರ ಉದಾಹರಣೆ ಕರ್ನಾಟಕದಲ್ಲಿ ಪ್ರತಿನಿತ್ಯ ಕಾಣಸಿಗುತ್ತಿದೆ ಎಂದು ತಿಳಿಸಿದ್ದಾರೆ.

ಇಲ್ಲ ಸಲ್ಲದ ಕಾಲ್ಪನಿಕ ಸಂಗತಿಗಳನ್ನು ಹುಟ್ಟುಹಾಕಿ ಸಮುದಾಯಗಳ ಮಧ್ಯದಲ್ಲಿ ದ್ವೇಷ ಹುಟ್ಟುಹಾಕಿ ಸಾಮರಸ್ಯ ಹಾಳುಗೆಡುಹಲಾಗುತ್ತಿದೆ. ಉರಿಗೌಡ, ದೊಡ್ಡ ನಂಜೇಗೌಡ ಪ್ರಹಸನ ಎಬ್ಬಿಸಿ ಒಂದು ಸಮುದಾಯದ ಜನರನ್ನು ಕೊಲೆಗಡುಕರೆಂದು ಬಿಂಬಿಸಲಾಯಿತು. ಸಹಜವಾಗಿಯೇ ಇದಕ್ಕೆ ಪ್ರತಿರೋಧ ಬರುತ್ತದೆ. ಪ್ರತಿರೋಧ ಸಂವಿಧಾನ ದತ್ತ ಹಕ್ಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವುದು ಎಂದರೆ ಸಂವಿಧಾನದ ಮೇಲೆ ದಾಳಿ ನಡೆಸುವುದು ಎಂದೇ ಅರ್ಥ ಎಂದು ಹೇಳಲಾಗಿದೆ.

ಇದನ್ನು ಓದಿ: ಹಿಂದುತ್ವ ವಿರುದ್ಧದ ಪೋಸ್ಟ್ ಆರೋಪ : 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನಟ ಚೇತನ್‌

ಇಂತಹ ಕಪೋಲ ಕಲ್ಪಿತ, ಕಾಲ್ಪನಿಕ ಕಥೆ ಕಟ್ಟಿದರೆ ಭಾವನೆಗಳಿಗೆ ದಕ್ಕೆ ಉಂಟಾಗದವರು, ದೇಶದ ಬಹುತ್ವಕ್ಕೆ ಧಕ್ಕೆ ಉಂಟುಮಾಡಿದಾಗ ನೋವು ಅನುಭವಿಸದ ಸಂವಿಧಾನ ವಿರೋಧಿಗಳು ದೂರು ನೀಡಿದರೆ ತಕ್ಷಣವೇ ನಟ ಚೇತನ್ ರವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನು  ನಾವು ಖಂಡಿಸುತ್ತೇವೆ. ಪ್ರಜಾಪ್ರಭುತ್ವಕ್ಕೆ ಮಾಡುವ ಈ ಅಪಚಾರವನ್ನು ಸಹಿಸಲಾಗದು ಎಂದಿದ್ದಾರೆ.

ಸಾರ್ವಜನಿಕ ವೇದಿಕೆಗಳಲ್ಲಿ ಜನಪ್ರತಿನಿದಿಗಳು ಎನಿಸಿಕೊಂಡ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಬಸನಗೌಡ ಪಾಟೀಲ್‌ ಯತ್ನಾಳ್‌, ಸಚಿವರಾದ ಡಾ. ಸಿ.ಎನ್.‌ ಅಶ್ವಥ್ ನಾರಾಯಣ ಮುಂತಾದವರು  ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಇದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಲ್ಲದೇ ಹಿಂದುತ್ವವಾದಿಗಳೆಂದು ಕರೆದುಕೊಳ್ಳುವ ಸಂಘಟನೆಗಳ ನಾಯಕರು ತಾವು ಬೀದಿಗಿಳಿದರೆ ಶವ ಸಂಸ್ಕಾರಕ್ಕೆ ಸ್ಮಶಾನಗಳು ಸಾಲದಾಗುತ್ತವೆ ಎಂಬಿತ್ಯಾದಿ ನೇರ ಹತ್ಯಾಕಾಂಡವೆಸಗುವ ಮಾತುಗಳನ್ನು ಆಡಿದ್ದೂ ಇದೇ ರಾಜ್ಯದಲ್ಲಿ. ಅವರ‍್ಯಾರ ವಿರುದ್ಧ ಎಫ್.ಐ.ಆರ್. ದಾಖಲಿಸದ  ಬಿ.ಜೆ.ಪಿ. ಸರಕಾರ, ಪೊಲೀಸ್ ಇಲಾಖೆ ಚೇತನ್ ರವರ ಟ್ವೀಟ್‌ನ್ನು ನೆಪ‌ಮಾಡಿಕೊಂಡು ದೂರು ದಾಖಲಿಸಿ, ಬಂಧನಕ್ಕೆ ಒಳಪಡಿಸಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಜಾಗೃತ ನಾಗರಿಕರು ಕರ್ನಾಟಕ ಎಂದಿದೆ.

ಇದನ್ನು ಓದಿ: ಹಿಂದೂ ಭಾವನೆಗಳಿಗೆ ಧಕ್ಕೆ ಆರೋಪ : ನಟ ಚೇತನ್‌ ಅಹಿಂಸಾ ಬಂಧನ

ತಕ್ಷಣವೇ ಬೇಷರತ್ತಾಗಿ ಚೇತನ್ ರವರ ಬಿಡುಗಡೆಗೆ ಅಗತ್ಯವಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು. ಚುನಾವಣೆಯ ಹೊಸ್ತಿಲಲ್ಲಿ ಬೇರೆಬೇರೆ ಹೆಸರಿನಲ್ಲಿ ದೂರು ದಾಖಲಿಸುವುದು,ಕಿರುಕುಳ ನೀಡುವುದು, ಭಯ ಹುಟ್ಟಿಸುವುದು ಇಂತಹ ವರ್ತನೆಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಹಿಂದುತ್ವ ಎನ್ನುವ ಅಧಿಕೃತ ಧರ್ಮವೇ ಇಲ್ಲದಿರುವಾಗ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಎನ್ನುವ ಕಾನೂನನ್ನು ಸರಕಾರ ಹೇಗೆ ಬಳಸಲು ಸಾಧ್ಯ? ನಮ್ಮ ಘನತೆವೆತ್ತ ನ್ಯಾಯಾಂಗ ಈ ಅಂಶವನ್ನು ಪರಿಶೀಲನೆ ನಡೆಸಬೇಕೆಂದು ವಿನಂತಿಸಿಕೊಂಡಿದ್ದಾರೆ.

ಜಾಗೃತ ನಾಗರಿಕರು ಕರ್ನಾಟಕ ಪರವಾಗಿ, ಪ್ರೊ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ವಿಮಲಾ.ಕೆ.ಎಸ್., ಬಿ.ಶ್ರೀಪಾದ ಭಟ್, ರುದ್ರಪ್ಪ ಹನಗವಾಡಿ, ಡಾ.ವಸುಂಧರಾ ಭೂಪತಿ, ಶಶಿಧರ್ ಜೆ.ಸಿ., ಡಾ.ಮೀನಾಕ್ಷಿ ಬಾಳಿ, ಡಾ.ನಿರಂಜನಾರಾಧ್ಯ ವಿ.ಪಿ., ಟಿ.ಸುರೇಂದ್ರ ರಾವ್, ವಿಶುಕುಮಾರ್ ಎನ್.ಆರ್., ಬಿ.ಎನ್ ಯೋಗಾನಂದ, ವಾಸುದೇವ ಉಚ್ಚಿಲ ಮತ್ತಿತರರು ಹೇಳಿಕೆಗೆ ಒಮ್ಮತವನ್ನು ಸೂಚಿಸಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *